For Quick Alerts
ALLOW NOTIFICATIONS  
For Daily Alerts

ಘಮ್ಮನೆ ಹೊಮ್ಮುವ ವೆಜಿಟೇಬಲ್ ಬಿರಿಯಾನಿ

By * ಮೊಹಮ್ಮದ್ ಡ್ಯಾನಿಯಲ್ ವಿನಯ್ ಕುಮಾರ್
|
Vegetable biriyani
ಹೊರ ಜಗತ್ತಿನಲ್ಲಿ ಏನೇ ವ್ಯಾಪಾರ ನಡೆಯುತ್ತಿರಲಿ, ಏನೇ ದುಗುಡ ದುಮ್ಮಾನಗಳಿರಲಿ, ಜಗದ ಗೊಂದಲಗಳೇನೇ ಇರಲಿ ಹೊಟ್ಟೆ ಹಸಿದಿರುವಾಗ ಘಮಘಮಿಸುವ ವೆಜಿಟೇಬರ್ ಬಿರಿಯಾನಿ ಇಳಿಸುವುದನ್ನು ಮರೆಯಬೇಡಿ.

ಬೇಕಾಗುವ ಪದಾರ್ಥಗಳು

ಬಾಸುಮತಿ ಅಕ್ಕಿ 4 ಕಪ್
ವಿವಿಧ ಬಗೆಯ ತರಕಾರಿಗಳು (ಬೀನ್ಸ್, ಕ್ಯಾರಟ್, ಹಸಿ ಬಟಾಣಿ, ಹೂಕೋಸು, ಆಲೂಗಡ್ಡೆ) 2 ಕಪ್
ಈರುಳ್ಳಿ 2
ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಒಂದು ಚಮಚದಷ್ಟು
ಒಣ ಮೆಣಸಿನಕಾಯಿ 6
ಪಲಾವ್ ಎಲೆ 3
ತುರಿದ ಹಸಿಕೊಬ್ಬರಿ ಅರ್ಧ ಬಟ್ಟಲು
ದಾಲ್ಚಿನ್ನಿ, ಲವಂಗ, ಏಲಕ್ಕಿ
ಗೋಡಂಬಿ ನಾಲ್ಕಾರು
ರುಚಿಗೆ ಉಪ್ಪು

ತಯಾರಿಸುವ ವಿಧಾನ

ವೆಜಿಟೇಬರ್ ಬಿರಿಯಾನಿ ತಯಾರಿಕೆಗೆ ಬೇಕಾಗಿರುವ ಎಲ್ಲ ಸಾಮಗ್ರಿಗಳನ್ನು ತೆಗೆದಿಟ್ಟುಕೊಳ್ಳುವ ಮೊದಲು ಬಾಸುಮತಿ ಅಕ್ಕಿಯನ್ನು ಎರಡು ಬಾರಿ ತೊಳೆದು ನೀರಿನಲ್ಲಿ ನೆನೆಯಿಟ್ಟುಬಿಡಿ. ಅದು ಸುಮಾರು ಅರ್ಧ ಗಂಟೆ ನೆನೆಯಲಿ.

ಅಕ್ಕಿ ನೆನೆಯಿಟ್ಟ ಕೂಡಲೆ ತರಕಾರಿ ಹೆಚ್ಚಿಕೊಳ್ಳಲು ಶುರುಹಚ್ಚಿಕೊಳ್ಳಿ. ತರಕಾರಿ ಇಂಥವೇ ಆಗಬೇಕೆಂದಿಲ್ಲ. ನಿಮಗಿಷ್ಟವಾದದ್ದನ್ನು ಆಯ್ದುಕೊಳ್ಳಿ. ತೊಳೆದು ಹೆಚ್ಚಿದ ತರಕಾರಿಗಳು ಎರಡು ಬಟ್ಟಲಷ್ಟಾದರೆ ಸಾಕು. ಇನ್ನೊಂದೆಡೆ ಹಸಿಕೊಬ್ಬರಿಯನ್ನು ಹೆರೆದಿಟ್ಟುಕೊಂಡು, ಮಿಕ್ಸಿಯಲ್ಲಿ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ತಯಾರಿಸಿಕೊಳ್ಳಿ. ಬೆಳ್ಳುಳ್ಳಿ ಕಂಡರೆ ಮೂಗು ಮುರಿಯುವವರು ಅದನ್ನು ಸಾಮಗ್ರಿಗಳ ಲಿಸ್ಟಿನಿಂದ ಡಿಲೀಟ್ ಮಾಡಿಕೊಳ್ಳಿ.

ಇದೆಲ್ಲ ಒಂದು ಹಂತಕ್ಕೆ ಬಂದ ನಂತರ ಪ್ಯಾನ್ ನಲ್ಲಿ ನಾಲ್ಕು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ತುಸು ಕಾಯ್ದ ನಂತರ ಚಿಟಿಕೆ ಅರಿಷಿಣ ಹಾಕಿ ಹೆಚ್ಚಿಟ್ಟುಕೊಂಡ ಈರುಳ್ಳಿ, ಒಣ ಮೆಣಸಿನಕಾಯಿ, ತರಕಾರಿ, ದಾಲ್ಚಿನ್ನಿ, ಪಲಾವ್ ಎಲೆ ಸೇರಿಸಿ ಘಮ್ಮನೆ ವಾಸನೆ ಬರುವವರೆಗೆ ತಾಳಿಸಿ. ಗೋಡಂಬಿ ಹಾಕಿದರೆ ಬಿರಿಯಾನಿ ಘಮಲು ಇನ್ನೂ ಜಾಸ್ತಿಯಾಗುತ್ತದೆ. ಇದಕ್ಕೆ ತುಸು ನೀರು ಹಾಕಿ ಅರ್ಧ ಬೇಯುವವರೆಗೆ ಬಿಡಿ.

ಐದು ನಿಮಿಷದ ನಂತರ ನೆನೆಯಿಟ್ಟ ಅಕ್ಕಿ, ಅಕ್ಕಿಯ ಎರಡು ಪಟ್ಟಿನಷ್ಟು ನೀರು ಸುರುವಿ, ರುಚಿಗೆ ತಕ್ಕಷ್ಟು ಉಪ್ಪು, ಕೊಬ್ಬರಿ, ಏಲಕ್ಕಿ ಮತ್ತು ಲವಂಗ ಹಾಕಿ ಪ್ಯಾನ್ ಮುಚ್ಚಳ ಮುಚ್ಚಿಟ್ಟು ವೈಟ್ ಇಡಿ. ಒಂದು ಕನ್ನಡ ಸೀರಿಯಲ್ ಸೀರಿಯಸ್ಸಾಗಿ ನೋಡುವವರೆಗೆ ಅಕ್ಕಿ ಬೆಂದಿರುತ್ತದೆ. ಮುಚ್ಚಳ ತೆಗೆದರೆ ಘಮ್ಮನೆ ವೆಜಿಟೇಬರ್ ಬಿರಿಯಾನಿ ತಯಾರಾಗಿರುತ್ತದೆ, ಜೊತೆಗೆ ಹೊಟ್ಟೆಯೂ ಚುರುಗುಟ್ಟುತ್ತಿರುತ್ತದೆ, ತಟ್ಟೆಯಲ್ಲಿ ಬಿರಿಯಾನಿ ಹಾಕಿಕೊಂಡು ಎರಡು ಚಮಚ ತುಪ್ಪ ಬೆರೆಸಿ ಹೊಟ್ಟೆಗಿಳಿಸುತ್ತಿರುವಾಗ ಜಗತ್ತಿನ ಗೊಂದಲಗಳೂ ಕ್ಷಣಕಾಲ ಮರೆಯಾಗಿರುತ್ತವೆ.

X
Desktop Bottom Promotion