For Quick Alerts
ALLOW NOTIFICATIONS  
For Daily Alerts

ಬಾಯಿ ಚಪ್ಪರಿಸುವ ಹಿತಕವರೆಬೇಳೆ ಪಲ್ಯ

By * ಸೌಜನ್ಯ, ತುಮಕೂರು
|
Avarekalu
ಈಗ ಅವರೆಕಾಳಿನ ಸುಗ್ಗಿ. ಹೇಮಂತ ಋತುವಿನಲ್ಲಿ ಸಮೃದ್ಧಿಯಾಗಿ ಬೆಳೆಯುವ ಅವರೆಬೇಳೆ ಬೆಳೆಗೆ ಭಾರೀ ಡಿಮ್ಯಾಂಡ್. ಅವರೆಕಾಳಿನ ಪಲ್ಯ, ನಿಪ್ಪಟ್ಟು, ಉಸುಳಿ, ಅವರೆಕಾಳಿನ ರೊಟ್ಟಿ, ಅವರೆಕಾಳಿನ ದೋಸೆ, ಹಿತಕವರೆಬೇಲೆ ಹುಳಿ, ಅವರೆ ಒಬ್ಬಟ್ಟು ಮುಂತಾದ ವೈವಿಧ್ಯಮಯ ತಿಂಡಿತಿನಿಸುಗಳನ್ನು ತಯಾರಿಸಬಹುದು. ತರಕಾರಿ ಬೆಲೆ ಆಗಸಕ್ಕೇರಿದೆ. ಜನ ಈರುಳ್ಳಿ ಹತ್ತಿರಕ್ಕೇ ಸುಳಿಯುತ್ತಿಲ್ಲ. ಅವರೆಕಾಳು ಬೆಲೆ ಸಹಜವಾಗಿ ಕಳೆದ ವರ್ಷಕ್ಕಿಂದ ಹೆಚ್ಚಾಗಿದೆ. ಆದರೆ, ಈಗ ಅವರೆಕಾಳಿನ ತಿನಿಸುಗಳನ್ನು ತಯಾರಿಸದಿದ್ದರೆ ಇನ್ನು ಯಾವಾಗ ಮಾಡುವಿರಿ? ಬನ್ನಿ, ಹಿತಕವರೆಬೇಳೆ ಪಲ್ಯ ಮಾಡೋಣ.

ಬೇಕಾಗುವ ಸಾಮಾನುಗಳು

ಹಿಚುಕಿದ ಅವರೇಕಾಳು - ಅರ್ಧ ಪಾವು
ಒಣ ಮೆಣಸಿನಕಾಯಿ - 6
ಹುರಿದ ದನಿಯಾ - 2 ಚಮಚ
ಹೆಚ್ಚಿದ ಈರುಳ್ಳಿ - ಒಂದು
ಬೆಳ್ಳುಳ್ಳಿ - ಒಂದು
ಚಕ್ಕೆ - ಮೂರು ಪೀಸ್
ಲವಂಗ - ಒಂದು
ತೆಂಗಿನ ತುರಿ - 1 ಬಟ್ಟಲು
ಒಣ ಕೊಬ್ಬರಿ - ಕಾಲು ಗಿಟುಕು
ಉಪ್ಪು, ಬೆಲ್ಲ, ಹುಣಸೆ ರಸ - ರುಚಿಗೆ ತಕ್ಕಷ್ಟು
ಗಸಗಸೆ - 5 ಚಮಚ
ತುಪ್ಪ - 2 ಚಮಚ

ಮಾಡುವ ವಿಧಾನ

* ಈ ರೆಸಿಪಿಯನ್ನು ತಯಾರಿಸುವ 5 ಗಂಟೆ ಮುನ್ನ ಬಿಡಿಸಿಟ್ಟ ಅವರೆಕಾಳುಗಳನ್ನು ನೀರಿನಲ್ಲಿ ನೆನೆಯಿಡಿ.

* ದಪ್ಪ ತಳದ ಪಾತ್ರೆಗೆ 5 ಚಮಚ ಎಣ್ಣೆ ಹಾಗೂ ಒಂದು ಚಮಚ ತುಪ್ಪವನ್ನು ಹಾಕಿ ಕಾಯಿಸಿ. ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಬೇಕು.

* ಇದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಹುರಿಯಬೇಕು. ಕೆಂಪಗಾದ ಮೇಲೆ ಹಿಚುಕಿದ ಅಥವಾ ಹಿತಕಿದ (ಸಿಪ್ಪೆ ತೆಗೆದ) ಅವರೆಕಾಳು ಹಾಕಿ ಹುರಿಯಬೇಕು.

* ಬಿಸಿ ಆರಿದ ಮೇಲೆ ರುಬ್ಬಿದ ಮಸಾಲೆ (ಒಣ ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ದನಿಯಾ, ತೆಂಗಿನ ತುರಿ ಎಲ್ಲವನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ರುಬ್ಬಿಕೊಳ್ಳಿ) ಹಾಕಿ ಗಮ್ಮಂತ ವಾಸನೆ ಬರುವವರೆಗೂ ಮತ್ತೆ ಹುರಿಯಬೇಕು.

* ಆಮೇಲೆ ಮುಳುಗುವಷ್ಟು ಬಿಸಿ ನೀರು ಹಾಕಿ ಕುಕ್ಕರಿನಲ್ಲಿ ಇಟ್ಟು ಒಂದೆರಡು ವಿಷಲ್ ಆಗುವವರೆಗೆ ಸ್ಟೌ ಮೇಲಿಟ್ಟು ಬೇಯಿಸಬೇಕು.

* ಇದಕ್ಕೆ ಬಿಸಿ ಮಾಡಿದ ಗಸಗಸೆ ಹಾಗೂ ತುರಿದ ಒಣ ಕೊಬ್ಬರಿ ರುಬ್ಬಿ ಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪು, ಹುಣಸೆ ರಸ, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಕುದಿದ ಮೇಲೆ ಒಂದು ಚಮಚ ತುಪ್ಪ ಹಾಕಿ ಇಳಿಸಿ.

* ಇದನ್ನು ದೋಸೆ, ಚಪಾತಿ, ಪೂರಿ, ರೊಟ್ಟಿ ಮತ್ತು ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

English summary

Avarekalu palya recipe | Winter season recipes | Bean palya winter recipe | ಹಿತಕವರೆಬೇಳೆ ಪಲ್ಯ | ಚಳಿಗಾಲದ ತಿನಿಸುಗಳು | ಅವರೆಕಾಳು ಪಲ್ಯ

Winter season recipes : Avarekalu palya recipe. Avarekalu mela or bean fair is going on in Bangalore and variety of avarekalu are available in the fair. Here is recipe of Hitakavarebele palya recipe.
Story first published: Saturday, January 1, 2011, 14:07 [IST]
X
Desktop Bottom Promotion