For Quick Alerts
ALLOW NOTIFICATIONS  
For Daily Alerts

ಬಜೆಟ್ ಬೆಳೆ ಜೊತೆ ಸೋಯ ಅವರೆ ಬೆಳೆಸಿ

By * ಮನಸ್ವಿನಿ, ನಾರಾವಿ
|
Soya bean
ಕರ್ನಾಟಕದಲ್ಲಿ ಇಂದು ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ಯಡಿಯೂರಪ್ಪ ಅವರು ಇತಿಹಾಸ ನಿರ್ಮಿಸಿದ್ದಾರೆ. ಹೆಚ್ಚುವರಿ ಬೀಜೋತ್ಪಾದನೆಗೆ 5 ಕೋಟಿ, ತೋಟಗಾರಿಕೆಗೆ ಒಂದಷ್ಟು ಅನುದಾನ ಬಿಟ್ಟರೆ ಹೊಸ ತಳಿ ಅಭಿವೃದ್ಧಿಗೆ ಪ್ರೋತ್ಸಾಹದಾಯಕ ಅಂಶಗಳು ಕಂಡು ಬಂದಿಲ್ಲ.

ಈ ಸಂದರ್ಭದಲ್ಲಿ ಕನ್ನಡ ನಾಡಿನ ರೈತರು ಅದರಲ್ಲೂ ಸಾಂಪ್ರದಾಯಿಕ ಬೇಸಾಯ ಪದ್ಧತಿ ಬಳಕೆ ಮಾಡುವವರಿಗೆ ಅತ್ಯಂತ ಪುರಾತನವಾದ ಬೆಳೆಯನ್ನು ಪರಿಚಯಿಸುವ ಮೂಲಕ ರೈತರಿಗೆ ಈ ವರ್ಷ ಇನ್ನಷ್ಟು ಆಶಾದಾಯಕವಾಗಿರಲಿ. ಈ ಬೆಳೆಯ ಬಗ್ಗೆ ತಿಳಿದ ಕೃಷಿಕರು ಲೇಖನವನ್ನು ಇನ್ನಷ್ಟು ವಿಸ್ತರಿಸಬಹುದು.

ಸೋಯಾ ಅವರೆ ಇದು ಒಂದು ವಾರ್ಷಿಕ ಸಸ್ಯ. ಇದು ಉಷ್ಣ ಮತ್ತು ಉಪೋಷ್ಣ ವಲಯದ ಬೆಳೆ. ಸೋಯ ಅವರೆಯನ್ನು ಕಪ್ಪು ತೊಗರಿ ಎಂದು ಕರೆಯುತ್ತಾರೆ. ಸೋಯ ಅವರೆ ಮತ್ತೊಂದು ಮುಖ್ಯವಾದ ದ್ವಿದಳ ಧಾನ್ಯ ಬೆಳೆ. ಇದನ್ನು ಎಣ್ಣೆ ಕಾಳಿನ ಬೆಳೆಯೆಂದು ಕರೆಯಬಹುದು. ಇದರ ಬಗ್ಗೆ ಸಾಮಾನ್ಯ ಜನತೆಗೆ, ರೈತರಿಗೆ ಹೆಚ್ಚು ತಿಳಿಯದು.

ಸಾಂಪ್ರದಾಯಿಕ ರೈತರು ಇದನ್ನು ಬೇಸಾಯ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಇಳುವರಿ ಕೂಡ ಬೇರೆ ತಳಿಗಳಿಗಿಂತ ಹೆಚ್ಚು. ಸೋಯ ಹಿಂಡಿ ರಫ್ತು ಮಾಡುವ ದೇಶಗಳಲ್ಲಿ ಭಾರತವು ಪ್ರಥಮ ಸ್ಥಾನ ಪಡೆದಿದೆ. ಇಂದೂರ್‌ನಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ರಾಷ್ಟ್ರೀಯ ಸೋಯ ಅವರೆ ಸಂಶೋಧನಾ ಸಂಸ್ಥೆ ಇದ್ದು, ಆಸಕ್ತರು ಉಪಯೋಗ ಪಡೆಯಬಹುದು.

ಸೋಯ ಮೂಲ: ಸೋಯ ಅವರೆಯ ಮೂಲ ಸ್ಥಾನ ಚೀನಾ ದೇಶ ಎಂದು ಗುರುತಿಸಲಾಗಿದೆ. ಮೂಲ ಸ್ಥಾನ ಏಷಿಯಾ ಖಂಡದಲ್ಲಿ ಇದ್ದರೂ ಕೂಡ ಈ ಬೆಳೆಯು ಅಭಿವೃದ್ಧಿಯಾದುದು ಅಮೇರಿಕಾದಲ್ಲಿ. ಸೋಯಾ ಅವರೆ ಮಧ್ಯಮ ಆಳದ ಕಪ್ಪು ಮಣ್ಣಿನಲ್ಲಿ ಬಹಳ ಚೆನ್ನಾಗಿ ಬರುತ್ತದೆ. ಸೋಯ ಅವರೆಯನ್ನು ಎಲ್ಲಾ ಬಗೆಯ ಮಣ್ಣುಗಳಲ್ಲಿಯೂ ಬೆಳೆಯಬಹುದು. ಇದು ಅತಿ ಕಡಿಮೆ ಅಥವಾ ಹೆಚ್ಚು ಉಷ್ಣಾಂಶ ಹಾಗೂ ಒಣ ಹವೆ ಬೆಳವಣಿಗೆಗೆ ಸೂಕ್ತವಲ್ಲ.

ಸೋಯ ಬೆಳೆಯುವುದು ಹೇಗೆ?: ಹೆಚ್ಚು ಬೀಳುವ ಆರ್ದ್ರತೆಯಿಂದ ಕೂಡಿದ ತಂಪಾದ ವಾತಾವರಣವಿರುವ ಪ್ರದೇಶಗಳು ಹೆಚ್ಚು ಸೂಕ್ತವಾಗಿವೆ. ಬಿತ್ತನೆಗೆ 15-20 ದಿವಸಗಳ ಪೂರ್ವದಲ್ಲೇ ಎಕರೆಗೆ 5 ಟನ್ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಹಾಕಿ ಭೂಮಿಯಲ್ಲಿ ಸೇರಿಸಬೇಕು.

ಸೋಯ ಅವರೆ ಮುಂಗಾರು ಬೆಳೆಯಾಗಿದೆ. ಮುಂಗಾರು ಹಂಗಾಮು ಪ್ರಾರಂಭವಾದ ಕೂಡಲೇ ಬಿತ್ತುವುದು ಅತ್ಯಂತ ಸೂಕ್ತವಾದ ಸಮಯ. ತಡ ಮಾಡಿ ಬಿತ್ತನೆ ಮಾಡುವುದರಿಂದ ಗಿಡದ ಬೆಳವಣಿಗೆ ಕುಂಠಿತ ಆಗುತ್ತದೆ. ಬೀಜಗಳನ್ನು ಬಿತ್ತುವ ಮುಂಚೆ ಭೂಮಿ ಸಾಕಷ್ಟು ತೇವಾಂಶದಿಂದ ಕೂಡಿರಬೇಕು. ಬೀಜ ಬಿತ್ತುವ ಕೂರಿಗೆಯಿಂದ ಬಿತ್ತಲು ಶಿಫಾರಸ್ಸು ಮಾಡಲಾಗಿದೆ.

ಬೀಜಗಳನ್ನು 3-5 ಸೆಂ.ಮೀ. ಆಳದಲ್ಲಿ ಬಿತ್ತಿದರೆ ಸಾಕು. ಬಿತ್ತನೆಗೆ ಸ್ವಲ್ಪ ಮುಂಚೆ ಬೀಜಗಳಿಗೆ ರೈಜೋಬಿಯಂ ಅಣು ಗೊಬ್ಬರವನ್ನು ಲೇಪನ ಸೋಯ ಅವರೆ (ಕಪ್ಪು ತೊಗರಿ) ಮಾಡಬೇಕು. ಬೆಳೆಯ 20-40 ದಿವಸಗಳ ನಂತರ ಸಾಲುಗಳ ಅಂತರ ನೋಡಿ ಚಿಕ್ಕ ಕುಂಟೆಗಳಿಂದ ಎರಡು ಬಾರಿ ಮಧ್ಯಂತರ ಸಾಗುವಳಿಯನ್ನು ಮಾಡಬೇಕು. ಇದರಿಂದ ಕಳೆಗಳಿಲ್ಲದೆ ಬೆಳೆ ಚೆನ್ನಾಗಿ ಬರಲು ಸಹಕಾರಿಯಾಗುತ್ತದೆ. ನೀರು ಹೆಚ್ಚು ಇಲ್ಲದಂತೆ ನೋಡಿಕೊಳ್ಳಬೇಕು.

ಬೆಳೆಯ ಮೊದಲಿನ 30 ದಿವಸಗಳು ಬೆಳೆ-ಕಳೆ ನಡುವೆ ಸ್ಪರ್ಧೆ ಕಾಲವಾಗಿರುವುದರಿಂದ ಯಾವ ಕಳೆಯೂ ಇಲ್ಲದಂತೆ ನೋಡಿಕೊಳ್ಳಬೇಕು. ಕಾಲಕ್ಕೆ ಸರಿಯಾಗಿ ಬೆಳೆಗೆ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಎಲ್ಲಾ ಮೂರು ಮುಖ್ಯ ಪೋಷಕಾಂಶಗಳನ್ನು ಒದಗಿಸಬೇಕು. ಸೋಯ ಅವರೆಯನ್ನು ವಿವಿಧ ಬೆಳೆಗಳ ಜೊತೆ ಅಂತರ ಬೆಳೆಯಾಗಿ ಬೆಳೆಯಬಹುದು. ಬಲಿತಿರುವ ಸೋಯಾ ಅವರೆ ಕಾಯಿಯನ್ನು ಸರಿಯಾದ ಸಮಯದಲ್ಲಿ ಕೊಯ್ಲು ಮಾಡಬೇಕು. ಬಹಳ ದಿನಗಳ ಕಾಲ ಕೊಯ್ಲು ಮಾಡದೇ ಇದ್ದಲ್ಲಿ ಕಾಳು ಉದುರುತ್ತದೆ.

ಇದು ಪೌಷ್ಠಿಕ ಬೆಳೆ. ಇದರಲ್ಲಿ ಇತರೆ ಎಲ್ಲಾ ದ್ವಿದಳ ಧಾನ್ಯಗಳಿಗಿಂತ ಸುಮಾರು 2 ರಷ್ಟು ಹೆಚ್ಚು ಸಸಾರಜನಕ, ಮೂರರಷ್ಟು ಅಧಿಕ ಕೊಬ್ಬು ಮತ್ತು ಕಡಿಮೆ ಶರ್ಕರ ಪಿಷ್ಟಾದಿಗಳಿರುತ್ತವೆ.

100 ಗ್ರಾಂ ಸೋಯ ಅವರೆಯಲ್ಲಿ
* 8.1 ಗ್ರಾಂ ನೀರಿನಂಶ,
* 43.2 ಗ್ರಾಂ ಸಸಾರಜನಕ,
* 19.5 ಗ್ರಾಂ ಕೊಬ್ಬಿನಂಶ
* 4.6 ಗ್ರಾಂ ಖನಿಜಾಂಶ
* 3.7 ಗ್ರಾಂ ನಾರಿನಂಶ
* 432 ಕಿ. ಕ್ಯಾಲೋರಿ ಶಕ್ತಿ
* 240 ಮಿ. ಗ್ರಾಂ ಕ್ಯಾಲ್ಷಿಯಂ,
* 690 ಮಿ.ಗ್ರಾಂ ಪಾಸ್ಫರಸ್,
* 10.4 ಮಿ.ಗ್ರಾಂ ಕಬ್ಬಿಣಾಂಶ
* 429 ಮೀ ಗ್ರಾಂ ಜೀವ ಸತ್ವ .ಎ.,
* 100 ಮೀ. ಗ್ರಾಂ. ಜೀವ ಸತ್ವ .ಬಿ

ಉಪಯೋಗಗಳು :
* ಇದನ್ನು ಸಸಾರಜನಕಯುಕ್ತ ಸೋಯ ಹಾಲಿಗಾಗಿ ಬಳಕೆ ಮಾಡಲಾಗುತ್ತದೆ.
* ಶೇಂಗಾ, ಸಾಸಿವೆ ನಂತರ ಇದೊಂದು ಪ್ರಮುಖ ಎಣ್ಣೆ ಕಾಳು ಬೆಳೆಯಾಗಿದೆ. ಇದರಲ್ಲಿ ಅಧಿಕ ಎಣ್ಣೆಯ ಅಂಶ
ಲಭ್ಯವಾಗುತ್ತದೆ.
* ಸೋಯಾ ಹಾಲು, ಟೊಫು, ಸೋಯಾ ಸಾಸ್, ಪೇಸ್ಟ್ ಮುಂತಾದ ಉಪಯುಕ್ತ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
* ಸೋಪು, ಸುಗಂಧ ವರ್ಧಕಗಳು, ಪ್ಲಾಸ್ಟಿಕ್, ಇಂಕ್, ಕ್ರೇಯಾನ್ಸ್, ವೋಡ್ಕಾ ಅಲ್ಲದೆ ಜೈವಿಕ ಇಂಧನವಾಗಿ ಕೂಡಾ ಸೋಯಾ ಅವರೆ ಹಲವೆಡೆ ಬಳಕೆಯಲ್ಲಿದೆ. ಆದರೆ, ನಮ್ಮಲ್ಲೂ ಬಹುಪಯೋಗಿ ಸೋಯಾ ಅವರೆ ಬೆಳೆ ಹೆಚ್ಚಳವಾಗಬೇಕಿದೆ.

English summary

Soya Bean Health Benefits | Soya Cultivation | Karnataka Budget Farmers | ಸೋಯಾ ಅವರೆ ಆರೋಗ್ಯ ಉಪಯೋಗಗಳು| ಸೋಯಾ ಬೀನ್ಸ್ ಕೃಷಿ| ಕರ್ನಾಟಕ ಬಜೆಟ್ ರೈತರು |

The soya bean is a species of legume native to East Asia. Soya are high in calcium, low in saturated fats and cholesterol free. Soya beans are ground into flour and used form a variety of foods. Karnataka Agriculture Budget 2011 has offered many schemes to traditional cultivators.
X
Desktop Bottom Promotion