For Quick Alerts
ALLOW NOTIFICATIONS  
For Daily Alerts

ಆಲೂಗಡ್ಡೆ-ಈರುಳ್ಳಿ ಸಾಂಬಾರ್, ಆಹಾ..ಎಂಥ ರುಚಿ!

ಸಾಮಾನ್ಯವಾಗಿ ಸುಲಭವಾಗಿ ಲಭಿಸುವ, ಅಗ್ಗ ಹಾಗೂ ಹೆಚ್ಚು ದಿನ ಹಾಳಾಗದೇ ಇರುವ ತರಕಾರಿಗಳನ್ನೇ ಸಾಂಬಾರಿಗಾಗಿ ಉಪಯೋಗಿಸಲಾಗುತ್ತದೆ. ಇದರಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆ ಪ್ರಮುಖವಾಗಿವೆ. ಈ ಜೋಡಿಯ ಸಾಂಬಾರಿಗೆ ಸರಿಸಾಟಿಯಾದ ತರಕಾರಿ ಇನ್ನೊಂದಿಲ್ಲ.

By Super Admin
|

ದಕ್ಷಿಣ ಭಾರತದ ನಿತ್ಯದ ಊಟದ ಅವಿಭಾಜ್ಯ ಅಂಗವಾಗಿರುವ ಸಾಂಬಾರ್ (ಕನ್ನಡದಲ್ಲಿ ಕೆಲವೆಡೆ ಬರೆಯ ಸಾರು ಎಂದೂ ಕರೆಯುತ್ತಾರೆ) ಅನ್ನದೊಡನೆ ಕಲೆಸಿಕೊಂಡು ಊಟ ಮಾಡದಿದ್ದರೆ ಅದು ಊಟವೇ ಅಲ್ಲ ಎನ್ನುವಂತಹ ಸ್ಥಿತಿ ಇದೆ. ಊಟದ ರುಚಿ ಇರುವುದೇ ಸಾಂಬಾರ್‌ನ ರುಚಿಯಲ್ಲಿ. ಸಾಮಾನ್ಯವಾಗಿ ಸುಲಭವಾಗಿ ಲಭಿಸುವ, ಅಗ್ಗ ಹಾಗೂ ಹೆಚ್ಚು ದಿನ ಹಾಳಾಗದೇ ಇರುವ ತರಕಾರಿಗಳನ್ನೇ ಸಾಂಬಾರಿಗಾಗಿ ಉಪಯೋಗಿಸಲಾಗುತ್ತದೆ. ಇದರಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆ ಪ್ರಮುಖವಾಗಿವೆ. ಈ ಜೋಡಿಯ ಸಾಂಬಾರಿಗೆ ಸರಿಸಾಟಿಯಾದ ತರಕಾರಿ ಇನ್ನೊಂದಿಲ್ಲ.

ಇಂತಹ ಸಾಂಬಾರು ಕೇವಲ ರುಚಿಕರ ಮಾತ್ರವಲ್ಲ, ಆರೋಗ್ಯಕರವೂ ಆಗಿದೆ. ಇದರಲ್ಲಿ ಬೇಳೆಯನ್ನು ಬೇಯಿಸಿ ಬಳಸಿರುವ ಕಾರಣ ಪ್ರೋಟೀನುಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ. ಸೂಕ್ತ ಪ್ರಮಾಣದಲ್ಲಿ ಹಲವು ಪೋಷಕಾಂಶಗಳು ಮತ್ತು ನಾರು ಸಹಾ ಲಭ್ಯವಿರುವ ಕಾರಣ ಪಚನಕ್ರಿಯೆ ಉತ್ತಮಗೊಳ್ಳುತ್ತದೆ. ಈ ರುಚಿಕರ ಆಹಾರವನ್ನು ದಿನದ ಮೂರೂ ಹೊತ್ತು ಸೇವಿಸಲು ಯೋಗ್ಯವಾಗಿದೆ. ಅದರಲ್ಲೂ ಮಧ್ಯಾಹ್ನದ ಊಟಕ್ಕೆ ಅತ್ಯಂತ ಪ್ರಶಸ್ತವಾಗಿದೆ. ಇದನ್ನು ಅನ್ನದೊಡನೆ ಕಲಸಿಕೊಂಡು, ರೊಟ್ಟಿ, ಚಪಾತಿ, ನಾನ್ ಮೊದಲಾದ ವುಗಳೊಡನೆ ಸಹಾ ಸೇವಿಸಬಹುದು. ಇಡ್ಲಿಯನ್ನು ಸಾಂಬಾರಿನಲ್ಲಿ ಮುಳುಗಿಸಿ ಸೇವಿಸುವ ಆನಂದವನ್ನು ಭಾರತೀಯರಾರೂ ಮರೆಯಲಾರರು. ಬನ್ನಿ, ಇಂದು ಈ ರುಚಿಕರವಾದ ಸಾಂಬಾರ್ ತಯಾರಿಸುವ ಸುಲಭ ವಿಧಾನವನ್ನು ಕಲಿಯೋಣ: ಘಮ್ಮೆನ್ನುವ ಸಾಂಬರ್- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

Easy Tasty Potato Onion Sambar Recipe

ಪ್ರಮಾಣ: ಮೂವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಆಲೂಗಡ್ಡೆ: ಒಂದು ಕಪ್ (ಸಿಪ್ಪೆ ಸುಲಿದು ಚಿಕ್ಕ ತುಂಡುಗಳನ್ನಾಗಿಸಿದ್ದು)
*ಈರುಳ್ಳಿ: ಒಂದು ಕಪ್ (ಸಿಪ್ಪೆ ಸುಲಿದು ದೊಡ್ಡದಾಗಿ ಹೆಚ್ಚಿದ್ದು)
*ತೊಗರಿ ಬೇಳೆ: ಒಂದು ಕಪ್
*ಕಾಯಿ ತುರಿ: ಒಂದು ಕಪ್
*ಕೆಂಪು ಮೆಣಸಿನ ಪುಡಿ: ಬ್ಯಾಡಗಿ ಆದರೆ ಮೂರು ದೊಡ್ಡ ಚಮಚ, ಕಾಶ್ಮೀರಿ ಚಿಲ್ಲಿ ಆದರೆ ನಾಲ್ಕು ಚಮಚ, ಗಿಡ್ಡ ಮೆಣಸಿನ ಪುಡಿಯಾದರೆ ಎರಡು ಚಮಚ ಸಾಕು. ಸಾಂಬಾರ್ ನ ರುಚಿಗೆ ಬ್ಯಾಡಗಿ ಮೆಣಸಿನ ಪುಡಿಯೇ ಸೂಕ್ತ.
*ಧನಿಯ (ಕೊತ್ತಂಬರಿ ಬೀಜ): ಎರಡು ಚಿಕ್ಕ ಚಮಚ
*ಕಡಲೆ ಕಾಳು: ಅರ್ಧ ಚಿಕ್ಕ ಚಮಚ
*ಉದ್ದಿನ ಬೇಳೆ: ಅರ್ಧ ಚಿಕ್ಕ ಚಮಚ
*ಅಕ್ಕಿ ಹಿಟ್ಟು: ಅರ್ಧ ಚಿಕ್ಕ ಚಮಚ
*ಬೆಲ್ಲ: ಒಂದು ಚಿಕ್ಕ ಚಮಚ (ಕಪ್ಪು ಬೆಲ್ಲ ಉತ್ತಮ, ಬಿಳಿಬೆಲ್ಲದಲ್ಲಿ ಸುಣ್ಣ ಇರುವ ಕಾರಣ ಹುಳಿ ತರಿಸುತ್ತದೆ)
*ಹುಣಸೆ ಹುಳಿ: ಐದು ಗ್ರಾಂ ಅಥವಾ ಚಿಕ್ಕ ಲಿಂಬೆಯ ಗಾತ್ರದ್ದು
*ಕರಿಬೇವಿನ ಎಲೆ: ಒಂದು ಎಸಳು
*ಉಪ್ಪು: ರುಚಿಗನುಸಾರ
*ಎಣ್ಣೆ: ಒಗ್ಗರಣೆಗೆ ಅಗತ್ಯವಿದ್ದಷ್ಟು
*ಸಾಸಿವೆ: ಒಂದು ಚಿಕ್ಕ ಸಮಚ

ವಿಧಾನ:
1) ಮೊದಲು ಪ್ರೆಶರ್ ಕುಕ್ಕರ್ ನಲ್ಲಿ ತೊಗರಿ ಬೇಳೆ, ಕೊಂಚ ನೀರು ಹಾಕಿ ಸುಮಾರು ಮೂರು ಸೀಟಿ ಬರುವವರೆಗೆ ಕುದಿಸಿ. ಬಳಿಕ ತಣಿಸಿ ಮುಚ್ಚಳ ತೆರೆದು ಈರುಳ್ಳಿ, ಆಲೂಗಡ್ಡೆ ಹಾಕಿ ಮತ್ತೊಂದು ಮೂರು ಸೀಟಿ ಬರುವವರೆಗೆ ಬೇಯಿಸಿ ಇಳಿಸಿ.
2) ಇನ್ನೊಂದು ಚಿಕ್ಕ ಬಾಣಲೆಯನ್ನು ಒಲೆಯ ಮೇಲಿಟ್ಟು ಒಣಗಿದ ಬಳಿಕ ಅಕ್ಕಿಹಿಟ್ಟು, ಧನಿಯ, ಉದ್ದಿನಬೇಳೆ, ಕಡ್ಲೆಕಾಳು ಹಾಕಿ ಚಿಕ್ಕ ಉರಿಯಲ್ಲಿ ಕೊಂಚ ಕೆಂಪು ಬಣ್ಣ ಬರುವಷ್ಟು ಹುರಿಯಿರಿ. ಬಳಿಕ ಇದನ್ನು ಅಗಲವಾದ ತಟ್ಟೆಯಲ್ಲಿ ಹರಡಿ ತಣಿಯಲು ಬಿಡಿ.
3) ಇದು ತಣಿದ ಬಳಿಕ ಮಿಕ್ಸಿಯ ಜಾರ್ ನಲ್ಲಿ ಹಾಕಿ. ಇದಕ್ಕೆ ಹುಣಸೆ ಹುಳಿ (ಬೀಜ, ನಾರು ನಿವಾರಿಸಿದ್ದು), ಕಾಯಿತುರಿ, ಬೆಲ್ಲ, ಮೆಣಸಿನ ಪುಡಿ ಮತ್ತು ಕೊಂಚ ನೀರು ಹಾಕಿ ನಯವಾಗುವಂತೆ ಕಡೆಯಿರಿ.
4) ಈ ಹೊತ್ತಿಗೆ ಕುಕ್ಕರ್ ತಣ್ಣಗಾಗಿದ್ದು ಒಳಗಿನ ಬೇಳೆ ಮತ್ತು ಇತರ ತರಕಾರಿಗಳು ಬೆಂದಿರುತ್ತದೆ. ಇದನ್ನು ಇನ್ನೊಂದು ಪಾತ್ರೆಯಲ್ಲಿ ಸುರಿಯಿರಿ.
5) ಈ ಪಾತ್ರೆಗೆ ಇನ್ನೂ ಕೊಂಚ ನೀರು ಸೇರಿಸಿ ಬೇಯಲಿಡಿ. ಇದಕ್ಕೆ ಮಿಕ್ಸಿಯಲ್ಲಿ ಕಡೆದ ಮಸಾಲೆ ಸೇರಿಸಿ ಕಲಸಿ.
6) ಒಗ್ಗರಣೆಯ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಕರಿಬೇವಿನ ಎಲೆಗಳನ್ನು ಹಾಕಿ. ರುಚಿ ಹೆಚ್ಚಲು ಕೊಂಚ ಇಂಗನ್ನೂ ಎಣ್ಣೆಗೆ ಸೇರಿಸಬಹುದು. ಇದನ್ನು ಬಿಸಿಯಿದ್ದಂತೆಯೇ ಸಾಂಬಾರಿನ ಪಾತ್ರೆಯಲ್ಲಿ ಮುಳುಗಿಸಿ.
7) ಸುಮಾರು ಐದರಿಂದ ಹತ್ತು ನಿಮಿಷ ಬೆಂದರೆ ಸಾಕು, ರುಚಿಕರವಾದ ಆಲೂಗಡ್ಡೆ ಈರುಳ್ಳಿ ಸಾಂಬಾರ್ ಸಿದ್ಧವಾಗಿದೆ.

ಸಲಹೆ:
* ಒಗ್ಗರಣೆಯ ಸಮಯದಲ್ಲಿ ಕೆಲವು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಸೇರಿಸುವ ಮೂಲಕ ಅಜೀರ್ಣದ ತೊಂದರೆ ಇದ್ದವರಿಗೆ ಇದು ಸುಲಭವಾಗಿ ಜೀರ್ಣವಾಗುತ್ತದೆ. ಉಳಿದವರಿಗೂ ಇದು ಉತ್ತಮವಾಗಿದೆ.
* ಊಟದ ಸಮಯದಲ್ಲಿ ಅನ್ನವನ್ನು ಸಾಂಬಾರ್ ಹಾಕಿ ಕಲೆಸಿಕೊಂಡ ಬಳಿಕ ಒಂದು ಚಮಚ ತುಪ್ಪ ಹಾಕಿದರೆ ಈ ರುಚಿ ಇನ್ನಷ್ಟು ಹೆಚ್ಚುತ್ತದೆ.
* ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಕೋಸಂಬರಿ, ಮೊಸರು ಮೊದಲಾದ ಯಾವುದೇ ಖಾದ್ಯವನ್ನು ಇದರೊಂದಿಗೆ ತಿಂದರೆ ಊಟದ ರುಚಿ ಹೆಚ್ಚುತ್ತದೆ.

English summary

Easy Tasty Potato Onion Sambar Recipe

In a lunch menu, the most important and tasty part is the rice and sambar. You should never miss out on the sambar. Hence, we're sharing with you one of the best potato and onion sambar recipe Sambar is, basically, an authentic recipe from South India. No meal can be complete without sambar
X
Desktop Bottom Promotion