For Quick Alerts
ALLOW NOTIFICATIONS  
For Daily Alerts

ಕಿತ್ತಳೆ ಸಿಪ್ಪೆ ಸಿಹಿ ಹುಳಿ ಗೊಜ್ಜು

By * ಶಾಮ್
|
Vitamin C rich Orange
ಹಣ್ಣು ನಿಮಗೆ. ಸಿಪ್ಪೆ ನಮಗೆ. ಕಿತ್ತಳೆ ಸಿಪ್ಪೆ ಗೊಜ್ಜು ಎಲ್ಲರಿಗೆ.

ಬೇಕಾಗುವ ಪದಾರ್ಥಗಳು :

ಒಂದು ಡಜನ್ ಕಿತ್ತಳೆ ಹಣ್ಣು
ನಾಕು ಚಮಚ ವನಸ್ಪತಿ
ಒಂದು ಚಮಚ ಸಾಸಿವೆ

ಮರದ ನೆಲ್ಲಿಕಾಯಿ ಗಾತ್ರದಷ್ಟು ಹುಣಿಸೆಹಣ್ಣು
ಸಾರಿನ ಅಥವಾ ಹುಳಿ ಪುಡಿ ನಾಕು ಚಮಚ
ನಿಂಬೆ ಹಣ್ಣು ಗಾತ್ರದಷ್ಟು ಬೆಲ್ಲದ ಉಂಡೆ
ಚಮಚ ಜೀರಿಗೆ, ಉಪ್ಪು

ತಯಾರಿಸುವ ವಿಧಾನ :

ಊಟವಾದ ನಂತರ ಕುಡಿಯುವುದಕ್ಕೆ ಕಿತ್ತಳೆ ಹಣ್ಣು ಬಿಡಿಸಿ ಜ್ಯೂಸ್ ಮಾಡಿ ಫ್ರಿಜ್ ಒಳಗಿಡಿ. ಹಸಿಸಿಪ್ಪೆಯನ್ನು ಸಣ್ಣಗೆ ಕತ್ತರಿಯಲ್ಲಿ ಕತ್ತರಿಸಬೇಕು. ವ್ಯವಧಾನವಿದ್ದರೆ ಅಡಕತ್ತರಿಯಲ್ಲಿ ಕತ್ತರಿಸಬಹುದು. ಒಂದು ಚದುರ ಸೆಂಟಿ ಮೀಟರ್ ಸಿಪ್ಪೆಯಲ್ಲಿ ನಾಲಕ್ಕು ಭಾಗವಾಗುವಂತೆ ಚೂರುಗಳಾಗಲಿ. ನಾನ್ ಸ್ಟಿಕ್ ಬಾಣಲೆಯಲ್ಲಿ ಎಣ್ಣೆ ಕಾದ ನಂತರ ಸಾಸಿವೆ ಪಟಾಕಿ ಹಾರಿಸಿ ನಂತರ ಅದಕ್ಕೆ ಹೆಚ್ಚಿದ ಕಿತ್ತಳೆ ಸಿಪ್ಪೆ ಚೂರುಗಳನ್ನು ಹಾಕಿ ನಿಧಾನವಾಗಿ, ಚೆನ್ನಾಗಿ ಹುರಿಯಿರಿ. ಇದು ಸ್ಟೆಪ್ ನಂಬರ್ ಒಂದು.

ಇನ್ನೊಂದು ಪಾತ್ರೆಯಲ್ಲಿ ಹುಣಿಸೆ ರಸ ಮಾಡಿಕೊಂಡು ಅದನ್ನು ಒಲೆಯ ಮೇಲಿಡಿ. ಅದಕ್ಕೆ ಜೀರಿಗೆ, ಬೆಲ್ಲ ಹಾಕಿ ಕುದಿಸಿ. ಒಂದು ಕುದಿ ಬಂದ ನಂತರ ಅದಕ್ಕೆ ಸಾರಿನ ಪುಡಿ ಅಥವಾ ಹುಳಿಪುಡಿ ಬೆರೆಸಿ ಮತ್ತೆ ಕುದಿಸಿ. ಈಗ ಉಪ್ಪು ಹಾಕಿ ಕೈಯಾಡಿ. ಅಂತಿಮವಾಗಿ ಹುರಿದಿಟ್ಟುಕೊಂಡ ಕಿತ್ತಳೆ ಚೂರನ್ನು ಹುಣಿಸೆಬೆಲ್ಲದ ಪಾಕಕ್ಕೆ ಹಾಕಿ. ಮತ್ತೆ ಕುದಿಸುವ ಅವಶ್ಯಕತೆ ಇರುವುದಿಲ್ಲ.

ಕೆಲವರು ಖಾರದ ಪುಡಿ ಬಳಸದೆ, ಗೊಜ್ಜಿನ ಪುಡಿಯನ್ನು ಫ್ರೆಶ್ ಆಗಿ ಮಾಡಿಕೊಂಡು ಹಾಕುತ್ತಾರೆ. ಇಂಥ ಪುಡಿ ಸಾಮಾನ್ಯವಾಗಿ ಇತರ ಎಲ್ಲ ಗೊಜ್ಜುಗಳಿಗೂ ಆಗುತ್ತದೆ. ಉದಾಹರಣೆಗೆ, ಬೆಂಡೇಕಾಯಿ ಗೊಜ್ಜು, ಬದನೇಕಾಯಿ ಗೊಜ್ಜು. ಈ ಗೊಜ್ಜುಪುಡಿ ಮಾಡುವ ವಿಧಾನವನ್ನು ಸದ್ಯದಲ್ಲೇ ಪ್ರಕಟಿಸಲಾಗುತ್ತದೆ. ನಿರೀಕ್ಷಿಸಿ.

ಮೇಲೆ ತಿಳಿಸಿದ ಕಿತ್ತಳೆ ಸಿಪ್ಪೆ ಗೊಜ್ಜು ವಿಧಾನದಲ್ಲಿ ತೆಂಗು, ಕೊಬ್ಬರಿ ಬಳಸದೆ ಇರುವುದರಿಂದ ಗೊಜ್ಜು ನಾಕಾರು ದಿನ ಇಟ್ಟರೂ ಕೆಡುವುದಿಲ್ಲ. ಮನೆಯಲ್ಲಿ ಖಾಲಿಯಾದ ಜೇನುತುಪ್ಪದ ಶೀಶೆ ಇದ್ದರೆ ಅದರಲ್ಲಿ ಗೊಜ್ಜು ತುಂಬಿ ಫ್ರಿಜ್ ನಲ್ಲಿ ಕಾಪಾಡಿ.

Story first published: Monday, January 4, 2010, 16:28 [IST]
X
Desktop Bottom Promotion