For Quick Alerts
ALLOW NOTIFICATIONS  
For Daily Alerts

ಇವರೆ, ಇಲ್ಲಿ ಬಂದಿದೆ ನೋಡಿ ಅವರೆ ಮೇಳ

By Staff
|
Avarekayi fair in Bengaluru
ಜ. 7ರಿಂದ 17ರವರೆಗೆ ಬೆಂಗಳೂರಿನಲ್ಲಿ ಅವರೆಮೇಳ ನಡೆಯಲಿದೆ. ವಿಶ್ವೇಶ್ವರಪುರದ ಸಜ್ಜನರಾವ್ ವೃತ್ತದಲ್ಲಿ ವಾಸವಿ ಕಾಂಡಿಮೆಂಟ್ಸ್ ಅವರೆಬೇಳೆ ಮೇಳವನ್ನು ಆಯೋಜಿಸಿದೆ.

ಪ್ರತಿವರ್ಷ ಕಾರ್ತೀಕ ಮಾಸದ ಕೊನೆಯ ಸೋಮವಾರ ಬೆಂಗಳೂರಿನ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿ ನಡೆಯುವ ಎರಡು ದಿನಗಳ ಕಡಲೆಕಾಯಿ ಪರಿಷೆಯ ಆಕರ್ಷಣೆ ಒಂದು ರೀತಿಯದಾದರೆ ಮರುವರ್ಷ ಮಕರ ಸಂಕ್ರಾಂತಿಗೂ ಮೊದಲು ವಿಶ್ವೇಶ್ವರಪುರದ ಸಜ್ಜನ್ ರಾವ್ ವೃತ್ತದಲ್ಲಿ ನಡೆಯುವ ಅವರೆಕಾಳು ಮೇಳದ ಗಮ್ಮತ್ತೇ ಬೇರೆ.

ಹೇಮಂತ ಇನ್ನೇನು ಹಾಸಿಗೆಯಿಂದೆದ್ದು ಶಿಶಿರನಿಗೆ ಜಾಗ ಮಾಡಿಕೊಡುವ ಸಂಧಿಕಾಲದಲ್ಲಿ ಬರುವ ಅವರೆಕಾಳು ಮೇಳ ತನ್ನದೇ ಆದ ವೈಶಿಷ್ಯ ಹೊಂದಿದೆ. ಪ್ರದರ್ಶನದ ಜೊತೆ ಬಗೆಬಗೆಯ ತಿಂಡಿಗಳನ್ನು ಕೂಡ ಸ್ಥಳದಲ್ಲಿಯೇ ಮಾಡಿಕೊಡಲಾಗುತ್ತದೆ. ಮಾಗಡಿಯಲ್ಲಿ ಹೆಚ್ಚಾಗಿ ಬೆಳೆಯಲಾಗುವ ವಿವಿಧಬಗೆಯ ಅವರೆಕಾಳುಗಳನ್ನು ಮೂಟೆಯಲ್ಲಿ ತುಂಬಿ ರೈತರು ಜನರ ಮುಂದಿಡಲಿದ್ದಾರೆ. ವಾಸವಿ ಕಾಂಡಿಮೆಂಟ್ಸ್ ವತಿಯಿಂದ ನಡೆಸಲಾಗುತ್ತಿರುವ ಮೇಳ ಜನೆವರಿ 7ರಿಂದ 17ರವರೆಗೆ ಬೆಳಿಗ್ಗೆ 11ರಿಂದ ರಾತ್ರಿ 10ರವರೆಗೆ ನಡೆಯಲಿದೆ.

ಕಾರ್ಮಿಕ ಸಚಿವ ಬಿಎನ್ ಬಚ್ಚೇಗೌಡ ಅವರು ಮೇಳದ ರಿಬ್ಬನ್ನ ಕಟ್ ಮಾಡಲಿದ್ದಾರೆ. ಖ್ಯಾತ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್, ಮಾಜಿ ಸಂಸದ ಅಂಬರೀಷ್, ಅವರ ಪತ್ನಿ ಸುಮಲತಾ, ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಅವರು ಮೇಳ ಉದ್ಘಾಟನೆ ಸಂದರ್ಭದಲ್ಲಿ ಹಾಜರಿದ್ದು ಮೇಳದ ಮೆರುಗು ಹೆಚ್ಚಿಸಲಿದ್ದಾರೆ.

ಇವರೆ, ಇಲ್ಲಿವೆ ನೋಡಿ ವಿಧದ ಅವರೆ ತಿಂಡಿ : ಅವರೆಕಾಳುಗಳಿಂದ ಇಷ್ಟೊಂದು ಬಗೆಯ ತಿಂಡಿ ತಿನಿಸುಗಳನ್ನು ಮಾಡಬಹುದಾ ಎಂದು ಮೂಗಿನ ಮೇಲೆ ಬೆರಳಿಡುವಷ್ಟು ಬಗೆಯ ತಿಂಡಿಗಳನ್ನು ತಯಾರಿಸಬಹುದು. ಅವರೆಕಾಳು ನಿಪ್ಪಟ್ಟು, ಅವರೆಕಾಳಿನ ಕೋಡುಬಳೆ, ಅವರೆಕಾಳು ಉಸಲಿ, ಅವರೆಕಾಳು ಹುಳಿ, ಅವರೆಕಾಳು ಬಸ್ಸಾರು, ಇದುಕಿದ ಅವರೆಬೇಳೆ ಸಾರು, ಅವರೆಕಾಳು ಮಸಾಲೆವಡೆ, ಅವರೆಕಾಳು ಉಪ್ಪಿಟ್ಟು.... ಮತ್ತೆ ಉಪ್ಪಿಟ್ಟಾ? ಅಂತ ಮುಖ ಸೊಟ್ಟಗೆ ಮಾಡಬೇಡಿ. ಸರಿಯಾದ ವಿಧಾನದಲ್ಲಿ ತಯಾರಿಸಿದರೆ ಅವರೆಕಾಳು ಉಪ್ಪಿಟ್ಟಿನ ಮುಂದೆ ಇತರ ಬಗೆಯ ತಿಂಡಿಗಳನ್ನು ನಿವಾಳಿಸಿ ಎಸೆಯಬೇಕು, ಹಾಗಿರುತ್ತದೆ.

ಇವಿಷ್ಟೇ ಅಲ್ಲ, ಅವರೆಬೇಳೆಯಿಂದ ಬನ್, ಪಫ್ಸ್, ಹೋಳಿಗೆ, ಪಾಯಸ, ಚಿತ್ರಾನ್ನ... ಅಷ್ಟೇ ಏಕೆ ಅವರೆಕಾಳು ಜಾಮಾನನ್ನೂ ತಯಾರಿಸಬಹುದು ಎನ್ನುತ್ತಾರೆ ಆಯೋಜಕರು. ಬಲ್ಲವರು ಅಥವಾ ಮಾಡಿದವರು ಈ ತಿನಿಸುಗಳನ್ನು ಹೇಗೆ ತಯಾರಿಸುತ್ತಾರೆಂದು ದಟ್ಸ್ ಕನ್ನಡಕ್ಕೂ ತಿಳಿಸಿದರೆ ಜಾಗತಿಕ ಕನ್ನಡಿಗರಿಗೂ ತಿಳಿಸಿದ ಉಪಕಾರವಾಗುತ್ತದೆ.

ಕೊನೆ ಮಾತು : ಅವರೆ ಖಾದ್ಯಗಳು ರುಚಿಕರವಷ್ಟೇ ಅಲ್ಲ ಪೌಷ್ಟಿಕ ಕೂಡ. ಇವಕ್ಕೆ ಮಾಗಿಯ ಚಳಿಯನ್ನು ಒದ್ದೋಡಿಸುವ ತಾಕತ್ತೂ ಇದೆ. ಅವರೆ ಸುಗ್ಗಿ ಬಂದಿದೆ ಅಂತ ಹಿಗ್ಗಾಮುಗ್ಗಾ ಏರಿಸಿದರೆ ನಿಬ್ಬೆರಗಾಗುವಷ್ಟು ಹೊಟ್ಟೆ ಉಬ್ಬರವಾದೀತು ಹುಷಾರ್!

Story first published: Tuesday, January 5, 2010, 17:02 [IST]
X
Desktop Bottom Promotion