For Quick Alerts
ALLOW NOTIFICATIONS  
For Daily Alerts

ನಿಂಬೆಹಣ್ಣಿನ ಉಪ್ಪಿನಕಾಯಿ ರೆಸಿಪಿ

By * ಸುಜಾತಾ ಕುಂದಾಪುರ
|
Lemon pickle
ಸಾರ್ವಕಾಲಿಕ, ಸರ್ವರ ಮೆಚ್ಚುಗೆಯ ಉಪ್ಪಿನಕಾಯಿ ಎಂದರೆ ಅದು ನಿಂಬೆಹಣ್ಣಿನ ಉಪ್ಪಿನಕಾಯಿ. ಮಕ್ಕಳಿಗೆ ಊಟದ ಜೊತೆಗೆ ಕಳಿತ ಹಣ್ಣಿನ ರಸವನ್ನು ನಾಲಿಗೆಗೆ ನೆಕ್ಕಿಸಿದರೆ ಎರಡು ತುತ್ತು ಜಾಸ್ತಿ ಉಣ್ಣುತ್ತವೆ ಮತ್ತು ಹೊಟ್ಟೆ ತುಂಬ ಉಣ್ಣುತ್ತವೆ. ಬಾಣಂತಿಯರಿಗೆ ಮತ್ತು ಖಾಯಿಲೆ ಬಿದ್ದವರಿಗೆ ಅತಿ ಮೆಚ್ಚಿನ ಉಪ್ಪಿನಕಾಯಿ.

ಬೇಕಾಗುವ ಪದಾರ್ಥಗಳು :

* ಹತ್ತು ನಿಂಬೆಹಣ್ಣು
* 5 ಚಮಚ ಅಚ್ಚಖಾರದ ಪುಡಿ
* ಅರ್ಧ ಚಮಚ ಮೆಂತ್ಯ
* ಅರ್ಧ ಚಮಚ ಸಾಸಿವೆ
* ಕಲ್ಲು ಉಪ್ಪು 5 ಚಮಚ

* ಒಗ್ಗರಣೆಗೆ 5 ಚಮಚ ಅಡುಗೆ ಎಣ್ಣೆ, ಚೂರು ಸಾಸಿವೆ ಮತ್ತು ಚೂರು ಇಂಗು

ವಿಧಾನ :

ನಿಂಬೆಹಣ್ಣುಗಳನ್ನು ಎಂಟು ಭಾಗಗಳಾಗಿ ಹೆಚ್ಚಿಕೊಳ್ಳಬೇಕು. ಚಾಕು ಅಥವಾ ಇಳಿಗೆಮಣೆಯನ್ನು ಚೆನ್ನಾಗಿ ಒರೆಸಿ ಹೆಚ್ಚಲು ಶುರು ಮಾಡಬೇಕು. ಒಟ್ಟು ಎಂಭತ್ತು ಹೋಳುಗಳಾಗುತ್ತವೆ. ಇದಕ್ಕೆ ಕಲ್ಲುಪ್ಪು ಬೆರೆಸಿ ಚೆನ್ನಾಗಿ ಕಲಸಿ ಒಂದು ಜಾಡಿಯಲ್ಲಿ ಹಾಕಿ ಮೂರು ದಿವಸ ಭದ್ರವಾಗಿ ಮುಚ್ಚಿಡಬೇಕು.

ಮೂರು ದಿನಗಳ ನಂತರ ಮುಚ್ಚಳ ತೆಗೆಯಬೇಕು. ಅದಕ್ಕೆ ಮಿಕ್ಸಿಯಲ್ಲಿ ಪುಡಿಮಾಡಿಕೊಂಡ ಮೆಂತ್ಯ, ಸಾಸಿವೆ ಹಾಗೂ ಅಚ್ಚ ಖಾರದ ಪುಡಿಯನ್ನು ಬೆರೆಸಬೇಕು. ಸಾಸಿವೆ ಇಂಗಿನ ಒಗ್ಗರಣೆ ಕೊಟ್ಟು ಮತ್ತೆ ಭದ್ರವಾಗಿ ಮುಚ್ಚಿಡಬೇಕು. ನಾಕಾರು ದಿನಗಳನಂತರ ನಿಂಬೆಕಾಯಿ ಉಪ್ಪಿನಕಾಯಿ ಕಳಿತಿರುತ್ತದೆ. ಸೇವನೆಗೆ ಸರಿಯಾಗಿರುತ್ತದೆ.

ಉಪ್ಪಿನ ಕಾಯಿ ಜಾಡಿ ಮುಚ್ಚಳ ತೆಗೆಯುವಾಗ ಮತ್ತು ಮುಚ್ಚಿಡುವಾಗ ಉಪ್ಪಿನಕಾಯಿಗೆ ನೀರು ಸೋಕದಂತೆ ಕಾಪಾಡಬೇಕು. ದಿನ ಕಳೆದಂತೆ ಉಪ್ಪಿನಕಾಯಿ ಹೋಳುಗಳು ಮೃದುವಾಗುತ್ತಾ ಹೋಗುತ್ತವೆ. ಮೃದುವಾದಷ್ಟೂ ಚೆನ್ನ. ಉಪ್ಪಿನಕಾಯಿ ಶೇಖರಣೆಗೆ ಸಿರಾಮಿಕ್ ಜಾಡಿ ಮತ್ತು ಬಳಸುವುದಕ್ಕೆ ಚೆನ್ನಾಗಿ ಒರೆಸಿದ ಮರದ ಚಮಚ ಅಥವಾ ಸೌಟು ಬಳಸಿದರೆ ಉತ್ತಮ. ಜಾಡಿ ಮುಚ್ಚುವುದಕ್ಕೆ ಶುಭ್ರವಾದ ಬಿಳಿ ಬಟ್ಟೆ ಬಳಸಿ ದಾರದಲ್ಲಿ ಕಟ್ಟಿಡಬೇಕು. ಗಾಳಿ ಆಡಲು ಅನುಕೂಲ.

* ನುಣ್ಣಗೆ ಪುಡಿಮಾಡಿಟ್ಟುಕೊಂಡ ಗರಿಗರಿಯಾದ ಕೆಂಪು ಮೆಣಸಿನಕಾಯಿಯ ಪುಡಿಗೆ ಅಚ್ಚ ಖಾರದ ಪುಡಿ ಎನ್ನುತ್ತಾರೆ.

Story first published: Monday, March 1, 2010, 15:03 [IST]
X
Desktop Bottom Promotion