For Quick Alerts
ALLOW NOTIFICATIONS  
For Daily Alerts

ಯಾವುದೇ ಹಬ್ಬಕ್ಕೂ ಸಲ್ಲುವ ವಿವಿಧ ಹಣ್ಣುಗಳ ಹಲ್ವಾ

By * ಸುಶೀಲಾ ಗೋಪಾಲ್‌
|
Mixed nuts
ಬಾಳೆಹಣ್ಣು ಮತ್ತು ಒಣಹಣ್ಣು ಮಿಶ್ರಣದ ಹಲ್ವಾ ವರಮಹಾಲಕ್ಷ್ಮಿ ಹಬ್ಬಕ್ಕೆ ಅತ್ಯುತ್ತಮ ಸಿಹಿ ತಿನಿಸಾಗಬಲ್ಲದು. ಸಾಕಷ್ಟು ಒಣಹಣ್ಣುಗಳನ್ನು ಕೂಡಿರುವುದರಿಂದ ಆರೋಗ್ಯಕ್ಕೂ ಹಿತಕರ.

ಬೇಕಾಗುವ ಪದಾರ್ಥಗಳು

10 ಉತ್ತತ್ತಿ
50 ಗ್ರಾಂ ಒಣದ್ರಾಕ್ಷಿ
20 ಗೋಡಂಬಿ
10 ಬಾದಾಮಿ
ಕಾಲು ಕಪ್ ಹಾಲು
4 ಬಾಳೆಹಣ್ಣು
1 ಕಪ್ ಸಕ್ಕರೆ
ಅರ್ಧ ಕಪ್ ನೀರು
ಅರ್ಧ ಕಪ್ ಕೊಬ್ಬರಿ ಹಾಲು
ಅರ್ಧ ಚಮಚ ತುಪ್ಪ
2 ಚಮಚ ಜೇನುತುಪ್ಪ
ಅರ್ಧ ಚಮಚ ಕೇಸರಿ
1 ಚಮಚ ರೋಸ್ ವಾಟರ್

ಮಾಡುವ ವಿಧಾನ

ಮೊದಲಿಗೆ ಉತ್ತತ್ತಿ ಮತ್ತು ಒಣದ್ರಾಕ್ಷಿಯನ್ನು ಸ್ವಲ್ಪೇ ಸ್ವಲ್ಪ ಹಾಲಿನೊಂದಿಗೆ ಮಿಕ್ಸಿಯಲ್ಲಿ ತಿರುಗಿಸಿಕೊಳ್ಳಿ. ಗೋಡಂಬಿಯನ್ನು ಬೇರೆಯಾಗಿ ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿಮಾಡಿಟ್ಟುಕೊಂಡು ಕೊಬ್ಬರಿ ಹಾಲಿನಲ್ಲಿ ಸುರಿವಿರಿ. ಬಾದಾಮಿಯನ್ನು ಸಣ್ಣಸಣ್ಣ ಚೂರುಗಳನ್ನಾಗಿ ಒಂದು ಪ್ಲೇಟಲ್ಲಿ ತೆಗೆದಿಡಿ. ಇನ್ನೊಂದು ಪಾತ್ರೆಯಲ್ಲಿ ಬಾಳೆಹಣ್ಣನ್ನು ಕಿವಿಚಿಟ್ಟುಕೊಳ್ಳಿ.

ಒಂದು ಸ್ಟೀಲ್ ಪಾತ್ರೆಯಲ್ಲಿ ಸಕ್ಕರೆ ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಸಣ್ಣ ಉರಿಯಲ್ಲಿ ಕುದಿಸಿರಿ. ತೆಳುಪಾಕ ವಾಗುತ್ತಿದ್ದಂತೆ ಅದಕ್ಕೆ ಕಿವಿಚಿಟ್ಟ ಬಾಳೆಹಣ್ಣು, ಕೊಬ್ಬರಿ ಹಾಲಿನಲ್ಲಿ ಮಿಕ್ಸ್ ಮಾಡಿದ ಗೋಡಂಬಿ ಹಾಕಿ ಮಧ್ಯಮ ಉರಿಯಲ್ಲಿ ಕುದಿಸಲು ಪ್ರಾರಂಭಿಸಿ.

ಎರಡು ನಿಮಿಷದ ನಂತರ ಉತ್ತತ್ತಿ ಮತ್ತು ಒಣದ್ರಾಕ್ಷಿಯ ಮಿಶ್ರಣವನ್ನು ಸುರುವಿ ಕುದಿಯಲು ಬಿಡಿ. ಅದಕ್ಕೆ ಸ್ವಲ್ಪ ಸ್ವಲ್ಪವೇ ತುಪ್ಪ ಹಾಕುತ್ತ ಕೈಯಾಡಿಸುತ್ತಿರಿ. ಕುದ್ದು ಗಟ್ಟಿಯಾದ ನಂತರ ಅದಕ್ಕೆ ಚೂರು ಮಾಡಿದ ಬಾದಾಮಿ ಮತ್ತು ಕೇಸರಿ ಹಾಕಿ ಚೆನ್ನಾಗಿ ಕೈಯಾಡಿಸಿ. ಹಲ್ವಾ ತಳ ಬಿಡುತ್ತಿದ್ದಂತೆ ಒಲೆ ಆರಿಸಿ ಪಾತ್ರೆ ಕೆಳಗಿಳಿಸಿ.

ಬಿಸಿಯಾಗಿರುವಾಗಲೇ ಅಗಲವಾದ ತಟ್ಟೆಗೆ ಸುರುವಿ ಒಣ ಹಣ್ಣುಗಳಿಂದ ಅಲಂಕರಿಸಿ. ಇದು ವರಮಹಾಲಕ್ಷ್ಮಿ ಹಬ್ಬದಂದು ಅತ್ಯುತ್ತಮ ಸಿಹಿ ತಿನಿಸಾಗಬಲ್ಲದು. ಮಾಡಿ ನೋಡಿ.

X
Desktop Bottom Promotion