For Quick Alerts
ALLOW NOTIFICATIONS  
For Daily Alerts

ಆಹಾ ಹುಳಿ-ಖಾರ ಮಿಶ್ರಿತ, ಘಮಘಮಿಸುವ ತಿಳಿಸಾರು

By Arshad
|

ಉತ್ತರ ಭಾರತದಲ್ಲಿ ಗೋಧಿ ಪ್ರಧಾನ ಆಹಾರವಾಗಿದ್ದರೆ ದಕ್ಷಿಣ ಭಾರತದಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿದ ಬಳಿಕ ಅದರೊಂದಿಗೆ ಇತರ ತರಹೇವಾರಿ ಖಾದ್ಯಗಳು ಅನ್ನದ ರುಚಿಯನ್ನು ಹೆಚ್ಚಿಸುತ್ತವೆ. ಸಾಂಬಾರು, ತಿಳಿಸಾರು, ಮಜ್ಜಿಗೆ ಹುಳಿ, ತರಕಾರಿಯ ಪಲ್ಯ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಮೊಸರು, ಮಜ್ಜಿಗೆ ಇತ್ಯಾದಿಗಳನ್ನು ಅನ್ನದೊಂದಿಗೆ ಕಲಸಿಕೊಂಡು ತಿನ್ನುವಾಗ ಯಾವ ಮೃಷ್ಟಾನ್ನಭೋಜನಕ್ಕೂ ಕಡಿಮೆಯಿಲ್ಲದ ತೃಪ್ತಿ ದೊರಕುತ್ತದೆ.

ಅನ್ನದೊಂದಿಗೆ ಇವೆಲ್ಲಾ ಇಲ್ಲದಿದ್ದರೂ ಕೇವಲ ಒಂದು ತಿಳಿಸಾರು ಅಥವಾ ರಸಂ ಒಂದಿದ್ದರೂ ಊಟದ ಬಹುತೇಕ ಸಂತೃಪ್ತಿಯನ್ನು ಪಡೆಯಬಹುದು, ಅಂತಹ ರುಚಿ ಈ ತಿಳಿಸಾರಿಗಿದೆ. ಇದರ ಹುಳಿ-ಖಾರದ ರುಚಿಯನ್ನು ಮೆಚ್ಚುವವರು ಅನ್ನದೊಂದಿಗೆ ಕಲಸಿಕೊಂಡು ತಿನ್ನುವುದರ ಜೊತೆಗೇ ಲೋಟದಲ್ಲಿ ಹಾಕಿಕೊಂಡು ಬಿಸಿಕಾಫಿಯ ತರಹ ಹೀರಿ ತಮ್ಮ ಜಿಹ್ವಾಚಾಪಲ್ಯವನ್ನು ತಣಿಸುತ್ತಾರೆ.

ತಿಳಿಸಾರನ್ನು ಹಲವು ಬಗೆಯಲ್ಲಿ ಮಾಡಬಹುದು. ಆದರೆ ಎಲ್ಲಾ ತಿಳಿಸಾರಿನಲ್ಲಿ ಅಗತ್ಯವಾಗಿ ಬೇಕಾಗಿರುವುದು ಹುಣಸೆ ಹುಳಿ ಮತ್ತು ಟೊಮೇಟೊ. ದಕ್ಷಿಣ ಭಾರತದಾದ್ಯಂತ ಜನಪ್ರಿಯವಾಗಿರುವ ಹುಣಸೆಹುಳಿಯ ತಿಳಿಸಾರು ಆರೋಗ್ಯಕರ ಆಹಾರವೂ ಹೌದು. ತಿಳಿಸಾರನ್ನು ಸೇವಿಸುವ ಮೂಲಕ ಮಲಬದ್ಧತೆಯಾಗುವ ಸಂಭವ ಕಡಿಮೆಯಾಗುತ್ತದೆ, ಕರುಳಿನ ಕ್ಯಾನ್ಸರ್, ಹುಣ್ಣು ಬರುವುದನ್ನು ತಡೆಯುತ್ತದೆ ಹಾಗೂ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ. ಅಪ್ಪಟ ಉಡುಪಿ ಶೈಲಿಯಲ್ಲಿ ಟೊಮೇಟೊ ರಸಂ

South Indian Tamarind Rasam Recipe

ಜೊತೆಗೇ ಜೀರ್ಣಶಕ್ತಿಯನ್ನು ಹೆಚ್ಚಿಸಿ ಆಹಾರ ಸುಲಭವಾಗಿ ಪಚನಗೊಳ್ಳಲು ನೆರವಾಗುತ್ತದೆ. ಇದೇ ಕಾರಣದಿಂದ ಮಕ್ಕಳಿಂದ ಹಿರಿಯವರೆಗೆ ಎಲ್ಲಾ ವಯಸ್ಸಿನವರು ಸೇವಿಸಬಹುದಾದ ಆಹಾರಗಳಲ್ಲಿ ರಸಂ ಸಹಾ ಒಂದು. ಬಾಯಿ ಚಪ್ಪರಿಸುವ ಸ್ವಾದದ ರಸಂ ಮನೆಯಲ್ಲಿಯೇ ತಯಾರಿಸಿಕೊಳ್ಳಲು ಸುಲಭ ವಿಧಾನವನ್ನು ಇಲ್ಲಿ ನೀಡಲಾಗಿದೆ:

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹದಿನೈದು ನಿಮಿಷಗಳು
ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಹುಣಸೆ ಹುಳಿ: ನಿಂಬೆಗಾತ್ರದಷ್ಟು (ಬಿಳಿ ಹುಳಿಯಾದರೆ ಉತ್ತಮ. ಕರಿಹುಳಿಯಾದರೆ ಕೊಂಚ ಕಡಿಮೆ ಹಾಕಿ)-ಇದನ್ನು ಅರ್ಧ ಲೋಟ ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಬೇಕು.
*ಜೀರಿಗೆ - ಮೂರು ಚಿಕ್ಕ ಚಮಚ
*ಕಾಳುಮೆಣಸು- ಎರಡು ಚಿಕ್ಕ ಚಮಚ
*ಬೆಳ್ಳುಳ್ಳಿ - ಏಳು ಎಸಳು (ಜಜ್ಜಿದ್ದು)
*ಸಾಸಿವೆ- 1 ಚಿಕ್ಕ ಚಮಚ
*ಇಂಗು - 1 ಚಿಟಿಕೆ
*ಅರಿಶಿನ ಪುಡಿ- ½ ಚಿಕ್ಕ ಚಮಚ
*ಕೆಂಪು ಮೆಣಸು - 3 (ಬ್ಯಾಡಗಿ ಮೆಣಸು ಅತ್ಯುತ್ತಮ. ಕಾಶ್ಮೀರಿ ಮೆಣಸಾದರೆ 5)
*ಕರಿಬೇವಿನ ಎಲೆಗಳು- ಎರಡು ದಂಟಿನಲ್ಲಿದ್ದಷ್ಟು
*ಟಪಮೇಟೊ - 1 (ಚಿಕ್ಕದಾಗಿ ಹೆಚ್ಚಿದ್ದು)
*ಕೊತ್ತಂಬರಿ ಸೊಪ್ಪು - 1 ಕಟ್ಟು (ಚಿಕ್ಕದಾಗಿ ಹೆಚ್ಚಿದ್ದು
*ನೀರು - 3 ಲೋಟ
*ಉಪ್ಪು-ರುಚಿಗನುಸಾರ ಬರೀ 15 ನಿಮಿಷದಲ್ಲಿ ಟೊಮೇಟೊ ಚಟ್ನಿ ರೆಡಿ!

ವಿಧಾನ:
1)ಮಿಕ್ಸಿಯ ಚಿಕ್ಕ ಜಾರ್‌ನಲ್ಲಿ ಜೀರಿಗೆ, ಕಾಳುಮೆಣಸು, ಬೆಳ್ಳುಳ್ಳಿ ಹಾಕಿ ಸ್ವಲ್ಪ ದಪ್ಪ ಇರುವಷ್ಟು ಅರೆಯಿರಿ.
೨)ದಪ್ಪತಳದ (ತಾಮ್ರದ ತಳ ಇರುವ ಪಾತ್ರೆಯಾದರೆ ಉತ್ತಮ) ಅಗಲವಾದ ಪಾತ್ರೆಯಲ್ಲಿ ಚಿಕ್ಕ ಉರಿಯಲ್ಲಿ ಎಣ್ಣೆ ಹಾಕಿ ಸಾಸಿವೆ, ಇಂಗು, ಕೆಂಪು ಮೆಣಸು ಮತ್ತು ಬೇವಿನ ಎಲೆಗಳನ್ನು ಹಾಕಿ ತಿರುವಿ.
೩) ಸುಮಾರು ಮೂರು ನಿಮಿಷ ತಿರುವಿದ ಬಳಿಕ ಟೊಮೇಟೊ, ಅರಿಶಿನ ಪುಡಿ ಹಾಕಿ. ಟೊಮೇಟೊ ಎಣ್ಣೆಬಿಡುವವರೆಗೆ ತಿರುವುತ್ತಾ ಇರಿ.
೪) ಈಗ ಅರೆದ ಮಸಾಲೆಯನ್ನು ಇದಕ್ಕೆ ಹಾಕಿ ತಿರುವಿರಿ. ಬಳಿಕ ನೆನೆಸಿಟ್ಟ ಹುಳಿಯನ್ನು ಕಿವುಚಿ ಆ ನೀರನ್ನು ಸುರುವಿರಿ. ಉಳಿದ ನೀರು ಮತ್ತು ಉಪ್ಪು ಸೇರಿಸಿ. ಈಗ ಉರಿ ಹೆಚ್ಚಿಸಿ ಚೆನ್ನಾಗಿ ಕುದಿಸಿ.
೫) ಕುದಿ ಬರುತ್ತಿದ್ದಂತೆ ಉರಿಯನ್ನು ಅತಿ ಚಿಕ್ಕದಾಗಿಸಿ ಸುಮಾರು ಹತ್ತರಿಂದ ಹನ್ನೆರಡು ನಿಮಿಷ ಬೇಯಿಸಿ.
೬) ಈಗ ಉರಿಯನ್ನು ನಂದಿಸಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಬಿಸಿಯಿದ್ದಂತೆಯೇ ಅನ್ನದೊಂದಿಗೆ ಬಡಿಸಿ.

ಸಲಹೆ
*ಮಾರುಕಟ್ಟೆಯಲ್ಲಿ ರಸಂ ಪೌಡರ್ ಎಂದು ಸಿದ್ಧರೂಪದ ಪುಡಿ ಲಭ್ಯವಿದ್ದರೂ ಅದಕ್ಕಿಂತ ಮನೆಯಲ್ಲಿಯೇ ಮಾಡಿದ ಈ ರಸಂ ರುಚಿಯಲ್ಲಿ ಹಾಗೂ ಪೌಷ್ಟಿಕಾಂಶದಲ್ಲಿ ಅದ್ವಿತೀಯವಾಗಿದೆ.
*ಮೂರು ಕಪ್ ತಣ್ಣೀರಿನ ಬದಲು ಸಾಂಬಾರಿಗಾಗಿ ಬೇಳೆ ಬೇಯಿಸಿದ್ದಿದ್ದರೆ ಅದನ್ನು ಬಸಿದ ನೀರನ್ನು ಬಳಸಿದರೆ ಇನ್ನಷ್ಟು ರುಚಿ ಬರುತ್ತದೆ.
*ರಸಂ ಅನ್ನು ಬಿಸಿ ಟೀಯಂತೆ ಹೀರಲು ಇಷ್ಟಪಡುವವರು ರಸಂ ಇರುವ ಪಾತ್ರೆಯನ್ನು ಕೊಂಚ ಕಾಲ ಅಲ್ಲಾಡಿಸದೇ ಇದ್ದ ಕೊಂಚ ಸಮಯದ ಬಳಿಕ ಕೇವಲ ಮೇಲ್ಭಾಗದ ನೀರನ್ನು ಬಾಗಿಸಿಕೊಂಡು ಕುಡಿದರೆ ಹೆಚ್ಚಿನ ರುಚಿ ಲಭ್ಯವಾಗುತ್ತದೆ.
*ಒಂದು ವೇಳೆ ಹುಣಸೆ ಹುಳಿ ಹಳೆಯದ್ದಾಗಿದ್ದಲ್ಲಿ ಅಷ್ಟೊಂದು ರುಚಿ ಬರುವುದಿಲ್ಲ. ಇದಕ್ಕಾಗಿ ರಸಂ ಬೇಯಲು ಪ್ರಾರಂಭವಾದಾಗ ಈಗ ತಾನೇ ಹಣ್ಣಾಗುತ್ತಿರುವ ಟೊಮೇಟೊ ಒಂದನ್ನು ನಾಲ್ಕು ತುಂಡು ಮಾಡಿ ಸೇರಿಸಿ.
*ಬ್ಯಾಡಗಿ ಮೆಣಸಿನ ಕಾಯಿ ಸಿಗದೇ ಇದ್ದಲ್ಲಿ ಬೇರೆ ಮೆಣಸಿನ ಕಾಯಿಯ ಖಾರ ಕೊಂಚ ಹೆಚ್ಚಾಗಿರಬಹುದು. ಆಗ ಒಂದು ಚಿಕ್ಕ ತುಂಡು ಬೆಲ್ಲ ಸೇರಿಸಿ.

English summary

South Indian Tamarind Rasam Recipe

In South India, rasam and rice is a famous dish which is served in every household. This delicious and health spicy soup is prepared using tamarind juice and other spices like cumin seeds, mustard seeds and peppercorn. In addition, tomato is also used in this recipe to create a tangy taste. Here is how you prepare this yummy South Indian rasam recipe, take a look:
X
Desktop Bottom Promotion