For Quick Alerts
ALLOW NOTIFICATIONS  
For Daily Alerts

ಡಬ್ಬಿ ತುಂಬ ಭಕ್ಕರಿ ಅಲ್ಲ ಅಮ್ಮನ ಪ್ರೀತಿ ಇತ್ತು

By * ಪ್ರಸಾದ ನಾಯಿಕ
|
A file photo mother preparing Jolada rotti
ನಮ್ ಫ್ಲ್ಯಾಟಿನ ಬಾಲ್ಕನಿಯಿಂದ ಕೈಚಾಚಿದ್ರ ಯಾವ್ದೋ ಗಿಡದ ಟೊಂಗಿ ಕೈಗೆ ತಾಕತಿತ್ತು. ಅದ ಟೊಂಗಿದಾಗ ಯಾವುದೋ ಹಕ್ಕಿ ಕಟ್ಟಿಕೊಂಡಂಥ ಗೂಡಿನ್ಯಾಗ ಆಗತಾನ ಹೊರಬಂದ ಮರಿಗಳಿಗೆ ಗುಟುಕು ಕೊಡ್ತಿದ್ದು ನೋಡಿ ಯಾಕೋ ಕಣ್ಣಾಗ ನೀರು ಫಳ್ ಅಂತು.

ಇಪ್ಪತ್ತೈದು ವರ್ಷದಿಂದ ಹಂಗೇ ಇರೋ ಧಾರವಾಡ, ಬಸ್ ಸ್ಟ್ಯಾಂಡಿನಿಂದ ನಡಕೋತ ಹೋದರ ಹದಿನೈದು ನಿಮಿಷದಾಗ ತಲುಪಬಹುದಾದ ಮಹೀಂದ್ರಕರ ಚಾಳ, ಅಲ್ಲಿರೋ ನಮ್ ಮನಿ, ಬೆಂಗಳೂರಿನ್ಯಾಗ ಏನು ಮಾಡ್ಲಿಕತ್ತಾನೋ ತಿಂದಾನೋ ಇಲ್ಲೋ ಅಂತ ಯಾವಾಗಲೂ ನೆನೆಸುತ್ತಾ ಇರೋ ಅಪ್ಪ ಅಮ್ಮ, ವಾರದಾಗ ಏಳು ದಿನಾನೂ ಅಮ್ಮ ಮಾಡಿ ಬಡಿಸುತ್ತಿದ್ದ ಭಕ್ಕರಿ ಪಲ್ಯಾ, ಕಟಕ ಭಕ್ಕರಿ ಸಿಹಿ ಮೊಸರು, ಅವರ ಪ್ರೀತಿ, ನನ್ನ ಒಂಟಿತನ ಎಲ್ಲಾ ನೆನಪಾಗಿ ಬುಳಕ್ ಅಂತ ಕಣ್ಣಾಲಿಗಳು ತುಂಬಿಕೊಂಡವು.

ಯಾಕ ಬೇಕಿತ್ತಪಾ ಈ ಬೆಂಗಳೂರು ಅಂಚ ಅನಸಲಿಕ್ಕೆ ಸುರು ಮಾಡಿತು. ಇಲ್ಲಿ ಎಲ್ಲಾ ಇದ್ದೂ ಏನೂ ಇಲ್ಲದಂಥ ಸ್ಥಿತಿ. ಕೆಲಸ, ರೊಕ್ಕ, ಮಸ್ತಿ ಮಜಾ ಎಲ್ಲಾ ಅದ. ಆದರ ಇಲ್ಲದಿರೋದಂದ್ರ ಅಮ್ಮನ ಸನಿಹ, ದೊಡ್ಡ ಪರಾತ ಇಟಗೊಂಡು ಟಪಟಪ ಅಂತ ಬಡಿದು ಮಣ್ಣಿನ ಒಲಿ ಮ್ಯಾಲ ಕಬ್ಬಿಣದ ಹಂಚಿಟ್ಟು ಕಟಿಗಿ ಉರಿ ಹಚ್ಚಿ ಬೇಯಿಸಿ ಕೊಡತಿದ್ದ ಬಿಸಿಬಿಸಿ ಭಕ್ಕರಿ ರುಚಿ.

ನಾವು ಬಿಜಾಪುರದ ಮಂದಿನ ಹಾಂಗ. ಪ್ರತಿದಿನ ನ್ಯಾರಿಗೆ ಜ್ವಾಳದ ಭಕ್ಕರಿ ಬದನಿಕಾಯಿ ಪಲ್ಯಾ ಅಥವಾ ಝುಣಕ ಇಲ್ಲದಿದ್ದರ ಆವತ್ತಿನ ದಿನಾನ ಮುಂದ ಹೋಗೋದಿಲ್ಲ. ಇಂಥಾಪರಿ ಭಕ್ಕರಿಗೆ ಅಡಿಕ್ಟ್ ಆಗಿರ್ತೇವಿ. ಭಕ್ಕರಿ ಇಲ್ಲದಿದ್ದರ ಹೊಟ್ಟಿ ತಾಳಮೇಳ ತಪ್ಪಿ ಮನಸಿಗೆ ಮಂಕು ಬಡಿದಹಾಗೆ ಆಗಿಬಿಡ್ತದ.

ತಮಾಷೆ ಅಂದ್ರ, ಬೆಂಗಳೂರಿನ್ಯಾಗ ಭಕ್ಕರಿ ಬಿಸಿನೆಸ್ಸು ಭಾರೀ ನಡೀತದ. ಕಾಮತ್ ಯಾತ್ರಿ ನಿವಾಸ ಹೊಟೇಲ್ ಹಿಡಕೊಂಡು ಎಲ್ಲಾ ಕಡೆ ಭಕ್ಕರಿ ಊಟ ಸಿಗತದ. ಬಿಜಾಪುರ, ಬಾಗಲಕೋಟಿ ಮಂದಿ ಇಡೀ ಸಂಸಾರ ಸಮೇತ ಗುಳೆ ಎದ್ದು ಬಂದು ಬೆಂಗಳೂರಿನ್ಯಾಗ ಠಿಕಾಣಿ ಹೂಡ್ಯಾರ. ಇರೋ ಕಡೆನ ಜೋಳದ ರೊಟ್ಟಿ ಊಟ ಸಿಗುತ್ತದೆ ಅಂತ ಬೋರ್ಡ್ ಹಾಕ್ಕೊಂಡು ಬಿಸಿನೆಸ್ ಶುರು ಮಾಡ್ಯಾರ. ಅಡ್ಡಿಯಿಲ್ಲ, ಭಕ್ಕರಿ ಅಂತೂ ಮಿಸ್ ಆಗಿಲ್ಲ ಅಂದ್ಕೊಂಡ್ರೂ ಅಮ್ಮ ಮಾಡಿದ ಭಕ್ಕರಿ ಪಲ್ಯಾ ರುಚಿ ಬಂದೀತ?

ದೊಡ್ಡ ಪರಾತದಾಗ ನುಣ್ಣಗ ಬೀಸಿದ ಜ್ವಾಳದ ಹಿಟ್ಟಿಗೆ ಬಿಸಿಬಿಸಿ ಕಾದ ನೀರು ಹಾಕಿ, ಹನಿ ಎಣ್ಣಿ ಸೈತ ಮುಟ್ಟಸ್ದ ಚಂದಗ ಹುಣ್ಣಿಮೆ ಚಂದ್ರಾಮನಂಗ ತಟ್ಟಿದ ಭಕ್ಕರಿ ಬಡೀತಿದ್ದರ, ಅಮ್ಮ ಭಕ್ಕರಿ ಅಲ್ಲ ನಮಗ ಚುಕ್ಕೂ ಬಡಿಲಿಕತ್ತಾಳ ಅಂತ ಅನಸತಿತ್ತು. ಪೂರಿ ಹಂಗ ಉಬ್ಬಿದ ಬಿಸಿಬಿಸಿ ಭಕ್ಕರಿ ಹೊಟ್ಟಿ ಒಳಗ ಇಳಸತಿದ್ದರ ನಿಗಿನಿಗಿ ಉರೀತಿದ್ದ ಬೆಂಕಿ ಮುಂದ ಅಮ್ಮನ ಮುಖದ ಸಂತಸ ನೂರ್ಮಡಿ ಆಗಿರ್ತಿತ್ತು. ಕಾದ ಹಂಚಿನ ಅಂಚಿಗೆ ತಾಕಿ ಆದ ಗಾಯಗಳಿಗೆ ಲೆಕ್ಕ ಇರ್ತಿರಲಿಲ್ಲ. ಆದರೂ ಭಕ್ಕರಿ ಬಡದು ಬಡಿಸೋದು ಬಿಡ್ತಿರಲಿಲ್ಲ.

ಬಿಸಿಬಿಸಿ ಅಲ್ಲ ಒಣಗಿದ ಭಕ್ಕರಿನ ಲಟಲಟ ಮುರಿದು, ತಟಕು ಉಪ್ಪು ಮ್ಯಾಲ ಸಿವಿ ಮೊಸರು, ಗುರೆಳ್ಳು ಚಟ್ನಿಪುಡಿ ಹಾಕಿಕೊಂಡು ಹೊಡದ್ರ ಹೆಂಗಿರತಿತ್ತು. ಬೆಂಗಳೂರಿಗೆ ಅಪ್ಪ ಬಂದಾಗ ಡಬ್ಬಿ ತುಂಬ ಎಂಟು ದಿನಕ್ಕಾಗೋವಷ್ಟು ಭಕ್ಕರಿ ಮಾಡಿ ಕಳಿಸಿರತಿದ್ದಳು ಅಮ್ಮ. ಡಬ್ಬಿ ತಗದ ನೋಡಿದ್ರ ಭಕ್ಕರಿ ಇರತಿದ್ದಿದ್ದಿಲ್ಲ, ಬರೇ ಪ್ರೀತಿ ತುಂಬಿರೋದು ಕಾಣಿಸ್ತಿತ್ತು. ಮುಖಾ ಅತ್ಲಾಗ ಮಾಡಿ ಎಷ್ಟು ಸತಿ ಕಣ್ಣೀರು ಒರೆಸಿಕೊಂಡೇನೋ ಲೆಕ್ಕಾ ಇಟ್ಟಿಲ್ಲ. ಹೋಗ್ಲಿ ಇಲ್ಲೇ ಬರ್ರಿ ಅಂದ್ರ, ಹಳೇ ಹಂಚಿನ ಮನಿ, ದೊಡ್ಡ ಅಡಗಿಮನಿ, ಸಾರಿಸಿದ ಮಣ್ಣಿನ ಒಲಿ, ಧಾರವಾಡದ ಆ ವಾತಾವರಣವನ್ನ ಬಿಟ್ಟು ಬರಲಿಕ್ಕೆ ಅಮ್ಮ ತಯಾರಿಲ್ಲ.

ನಾಳೆ, ಅಂದ್ರ ಮೇ 9 ಮದರ್ಸ್ ಡೇ ಅಂತ. ಅಮ್ಮನ ಪ್ರೀತಿಯ ಗುಟುಕು ಎಲ್ಲಾರಿಗೂ ಸಿಗಲಿ.

Story first published: Sunday, June 19, 2011, 12:01 [IST]
X
Desktop Bottom Promotion