For Quick Alerts
ALLOW NOTIFICATIONS  
For Daily Alerts

ರುಚಿ ರುಚಿಯಾದ ಹೆಸರುಕಾಳು ಮಸಾಲಾ ರೆಸಿಪಿ

|

ಹೆಸರು ಕಾಳು ಮಸಾಲೆಯು ನಮ್ಮ ದೇಶದಲ್ಲಿ ಭಾರೀ ಜನಪ್ರಿಯವಾಗಿರುವ ರೆಸಿಪಿಯಾಗಿದೆ. ಇದನ್ನು ಚಪಾತಿಗೆ ಮಾಡಿಕೊಂಡು ತಿನ್ನಲು ದಕ್ಷಿಣ ಮತ್ತು ಉತ್ತರ ಭಾರತೀಯರಿಬ್ಬರೂ ಸಹ ಇಷ್ಟಪಡುತ್ತಾರೆ. ಅದರಲ್ಲೂ ಬೆಂಗಳೂರು ಮುಂತಾದ ಕರ್ನಾಟಕದ ಕೆಲವು ಭಾಗಗಳಲ್ಲಿ ಇದನ್ನು ರಾಗಿ ಮುದ್ದೆಯ ಜೊತೆಗೆ ಹೆಸರು ಕಾಳು ಮಸಾಲೆ ಮಾಡಿಕೊಂಡು ತಿನ್ನಲು ಸಹ ಜನ ಇಷ್ಟಪಡುತ್ತಾರೆ. ಉತ್ತರ ಭಾರತದಲ್ಲಿ ಇದನ್ನು ಹಸಿರು ಮೂಂಗ್ ದಾಲ್ ಎಂದು ಕರೆಯುತ್ತಾರೆ.

ನೀವು ಅದೇ ಹಳೆಯ ಮಾದರಿಯ ಬೇಳೆ ಸಾರುಗಳನ್ನು ಮಾಡಿಕೊಂಡು ಕಾಲ ಕಳೆಯುತ್ತಿದ್ದಲ್ಲಿ, ನಾವು ಹೇಳುತ್ತಿರುವ ಈ ಹೆಸರು ಕಾಳು ರೆಸಿಪಿಯನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಇದರಲ್ಲಿ ಹಾಕಿರುವ ಮಸಾಲೆಗಳಿಂದಾಗಿ ಇದು ರೋಟಿ, ದೋಸೆ, ಅನ್ನ ಮತ್ತು ಮುದ್ದೆ ಹೀಗೆ ಎಲ್ಲದರ ಜೊತೆಯಲ್ಲು ಇದನ್ನು ಸೇವಿಸಬಹುದಾದ ಗ್ರೇವಿಯನ್ನಾಗಿಸಿದೆ.

ಇದರ ಹೆಚ್ಚುಗಾರಿಕೆಯೆಂದರೆ ಇದನ್ನು ಸುಲಭವಾಗಿ ಮತ್ತು ಶೀಘ್ರವಾಗಿ ತಯಾರಿಸಬಹುದು. ಇದಕ್ಕೆ ಹಾಕಬೇಕಾದ ಮಸಾಲೆಗಳನ್ನು ನೀವು ನಿಮಗೆ ಇಷ್ಟಬಂದ ಹಾಗೆ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಬನ್ನಿ ಇನ್ನು ತಡ ಮಾಡದೆ ಹೆಸರು ಕಾಳು ಮಸಾಲೆಯನ್ನು ಮಾಡುವ ಬಗೆಯನ್ನು ತಿಳಿದುಕೊಳ್ಳೋಣ. ಸವಿರುಚಿಯ, ಕಲರ್ ಕಲರ್ ದಹಿ ಪಲಾವ್!

Spicy Green Gram Masala Recipe

ಮೂವರಿಗೆ ಬಡಿಸಬಹುದು
*ಸಿದ್ಧತೆಗೆ ತಗುಲುವ ಸಮಯ - 10 ನಿಮಿಷ
*ಅಡುಗೆಗೆ ತಗುಲುವ ಸಮಯ - 20 ನಿಮಿಷ

ನಿಮಗೆ ಬೇಕಾದ ಪದಾರ್ಥಗಳು
*ಹೆಸರು ಕಾಳು - 1 ಕಪ್
*ಟೊಮೇಟೊ - 1 (ಕತ್ತರಿಸಿದಂತಹುದು)
*ಈರುಳ್ಳಿ -2 (ಕತ್ತರಿಸಿದಂತಹುದು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಟೀ. ಚಮಚ
*ಬೆಳ್ಳುಳ್ಳಿ -6-7 ತುಂಡು
*ಹಸಿಮೆಣಸಿನ ಕಾಯಿ- 3-4 (ಕತ್ತರಿಸಿದಂತಹುದು)
*ಲವಂಗ - 3
*ಖಾರದ ಪುಡಿ - 1 ಟೀ.ಚಮಚ
*ಅರಿಶಿಣ ಪುಡಿ - 1 ಟೀ.ಚಮಚ
*ಎಣ್ಣೆ - 3-4 ಟೀ. ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ವಿಧಾನ
1. ಹೆಸರು ಕಾಳುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ ಮತ್ತು 2-3 ವಿಷಲ್ ಬರುವವರೆಗು ಕುಕ್ಕರಿನಲ್ಲಿ ಬೇಯಿಸಿ.
2. ತವಾ ತೆಗೆದುಕೊಳ್ಳಿ, ಮತ್ತು ಅದರಲ್ಲಿ ಎಣ್ಣೆಯನ್ನು ಹಾಕಿ. ಇದಕ್ಕೆ ಲವಂಗವನ್ನು ಹಾಕಿ, ಉರಿಯಿರಿ. ಇದನ್ನು ಹುರಿಯುವಾಗ ಸುವಾಸನೆಯ ಪರಿಮಳ ಬರಬೇಕು.
3. ಈಗ ಇದಕ್ಕೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನ ಕಾಯಿಗಳನ್ನು ಹಾಕಿ. ಈರುಳ್ಳಿ ಹೊಂಬಣ್ಣಕ್ಕೆ ಬರುವವರೆಗು ಇದನ್ನು ಚೆನ್ನಾಗಿ ಕಲೆಸಿಕೊಡಿ.
4. ನಂತರ ಇದಕ್ಕೆ ಟೊಮೇಟೊ ಹಾಕಿ,5 ನಿಮಿಷಗಳ ಕಾಲ ಬೇಯಿಸಿ.
5. ನಂತರ, ಇದಕ್ಕೆ ಬೇಯಿಸಿದ ಹೆಸರು ಕಾಳುಗಳನ್ನು ಹಾಕಿ. ಖಾರದ ಪುಡಿ, ಅರಿಶಿಣ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
6. ಈ ಹೆಸರು ಕಾಳು ದಾಲ್ ಮಾಡಲು ನೀವು ನೀರನ್ನು ಸರಿಯಾಗಿ ಹಾಕಬೇಕಾಗುತ್ತದೆ. ಹಾಗಾಗಿ 3 ಕಪ್ ನೀರನ್ನು ಈ ಮಿಶ್ರಣಕ್ಕೆ ಹಾಕಿ. ಅತ್ತ ನೀರು ಅಲ್ಲದ-ಇತ್ತ ಗಟ್ಟಿಯು ಅಲ್ಲದ ಗ್ರೇವಿಯಾಗುವವರೆಗೆ ಇದನ್ನು ಬೇಯಿಸಿ. ಈಗ ನಿಮ್ಮ ಮುಂದೆ ಖಾರವಾಗಿರುವ ಹೆಸರು ಕಾಳು ಮಸಾಲೆಯು ತಯಾರಾಗಿದೆ. ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಅಲಂಕಾರಕ್ಕೆಂದು ಹಾಕಿ.

ಪೋಷಕಾಂಶಗಳ ಪ್ರಮಾಣ
* ಹೆಸರು ಕಾಳುಗಳು ರಕ್ತದೊತ್ತಡ ಕಡಿಮೆ ಮಾಡಲು ಒಳ್ಳೆಯದು. ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡವಿದ್ದಲ್ಲಿ, ಹೆಸರು ಕಾಳುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದನ್ನು ಮರೆಯಬೇಡಿ. ಏಕೆಂದರೆ ಹೆಸರು ಕಾಳುಗಳು ನಿಮ್ಮ ಪಾಲಿಗೆ ಆಪದ್ಭಾಂಧವನಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
* ದ್ವಿದಳ ಧಾನ್ಯಗಳು ಪ್ರೋಟಿನ್‍ಗಳ ಸಮೃದ್ಧ ಕಣಜವಾಗಿರುತ್ತವೆ. ಈ ದ್ವಿದಳ ಧಾನ್ಯಗಳು ನಿಮ್ಮ ಡಯಟ್‍ನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ.

#ಸಲಹೆಗಳು
*ಈರುಳ್ಳಿಗಳನ್ನು ಬೇಗ ಹೊಂಬಣ್ಣಕ್ಕೆ ತಿರುಗಿಸಲು ಅದಕ್ಕೆ ಉಪ್ಪನ್ನು ಹಾಕಿ.
*ಒಂದು ವೇಳೆ ನೀವು ಮಸಾಲೆ ಪ್ರಿಯರಾಗಿದ್ದಲ್ಲಿ, ನೀವು ಈ ಹೆಸರು ಕಾಳು ಗ್ರೇವಿಗೆ ಚಕ್ಕೆ ಮತ್ತು ಶುಂಠಿಗಳನ್ನು ಸಹ ಹಾಕಬಹುದು.

English summary

Spicy Green Gram Masala Recipe

The best part is that you can prepare it easily and quickly. You can also adjust the spiciness of the dish as per your taste. If you are at home today and confused what to prepare for lunch, check out the recipe for green gram masala.
X
Desktop Bottom Promotion