For Quick Alerts
ALLOW NOTIFICATIONS  
For Daily Alerts

ಕಾರ್ತೀಕ ಕೃಷ್ಣ ದ್ವಾದಶಿಗೆ ಸ್ಪೆಷಲ್ ಸಾರು

By Super Admin
|
Special rasam for Karthika Dwadashi
ಬೇಳೆ ಸಾರು, ತಿಳಿ ಸಾರು, ಟೊಮೆಟೋ ಸಾರು, ರಸಂ ಮುಂತಾದ ಅನ್ನಕ್ಕೆ ಜೋಡಿ ಮಾಡುವ ದ್ರವಮೂಲದ ಅಡುಗೆಗಳನ್ನು ಈಚೀಚೆಗೆ ಅನೇಕರು ಕಲಿತಿದ್ದಾರೆ. ಗುಡ್ ನ್ಯೂಸ್. ನಾನಾ ರೆಸಿಪಿಗಳ ಪ್ರಿಂಟ್ಔಟ್ ತೆಗೆದುಕೊಂಡು ವ್ಯಾನಿಟಿ ಬ್ಯಾಗಿನಲ್ಲಿ ತುರುಕಿ ಮನೆಗೆ ಹೋಗಿ ನೋಡಿಕೊಂಡು ರುಚಿಯೇ ಮಡುಗಟ್ಟಿದ ಅಡುಗೆ ಮಾಡಿ ಬಡಿಸಿ ಸೈ ಎನಿಸಿಕೊಂಡ ದಟ್ಸ್ ಕನ್ನಡ ಅಡುಗೆ ಶಾಲೆ ಅಭಿಮಾನಿಗಳಿಗೆ ಕಾರ್ತಿಕ ಕೃಷ್ಣ ಏಕಾದಶಿ, ಶುಕ್ರವಾರದ ಶುಭಾಶಯಗಳು.

ನಾಳೆ ದ್ವಾದಶಿಗೆ ಹೊಸ ಟೈಪ್ ಬೇಳೆ ಸಾರು. ಆದರೆ ಅದೇ, ಮಾಡಿದ್ದೇ ಮಾಡೋ ಸಾರಲ್ಲ. ಬೇಳೆ ಬೇಯಿಸಿ ಉಪ್ಪು ಖಾರ ಹುಳಿ ಹಾಕಿ ಸ್ಟೌವ್ ನಿಂದ ಪಾತ್ರೆ ಕೆಳಗಿಳಿಸಿ ಕೈತೊಳೆದುಕೊಂಡು ಜೀ ಕನ್ನಡ ಆನ್ ಮಾಡಿ ಬದುಕು ಜಟಕಾ ಬಂಡಿ ಸೀರಿಯಲ್ಲಿಗೆ ಕಣ್ಣು ಕೀಲಿಸಿ ಕೂಡುವವರಿಗೆ ಇವತ್ತಿನ ಸಾರು ರೆಸಿಪಿ ಹೇಳಿಮಾಡಿಸಿದ ಕಿವಿಮಾತಲ್ಲ. ಈ ಸ್ಪೆಷಲ್ ಸಾರು ನಿಮಗೆ ಮಾತ್ರ. ಭಾನುವಾರದ ರಜೆಗಾಗಿ ಕಾಯುತ್ತಿರುವ ಶಬರಿಯರಿಗೆ ಮಾತ್ರ.

ಬೇಕಾಗುವ ಪದಾರ್ಥಗಳ ಪಟ್ಟಿಯಲ್ಲಿ ಯಥಾಪ್ರಕಾರ ತೊಗರಿ ಬೇಳೆ, ಹುಣಿಸೆ ಹಣ್ಣು, ಸಾರಿನ ಪುಡಿ, ಉಪ್ಪು, ಟೊಮೆಟೋ, ತುಪ್ಪ, ತೆಂಗಿನತುರಿ, ಜೀರಿಗೆ ಇರಲಿ. ಸಾರು ಪಾತ್ರೆ ತುಂಬಾ ಮಾಡಬೇಕಾ? ಅಥವಾ ಸ್ವಲ್ಪನೇ ಸಾಕಾ? ಎಂಬ ಪ್ರಶ್ನೆಯೇ ಇಲ್ಲ. ನಿಮ್ಮ ಮನೆಯಲ್ಲಿ ಊಟಕ್ಕೆ ಹಾಜರಾಗುವ ಅನ್ನ ಸಾರು ಭಕ್ತರ ಲೆಕ್ಕದ ಮೇಲೆ ಪ್ರಮಾಣ ಅವಲಂಬಿತ.

ಹಂತ 1) ಕುಕ್ಕರಿನಲ್ಲಿ ಬೇಳೆ ಬೇಯಲಿ. ಬೆಂದು ಕರಗಿರಲಿ; ಹಂತ 2) ಒಗ್ಗರಣೆ ಸೌಟಿನಲ್ಲಿ ತುಪ್ಪ, ಜೀರಿಗೆ, ಟೊಮೆಟೋ ಸ್ವಲ್ಪ ಕಾಯಿತುರಿ ಹಾಕಿ ಬಾಡಿಸಿ ನಂತರ ಅದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಈಕಡೆ ಇಡಿ; ಹಂತ 3) ನಿತ್ಯ ಸಾರು ಮಾಡುವ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಒಲೆ ಮೇಲಿಟ್ಟು ಅದು ಕುದಿಬಂದ ಮೇಲೆ ಹೆಚ್ಚಿದ ಕೊತ್ತಂಬರಿ, ಹೆಚ್ಚಿದ ಕರಿಬೇವು, ಸಾರಿನಪುಡಿ, ಉಪ್ಪು ಹಾಕಿ ಕುದಿಯುವುದಕ್ಕೆ ಬಿಡಿ; ಹಂತ 4) ಇದು ಚೆನ್ನಾಗಿ ಕುದ್ದು ಸಾರಿನ ಪುಡಿಯ ಹಸಿ ವಾಸನೆ ಆವಿಯಾದನಂತರ ಹುಣಿಸೆಹಣ್ಣಿನ ರಸ, ಚೂರು ಬೆಲ್ಲ ಹಾಕಿ ಮತ್ತೆ ಕುದಿಯಲು ಬಿಡಿ;

ಹಂತ 5) ರುಬ್ಬಿಕೊಂಡ ಟೊಮೆಟೋ ಚಟ್ನಿಯನ್ನು ಕುದಿಯುತ್ತಿರುವ ಈ ನೀರಿಗೆ ಬೆರಸಿ ಮತ್ತೆ ಕುದಿಯಲು ಬಿಡಿ. ಒಂದೊಂದೂ ಹಂತದಲ್ಲೂ ಚೆನ್ನಾಗಿ ಕುದಿಯುತ್ತಲೇ ಇರಬೇಕು.ಈ ಮೆಥೆಡ್ಡೇ ಈ ಸಾರಿನ ಬಂಡವಾಳ. ಇದೇ ವೇಳೆ, ದಟ್ಸ್ ಕನ್ನಡ ಅಡುಗೆ ರೆಸಿಪಿಗೆ ಗ್ಯಾಸ್ ಜಾಸ್ತಿ ಖರ್ಚಾಗತ್ತೆ ಎಂದು ಗೊಣಗಬಾರದು, ಪ್ಲೀಜ್.

ಕುದಿಯುತ್ತಿರುವ ಸಾರುನೀರಿಗೆ ಈಗ ಬೆಂದ ಬೇಳೆ ಕಟ್ಟನ್ನು ಸುರಿದು ಮತ್ತೆ ಕುದಿಯಲು ಬಿಡಿ. ಕೊತಕೊತ ಕುದ್ದನಂತರ ಎರಡು ಚಮಚ ತುಪ್ಪಕ್ಕೆ, ಚಮಚೆ ಜೀರಿಗೆ, ಚಿಟಿಕೆ ಇಂಗಿನ ಒಗ್ಗರಣೆ ಕೊಟ್ಟು ಸಾರಿನ ಪಾತ್ರೆಯಲ್ಲಿ ಮುಳುಗಿಸಿ. ಚುಂಯ್ ಅಂದರೆ ಸಾರು ರೆಡಿ. ಊಟಕ್ಕೆ ಇನ್ನೂ ಟೈಂ ಇದೆ ಎನ್ನುವವರು ಪುನಃ ಹೆಚ್ಚಿದ ಕೊತ್ತಂಬರಿ, ತೊಳೆದ ಹಸಿ ಕರಿಬೇವಿನ ಎಲೆಗಳನ್ನು ಸಾರಿನ ಮೇಲೆ ತೇಲಿಬಿಡಬಹುದು. ಕೊತ್ತಂಬರಿ ಅಲಂಕಾರಕ್ಕೆ, ಹಸಿ ಕರಿಬೇವು ಪರಿಮಳಕ್ಕೆ.

(ದಟ್ಸ್ ಕನ್ನಡ ಅಡುಗೆಶಾಲೆ)

Story first published: Tuesday, March 22, 2011, 15:02 [IST]
X
Desktop Bottom Promotion