For Quick Alerts
ALLOW NOTIFICATIONS  
For Daily Alerts

ಮೇಲೋಗರ,ನೆಲ್ಲಿಕಾಯಿ ಉಪ್ಪಿನಕಾಯಿ

By * ಶ್ರೀರಕ್ಷಾ, ಬೆಂಗಳೂರು
|
ತುಳಸಿಗೂ,ನೆಲ್ಲಿಕಾಯಿಗೂ ಅವಿನಾಭಾವ ಸಂಬಂಧ. ತುಳಿಸಿಕಟ್ಟೆಯಲ್ಲಿ ನೆಲ್ಲಿಕೊನೆ ನೆಟ್ಟು ಪೂಜೆ ಮಾಡಿದ ಮೇಲೆ ನೆಲ್ಲಿಕಾಯಿ ಉಪಯೋಗಿಸುವುದು ಆಚಾರ. ಚಳಿಗಾಲದಲ್ಲಿ ಬರುವ ಶೀತ ಸಂಬಂಧಿ ಖಾಯಿಲೆಗಳಿಗೆ ತುಳಸಿ ಹಾಗೂ ನೆಲ್ಲಿ ರಾಮಬಾಣ. ನೆಲ್ಲಿಕಾಯಿಯಲ್ಲಿ ಒಗಚು ಹೋಗಿ ಹುಳಿ ಬರುವುದು ಈ ಕಾಲದಲ್ಲಿಯೆ. ಈ ಸಮಯದಲ್ಲಿ ನೆಲ್ಲಿಕಾಯಿಯಲ್ಲಿ ವಿಟಮಿನ್ 'ಸಿ' ಹೇರಳವಾಗಿರುತ್ತದೆ.

ಆಯುರ್ವೇದ ಔಷಧ ತಯಾರಿಕೆಯಲ್ಲಿ ನೆಲ್ಲಿಗೆ ಅಗ್ರ ಸ್ಥಾನ. ಚ್ಯವನಪ್ರಾಶ, ತ್ರಿಫಲ ಚೂರ್ಣದಂತಹ ಹತ್ತು ಹಲವು ರಸಾಯನಗಳಲ್ಲಿ ನೆಲ್ಲಿಗೆ ಪ್ರಮುಖ ಸ್ಥಾನ. ತಲೆಕೂದಲು ಸೊಂಪಾಗಲು, ಬೇಸಿಗೆಯ ಬಾಯಾರಿಕೆ ತಣಿಸಲು ಮಾಡುವ ಪಾನಕಗಳಲ್ಲಿ ನೆಲ್ಲಿ ಬೇಕು. ಜೀರ್ಣ ಶಕ್ತಿಗಾಗಿ ಒಣನೆಲ್ಲಿ, ಜ್ಯಾಮ್ ಗಾಗಿ ತಾಜಾ ನೆಲ್ಲಿ ಹೀಗೆ ನೆಲ್ಲಿಯ ಉಪಯೋಗಗಳ ಪಟ್ಟಿ ಉದ್ದವಾಗಿದೆ. ಬೆಟ್ಟದ ನೆಲ್ಲಿಯನ್ನು ಉಪಯೋಗಿಸಿ ಉಪ್ಪಿನಕಾಯಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಬೇಕಾದ ಪದಾರ್ಥಗಳು:
ಬೆಟ್ಟದ ನೆಲ್ಲಿಕಾಯಿ: 1 ಕೆ.ಜಿ
ಎಳ್ಳೆಣ್ಣೆ: 250 ಗ್ರಾಂ
ಖಾರದ ಪುಡಿ:100 ಗ್ರಾಂ
ಮೆಂತ್ಯ ಪುಡಿ: 1 ಟೀ ಚಮಚ
ಇಂಗು: 1 ಟೀ ಚಮಚ
ಉಪ್ಪು: 100 ಗ್ರಾಂ
ಮಾಡುವ ವಿಧಾನ:
ಬೆಟ್ಟದ ನೆಲ್ಲಿಕಾಯನ್ನು ಸಣ್ಣ ತುಂಡುಗಳಾಗಿ ಹೆಚ್ಚಿಕೊಳ್ಳಿ. 150 ಗ್ರಾಂ ಎಳ್ಳೆಣ್ಣೆಯೊಂದಿಗೆ ಹುರಿದುಕೊಳ್ಳಿ. ಅರ್ಧ ಬೇಯುತ್ತಿದ್ದಂತೆ ಖಾರದ ಪುಡಿ ಮತ್ತು ಉಪ್ಪನ್ನು ಹಾಕಿ. ಪೂರ್ಣಬೆಂದ ನಂತರ ಒಲೆಯ ಉರಿಯನ್ನು ನಂದಿಸಿ, ಮಿಶ್ರಣವನ್ನು ತಣ್ಣಗಾಗಲು ಬಿಡಿ.
ಈಗ ಮೆಂತ್ಯದ ಪುಡಿ ಹಾಗೂ ಇಂಗನ್ನು ಹಾಕಿ ಚೆನ್ನಾಗಿ ಕಲಸಿ. ಉಳಿದ ಎಳ್ಳೆಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ತಣ್ಣಗಾದ ನಂತರ ಮಿಶ್ರಣವನ್ನು ಎಣ್ಣೆಗೆ ಹಾಕಿ ಚೆನ್ನಾಗಿ ಕಲೆಸಿ. ಉಪ್ಪಿನ ಕಾಯಿ ಜಾಡಿಗೆ ಹಾಕಿ ಒಂದು ವಾರ ಕಾಲ ಬಿಸಿಲಿನಲ್ಲಿ ಇಡಬೇಕು. ಎಣ್ಣೆಯಲ್ಲಾ ಬೇರ್ಪಟ್ಟು ಉಪ್ಪಿನಕಾಯಿಗೆ ಎಲ್ಲಾ ಪದಾರ್ಥಗಳು ಒಗ್ಗಿರುತ್ತವೆ. ಜಾಡಿಯನ್ನು ಗಾಳಿಯಾಡದಂತೆ ಮುಚ್ಚಿಟ್ಟು ಬೇಕೆಂದಾಗ ಉಪ್ಪಿನಕಾಯಿಯನ್ನು ಬಳಸಬಹುದು.

X
Desktop Bottom Promotion