For Quick Alerts
ALLOW NOTIFICATIONS  
For Daily Alerts

ರಂಧ್ರರಹಿತ ಉದ್ದಿನವಡೆ + ನೀರುಳ್ಳಿ ಸಾಸಿವೆ

By * ಮನಸ್ವಿನಿ,ನಾರಾವಿ
|
ಚಳಿಗಾಲವಿರಲಿ, ಮಳೆಗಾಲವಿರಲಿ ಬಿಸಿಬಿಸಿ ಅಂಬೊಡೆ ತಿನ್ನೋಕೆ ಸಿಗಲಿ. ಅಂಬೊಡೆ ಮಾಡೋ ವಿಧಾನ ಸುಲಭವಾದರೂ ಹಾಕೋ ಪದಾರ್ಥ ಹೆಚ್ಚು ಕಮ್ಮಿ ಆಗದಂತೆ ಎಚ್ಚರಿಕೆ ವಹಿಸಬೇಕಾದ್ದು ಅವಶ್ಯ. ಅವರವರ ಅಗತ್ಯಕ್ಕೆ ತಕ್ಕಂತೆ ಕೊಬ್ಬರಿ ಎಣ್ಣೆ ಅಥವಾ ಶೆಂಗಾಎಣ್ಣೆ ಬಳಸಬಹುದು. ಕೊಸರಿಗೆ ನೀರುಳ್ಳಿ ಸಾಸಿವೆ ಇದೆ ಪ್ರಯತ್ನಿಸಿ..ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಕ್ಕರೆಹೋಳಿಗೆ ಸವಿಯುವ ಜೊತೆಗೆ ಈ ತಿನಿಸು ನಿಮ್ಮ ಉದರ ಸೇರಲಿ.

ಬೇಕಾದ ಪದಾರ್ಥಗಳು:
ಉದ್ದಿನಬೇಳೆ -1/4 ಕೆಜಿ
ಹಸಿಮೆಣಸಿನಕಾಯಿ 6
ಸ್ವಲ್ಪ ಹಸಿ ಶುಂಠಿ
ಕೊಬ್ಬರಿ/ ಕಡ್ಲೇಕಾಯಿ ಎಣ್ಣೆ 2 ಕಪ್
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
ಉದ್ದಿನಬೇಳೆಯನ್ನು 1 ಗಂಟೆ ಕಾಲ ನೆನಸಿಡಿ. ನಂತರ ಚೆನ್ನಾಗಿ ತೊಳೆದು ನೀರು ಹಾಕಿ ಗಟ್ಟಿಯಾಗಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ ಸ್ವಲ್ಪ ನೀರು ಹಾಕುತ್ತಿರಬೇಕು. ನಂತರ ಉಪ್ಪು ಹಾಕಿ ಕಲೆಸಿ. ಹಸಿ ಮೆಣಸಿನಕಾಯಿ ಮತ್ತು ಹಸಿ ಶುಂಠಿಯನ್ನು ಸಣ್ಣಗೆ ಹೆಚ್ಚಿ ಹಾಕಿ. ಇಂಗನ್ನು ಸ್ವಲ್ಪ ನೀರಿನಲ್ಲಿ ಕದಡಿ ಹಾಕಿ ಬೆರೆಸಿ. ಎಣ್ಣೆಯನ್ನು ಕಾಯಲು ಬಿಡಿ. ಸಣ್ಣ ನಿಂಬೆ ಗಾತ್ರದಷ್ಟು ವಡೆಯನ್ನು ಎಣ್ಣೆಗೆ ಹಾಕಿ. ಸ್ವಲ್ಪ ಹೊತ್ತು ಮಗಚುತ್ತಾ ಇದ್ದು, ಕಂದು ಬಣ್ಣಕ್ಕೆ ತಿರುಗಿದಾಗ ತೆಗೆಯಬೇಕು.

ಆಲೂಗೆಡ್ಡೆ ನೀರುಳ್ಳಿ ಹಾಕಿದ ಸಾಂಬಾರಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ. ಚಟ್ನಿಯೊಂದಿಗೂ ಕೂಡ ತಿನ್ನಬಹುದು. ಇದೇ ಆಂಬೊಡೆಯನ್ನು ಮೊಸರಿಗೆ ಹಾಕಿ ತುಪ್ಪದಲ್ಲಿ ಸಾಸಿವೆ ಒಗ್ಗರಣೆ ಹಾಕಿ ಅರ್ಧ ಗಂಟೆ ನಂತರ ತಿನ್ನಬಹುದು.

ಕೊಸರು ಅಡಿಗೆ: ನೀರುಳ್ಳಿ ಸಾಸಿವೆ

ಬೇಕಾದ ಪದಾರ್ಥಗಳು:
ಈರುಳ್ಳಿ 6
ತೆಂಗಿನಕಾಯಿ ಅರ್ಧ ಹೋಳು
ಹಸಿಮೆಣಸಿನಕಾಯಿ 3
ರುಚಿಗೆ ತಕ್ಕಷ್ಟು ಉಪ್ಪು
ಮೊಸರು 1ಕಪ್
ಒಗ್ಗರಣೆಗೆ ಎಣ್ಣೆ 4 ಚಮಚ

ಮಾಡುವ ವಿಧಾನ:

ನೀರುಳ್ಳಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ..ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಎಣ್ಣೆ ಕಾಯಿಸಿಕೊಂಡು ಸಾಸಿವೆ ಒಗ್ಗರಣೆ ಮಾಡಿಕೊಳ್ಳಿ. ನೀರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ತೆಂಗಿನಕಾಯಿಗೆ ಸಾಸಿವೆ, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ(ಬೇಕಾದರೆ ಒಂದು ಕಾಳು ಮೆಣಸು ಹಾಕಬಹುದು) ನಂತರ ಇದಕ್ಕೆ ಮೊಸರು ಬೆರೆಸಿ. ಹುರಿದಿಟ್ಟ ಈರುಳ್ಳಿಯನ್ನು ರುಬ್ಬಿಕೊಂಡ ಪದಾರ್ಥಗಳೊಡನೆ ಹಾಕಿ ಮೊಸರು ಹಾಕಿ ಚೆನ್ನಾಗಿ ಕಲಕಿ ಉಪಯೋಗಿಸಿ.

X
Desktop Bottom Promotion