For Quick Alerts
ALLOW NOTIFICATIONS  
For Daily Alerts

ಪಕ್ಕದ ಮನೇಲಿ ಮಜ್ಜಿಗೆಹುಳಿ ಮಾಡಿದ ವಾಸನೆ ಬರುತ್ತಿದೆ ಕಣೇ

By Super
|
Majjige Huli
ಎಂಥಾ ರುಚಿ ಅಂತೀರಾ! ಆ ರುಚಿಯನ್ನು ಇಲ್ಲಿ ಹೊಗಳಲು ಪ್ರಾರಂಭಿಸಿದರೆ ಈ ಲೇಖನ ಓದುವುದು ಬಿಟ್ಟು ಅಡುಗೆ ಮನೆಗೆ ಓಡಿ ಹೆಂಡತಿಯನ್ನು ಮಜ್ಜಿಗೆ ಹುಳಿ ಮಾಡೆಂದು ಪೀಡಿಸಲು ಪ್ರಾರಂಭಿಸುತ್ತೀರಿ.

* ಯಶ್

ಹೆಸರು ಕೇಳುತ್ತಿದ್ದಂತೆ ಲಾಲಾರಸ ಗ್ರಂಥಿಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಪ್ರಾರಂಭಿಸಿಬಿಡುತ್ತವೆ. ಮಜ್ಜಿಗೆ ಹುಳಿ ಅಥವ ಉತ್ತರ ಕರ್ನಾಟಕದಲ್ಲಿ ಹೇಳುವಂತೆ ಪಳದ್ಯಾ ಅಥವ ಪಳದೆಯ ಪ್ರಯೋಜನಗಳ ಪಟ್ಟಿ ಮಾಡುತ್ತ ಇದರೊಂದಿಗೆ ಸವಿಯಬಹುದಾದ ಕಾಂಬಿನೇಷನ್‌ಗಳ ಪಟ್ಟಿ ಮಾಡುತ್ತ ಕೂತರೆ ಕೂತವರು ಕೂತೇ ಇರಬೇಕು. ಅಷ್ಟರಲ್ಲೇ ಮಜ್ಜಿಗೆ ಹುಳಿಯನ್ನು ಮೆಲ್ಲಬೇಕೆಂಬ ಆಸೆಯುಂಟಾದರೆ ಪಟ್ಟಿಯನ್ನು ಅಲ್ಲೇ ಮರೆತುಬಿಡಬೇಕು!

ದಿನಾ ಸಾರು, ಕೂಟು, ಹುಳಿ ತಿಂದು ಬೇಜಾರಾಗಿದೆಯಾ? ಮಜ್ಜಿಗೆ ಹುಳಿ ಮಾಡಿ. ಮೊಸರು ಸಿಕ್ಕಾಪಟ್ಟೆಯುಳಿದು ಹುಳಿಹುಟ್ಟೆಯಾಗಿದೆಯಾ? ಪಳದ್ಯಾ ಮಾಡಿ. ನೆಗಡಿ, ಕೆಮ್ಮು ಬಂದು ಊಟ ಸೇರುತ್ತಿಲ್ಲವಾ? ಒಂದು ಸ್ವಲ್ಪ ಮೆಣಸು ಹಾಕಿ ಮಜ್ಜಿಗೆ ಹುಳಿ ಸಖತ್ತಾಗಿ ಜಡಿದುಬಿಟ್ಟು ಮುಸುಕುಹಾಕಿ ಮಲಗಿಬಿಟ್ಟರೆ ಮರುದಿನ ಜ್ವರ ಗಾಯಬ್!

ಉಟದ ಸುದ್ದಿ ಬಂದಾಗ ಜ್ವರ ಮಾತೇಕೆ ಅಂತೀರಾ? ಹಬ್ಬಕ್ಕೆ ನುಚ್ಚಿನುಂಡೆ ಮಾಡಿದ್ದೀರಾ? ನುಚ್ಚಿನುಂಡೆಯನ್ನು ಮಜ್ಜಿಗೆ ಹುಳಿಯಲ್ಲಿ ಅದ್ದಿ ತಿನ್ನಿರಿ. ಎಂಥಾ ರುಚಿ ಅಂತೀರಾ! ಆ ರುಚಿಯನ್ನು ಇಲ್ಲಿ ಹೊಗಳಲು ಪ್ರಾರಂಭಿಸಿದರೆ ಈ ಲೇಖನ ಓದುವುದು ಬಿಟ್ಟು ಅಡುಗೆ ಮನೆಗೆ ಓಡಿ ಹೆಂಡತಿಯನ್ನು ಮಜ್ಜಿಗೆ ಹುಳಿ ಮಾಡೆಂದು ಪೀಡಿಸಲು ಪ್ರಾರಂಭಿಸುತ್ತೀರಿ.

ಈ ಕಾಂಬಿನೇಷನ್‌ಗಳೇ ಬೇಡವೆಂದರೆ ನೀರಾಗಿ ಮಾಡಿದ ಬಿಸಿಬಿಸಿ ಮಜ್ಜಿಗೆ ಹುಳಿಯನ್ನು ಸುಮ್ಮನೆ ಸ್ವಲ್ಪ ಸ್ವಲ್ಪ ಗಂಟಲಿಗೆ ಇಳಿಸಿರಿ. ಮಲ್ಟಿಪರ್ಪೋಸ್ ಮಜ್ಜಿಗೆ ಹುಳಿಯ ಮಹಾತ್ಮೆ ಏನಂತ ಬಣ್ಣಿಸೋದು?

ಇಷ್ಟು ಓದುವ ಹೊತ್ತಿಗೆ ಈಗಲೇ ಮೃಷ್ಟಾನ್ನ ಉಂಡು ಬಂದಿದ್ದರೂ ನಿಮ್ಮ ಹೊಟ್ಟೆ ಚುರುಗುಟ್ಟಲು ಪ್ರಾರಂಭಿಸದಿದ್ದರೆ ಕೇಳಿ. ಇನ್ನೇಕೆ ತಡ. ನುಚ್ಚಿನುಂಡೆ ಕಾದಿದ್ದರೆ ಇನ್ನೂ ಸ್ವಲ್ಪ ಹೊತ್ತು ಕಾಯಲು ಹೇಳಿ ಮಜ್ಜಿಗೆ ಹುಳಿ ಮಾಡಲು ಪ್ರಾರಂಭಿಸಿ.

ಬೇಕಾಗುವ ಪದಾರ್ಥಗಳು

ಹುಳಿ ಬಂದ ಮೊಸರು
ಬೂದು ಕುಂಬಳಕಾಯಿ
ಕಡಲೇಬೇಳೆ ಅಥವ ಕಡಲೆ ಹಿಟ್ಟು
ಹಸಿ ಶುಂಠಿ
ಹಸಿ ಮೆಣಸಿನಕಾಯಿ ಅಥವ ಒಣಗಿದ ಕೆಂಪು ಮೆಣಸಿನಕಾಯಿ
ಮೆಣಸು ಕಾಳು
ಜೀರಿಗೆ

ಮಾಡುವ ವಿಧಾನ

ಮೊದಲಿಗೆ ಹುಳಿ ಬಂದ ಮೊಸರನ್ನು ಕಡಿದು ನೀರು ಮಜ್ಜಿಗೆ ಮಾಡಿಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿಟ್ಟುಕೊಳ್ಳಬೇಕು. ಗಟ್ಟಿ ಬೇಕಾದರೆ ಗಟ್ಟಿಯಾಗಿಯೂ ತಯಾರಿಸಿಕೊಳ್ಳಬಹುದು. ಅದಕ್ಕೆ ರುಬ್ಬಿಕೊಂಡ ಕಡಲೇಬೇಳೆಯನ್ನು ಸೇರಿಸಿಟ್ಟುಕೊಳ್ಳಬೇಕು.

ಬೂದುಕುಂಬಳವನ್ನು ಸಾಧಾರಣ ಗಾತ್ರಕ್ಕೆ ಹೆಚ್ಚಿಕೊಂಡು ಒಗ್ಗರಣೆಯೊಂದಿಗೆ ತಾಳಿಸಿಟ್ಟುಕೊಳ್ಳಬೇಕು. ಮಜ್ಜಿಗೆಯನ್ನು ಒಗ್ಗರಣೆಗೆ ಸೇರಿಸಬೇಕು. ನಂತರ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಂಡ ಹಸಿ ಮೆಣಸಿನಕಾಯಿ, ಜೀರಿಗೆ, ಮೆಣಸು ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ರುಚಿಗೆ ಸ್ವಲ್ಪ ಇಂಗು ಸೇರಿಸಿದರೂ ಉತ್ತಮ. ಮಜ್ಜಿಗೆ ಹುಳಿ ತಯಾರ್.

ಪಳದ್ಯಾಕ್ಕೆ ಸಾಧಾರಣವಾಗಿ ಕುಂಬಳಕಾಯಿಯನ್ನು ಹಾಕುವುದಿಲ್ಲ. ಮಜ್ಜಿಗೆ ಹುಳಿ ಸ್ವಲ್ಪ ಗಟ್ಟಿಯಾಗಿರುತ್ತದೆ ಪಳದ್ಯಾ ನೀರಾಗಿರುತ್ತದೆ ಅಷ್ಟೇ ವ್ಯತ್ಯಾಸ.

ಈಗ ಮಜ್ಜಿಗೆ ಹುಳಿಯನ್ನು ನುಚ್ಚಿನುಂಡೆಯೊಂದಿಗೆ ತಿನ್ನುತ್ತೀರೋ, ಅನ್ನದಲ್ಲಿ ಕಲಿಸಿ ಸ್ವಾಹಾ ಮಾಡುತ್ತೀರೋ, ತಾಪತ್ರಯವೇ ಬೇಡವೆಂದು ಅದನ್ನಷ್ಟೇ ಕುಡಿಯುತ್ತೀರೋ ನಿಮಗೆ ಬಿಟ್ಟಿದ್ದು.

X
Desktop Bottom Promotion