For Quick Alerts
ALLOW NOTIFICATIONS  
For Daily Alerts

ಹಚ್ಚಿಟ್ಟ ಅವಲಕ್ಕಿ ಅಥವಾ ಗರಿಗರಿ ಅವಲಕ್ಕಿ

By Prasad
|
Garigari avalakki
ಗರಿಗರಿ ಅವಲಕ್ಕಿ ತಿಂದವ ನಿಜಕ್ಕೂ ಲಕ್ಕಿ! ಏಕಾದಶಿಯಂದು, ಮನೆಗೆ ಯಾರಾದರೂ ನೆಂಟು ಬಂದಾಗ, ನೀವೇ ಖಾಲಿಯಾಗಿ ಕುಳಿತು ಟಿವಿ ನೋಡುತ್ತಿದ್ದಾಗ, ಹೊಟ್ಟೆ ಚುರುಗುಟ್ಟುತ್ತಿದ್ದಾಗ ಏನಾದರೂ ತಿನ್ನಲು ಬೇಕೆಂದರೆ ಮಾಡಿಟ್ಟುಕೊಂಡ ಗರಿಗರಿ ಅವಲಕ್ಕಿ ಭಾರೀ ಉಪಯೋಗಕ್ಕೆ ಬರುತ್ತದೆ. ಇದನ್ನು ಹಚ್ಚಿಟ್ಟ ಅವಲಕ್ಕಿ ಅಂತಲೂ ಕರೆಯುತ್ತಾರೆ. ಒಂದು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ರಬ್ಬರ್ ಬ್ಯಾಂಡ್ ಸುತ್ತಿ ಡಬ್ಬದಲ್ಲಿ ಗಟ್ಟಿಯಾಗಿ ಮುಚ್ಚಿಟ್ಟರೆ ಅನೇಕ ದಿನ ಬಾಳಿಕೆ ಬರುತ್ತದೆ.

* ಭಾರತಿ ಎಚ್ಎಸ್, ಬೆಂಗಳೂರು

ಬೇಕಾಗುವ ಸಾಮಾನುಗಳು

ತೆಳು ಅವಲಕ್ಕಿ 1 ದೊಡ್ಡ ಬಟ್ಟಲು
ಎಣ್ಣೆ 6 ದೊಡ್ಡ ಚಮಚ
ಕಡಲೆಬೀಜ ಎರಡು ಚಮಚ
ಹುರಿಗಡಲೆ ಎರಡು ಚಮಚ
ಹೆಚ್ಚಿದ ಕೊಬ್ಬರಿ ಎರಡು ಚಮಚ
ಸಾಸಿವೆ ಅರ್ಧ ಚಮಚ
ಉದ್ದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ ನಾಲ್ಕು
ಕರಿಬೇವು ಒಂದು ಚಮಚ
ಧನಿಯ ಅರ್ದ ಚಮಚ
ಅರಿಶಿನ ಪುಡಿ ಕಾಲು ಚಮಚ
ಸಕ್ಕರೆ ಒಂದು ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

ಮೊದಲು ಅವಲಕ್ಕಿಯನ್ನು ನಿಮ್ಮ ಮನೆಯ ಮೇಲಿನ ಟೆರೇಸಿನಲ್ಲಿ ಬಟ್ಟೆಯ ಮೇಲೆ ಹರಿವಿ ಬಿಸಿಲಿನಲ್ಲಿ ಚೆನ್ನಾಗಿ ಗರಿ ಗರಿಯಾಗುವಂತೆ ಒಣಗಿಸಿ. ಒಳ್ಳೆ ಬಿಸಿಲಿನಲ್ಲಿ ಅವಲಕ್ಕಿ ಗರಿಗರಿಯಾಗಿ ಬರಲು ಎರಡು ಗಂಟೆಗಳೇ ಬೇಕು. ಅಯ್ಯೋ, ಅರ್ಧ ಗಂಟೆ ಒಣಗಿಸಿದರೆ ಸಾಕು, ಎರಡು ಗಂಟೆ ಕಾಯೋದು ಕಷ್ಟ ಅಂದೋರಿಗೆ ನಷ್ಟ, ಇನ್ನು ನಿಮ್ಮಿಷ್ಟ.

ಒಬ್ಬರು ತಾರಸಿನ ಮೇಲೆ ಹರವಿದ ಅವಲಕ್ಕಿಯುನ್ನು ಕಾಯುತ್ತಿದ್ದರೆ ಇನ್ನೊಬ್ಬರು ಬಾಣಲೆಗೆ ಎಣ್ಣೆ ಹಾಕಿ ಕೊಬ್ಬರಿ, ಕಡಲೆಬೀಜ, ಕಡಲೆ ಎಲ್ಲವನ್ನು ಬೇರೆ ಬೇರೆಯಾಗಿ ಕರಿಯುತ್ತಿರಲಿ. ಮಿಕ್ಕ ಎಣ್ಣೆಗೆ ಸಾಸಿವೆ, ಅರಿಷಿನ, ದನಿಯ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿದ ಬಳಿಕ ಕರಿದಿಟ್ಟುಕೊಂಡ ಕೊಬ್ಬರಿ, ಕಡಲೆಬೀಜ, ಕಡಲೆ ಎಲ್ಲವನ್ನು ಹಾಕಿ ಚೆನ್ನಾಗಿ ಕೈಯಾಡಿಸಿ.

ಆಮೇಲೆ ಟೆರೇಸಿನ ಮೇಲೆ ಗರಿಗರಿಯಾಗಿ ಒಣಗಿದ ಅವಲಕ್ಕಿಯನ್ನು ತಂದು ಅದಕ್ಕೆ ಕರಿದು, ಹುರಿದು ಮಿಶ್ರಣಮಾಡಿದ ಪದಾರ್ಥವನ್ನು ಹಾಕಿರಿ. ಅದಕ್ಕೆ ಒಂದಿಷ್ಟು ಸಕ್ಕರೆ, ಪ್ರಮಾಣಕ್ಕೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಯುವಂತೆ ಮಾಡಿ. ದಟ್ಸಾಲ್, ಗರಿ ಗರಿ ಅವಲಕ್ಕಿ ರೆಡಿ.

ಕೆಲವರು ಹಸಿಮೆಣಸಿನಕಾಯಿಯ ಬದಲು ಖಾರದ ಪುಡಿಯನ್ನು ಬಳಸುತ್ತಾರೆ. ಆಯ್ಕೆ ನಿಮ್ಮದು. ಇದೆಲ್ಲ ಮುಗಿದ ಮೇಲೆ ಒಂದು ದೊಡ್ಡ ಪ್ಲಾಸ್ಟಿಕ್ ಕವರಿನಲ್ಲಿ ಗರಿಗರಿಯಾಗ ಅವಲಕ್ಕಿಯನ್ನು ಹಾಕಿ ದೊಡ್ಡ ಡಬ್ಬದಲ್ಲಿ ಹಾಕಿಟ್ಟುಕೊಳ್ಳಬಹುದು. ಯಾವಾಗ ಬೇಕೆಂದಾಗ ಚಹಾ, ಕಾಫಿಯೊಡನೆ ಮೆಲ್ಲಬಹುದು. ಬೇಕೆಂದಾಗಲೆಲ್ಲ ತುರಿದ ಹಸಿಕೊಬ್ಬರಿಯನ್ನು ಮೇಲೆ ಉದುರಿಸಿಕೊಂಡು ತಿಂದರೆ ಆಹಾ ರುಚಿ ಏನಂತೀರಾ?

Story first published: Thursday, January 28, 2010, 16:27 [IST]
X
Desktop Bottom Promotion