For Quick Alerts
ALLOW NOTIFICATIONS  
For Daily Alerts

ರುಚಿಯ ಅಮಲೇರಿಸುವ ಅಮಲ್ದಾರ್ ಉಪ್ಪಿಟ್ಟು

By * ಸುರೇಂದ್ರ, ಸಕಲೇಶಪುರ
|
Amaldar Uppittu
ನನ್ನ ಊರು ಹೊಳೆಹೊನ್ನೂರು. ಮೊನ್ನೆ ಕಾಲೇಜು ಕೆಲಸದ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದೆ. ಮೆಜೆಸ್ಟಿಕ್ಕಿನ ಒಂದು ಹೋಟೆಲಿನಲ್ಲಿ ಕೋಣೆ ಹಿಡಿದಿದ್ದೆ. ಶುಕ್ರವಾರ ಮಲ್ಲೇಶ್ವರ 18ನೇ ಕ್ರಾಸಿನಲ್ಲಿ ಕೆಲಸ ಪೂರೈಸಿಕೊಂಡು ರೂಮಿಗೆ ವಾಪಸ್ಸು ಹೊರಟಿದ್ದೆ. ಆಗ ಕಾಲೇಜು ಆಫೀಸಿನಲ್ಲಿರುವ ಒಬ್ಬ ಹಿರಿಯ ಮಿತ್ರರು ರಾತ್ರಿ ಊಟ ಮತ್ತು ಬೀರು ಕುಡಿಯುವುದಕ್ಕೆಂದು ನನ್ನನ್ನು ಹೋಟೆಲಿಗೆ ಕರೆದೊಯ್ದರು. ಬೀರು ಕುಡಿದು ಊಟಕ್ಕೆ ಆರ್ಡರ್ ಮಾಡುವಾಗ ಅವರು ನನಗೊಬ್ಬನಿಗೇ ಊಟ ಹೇಳಿ ತಾವು ಊಟಕ್ಕೆ ಮನೆಗೆ ಹೋಗುವುದಾಗಿ ತಿಳಿಸಿದರು.

ಜತೆಯಲ್ಲಿ ಊಟಮಾಡೋಣ ಎಂದು ನಾನು ಎಷ್ಟೇ ಕೇಳಿಕೊಂಡರೂ ಅವರು ಜಪ್ಪಯ್ಯ ಎನಲಿಲ್ಲ. ಅದಕ್ಕೆ ಅವರು ಕೊಟ್ಟ ಕಾರಣಗಳು ಎರಡು. ರಾತ್ರಿ ಮನೆಯಲ್ಲಿ ಊಟ ಮಾಡದಿದ್ದರೆ ಅವರ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳು ತರಾಟೆಗೆ ತೆಗೆದುಕೊಳ್ಳುತ್ತಾರಂತೆ. ಎರಡನೆಯದು ಆಕಸ್ಮಾತ್ ಹೊರಗಡೆ ಊಟ ಮಾಡಿಬಿಡೋಣ ಎಂದರೆ ಇವತ್ತು ಅವರ ಮನಸ್ಸು ಒಪ್ಪುತ್ತಿಲ್ಲ. ಕಾರಣ, ಮನೆಯಲ್ಲಿ ವಿಶೇಷ ತಿಂಡಿ ಮಾಡಿದ್ದಾರಂತೆ. ಏನು ವಿಶೇಷ ಎಂದು ಕೇಳಲಾಗಿ ಅವರು ಹೇಳಿದ್ದು ಉಪ್ಪಿಟ್ಟು! ಅಯ್ಯೋ ದೇವರೆ, ಉಪ್ಪಿಟ್ಟು ದಿನಾ ಇದ್ದದ್ದೇ. ಅದರಲ್ಲೇನು ಸ್ಪೆಷಲ್ ಎಂದು ಕೇಳಿದಾಗ ಅವರು ಹೇಳಿದ್ದು ಹೀಗಿತ್ತು.

ಮನೆಯಲ್ಲಿ ಅವರ ಹೆಂಡತಿ ಅಪರೂಪಕ್ಕೆ ವಿಶೇಷ ಉಪ್ಪಿಟ್ಟು ಮಾಡುತ್ತಾರಂತೆ. ಅದರ ಹೆಸರು ಅಮಲ್ದಾರ್ ಉಪ್ಪಿಟ್ಟು! ಹಾಗಂದರೇನು? ನಿಮ್ಮಂತೆ ನನಗೂ ಆಶ್ಚರ್ಯವಾಯಿತು.

ನನ್ನ ಸ್ನೇಹಿತನ ಮಾವನವರು ಆಗಿನ ಕಾಲದಲ್ಲಿ ಅಮಲ್ದಾರ್ ಆಗಿದ್ದರಂತೆ. ಊರಿನ ಜನ ಅವರಿಗೆ ತುಂಬಾ ಗೌರವ ಮತ್ತು ಭಯ ಇಟ್ಟುಕೊಟ್ಟಿದ್ದರಂತೆ. ಅಮಲ್ದಾರ್ ಜಗನ್ನಾಥರಾಯರಿಗೆ ಉಪ್ಪಿಟ್ಟೆಂದರೆ ಪ್ರಾಣ. ಆದರೆ ಖಂಡಿತ ನಾವು ನೀವು ಮಾಡುವ ಉಪ್ಪಿಟ್ಟಲ್ಲ. ದಪ್ಪ ರವೆಯನ್ನು ಚೆನ್ನಾಗಿ ಹುರಿದು(over fry)ಅದಕ್ಕೆ ಯಥಾಪ್ರಕಾರ ಪದಾರ್ಥಗಳನ್ನು ಕಲೆಸಿ ಉಪ್ಪಿಟ್ಟು ಮಾಡುವುದು ಕ್ರಮ. ಆದರೆ, ಉಪ್ಪಿಟ್ಟು ತಯಾರಿಕೆಗೆ ಮನೆಯಲ್ಲೇ ತಯಾರಿಸಿದ ಬೆಣ್ಣೆಕಾಯಿಸಿದ ತುಪ್ಪವನ್ನೇ ಬಳಸಬೇಕು. ತುಪ್ಪವನ್ನು ಯಥೇಶ್ಚವಾಗಿ ಹಾಕಿ ಮಾಡಿದ ಬನ್ಸಿ ರವೆ ಉಪ್ಪಿಟ್ಟು ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಯಾರೂ ಮಾಡುವುದಿಲ್ಲ. ಅದೂನೂವೆ ಮನೆಯಲ್ಲಿ ಕಾಯಿಸಿದ ತುಪ್ಪ. ಛೆ ಛೆ ಎಲ್ಲಾದರೂ ಉಂಟೆ ಅನ್ನಬೇಡಿ.

ನಮ್ಮ ಕಾಲೇಜು ಸೂಪರಿಂಟೆಂಡೆಂಟು ಸೋಮಶೇಖರ್ ಅವರ ಹೆಂಡತಿ ಆಗಾಗ ಅಮಲ್ದಾರ್ ಉಪ್ಪಿಟ್ಟು ತಯಾರಿಸುತ್ತಾರೆ. ಹಾಲು ಕಾಯಿಸಿದ ಕೆನೆಯನ್ನು ನಿತ್ಯ ಜೋಪಾನವಾಗಿ ತೆಗೆದಿಟ್ಟು ಒಂದು ಭಾನುವಾರ ಬೆಣ್ಣೆ ಕಡೆದು ತುಪ್ಪಕಾಯಿಸಿ ಅಮಲ್ದಾರ್ ಉಪ್ಪಿಟ್ಟು ಮಾಡುವುದು ಅವರ ಮನೆಯ ಸ್ಪೆಷಲ್. ಹಾಗಾಗಿ ಸೋಮಣ್ಣನವರು ನಮ್ಮ ಜತೆ ಹೋಟೆಲ್ ಊಟ ಮಾಡಲಿಲ್ಲವೆನ್ನಿ. ಇನ್ನೊಂದು ಅಂಶವೆಂದರೆ, ಅಮಲ್ದಾರ್ ಜಗನ್ನಾಥರಾಯರು ಆಗಾಗ ತುಪ್ಪದ ಗುಣಮಟ್ಟದ ಬಗೆಗೆ ತಮ್ಮದೇ ಆದ ವ್ಯಾಖ್ಯೆ ಕೊಡುತ್ತಿದ್ದರಂತೆ. ಅವರ ಪ್ರಕಾರ, ಮನೆಯಲ್ಲಿ ಮಾಡಿದ ಗಟ್ಟಿಯಾದ ತುಪ್ಪವನ್ನು ಒಂದು ಚಮಚ ಅಂಗೈಮೇಲೆ ಹಾಕಿದರೆ ಅದು ದೇಹದ ಶಾಖಕ್ಕೆ ಕರಗುತ್ತದಂತೆ. ಹಾಗೆ ಕರಗಿದರೆ ಒಳ್ಳೆ ತುಪ್ಪ ಇಲ್ಲದಿದ್ದರೆ ಅದರಲ್ಲೇನೋ ದೋಷವಿದೆ.

ಊರಿಗೆ ವಾಪಸ್ಸು ಬಂದನಂತರ ಸೋಮಣ್ಣನವರು ಹೇಳಿದ ಉಪ್ಪಿಟ್ಟಿನ ಬಗ್ಗೆ ನನ್ನ ಹೆಂಡತಿಗೂ ಹೇಳಿದೆ. ಅವಳು ನಕ್ಕಳು. ನೀನೂ ಮಾಡೆ ಎಂದೆ. ಮಾಡ್ತೀನಿ ಆದರೆ ತುಪ್ಪ ಆಕಳಹಾಲಿನದೋ, ಎಮ್ಮೆ ಹಾಲಿನದೋ ಎಂದು ಕೇಳಿದಳು. ನನಗೆ ಏನೂ ಹೇಳಲು ಗೊತ್ತಾಗದೆ ಸುಮ್ಮನಾಗಿಬಿಟ್ಟೆ.

ದೇವರೇ, ನಮ್ಮನ್ನು ಈ ಉಪ್ಪಿಟ್ಟಿನಿಂದ ಕಾಪಾಡಪ್ಪಾ...!
ಇದು ಉಪ್ಪಿಟ್ಟನ್ನು ಗೇಲಿ ಮಾಡೋರಿಗೆ ಮಾತ್ರ!
ಡಬ್ಬಲ್ ಡಿಲೈಟ್ ಉಪ್ಪಿಟ್ಟು ರೊಟ್ಟಿ ಸಾಬೂದಾಣಿ ಖಿಚಡಿ :
ಇದು ಏಕಾದಶಿ ಪರಿಹಾರ

English summary

Amaldar Uppittu : good old recipe - ರುಚಿಯ ಅಮಲೇರಿಸುವ ಅಮಲ್ದಾರ್ ಉಪ್ಪಿಟ್ಟು

Ghee Rich Amaldar Uppittu recipe and food talk by Surendra of Sakaleshpura. ಸಕಲೇಶಪುರದ ಸುರೇಂದ್ರ ಅವರಿಂದ ಅಮಲ್ದಾರ್ ಉಪ್ಪಿಟ್ಟಿ ಬಗ್ಗೆ ವ್ಯಾಖ್ಯಾನ.
X
Desktop Bottom Promotion