For Quick Alerts
ALLOW NOTIFICATIONS  
For Daily Alerts

ಹಲಸಿನ ಹಣ್ಣಿನ ಬೀಜದ ವಡೆ

By * ಸುಶೀಲಾ ಗೋಪಾಲ್‌
|
Jackfruit seeds (courtesy : sunitabhuyan.com)
ಮಳೆಗಾಲದಲ್ಲಿ ಕೆಮ್ಮ, ಕಸಾರಿಕೆ ಬಂದು ನರಳಾಡುತ್ತಿದ್ದರೂ ಜಡ್ಡುಬಿದ್ದ ನಾಲಿಗೆಗೆ ಆಗಾಗ ಏನಾದರೂ ಹೊಸದೊಂದು ಕರಿದ ಪದಾರ್ಥ ಬೇಕಾಗುತ್ತಿರುತ್ತದೆ. ಥಟ್ಟನೆ ನೆನಪಾಗಿದ್ದು ಈ ಕಾಲದಲ್ಲಿ ಹೇರಳವಾಗಿ ದೊರೆಯುವ ಹಲಸಿನ ಹಣ್ಣು. ಕೇಸರಿ ಬಣ್ಣದ ಹಲಸಿನ ತೊಳೆ ತಿಂದು ಬೀಜಗಳನ್ನು ಬಿಸಾಡಬೇಡಿ. ಬೀಜಗಳಿಂದ ಹುಳಿ ಮಾಡಿದರೂ ಆಯಿತು, ಇಲ್ಲದಿದ್ದರೆ ಹಲಸಿನ ಹಣ್ಣಿನ ಬೀಜದ ವಡೆ ಅಂತೂ ಸೂಪರ್.

ಬೇಕಾಗುವ ಪದಾರ್ಥಗಳು

ಹಲಸಿನ ಬೀಜಗಳು 20
ತೆಂಗಿನಕಾಯಿ ತುರಿ 1 ಬಟ್ಟಲು
ಅಕ್ಕಿ 1 ದೊಡ್ಡ ಲೋಟ
ಜೀರಿಗೆ, ಖಾರದ ಪುಡಿ
ಕರಿಯಲು ಎಣ್ಣೆ
ಉಪ್ಪು

ತಯಾರಿಸುವ ವಿಧಾನ

* ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಯಿಡಿ.

* ನೆಂದ ಅಕ್ಕಿಗೆ ತೆಂಗಿನಕಾಯಿ ತುರಿಯನ್ನು ಸೇರಿಸಿ ರುಬ್ಬಿಕೊಳ್ಳಿ.

* ಹಲಸಿನ ಹಣ್ಣಿನ ಬೀಜಗಳನ್ನು ಕುಕ್ಕರಿನಲ್ಲಿ ಚೆನ್ನಾಗಿ ಬೇಯಿಸಿಕೊಂಡು ಸಿಪ್ಪೆ ಸುಲಿದಿಡಿ.

* ಬೀಜಗಳನ್ನು ಪುಡಿಪುಡಿ ಮಾಡಿ ರುಬ್ಬಿಕೊಂಡ ಅಕ್ಕಿ, ಕಾಯಿತುರಿ ಮಿಶ್ರಣಕ್ಕೆ ಸೇರಿಸಿಕೊಳ್ಳಿ.

* ಇದಕ್ಕೆ ಜೀರಿಗೆ, ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ ಕೈಯಾಡಿಸಿ.

* ಗಟ್ಟಿಯಾಗಿ ಕಲಿಸಿದ ಹಿಟ್ಟಿನ ಮಿಶ್ರಣವನ್ನು ಕೈಯಲ್ಲಿ ಮಸಾಲಾ ವಡೆ ಆಕಾರದಲ್ಲಿ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿ.

* ಕರಿದಾದ ನಂತರ ಹಲಸಿನ ಬೀಜದ ವಡೆಯನ್ನು ತಿನ್ನಲು ನಿಮ್ಮ ಮನೆಗೆ ಕರಿಯಲು ನಮ್ಮನ್ನು ಮರೆಯಬೇಡಿ.

Story first published: Friday, July 30, 2010, 18:12 [IST]
X
Desktop Bottom Promotion