For Quick Alerts
ALLOW NOTIFICATIONS  
For Daily Alerts

ಖುಷಿಯ ಸಂದರ್ಭದಲ್ಲಿ ಮಾಡಿರಿ ಬಾದಾಮ್ ಪೂರಿ

By * ವಾಣಿ ನಾಯಿಕ
|
Badam Puri sweet recipe
ಯಾವುದೇ ಹಬ್ಬವಿರಲಿ, ಸಂತಸ ಸಂಭ್ರಮವೇ ಇರಲಿ ಅತಿಥಿ ಸತ್ಕಾರಕ್ಕೆಂದು ಮಾಡಬಹುದಾದ ವಿಶೇಷ ಸಿಹಿ ತಿನಿಸು ಬಾದಾಮ್ ಪೂರಿ. ಉತ್ತರ ಕರ್ನಾಟಕದಲ್ಲಿ ಮಾಡುವ ಪಾಕಿನಲ್ಲಿನ ಚಿರೋಟಿಯ ಸೋದರ ಸಂಬಂಧಿ ಬಾದಾಮ್ ಪೂರಿ. ಈ ಸಿಹಿ ತಿನಿಸಿಗೆ ಬಾದಾಮಿ ಹಾಕುವುದಿಲ್ಲವಾದರೂ, ಬಾದಾಮ್ ಎಂಬ ಹೆಸರು ಹೇಗೆ ತಳಕು ಹಾಕಿಕೊಂಡಿತೋ ಗೊತ್ತಿಲ್ಲ. ಆಕಾರ ಹೇಗಿದ್ದರೇನಂತೆ, ರುಚಿ ಮಾತ್ರ ಯಾವುದೇ ಸಿಹಿ ತಿನಿಸಿಗೂ ಕಮ್ಮಿಯಿಲ್ಲ.

ಬೇಕಾಗುವ ಸಾಮಗ್ರಿಗಳು

ಚಿರೋಟಿ ರವೆ ಒಂದು ಕಪ್
ಮೈದಾ ಎರಡು ಚಮಚ
ತುಪ್ಪ ಅರ್ಧ ಬಟ್ಟಲು
ಸಕ್ಕರೆ ಒಂದೂವರೆ ಕಪ್
ಅಕ್ಕಿಹಿಟ್ಟು ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ಕೇಸರಿ ಬಣ್ಣ
ಲವಂಗ

ಮಾಡುವ ವಿಧಾನ

ಮೊದಲು ಒಂದು ಬೋಗುಣಿಯಲ್ಲಿ ಚಿರೋಟಿ ರವೆ, ಮೈದಾ ಮತ್ತು ಎರಡು ಚಮಚ ತುಪ್ಪ ಹಾಕಿ ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಸ್ವಲ್ಪ ಗಟ್ಟಿಯಾಗಿ ಕಲಿಸಿಕೊಳ್ಳಬೇಕು. ಈ ಕಣಕವನ್ನು ಅರ್ಧ ಗಂಟೆ ಪಾತ್ರೆಯಲ್ಲಿ ಮುಚ್ಚಿಡಬೇಕು.

ಒಂದು ಪಾತ್ರೆಯಲ್ಲಿ ಸಕ್ಕರೆ ಮುಳುಗುವಷ್ಟು ನೀರು ಹಾಕಿ ಕುದಿಯಲು ಇಡಬೇಕು. ಸಕ್ಕರೆ ಕರಗುವವರೆಗೆ ಕೈಯಾಡಿಸುತ್ತಿರಬೇಕು. ಎಳೆಪಾಕ ಬಂದ ಮೇಲೆ ಪಾತ್ರೆಯನ್ನು ಕೆಳಗಿಳಿಸಬೇಕು. ಸ್ವಲ್ಪ ಕೇಸರಿ ಬಣ್ಣ ಮತ್ತು ಏಲಕ್ಕಿ ಪುಡಿ ಹಾಕಿ ಮತ್ತೆ ಕೈಯಾಡಿಸಿ.

ಕಲಿಸಿದ ಕಣಕವನ್ನು ಸಣ್ಣಸಣ್ಣ ಉಂಡೆ ಮಾಡಿಟ್ಟುಕೊಳ್ಳಬೇಕು. ಇನ್ನೊಂದೆಡೆ, ಅಕ್ಕಿಹಿಟ್ಟು ಮತ್ತು ತುಪ್ಪ ಬೆರೆಸಿ ಸ್ವಲ್ಪ ಅಳ್ಳಕಾಗುವ ಹಾಗೆ ಮಿಶ್ರಣ ಮಾಡಿಕೊಳ್ಳಬೇಕು. ಇದಕ್ಕೆ ಸಾಟಿ ಅಂತ ಕರೀತಾರೆ. ನಂತರ ದುಂಡಗೆ ಲಟ್ಟಿಸಿಕೊಂಡ ಹಾಳೆಗೆ ಅಕ್ಕಿಹಿಟ್ಟು, ತುಪ್ಪದ ಮಿಶ್ರಣವನ್ನು ಸವರಿ ತ್ರಿಕೋನಾಕಾರಕ್ಕೆ ನಾಲ್ಕು ಪದರ ಬರುವಂತೆ ಮಡಿಸಿಟ್ಟುಕೊಳ್ಳಬೇಕು. ಪ್ರತಿಯೊಂದರ ಮಧ್ಯದಲ್ಲಿ ಒಂದು ಲವಂಗ ಚುಚ್ಚಬೇಕು.

ಲಟ್ಟಿಸಿಕೊಳ್ಳುವ ಹಂತ ಮುಗಿದ ಮೇಲೆ ಕುಕ್ಕಿಂಗ್ ಮೀಡಿಯಂ ತುಪ್ಪದಲ್ಲಿ ಕರಿದಿಟ್ಟುಕೊಳ್ಳಬೇಕು. ಕರಿದ ನಂತರ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದರೆ ಬಿಸಿಬಿಸಿ ಬಾದಾಮ್ ಪೂರಿ ತಯಾರ್.

English summary

Badam Puri sweet recipe | How to make Badam Poori | Karnataka cuisine | ಬಾದಾಮ್ ಪೂರಿ ಸಿಹಿತಿನಿಸು | ಬಾದಾಮ್ ಪುರಿ ರೆಸಿಪಿ

Badam Puri sweet recipe for any happy occasion. Learn how to make Badam Poori recipe.
Story first published: Monday, February 21, 2011, 12:45 [IST]
X
Desktop Bottom Promotion