For Quick Alerts
ALLOW NOTIFICATIONS  
For Daily Alerts

ನಾಗರಪಂಚಮಿ ವಿಶೇಷ: ಎಣ್ಣೆರಹಿತ ನುಚ್ಚಿನುಂಡೆ ರೆಸಿಪಿ

Posted By: Jaya subramanya
|

ನಾಡಿನ ಹಬ್ಬ ನಾಗರ ಪಂಚಮಿ ಬಂದೇ ಬಿಟ್ಟಿದೆ. ನಾಗರ ಪಂಚಮಿಯ ವಿಶೇಷತೆ ಏನೆಂದರೆ ಇದನ್ನು ಸರ್ಪರಾಜ ಆದಿಶೇಷನ ಹಬ್ಬವನ್ನಾಗಿ ಕೂಡ ಆಚರಿಸುತ್ತಾರೆ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಜನ್ಮದಿನವನ್ನಾಗಿ ಕೂಡ ನಾಗರ ಪಂಚಮಿಯ ಆಚರಣೆ ಜಾರಿಯಲ್ಲಿದೆ. ಹುತ್ತಕ್ಕೆ ಹಾಲೆರೆದು, ಸರ್ಪರಾಜನನ್ನು ಬೇಡಿಕೊಂಡಲ್ಲಿ ಆತನು ಬೇಡಿದ್ದನ್ನು ಅನುಗ್ರಹಿಸುತ್ತಾನೆ ಎಂಬುದು ನಾಡಿನೆಲ್ಲೆಡೆ ಜನಜನಿತವಾಗಿದೆ. ಈ ಹಬ್ಬವನ್ನು ಆಚರಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು.

ಪ್ರಾತಃಕಾಲ ಬೇಗನೇ ಎದ್ದು ತಲೆಸ್ನಾನ ತೆಗೆದುಕೊಳ್ಳುವುದು ಪ್ರಥಮ ಭಾಗ. ನಂತರ ಒದ್ದೆಬಟ್ಟೆಯನ್ನು ದೇಹಕ್ಕೆ ಸುತ್ತಿಕೊಂಡು ನಾಗರಕಲ್ಲಿಗೆ ಹಾಲಿನ ಅಭಿಷೇಕ ಮಾಡಬೇಕು. ಬಳಿಕ ಅರಿಶಿನ ಮತ್ತು ಕುಂಕುಮದ ಅಭಿಷೇಕ ಮಾಡಬೇಕು. ನಾಗರಪಂಚಮಿಯು ಹೆಣ್ಣು ಮಕ್ಕಳಿಗೆ ವಿಶೇಷ ಹಬ್ಬವಾಗಿದ್ದು ಅವರು ತವರು ಮನೆಗೆ ಹೋಗಿ ಅಲ್ಲಿ ಹಬ್ಬವನ್ನು ಆಚರಿಸುವುದು ಸಂಪ್ರದಾಯವಾಗಿದೆ ನಾಗರಪಂಚಮಿಯಂದು ಎಣ್ಣೆ ಬಳಸಿ ಮಾಡುವ ಯಾವುದೇ ಅಡುಗೆಗಳಿಗೆ ಅವಕಾಶವಿಲ್ಲ, ಎಣ್ಣೆ ಬಳಸದ ಕೆಲವು ನಿರ್ದಿಷ್ಟ ಅಡುಗೆಗಳನ್ನು ಮಾತ್ರ ಅಂದು ಮಾಡಬಹುದು.

ಉದಾಹರಣೆಗೆ ಇಡ್ಲಿ, ಸಿಹಿಕಡುಬು, ಗಂಜಿ, ನುಚ್ಚಿನುಂಡೆ ಇತ್ಯಾದಿ. ಅಂತೆಯೇ ಅರಶಿನ ಎಲೆಯಲ್ಲಿ ಮಾಡುವ ಖಾದ್ಯವನ್ನು ಕೂಡ ನಾಗರಪಂಚಮಿಯ ಶುಭವಸರದಲ್ಲಿ ದೇವರಿಗೆ ನೈವೇದ್ಯ ರೂಪದಲ್ಲಿ ತಯಾರಿಸುತ್ತಾರೆ. ಇಂದಿನ ಲೇಖನದಲ್ಲಿ ನುಚ್ಚಿನುಂಡೆ ತಯಾರಿಯ ವಿಧಾನಗಳನ್ನು ನಾವು ಅರಿತುಕೊಳ್ಳಲಿದ್ದು ಇದನ್ನು ವಿಶೇಷವಾಗಿ ನಾಗರಪಂಚಮಿಗಾಗಿಯೇ ತಯಾರಿಸುವಂತಹದ್ದಾಗಿದೆ.

Nuchchina Unde recipe

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹತ್ತು ನಿಮಿಷಗಳು
ತಯಾರಿಕಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು
*ತೊಗರಿ ಬೇಳೆ: ಎರಡು ಕಪ್ (ತಣ್ಣೀರಿನಲ್ಲಿ ಸುಮಾರು ನಾಲ್ಕರಿಂದ ಐದು ಗಂಟೆ ನೆನೆಸಿಟ್ಟಿದ್ದು)
*ಹೆಸರು ಬೇಳೆ: ಒಂದು ಕಪ್ (ತಣ್ಣೀರಿನಲ್ಲಿ ಸುಮಾರು ನಾಲ್ಕರಿಂದ ಐದು ಗಂಟೆ ನೆನೆಸಿಟ್ಟಿದ್ದು)
*ಕಡಲೆ ಬೇಳೆ : ಒಂದು ಕಪ್ (ತಣ್ಣೀರಿನಲ್ಲಿ ಸುಮಾರು ನಾಲ್ಕರಿಂದ ಐದು ಗಂಟೆ ನೆನೆಸಿಟ್ಟಿದ್ದು)
*ಪುದಿನಾ ಎಲೆಗಳು: ಒಂದು ಕಪ್
*ಕೊತ್ತಂಬರಿ ಎಲೆಗಳು: ಸುಮಾರು ಹತ್ತು ದಂಟು
*ಕಾಯಿತುರಿ: ಒಂದು ಕಪ್
*ಇಂಗು : ಚಿಟಿಕೆಯಷ್ಟು
*ಹಸಿಮೆಣಸು: ಐದರಿಂದ ಆರು
*ಬಾಳೆಯಲೆ : ಒಂದು (ಅಗಲವಾದದ್ದು)
*ತುಪ್ಪ: ಎರಡು ದೊಡ್ಡ ಚಮಚ
*ಉಪ್ಪು: ರುಚಿಗನುಸಾರ

Nuchchina Unde recipe

ಮಾಡುವ ವಿಧಾನ
1) ನೀರಿನಲ್ಲಿ ನೆನೆಸಿದ ಮೂರೂ ಬೇಳೆಗಳಿಂದ ನೀರು ಬಸಿದು ಮಿಕ್ಸಿಯಲ್ಲಿ ಹಾಕಿ. ಇದರೊಂದಿಗೆ ಪುದಿನಾ, ಕೊತ್ತಂಬರಿ, ಕಾಯಿತುರಿ, ಹಸಿಮೆಣಸು, ಉಪ್ಪು ಹಾಕಿ ಕಡೆಯಿರಿ.
2) ಇದು ತೀರಾ ನುಣ್ಣಗಾಗಬಾರದು, ರವೆಯ ಹದ ಬರುವಷ್ಟು ಮಾತ್ರ ಕಡೆಯಿರಿ, ಅಗತ್ಯಕ್ಕೆ ತಕ್ಕಷ್ಟು ಮಾತ್ರ ನೀರು ಸೇರಿಸಿ. (ಹೆಚ್ಚು ನೀರು ಸೇರಿಸಿದರೆ ಉಂಡೆ ಕಟ್ಟಲು ಸಾಧ್ಯವಿಲ್ಲ)
3) ಬಳಿಕ ಇದನ್ನು ಕೈಗಳಿಂದ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. (ದೊಡ್ಡ ಲಿಂಬೆ ಗಾತ್ರವಾದರೆ ಸಾಕು, ತೀರಾ ದೊಡ್ಡದಾದರೆ ಒಳಭಾಗ ಬೇಯುವುದಿಲ್ಲ)
4) ಕುಕ್ಕರ್ ನಲ್ಲಿ ನೀರು ಹಾಕಿ ಬಿಸಿ ಮಾಡಿ ಉಂಡೆ ಬೇಯಿಸಲು ಅಗತ್ಯವಿರುವ ಪಾತ್ರೆಯನ್ನು ಮಗುಚಿಡಿ.
5) ಬಾಳೆ ಎಲೆಯನ್ನು ಉಂಡೆ ಸುತ್ತುವಷ್ಟು ಅಗಲವಾಗಿ ಕತ್ತರಿಸಿ ಇದರ ಮೇಲೆ ತುಪ್ಪ ಸವರಿ.
6) ಎಲ್ಲಾ ಉಂಡೆಗಳನ್ನು ಹೀಗೇ ಬಾಳೆಯೆಲೆಯಲ್ಲಿ ಸುತ್ತಿ ಕುಕ್ಕರಿನೊಳಗಿನ ಪಾತ್ರೆಯ ಮೇಲೆ ಒಂದರ ಮೇಲೊಂದು ಬರವಂತೆ ಇರಿಸಿ. ಬಾಳೆಯ ಕಡೆಯ ಅಂಚು ಕೆಳಗಿರುವಂತೆ ನೋಡಿಕೊಳ್ಳಿ, ಇಲ್ಲದಿದ್ದರೆ ಸುರುಳಿ ಬಿಚ್ಚಿಕೊಳ್ಳುತ್ತದೆ. (ಇದು ಕಿರಿಕಿರಿ ಎನ್ನಿಸಿದರೆ ಟೂಥ್ ಪಿಕ್ ಒಂದನ್ನು ಅರ್ಧ ಭಾಗ ಚುಚ್ಚುವಂತೆ ಚುಚ್ಚಬಹುದು, ಆದರೆ ಬೆಂದ ಮೇಲೆ ಮರೆಯದೇ ತೆಗೆಯಬೇಕು)
7) ಈಗ ಕುಕ್ಕರ್‌ನ ಮುಚ್ಚಳ ಮುಚ್ಚಿ, ಆದರೆ ಸೀಟಿ ಹಾಕಬೇಡಿ.
8) ಸುಮಾರು ಹತ್ತರಿಂದ ಹದಿನೈದು ನಿಮಿಷ ಕುಕ್ಕರ್‌ನಿಂದ ಹಬೆಹೊರಹೋಗಲಿ. ಬಳಿಕ ಕೆಳಗಿಳಿಸಿ.
9) ಬಿಸಿಬಿಸಿಯಿರುವಂತೆಯೇ ಮನೆಯವರಿಗೆ ಮತ್ತು ಅತಿಥಿಗಳಿಗೆ ಬಡಿಸಿ. ಇದು ತುಪ್ಪ ಮತ್ತು ಕಾಯಿಚಟ್ನಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

[ of 5 - Users]
X
Desktop Bottom Promotion