For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೇ ತಯಾರಿಸಿ- ಚೀಸ್ ಚಿಕನ್ ಬರ್ಗರ್

By manu
|

ಯಾವಾಗ ಅಮೇರಿಕಾದ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆ ಬಾಗಿಲು ತೆರೆಯಿತೋ ಆಗಿನಿಂದಲೇ ಅಲ್ಲಿನ ಸ್ವಾದಿಷ್ಟ ಸಿದ್ಧ ಆಹಾರಗಳೂ ನಮ್ಮ ನಗರಗಳಲ್ಲಿ ಸಿಗತೊಡಗಿದವು. ಅಲ್ಲಿಯವರೆಗೆ ಸಪ್ಪೆಯಾಗಿದ್ದ ನಮ್ಮ ಪತ್ರಿಕೆಗಳು ಇವುಗಳ ಬಣ್ಣಬಣ್ಣದ ಜಾಹೀರಾತುಗಳಿಂದ ರುಚಿಕರವಾಗಿ ಕಾಣಿಸತೊಡಗಿದವು.

ಈಗಂತೂ ಫೋನು ಅಥವಾ ಆಪ್ ಮೂಲಕ ಮನೆಬಾಗಿಲಿಗೇ ಥಟ್ಟನೇ ಬರುವಂತಾದ ಮೇಲೆ ಈ ಆಹಾರಗಳನ್ನು ಸೇವಿಸುವುದು ಒಂದು ರೀತಿಯ ಗೀಳಾಗಿ ಮಾರ್ಪಾಡಾಗಿದೆ. ಮಕ್ಕಳಂತೂ ಸಿದ್ಧ ಆಹಾರಗಳೇ ಬೇಕು ಎಂದು ಹಠ ಹಿಡಿಯುತ್ತಾರೆ. ಇವರು ಹಠಹಿಡಿಯುವ ಆಹಾರಗಳಲ್ಲಿ ಬರ್ಗರ್‌ಗೆ ಎಂದಿಗೂ ಆದ್ಯತೆ ಇದೆ. ಕಛೇರಿಗೆ ಹೋಗುವವರಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಬರ್ಗರ್ ಹೆಚ್ಚು ಜನಪ್ರಿಯ. ಚಿಕನ್ ಬರ್ಗರ್ ರೆಸಿಪಿ

ಆದರೆ ಬಲುದುಬಾರಿಯಾದ ಇವು ಹೆಚ್ಚಾಗಿ ಹಸಿವೆ ತಣಿಸುವುದಕ್ಕಿಂತ ಪ್ರತಿಷ್ಠೆ ಮೆರೆಯಲೇ ಹೆಚ್ಚು ಬಳಕೆಯಾಗುತ್ತಿವೆ. ಅಕ್ಕಪಕ್ಕದವರ ಹೊಟ್ಟೆ ಉರಿಸಲೆಂದೇ ಮನೆಗೆ ಬರ್ಗರ್ ತರಿಸುವವರೂ ಉಂಟು. ಇವನ್ನು ನೋಡಿಯೇ ನಮ್ಮ ಮಕ್ಕಳೂ ತಮಗೂ ಬರ್ಗರ್ ಬೇಕೆಂದು ಹಠಹಿಡಿಯುತ್ತಾರೆ.

 Tasty Cheese Chicken Burger Recipe

ಆದರೆ ಇವು ರುಚಿಯಾಗಿದ್ದರೂ ಆರೋಗ್ಯಕರವೇ ಎಂಬ ನಮ್ಮ ಪ್ರಶ್ನೆಗೆ ಸಿದ್ಧ ಆಹಾರಗಳು ಆರೋಗ್ಯಕರವಲ್ಲ ಎಂಬ ಉತ್ತರವನ್ನೇ ಆಹಾರತಜ್ಞರು ನೀಡುತ್ತಾರೆ. ಆದ್ದರಿಂದ ಒಣಪ್ರತಿಷ್ಠೆಯನ್ನು ಬದಿಗಿಟ್ಟು ಕೊಂಚ ಶ್ರಮ ವಹಿಸಿದರೆ ಇದಕ್ಕೂ ರುಚಿಕರವಾದ, ಇದಕ್ಕೂ ಹತ್ತುಪಾಲು ಅಗ್ಗವಾದ ಬರ್ಗರುಗಳನ್ನು ಮನೆಯಲ್ಲಿಯೇ ಮಾಡಿ ಮಕ್ಕಳ ಮನ ತಣಿಸಬಹುದು. ಇನ್ನೇಕೆ ತಡ, ವಿಧಾನವನ್ನು ಕೆಳಗೆ ನೀಡಲಾಗಿದೆಯಲ್ಲಾ...

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು

ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು

ತಯಾರಿಕಾ ಸಮಯ: ಇಪ್ಪತ್ತೈದು ನಿಮಿಷಗಳು.

 Tasty Cheese Chicken Burger Recipe

ಅಗತ್ಯವಿರುವ ಸಾಮಾಗ್ರಿಗಳು:

*ಚಿಕನ್ ಖೀಮಾ: ನೂರು ಗ್ರಾಂ (ಮಾರುಕಟ್ಟೆಯಲ್ಲಿ ಸಿದ್ಧರೂಪದಲ್ಲಿ ಸಿಗುವ ಖೀಮಾದಲ್ಲಿ ಬಹುತೇಕ ಕೋಳಿಯ ಇತರ ಭಾಗಗಳನ್ನೂ ಮಿಶ್ರಣ ಮಾಡಿರುತ್ತಾರೆ. ಆದ್ದರಿಂದ ತಾಜಾ ಕೋಳಿಯ ಮಾಂಸದಿಂದ ಮೂಳೆಗಳನ್ನು ಬೇರ್ಪಡಿಸಿ ಸ್ವತಃ ಮಾಡಿದರೆ ಅತ್ಯುತ್ತಮವಾಗಿದೆ)

*ಬರ್ಗರ್ ಬನ್: ನಾಲ್ಕು (ಎಳ್ಳು ಸಿಂಪಡಿಸಿದ ಇಡಿಯ ಗೋಧಿಯ ಹಿಟ್ಟಿನ ಬನ್ ಉತ್ತಮ ಆಯ್ಕೆ)

*ಟೋಸ್ಟ್ ಪುಡಿ (bread crumbs)-ಒಂದು ಕಪ್

*ಬೆಳ್ಳುಳ್ಳಿ - ಅರ್ಧ ದೊಡ್ಡಚಮಚ (ನುಣ್ಣಗೆ ಅರೆದದ್ದು)

*ಟೊಮೇಟೊ -ಎರಡು, ಮಧ್ಯಮ ಗಾತ್ರದ್ದು, ಚೆನ್ನಾಗಿ ಹಣ್ಣಾಗಿರಬೇಕು. ಕಾಯಿ ಇದ್ದರೆ ರುಚಿ ಹುಳಿಯಾಗುತ್ತದೆ-ಇದನ್ನು ದಪ್ಪನೆಯ ಬಿಲ್ಲೆಗಳಾಗಿ ಅಡ್ಡಲಾಗಿ ವೃತ್ತಾಕಾರದಲ್ಲಿ ಕತ್ತರಿಸಿ.

*ಈರುಳ್ಳಿ -ಎರಡು (ಒಂದು ಚಿಕ್ಕದಾಗಿ ಹೆಚ್ಚಿದ್ದು, ಇನ್ನೊಂದು ಅಡ್ಡಲಾಗಿ ವೃತ್ತಾಕಾರದಲ್ಲಿ ಕತ್ತರಿಸಿದ್ದು)

*ಮಾಯೋನೀಸ್ - ಎರಡು ದೊಡ್ಡಚಮಚ (ಆಲಿವ್ ಎಣ್ಣೆಯಾಧಾರಿತ ಮಾಯೋನೀಸ್ ಉತ್ತಮ ಆಯ್ಕೆ)

*ಬೆಣ್ಣೆ - ಎರಡು ದೊಡ್ಡಚಮಚ (ಉಪ್ಪುರಹಿತವಾದದ್ದು) - ಒಂದು ವೇಳೆ ಉಪ್ಪುಸಹಿತವಾಗಿದ್ದರೆ (salted) ಪ್ರತ್ಯೇಕವಾಗಿ ಉಪ್ಪು ಹಾಕಬೇಡಿ

*ಟೊಮೇಟೊ ಕೆಚಪ್ - ಒಂದು ಕಪ್

*ಚೀಸ್ ಫಲಕಗಳು: ನಾಲ್ಕು

*ಎಣ್ಣೆ - ಸುಮಾರು ಎರಡು ಚಮಚ

*ಉಪ್ಪು-ರುಚಿಗನುಸಾರ

*ಕಾಳುಮೆಣಸಿನ ಪುಡಿ-ಅರ್ಧ ಟೀಚಮಚ

*ಕೊತ್ತೊಂಬರಿ ಪುಡಿ - ಒಂದು ಟೀ ಚಮಚ

 Tasty Cheese Chicken Burger Recipe

ವಿಧಾನ:

1) ಒಂದು ಬೋಗುಣಿಯಲ್ಲಿ ಖೀಮಾ ಮತ್ತು ಟೋಸ್ಟ್ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಇದಕ್ಕೆ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕಾಳುಮೆಣಸಿನ ಪುಡಿ, ಹೆಚ್ಚಿದ ಈರುಳ್ಳಿ, ಕೊತ್ತೊಂಬರಿಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

2) ಇನ್ನು ಇದನ್ನು ನಾಲ್ಕು ಪಾಲು ಮಾಡಿ ಎಣ್ಣೆಹಚ್ಚಿದ ತಟ್ಟೆಯ ಮೇಲೆ ಒಂದು ಬನ್ ವ್ಯಾಸದಷ್ಟು ಅಗಲಕ್ಕೆ ದಪ್ಪನೆಯ ರೊಟ್ಟಿಯಂತೆ ಲಟ್ಟಿಸಿ ಪಕ್ಕಕ್ಕಿಡಿ.

3) ದಪ್ಪತಳದ ಬಾಣಲೆಯೊಂದರಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಈ ನಾಲ್ಕೂ ರೊಟ್ಟಿಗಳನ್ನು ಬೇಯಿಸಿ. ನಡುನಡುವೆ ತಿರುವುತ್ತಾ ಎರಡೂ ಬದಿಗಳು ಸುಮಾರು ಕಂದು ಬಣ್ಣ ಬರುವಷ್ಟು ಬೇಯಿಸಿ. ಇದಕ್ಕೆ ಸುಮಾರು ಹದಿನೈದು ನಿಮಿಷ ಬೇಕಾಗುತ್ತದೆ.

4) ಈಗ ಮಾಯೋನೀಸ್ ಮತ್ತು ಟೊಮೇಟೊ ಕೆಚಪ್‌ಗಳನ್ನು ಒಂದು ಲೋಟಕ್ಕೆ ಹಾಕಿ ಚಮಚದಿಂದ ಚೆನ್ನಾಗಿ ಮಿಶ್ರಣಮಾಡಿ

5) ಈಗ ಬನ್ ಗಳನ್ನು ನಡುವೆ ಅಡ್ಡಲಾಗಿ ಕತ್ತರಿಸಿ ಎರಡು ಬಿಲ್ಲೆಗಳನ್ನಾಗಿಸಿ. ಇದರ ಒಳಭಾಗಕ್ಕೆ ಬೆಣ್ಣೆ ಹಚ್ಚಿ ಕಾವಲಿಯ ಮೇಲೆ ಚಿಕ್ಕ ಉರಿಯಲ್ಲಿ ಬಿಸಿಮಾಡಿ.

6) ಬನ್ ಬಿಸಿಯಾದ ಬಳಿಕ ತಳಭಾಗದ ಬಿಲ್ಲೆಯ ಮೇಲೆ ಮೊದಲು ಮಾಯೋನೀಸ್ ಕೆಚಪ್ ಮಿಶ್ರಣವನ್ನು ಸವರಿ ಅದರ ಮೇಲೆ ಟೊಮೇಟೊ ಬಿಲ್ಲೆ, ಈರುಳ್ಳಿಯ ಬಿಲ್ಲೆ ಹಾಕಿ ಹರಡಿ ಅದರ ಮೇಲೆ ಚೀಸ್ ಫಲಕವನ್ನಿಡಿ. ಇದರ ಮೇಲೆ ಚಿಕನ್ ಖೈಮಾದ ಹುರಿದ ತುಂಡನ್ನಿಡಿ. ಇದರ ಮೇಲೆ ಬನ್ ನ ಮೇಲಿನ ಭಾಗವನ್ನಿಡಿ.

7) ಹೀಗೇ ನಾಲ್ಕೂ ಬರ್ಗರ್‍‌ಗಳು ತಯಾರಾದ ಬಳಿಕ ತಟ್ಟೆಗಳಿಗೆ ಚಮಚದಿಂದ ಬಡಿದು ಗಲಾಟೆ ಮಾಡುತ್ತಿರುವ ಮಕ್ಕಳಿಗೆ ತಿನ್ನಿಸಿ ಗಲಾಟೆ ನಿಲ್ಲಿಸಿ.

ಸಲಹೆ:

1)ನಿಮ್ಮ ಆಯ್ಕೆಯ ಹಸಿರು ಸೊಪ್ಪು, ಕೊತ್ತಂಬರಿ ಸೊಪ್ಪು, ಸೌತೆಕಾಯಿಯ ಬಿಲ್ಲೆ, ಆಲಿವ್, ಮೂಲಂಗಿ, ಖಾರ ಕಡಿಮೆ ಇರುವ ಮೆಣಸು, ಬೀಟ್ ರೂಟ್, ಸ್ಟ್ರಾಬೆರಿ ಮೊದಲಾದವುಗಳನ್ನು ಸೇರಿಸಿ ಪ್ರತಿಬಾರಿಯೂ ವೈವಿಧ್ಯಮಯ ಬರ್ಗರುಗಳನ್ನು ತಯಾರಿಸಬಹುದು.

2) ಒಂದು ವೇಳೆ ಮಾಯೋನೀಸ್ ಇಲ್ಲದಿದ್ದರೆ ಮೊಟ್ಟೆಯನ್ನು ಮಿಕ್ಸಿಯಲ್ಲಿ ಕೆಲವು ಬೆಳ್ಳುಳ್ಳಿಗಳೊಂದಿಗೆ ಗೊಟಾಯಿಸಿ ತೆಳುವದ ಆಮ್ಲೆಟ್ ಮಾಡಿ ಬರ್ಗರ್ ನಡುವೆ ಸೇವಿಸಬಹುದು.

3) ಚಿಕನ್ ಬದಲಿಗೆ ಆಲುಗಡ್ಡೆಯನ್ನು ಮುಕ್ಕಾಲು ಪಾಲು ಬೇಯಿಸಿ ಸಿಪ್ಪೆ ಸುಲಿದು ಜಜ್ಜಿ ಬಳಸಬಹುದು. ಈ ವಿಧಾನದಲ್ಲಿ ಕೊಂಚ ಮೆಣಸಿನ ಪುಡಿಯನ್ನು ಸೇರಿಸಬೇಕು. ಇಲ್ಲದಿದ್ದರೆ ರುಚಿ ಚಪ್ಪೆಯಾಗಿರುತ್ತದೆ.

4) ಒಂದು ವೇಳೆ ಮಾರುಕಟ್ಟೆಯ ಚಿಕನ್ ಖೀಮಾ ಖರೀದಿಸಿದರೆ ಮೊದಲು ನೀರಿನಲ್ಲಿ ಚೆನ್ನಾಗಿ ತೊಳೆದು ಬಿಸಿನೀರಿನಲ್ಲಿ ಕುದಿಸಿ ಚರ್ಬಿಯೆಲ್ಲಾ ಕರಗುವಂತೆ ಮಾಡಿ. ಇಲ್ಲದಿದ್ದರೆ ಇದು ಮಕ್ಕಳ ತೂಕವನ್ನು ಅತೀವವಾಗಿ ಹೆಚ್ಚಿಸುವ ಸಾಧ್ಯತೆಯಿದೆ.

5) ಈ ಆಹಾರ ಅತ್ಯಧಿಕ ಪ್ರಮಾಣದಲ್ಲಿ ಕ್ಯಾಲೋರಿ ಮತ್ತು ಪೋಷಕಾಂಶಗಳನ್ನು ನೀಡುವುದರಿಂದ ಪ್ರತಿದಿನದ ಸೇವನೆ ಸಲ್ಲದು. ಬದಲಿಗೆ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಮಾತ್ರ ಸೇವಿಸಬೇಕು. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ಕಮೆಂಟ್ ಮೂಲಕ ತಿಳಿಸಿ.

English summary

Tasty Cheese Chicken Burger Recipe

Of late, one of the most prefered dish for lunch is burger. Right from collage guys to office goers and the house wives all of them love to eat burger. So, if you love eating burger, you dont have to always order for it or go out to eat them. The best and healthiest way to eat burger is to prepare them right at your house. So, today we shall teach you the easy and fast way to prepare chicken burger at your home.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more