For Quick Alerts
ALLOW NOTIFICATIONS  
For Daily Alerts

ರೋಗಗಳ ಅಡಗುದಾಣ ಹೊಟ್ಟೆಗೆ ವಿಶ್ರಾಂತಿ

By * ಪಟಕೂಟ್ ಯಶೋಧರ, ಬೆಳಗಾವಿ
|
Fasting for healthy lifestyle
ನಮ್ಮ ನಾಡಿನಲ್ಲಿ ಬಾಲಕ, ಬಾಲಕಿಯರಿಂದ ಹಿಡಿದು ವೃದ್ಧಾತಿವೃದ್ಧರವರೆಗೆ ಅನೇಕರು ಅನೇಕ ಬಗೆಯ ಉಪವಾಸಗಳನ್ನು ಮಾಡುತ್ತಾರೆ. ತಿಂಗಳಿಗೆರಡು ಏಕಾದಶಿ ಬರುವುದರ ಹೊರತಾಗಿ ಗುರುವಾರದ ಉಪವಾಸ, ಶನಿವಾರದ ಉಪವಾಸ, ಶಿವರಾತ್ರಿಯ ಉಪವಾಸ, ರಂಜಾನ್ ಉಪವಾಸ, ಕೃಷ್ಣಜನ್ಮಾಷ್ಟಮಿಯ ಉಪವಾಸ, ಶ್ರಾದ್ಧದ ಉಪವಾಸ, ಒಳ್ಳೆ ಗಂಡ ಸಿಗಲೆಂದು ಉಪವಾಸ, ಮನಮೆಚ್ಚಿದ ಮಡದಿ ದೊರೆಯಲೆಂದು ಉಪವಾಸ ಇತ್ಯಾದಿ ಇತ್ಯಾದಿ ಇತ್ಯಾದಿ.

ಕೆಲವರು ಈ ಉಪವಾಸಗಳನ್ನು ಹೇಗೆ ಮಾಡುತ್ತಾರೆ ಅಂತೀರಾ? ಅನ್ನಾಹಾರ ತ್ಯಜಿಸು ಉಳಿದಿದ್ದೆಲ್ಲ ಇಳಿಸು. ಅಂದರೆ, ಬೆಳಿಗ್ಗೆ ಒಗ್ಗರಣೆ ಅವಲಕ್ಕಿ, ಮಧ್ಯಾಹ್ನಕ್ಕೆ ಫಲಾಹಾರ, ಸಾಯಂಕಾಲಕ್ಕೆ ತಟ್ಟೆ ತುಂಬ ಅವರೆಕಾಳು ಉಪ್ಪಿಟ್ಟಿನ ಜೊತೆಗೆ ಒಂದು ಚಂಬು ಬಾದಾಮಿ ಹಾಲು! ಪ್ರತಿದಿನ ಅನ್ನ ಹುಳಿ ಊಟ ಮಾಡಿ ಜಡ್ಡುಗಟ್ಟಿದ ನಾಲಿಗೆಗೆ ಒಂದು ದಿನ ವೈವಿಧ್ಯಮಯ ತಿಂಡಿಗಳನ್ನು ಸವಿಯುವ ಸುಯೋಗ. ಕೆಲ ಕಟ್ಟಾ ಪುರೋಹಿತರು, ಅರ್ಚಕರು ನಿಶ್ಚಕ್ರ ಉಪವಾಸ ಅಂತಲೂ ಮಾಡುತ್ತಾರೆ. ಒಂದು ತೊಟ್ಟು ತೀರ್ಥದ ಹೊರತಾಗಿ ಏನ್ನನ್ನೂ ಸೇವಿಸುವುದಿಲ್ಲ. ಅವರವರ ಮಾನಸಿಕ ಸ್ಥಿತಿಗೆ ತಕ್ಕಂತೆ ನಾನಾಬಗೆಯ ಉಪವಾಸ ಕೈಗೊಳ್ಳುತ್ತಾರೆ.

ಕೆಲವರಿಗೆ ಉಪವಾಸ ಅಂದರೆ ಜೀವ ಬಾಯಿಗೆ ಬಂದಿರುತ್ತದೆ. ಈರುಳ್ಳಿ ಹಾಕಿದ ಉಪ್ಪಿಟ್ಟು ತಿನ್ನೋದುಂಟಾ ಅಂತ ಸೆಟೆದುಕೊಂಡು ಹೋಗಿ ಕಾಕಾನ ಹೊಟೇಲಿನಲ್ಲಿ ಎರಡು ಮಸಾಲೆ ದೋಸೆ ಹೊಟ್ಟೆಗಿಳಿಸಿ ಮನೆಯವರ ಹೊಟ್ಟೆ ಉರಿಸಿದಾಗಲೇ ಅವರಿಗೆ ಸಮಾಧಾನ. ಜಿಹ್ವಾ ಚಾಪಲ್ಯ ಇದ್ದವರಿಗೆ ಉಪವಾಸದ ಮುಖಾಂತರ ಬಾಯಿ ಕಟ್ಟಿಹಾಕುವುದು ಸಾಧ್ಯವಿಲ್ಲ, ಸಾಧುವೂ ಅಲ್ಲ, ಅಂತೀರಾ?

ದೇಹದ ಯೋಗಕ್ಷೇಮದ ಬಗ್ಗೆ ಕಾಳಜಿ ಉಳ್ಳವರು ನಿಯಮಿತವಾಗಿ ಮತ್ತು ನಿಷ್ಠೆಯಿಂದ ಉಪವಾಸ ಮಾಡುವುದರಿಂದಾಗುವ ದೇಹದ ಆರೋಗ್ಯದ ಮೇಲಾಗುವ ಪರಿಣಾಮದತ್ತ ಒಂದು ನೋಟ ಹರಿಸಿದರೆ ಉತ್ತಮ. ಉಪವಾಸದಲ್ಲೂ ನಾನಾ ವಿಧಾನಗಳಿವೆ. ಅಲ್ಪಾಹಾರದ ಉಪವಾಸ, ನೀರಿನ ಉಪವಾಸ, ಜ್ಯೂಸ್ ಉಪವಾಸ. ಆರೋಗ್ಯ ತಜ್ಞರ ಅಣತಿಯಂತೆ ಉಪವಾಸ ವ್ರತವನ್ನು ಕೈಗೊಳ್ಳುವುದ ಶ್ರೇಯಸ್ಕರ. ನಾನು ತಿನ್ನುವ ಆಹಾರದ ಬಗ್ಗೆ ಒಂದು ಹಿಡಿತ ಇಟ್ಟುಕೊಳ್ಳುವುದು ಮತ್ತು ಆಹಾರ ಸೇವನೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳನ್ನು ದೂರವಿರಿಸಲು ಉಪವಾಸಗಳನ್ನು ಕೈಗೊಳ್ಳಬಹುದು.

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಎಲ್ಲರಿಗೂ ತಿಳಿದದ್ದೇ. ಎಲ್ಲ ದೈನಂದಿನ ಕೆಲಸಗಳ ನಂತರ ರಾತ್ರಿ ನಿದ್ರಿಸುವ ಹಾಗೆ ಜೀರ್ಣಕ್ರಿಯೆಗೂ ವಿಶ್ರಾಂತಿಯ ಅಗತ್ಯವಿದೆ. ತಿಳಿದಿರಲಿ, ಅನೇಕ ರೋಗಗಳಿಗೆ ಹೊಟ್ಟೆಯೇ ಅಡಗುದಾಣ. ವಿಪರೀತ ತಿನ್ನುವುದು, ದೇಹಕ್ಕೆ ಒಗ್ಗದ ಆಹಾರವನ್ನು ತಿನ್ನುವುದು, ಆಹಾರ ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದು ಅನೇಕ ರೋಗಗಳಿಗೆ ದಾರಿ ಮಾಡಿಕೊಡುತ್ತವೆ. ಜಠರದಲ್ಲಿರುವ ಜಾಗದ ಅರ್ಧಭಾಗ ಆಹಾರ, ಕಾಲು ಭಾಗ ನೀರು ಮತ್ತು ಕಾಲು ಭಾಗ ಗಾಳಿಗೆ ಮೀಸಲಿಡಬೇಕು ಅಂತಾರೆ ವೈದ್ಯರು. ಆದರೆ, ನಮಗೆ ಕಂಠದವರೆಗೂ ತಿಂದರೇನೆ ತೃಪ್ತಿ, ತಿನ್ನಿಸಿದವರಿಗೂ ತೃಪ್ತಿ.

ನೀವು ನಿಮ್ಮ ದೇಹ ಮತ್ತು ಆರೋಗ್ಯವನ್ನು ಪ್ರೀತಿಸುವಿರಾದರೆ ಆಹಾರ ಸೇವನೆ ಕ್ರಮದ ಬಗ್ಗೆ ಮತ್ತು ಉಪವಾಸದ ಬಗ್ಗೆ ಚಿಂತಿಸುವುದು ಒಳಿತು. ಆಯ್ಯೋ, ವಾಕ್ ಮಾಡಿದರಾಯಿತು, ಗ್ಯಾಸ್ ಟ್ರಬಲ್ ಶುರುವಾದರೆ ಜೆಲ್ಯುಸಿಲ್ ಸಿರಪ್ ಕುಡಿದರಾಯಿತು ಅಂತ ವಾದಿಸುವವರು ಮತ್ತೊಮ್ಮೆ ಚಿಂತಿಸಲಿ.

Story first published: Friday, March 26, 2010, 18:18 [IST]
X
Desktop Bottom Promotion