For Quick Alerts
ALLOW NOTIFICATIONS  
For Daily Alerts

ಎಳ್ಳು ಬೆಲ್ಲ ಮಾಡುವುದು ಹೀಗೆ

|
Ellu bella
ದಟ್ಸ್ ಕನ್ನಡ ಓದುಗ ಗೆಳೆಯ ಗೆಳತಿಯರಿಗೆಲ್ಲ ಸಂಕ್ರಾಂತಿ ಶುಭಾಶಯಗಳು. ನಮ್ಮ ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು". ಮನೆಯಲ್ಲಿ ಎಳ್ಳನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳು ಬೀರುವುದು" ಮತ್ತು ಸ್ನೇಹಿತರು, ಸಂಬಂಧಿಕರು, ಸಹೋದ್ಯೋಗಿಗಳಿಗೆ ಕೊಟ್ಟು ಶುಭಾಶಯಗಳನ್ನು ಹಂಚಿಕೊಳ್ಳುವುದೇ ಸಂಕ್ರಾಂತಿಯ ಸಂಸ್ಕೃತಿ.

ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು, ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಮತ್ತು ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು" ತಯಾರಿಸಲಾಗುತ್ತದೆ.

ನೀವೂ ಎಳ್ಳು ತಯಾರಿಸಿ:

* ಬಿಳಿ ಎಳ್ಳು ಒಂದು ಕಪ್
* ಬೆಲ್ಲ ಒಂದು ಕಪ್
* ಒಣ ಕೊಬ್ಬರಿ ಒಂದು ಕಪ್
* ಕಡಲೇಕಾಯಿ ಬೀಜ ಒಂದು ಕಪ್
* ಹುರಿಗಡಲೆ ಒಂದು ಕಪ್

ಮಾಡುವ ವಿಧಾನ :

ಮೊದಲಿಗೆ ಬೆಲ್ಲ ಮತ್ತು ಒಣ ಕೊಬ್ಬರಿಯನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ. ಹಾಗು ಕಡಲೇಕಾಯಿ ಬೀಜವನ್ನು ಹುರಿದು ಸಿಪ್ಪೆ ತೆಗೆಯಿರಿ. ನಂತರ ಬಿಳಿ ಎಳ್ಳನ್ನು ಹದವಾಗಿ ಹುರಿದಿಟ್ಟುಕೊಳ್ಳಿ. ತಣ್ಣಗಾದ ಮೇಲೆ ಎಳ್ಳು, ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಮತ್ತು ಹುರಿಗಡಲೆಯನ್ನು ಹಾಕಿ ಮಿಕ್ಸ್ ಮಾಡಿ. ಅಲಂಕಾರಕ್ಕಾಗಿ ಡೈಮಂಡ್ ಸಕ್ಕರೆ, ಬಣ್ಣದ ಕುಸುರಿಗಳು ಹಾಗು ಜೀರಿಗೆ ಪೆಪ್ಪರಮೆಂಟ್ ಹಾಕಿ ಮಿಕ್ಸ್ ಮಾಡಿದರೆ "ಸಂಕ್ರಾಂತಿಯ ಎಳ್ಳು" ರೆಡಿ.

ಮತ್ತೊಮ್ಮೆ "ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು " ಎಳ್ಳುಬೆಲ್ಲ ತಿಂದು ಒಳ್ಳೆ ಮಾತನಾಡೋಣ.

Story first published: Wednesday, January 13, 2010, 14:12 [IST]
X
Desktop Bottom Promotion