For Quick Alerts
ALLOW NOTIFICATIONS  
For Daily Alerts

ರಂಜಾನ್ ಉಪವಾಸಕ್ಕಾಗಿ ತಂಪುಣಿಸುವ ಬಾದಾಮಿ ಹಾಲು

By Arshad
|

ರಂಜಾನ್‌ ಮಾಸದಲ್ಲಿ ಹದಿನಾಲ್ಕು ಗಂಟೆಗಳ ಉಪವಾಸದ ಬಳಿಕ ದೇಹಕ್ಕೆ ವಿಶೇಷ ಆಹಾರಗಳ ಅಗತ್ಯವಿದೆ. ಅದರಲ್ಲೂ ಉಪವಾಸ ಹಿಡಿಯುತ್ತಿರುವ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಹೆಚ್ಚಿನ ಪೋಷಕಾಂಶಗಳು ಅತ್ಯಗತ್ಯ. ಈ ಅಗತ್ಯವನ್ನು ಕೇಸರಿ, ಹಾಲು, ತುಪ್ಪ ಮತ್ತು ಬಾದಾಮಿ ಪೂರೈಸುತ್ತವೆ.

ಇವೇ ಸಾಮಾಗ್ರಿಗಳನ್ನು ಉಪಯೋಗಿಸಿ ತಯಾರಿಸುವ ಈ ವಿಶೇಷ ಪೇಯ ರುಚಿಕರವೂ ಹೌದು. ಪೌಷ್ಠಿಕಾಂಶಗಳ ಆಗರವಾಗಿರುವ ಬಾದಾಮಿಯಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನುಗಳು ಹೆಚ್ಚಿರುವುದರಿಂದ ಮಕ್ಕಳಿಗೆ ವಿಶೇಷವಾಗಿ ಈ ಪೇಯ ಹೆಚ್ಚಿನ ಆರೈಕೆ ನೀಡಬಲ್ಲುದು.

ಈ ಪೇಯವನ್ನು ವರ್ಷವಿಡೀ ತಯಾರಿಸಬಹುದಾದರೂ ಇದರ ಮಹತ್ವ ರಂಜಾನ್ ತಿಂಗಳ ಇಫ್ತಾರ್ ಸಮಯಕ್ಕೆ ಹೆಚ್ಚು ಸಮರ್ಪಕವಾಗಿದೆ. ಬಿಸಿಯಿರುವಾಗಲೇ ಸೇವಿಸಬೇಕಾದ ಈ ಸ್ವಾದಿಷ್ಟ ಪೇಯವನ್ನು ಸುಹೂರ್ ಮತ್ತು ಇಫ್ತಾರ್ ಸಮಯದಲ್ಲಿ ಬಳಸಬಹುದು. ಜೊತೆಗೇ ಮಳೆಯಿಂದಾಗಿ ಚಳಿಯಲ್ಲಿ ಕುಡಿಯುವ ಪೇಯ ಶರೀರಕ್ಕೆ ಅಗತ್ಯವಾದ ಶಾಖವನ್ನೂ ನೀಡುವುದರಿಂದ ಎಲ್ಲರ ಮನಗೆಲ್ಲುವುದು ಖಂಡಿತ. ಅಷ್ಟೇ ಏಕೆ, ಇನ್ನುಳಿದ ಸಮಯದಲ್ಲಿ ರಾತ್ರಿ ಊಟದ ಬಳಿಕ ನೀಡಿದರೂ ಮನೆಯವರು ಮತ್ತು ಅತಿಥಿಗಳು ಈ ಪೇಯವನ್ನು ಮತ್ತಷ್ಟು ಕೊಂಡಾಡುತ್ತಾರೆ.

Ramzan Special: Badam Harira Drink

ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಐದು ನಿಮಿಷಗಳು
ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು.

ಅಗತ್ಯವಿರುವ ಸಾಮಾಗ್ರಿಗಳು:
*ಹಸುವಿನ ತುಪ್ಪ: 1 ಚಿಕ್ಕ ಚಮಚ
*ಮೈದಾ ಹಿಟ್ಟು- 1 ದೊಡ್ಡಚಮಚ
*ಹಾಲು - 1 ಲೀಟರ್
*ಬಾದಾಮಿ ಪುಡಿ - 4 ದೊಡ್ಡಚಮಚ
*ಕೇಸರಿ - ಕೆಲಸು ಎಸಳುಗಳು
*ಸಕ್ಕರೆ- 1/4 ಕಪ್
*ಒಣಫಲಗಳು-ಚಿಕ್ಕದಾಗಿ ಹೆಚ್ಚಿದ್ದು (ನಿಮ್ಮ ಆಯ್ಕೆಯ ಯಾವುದೂ ಆಗಬಹುದು)-ಮೇಲಿನ ಅಲಂಕಾರಕ್ಕಾಗಿ
*ಗುಲಾಬಿ ಹೂಗಳ ದಳಗಳು - ಸ್ವಲ್ಪ, ಮೇಲಿನ ಅಲಂಕಾರಕ್ಕಾಗಿ (ಅಥವಾ ನಿಮ್ಮ ಆಯ್ಕೆಯ ಬೇರೆ ಯಾವುದಾದರೂ ಸರಿ)

ವಿಧಾನ:
*ದಪ್ಪತಳದ ಪಾತ್ರೆಯಲ್ಲಿ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ
*ಮೈದಾ ಹಾಕಿ ಎರಡು ನಿಮಿಷ ತಿರುವುತ್ತಾ ಇರಿ. (ತಿರುವುದನ್ನು ಕೊಂಚ ನಿಲ್ಲಿಸಿದರೂ ಕೆಳಭಾಗ ಸುಟ್ಟು ರುಚಿ ಕೆಡುತ್ತದೆ)
*ಕೊಂಚ ಕಂದು ಬಣ್ಣ ಬರುತ್ತಿದ್ದಂತೆಯೇ ಹಾಲು ಹಾಕಿ ಕುದಿ ಬರಿಸಿ, ನಡುನಡುವೆ ಕೊಂಚ ತಿರುವುತ್ತಿರಿ.
*ಕುದಿ ಬರುತ್ತಿದ್ದಂತೆಯೇ ಉರಿಯನ್ನು ಚಿಕ್ಕದಾಗಿಸಿ ಬಾದಾಮಿ ಪುಡಿ ಮತ್ತು ಕೇಸರಿಯನ್ನು ಹಾಕಿ
*ಚಿಕ್ಕ ಉರಿಯಲ್ಲಿಯೇ ಸುಮಾರು ಹತ್ತರಿಂದ ಹದಿನೈದು ನಿಮಿಷ ಕುದಿಯಲು ಬಿಡಿ.
*ಈಗ ಸಕ್ಕರೆ ಹಾಕಿ ಎರಡು ನಿಮಿಷ ಕುದಿಸಿ, ನಡುನಡುವೆ ತಿರುವುತ್ತಿರಿ
*ಬಳಿಕ ಇಳಿಸಿ ಒಣಫಲಗಳ ಪುಡಿ ಮತ್ತು ಗುಲಾಬಿ ದಳಗಳಿಂದ ಮೇಲ್ಭಾಗವನ್ನು ಅಲಂಕರಿಸಿ.
*ಬಿಸಿಯಿದ್ದಂತೆಯೇ ಲೋಟಗಳಲ್ಲಿ ಹಾಕಿ ಅತಿಥಿಗಳಿಗೆ ಕುಡಿಯಲು ನೀಡಿ ಮೆಚ್ಚುಗೆ ಗಳಿಸಿ.

ಸೂಚನೆ:
ಪೇಯವನ್ನು ಲೋಟಗಳಿಗೆ ಹಾಕಿದ ಬಳಿಕವೂ ಒಣಫಲಗಳನ್ನು ಹಾಕಿ ಅಲಂಕರಿಸಬಹುದು.

English summary

Ramzan Special: Badam Harira Drink

During Ramzan season you would want to slake your thirst with a great drink. Today, we here to share the recipe for the Ramzan special Badam Harira drink! This nutritious drink is made ofalmonds. Almonds are very nutritious and it should be included in your daily diet. We can eat them raw or include them in various recipes.
X
Desktop Bottom Promotion