For Quick Alerts
ALLOW NOTIFICATIONS  
For Daily Alerts

ಮಹಾಶಿವರಾತ್ರಿಗೆ ಸಿಹಿ ಗೆಣಸು ಹೋಳಿಗೆ

By * ಛಾಯಾ ಪುರೋಹಿತ, ಬೆಂಗಳೂರು
|
Sweet potato holige or Genasu holige
ಇವತ್ತು ಮಹಾಶಿವರಾತ್ರಿಯ ಸಂಭ್ರಮ. ಇಡೀ ದೇಶದಾದ್ಯಂತ ಲೋಕದೊಡೆಯ ಶಿವನನ್ನು ಉಪವಾಸವಿದ್ದು ಸ್ಮರಣೆ ಮಾಡುತ್ತ, ಬಿಲ್ವಪತ್ರೆಯಿಂದ ಪೂಜಿಸಿ ಪುಣ್ಯಪ್ರಾಪ್ತಿಯಾಗಿ ಹಂಬಲಿಸುವ ದಿನ. ಇಂದು ಹಲವರು ಉಪವಾಸವಿದ್ದು, ರಾತ್ರಿಯಿಡೀ ಜಾಗರಣೆ ಮಾಡುವ ಪರಿಪಾಠ ಬೆಳಿಸಿಕೊಂಡು ಬಂದಿರುತ್ತಾರೆ. ಆದರೆ, ನಮ್ಮ ಮನೆಯಲ್ಲಿ ಉಪವಾಸವಿರುವ ಬದಲು ಹೋಳಿಗೆ ಅಡುಗೆ ಮಾಡಿ ಶಂಕರನಿಗೆ ನೈವೇದ್ಯ ತೋರಿಸಿ ನಂತರ ಊಟ ಮಾಡುವ ಪದ್ಧತಿಯಿದೆ.

ಇವತ್ತು ಪ್ರತಿವರ್ಷದಂತೆ ಕಡಲೆಬೇಳೆ, ಬೆಲ್ಲ ಹೂರಣದ ಹೋಳಿಗೆ ಮಾಡುವ ಬದಲು ಸಿಹಿ ಗೆಣಸು, ಬೆಲ್ಲ ಹೂರಣದಿಂದ ತಯಾರಿಸಿದ ಹೋಳಿಗೆ ಮಾಡಿದ್ದೇನೆ. ಸಖತ್ ರುಚಿಯಾಗಿದೆ ಎಂದು ಮನೆಯವರೆಲ್ಲರೂ ಬೆನ್ನು ತಟ್ಟಿದ್ದಾರೆ. ನೀವೂ ತಯಾರಿಸಿ ನೋಡಿ. ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು 1 ಬಟ್ಟಲು
ಚಿರೋಟಿ ರವೆ ಎರಡು ಟೇಬಲ್ ಚಮಚ
ಮೈದಾ ಎರಡು ಟೇಬಲ್ ಚಮಚ
ಅರಿಷಿಣ
ಬೇಯಿಸಿದ ಗೆಣಸು 1 ಬಟ್ಟಲು
ಬೆಲ್ಲ ಮುಕ್ಕಾಲು ಬಟ್ಟಲು
ಅಡುಗೆ ಎಣ್ಣೆ, ತುಪ್ಪ

ತಯಾರಿಸುವ ವಿಧಾನ

ಮೊದಲಿಗೆ ಗೋಧಿ ಹಿಟ್ಟು, ಚಿರೋಟಿ ರವೆ, ಮೈದಾ, ಚಿಟಿಕೆಯಷ್ಟು ಅರಿಷಿಣ ಮತ್ತು ಉಪ್ಪನ್ನು ಹಾಕಿ ನೀರಿನಲ್ಲಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಅಳ್ಳಕಾಗಿ ಕಲಿಸಿಟ್ಟುಕೊಳ್ಳಬೇಕು. ಕಲಿಸಿಕೊಂಡ ಹಿಟ್ಟಿನ ಮೇಲೆ ಅಡುಗೆ ಎಣ್ಣೆಯನ್ನು ಹಾಕಿ ಅರ್ಧ ಗಂಟೆ ಕಾಲ ಮುಚ್ಚಿಡಬೇಕು.

ಇಷ್ಟು ಆಗುವವರೆಗೆ ಒಲೆಯ ಮೇಲೆ ಸಿಹಿ ಗೆಣಸನ್ನು ಚೆನ್ನಾಗಿ ತೊಳೆದು ಬೇಯಿಸಿಟ್ಟುಕೊಂಡಿರಬೇಕು. ಗೆಣಸಿನ ಸಿಪ್ಪೆ ಸುಲಿದು ಪುಡಿಪುಡಿ ಮಾಡಿಕೊಳ್ಳಿ. ನಂತರ ಬೆಲ್ಲವನ್ನು ಪುಡಿ ಮಾಡಿ ಅಥವಾ ಹೆರೆದುಕೊಂಡು ಗೆಣಸಿನೊಂದಿಗೆ ಬೆರೆಸಿ ಮತ್ತೆ ಕುದಿಸಿರಿ. ಬೆಲ್ಲ ಮತ್ತು ಗೆಣಸಿನ ಹೂರಣ ಸರಿಯಾಗಿ ಮಿಳಿತವಾದ ಮೇಲೆ ಕೆಳಗಿಳಿಸಿ.

ಈಗ, ಕಣಕವನ್ನು ಉಂಡೆಯಾಕಾರ ಮಾಡಿಕೊಂಡು ಕೈಯಿಂದ ತಟ್ಟಿ ಅದರಲ್ಲಿ ಹೂರಣವನ್ನು ತುಂಬಿ ಎಲ್ಲ ಬದಿಯಿಂದ ಮತ್ತೆ ಮುಚ್ಚಿರಿ. ಹಿಟ್ಟನ್ನು ಕೈಯಿಂದ ದುಂಡಗೆ ಹುಣ್ಣಿಮೆ ಚಂದ್ರನಾಕಾರಕ್ಕೆ ಅಗಲ ಮಾಡಿಕೊಂಡು ಅಥವಾ ಲಟ್ಟಿಸಿಕೊಂಡು ಕಾವಲಿನ ಮೇಲೆ ಎರಡೂ ಬದಿಯನ್ನು ಕಂದು ಬಣ್ಣ ಬರುವವರೆಗೆ ಬೇಯಿಸಿ. ಹೋಳಿಗೆಯನ್ನು ಬಿಸಿಬಿಸಿಯಿರುವಾಗಲೇ ಊಟದ ಜೊತೆ ತಿನ್ನಿರಿ.

English summary

Sweet potato holige | Genasu holige recipe | Mahashivaratri festival special | ಸಿಹಿ ಗೆಣಸು ಹೋಳಿಗೆ | ಮಹಾಶಿವರಾತ್ರಿ ವಿಶೇಷ ಸಿಹಿ

Sweet potato holige recipe or genasu holige recipe for Mahashivatri festival. Genasu holige will be offered to Lord Shiva as naivedya before having sumptuous meals.
X
Desktop Bottom Promotion