For Quick Alerts
ALLOW NOTIFICATIONS  
For Daily Alerts

ಭಕ್ಕರಿಯ ಪ್ರಿಯತಮೆ ಮಾಟವಾಡಿ ಪಲ್ಯ

By * ಉಮ ಅಣ್ಣಿಗೇರಿ, ರಾಣೆಬೆನ್ನೂರು
|
Fenugreek leave for Matwadi palya
ನಮ್ಮ ಮನೆಯಲ್ಲಿ ವಾರಕ್ಕೊಮ್ಮೆ ಮಾಡುವ ಅಡುಗೆ ಮಾಟವಾಡಿ ಪಲ್ಯ. ತುಂಬಾ ರುಚಿ ಆಗಿರುತ್ತದೆ. ಇದಕ್ಕೆ ಮಾಟವಾಡಿ ಎಂದು ಹೆಸರು ಹೇಗೆ, ಯಾಕೆ ಬಂತು ತಿಳಿದಿಲ್ಲ. ಎಷ್ಟೋ ವರ್ಷದಿಂದ ಪಲ್ಯ ಮಾಡುತ್ತಾ ಬಂದಿರುವ ನಮ್ಮ ತಾಯಿಗೂ ಗೊತ್ತಿಲ್ಲ. ಆದರೆ ತುಂಬಾ ಚೆನ್ನಾಗಿರತ್ತೆ. ನಮ್ಮ ಮನೆಯಲ್ಲಿ ಭಕ್ರಿಗೆ ಇದನ್ನು ತಪ್ಪದೆ ಮಾಡುತ್ತಾರೆ. ನಮ್ಮಲ್ಲಿ ಜೋಳ ಹೆಚ್ಚಾಗಿ ಬೆಳೆಯುತ್ತದೆ ಹಾಗೂ ಮೆಂತ್ಯ ಸೊಪ್ಪು ಹೇರಳವಾಗಿ ಸಿಗುತ್ತದೆ.

ಬೇಕಾಗುವ ಪದಾರ್ಥಗಳು:

ಎರಡು ಲೋಟ ಕಡಲೆಬೇಳೆ
ಅರ್ಧ ಲೋಟ ಕಾಯಿತುರಿ
ಒಂದು ಚಮಚ ಜೀರಿಗೆ
ಕರಿಬೇವು
ಎಂಟು ಹಸಿಮೆಣಸಿನಕಾಯಿ
ಐದು ಕಟ್ಟು ಮೆಂತ್ಯ ಸೊಪ್ಪು
ಎಣ್ಣೆ, ಉಪ್ಪು, ಇಂಗು.

ವಿಧಾನ : ಕಡಲೆಬೇಳೆಯನ್ನು ಸುಮಾರು ಮೂರುಗಂಟೆ ಹೊತ್ತು ನೆನೆ ಇಡಬೇಕು. ನೆನೆದ ಕಡಲೆಬೇಳೆ ಹಾಗೂ ತೆಂಗಿನಕಾಯಿ, ಮೆಣಸಿನಕಾಯಿ, ಜೀರಿಗೆ, ಕರಿಬೇವಿನ ಸೊಪ್ಪು ಮತ್ತು ಸ್ವಲ್ಪ ಇಂಗು ಬೆರೆಸಿ ಮಿಕ್ಸಿಗೆ ಹಾಕಬೇಕು. ತರಿತರಿಯಾಗಿ ಅಂದರೆ ಆಂಬೊಡೆ ಹದಕ್ಕೆ ರುಬ್ಬಿಕೊಳ್ಳಬೇಕು. ರುಬ್ಬಿದ ಬೇಳೆಗೆ ಹೆಚ್ಚಿಕೊಂಡ ಮೆಂತ್ಯ ಸೊಪ್ಪಿನ ಎಲೆಗಳನ್ನು ಕಲಸಿ ಇಡಬೇಕು. ಸ್ವಲ್ಪ ಹೊತ್ತು ಬಿಟ್ಟು ಬಾಣಲೆಗೆ ಸ್ವಲ್ಪ ಹೆಚ್ಚೇ ಎಣ್ಣೆಹಾಕಿ ಒಗ್ಗರಣೆಗೆ ಸಿದ್ಧರಾಗಬೇಕು.

ಒಗ್ಗರಣೆಗೆ ಸಾಸಿವೆ, ಕರಿಬೇವಿನ ಎಲೆ ಸಿಂಪಡಿಸಿ ನಾಕಾರು ಒಣ ಮೆಣಸಿನಕಾಯಿ ಹಾಕಿರಿ. ಚಟಪಟಗುಟ್ಟಲಿ. ಅದಕ್ಕೆ ರುಬ್ಬಿದ ಪದಾರ್ಥವನ್ನು ಬೆರೆಸಿ ಬಾಡಿಸಿರಿ. ನಿಧಾನವಾಗಿ ಹಿಟ್ಟು ಬೇಯುತ್ತಾ, ಕೂಡಿಕೊಳ್ಳುತ್ತಾ ಬರಲಿ. ಚೆನ್ನಾಗಿ ಹುರಿದ ನಂತರ ಘಮಘಮ ವಾಸನೆ ಬಂದನಂತರ ಬಾಣಲೆ ಕೆಳಗಿಳಿಸಿ. ಮುಖ್ಯವಾಗಿ ಕಡಲೆಬೇಳೆ ಹಿಟ್ಟಿನಲ್ಲಿರುವ ಹಸಿವಾಸನೆ ಕಳೆಯಬೇಕು. ಮಾಟವಾಡಿ ಪಲ್ಯ ಹುಡಿಹುಡಿಯಾಗಿ ಇರಬೇಕು. ಬಾಣಲೆಗೆ ನೀರು ಹಾಕಬಾರದು. ರುಬ್ಬುವಾಗ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿದ್ದೇ ಸಾಕು.

ನಾವು ಚಿಕ್ಕವರಿದ್ದಾಗ ಭಕ್ರಿ ಮಾಟವಾಡಿ ಪಲ್ಯ ಕಟ್ಟಿಕೊಂಡು ಖೋಲಿಯಲ್ಲಿದ್ದವರೆಲ್ಲ ಕೂಡೇ ಶನಿವಾರ ಭಾನುವಾರ ಪಿಕ್ ನಿಕ್ ಗೆ ಹೋಗುತ್ತಿದ್ದೆವು. ಎರಡು ಟಯರುಗಳ ಎತ್ತಿನಗಾಡಿ ನಮ್ಮ ಮನೆಯಲ್ಲಿ ಆಗ ಇತ್ತು. ಹರಿಹರ ಪಾಲಿಫೈಬರ್ ಕಾರ್ಖಾನೆಯ ಕೆಳಗಿನ ತುಂಗಾನದಿ ದಂಡೆಯ ಮರಳಿನ ಮೇಲೆ, ಅಥವಾ ನಮ್ಮೂರಲ್ಲೇ ಇರುವ ಜಿಂಕೆ ಪಾರ್ಕಿನಲ್ಲಿ ಕುಳಿತು ಹಾಡು, ಒಗಟು, ಉರುಗಣೆ ಮಾಡುತ್ತಾ ಬೆಳದಿಂಗಳ ಊಟ ಮಾಡಿದ ನೆನಪು ನನ್ನ ಮನಸ್ಸಿನಿಂದ ಯಾವತ್ತೂ ಮಾಸುವುದಿಲ್ಲ.

Story first published: Wednesday, May 11, 2011, 9:23 [IST]
X
Desktop Bottom Promotion