For Quick Alerts
ALLOW NOTIFICATIONS  
For Daily Alerts

ಪ್ರೋಟೀನು ಜಾಸ್ತಿಯಿರುವ ಕಡಲೆಬೀಜದ ಖಾರಾ ಚಟ್ನಿ

|
Groundnut and Red Chilliles
ಕಾರ್ತೀಕ ಮಾಸ ಕೊನೆಯ ಸೋಮವಾರ, ಅಂದರೆ ಇಂದು ಬಸವನಗುಡಿಯಲ್ಲಿ ಸಂಭ್ರಮದ ಕಡಲೆಕಾಯಿ ಪರಿಷೆ. ಮದುವೆಯಾಗಿದ್ದರೆ ಹೆಂಡತಿ ಮಕ್ಕಳೊಂದಿಗೆ, ಮದುವೆಯಾಗಿರದಿದ್ದರೆ ಸ್ನೇಹಿತರೊಂದಿಗೆ ಪರಿಷೆಗೆ ಹೋಗಿ ಶೇರುಗಟ್ಟಲೆ ಕಡಲೆಕಾಯಿ ಅಥವಾ ಶೇಂಗಾ ಕೊಂಡು ಮಸ್ತ್ ಮಜಾ ಉಡಾಯಿಸುವ ಸುಸಂಧಿ. ಮಕ್ಕಳಿಗೆ ಬಲೂನು, ಹೆಂಡತಿಗೆ ನಾಲ್ಕು ಶೇರು ಕಡಲೆಕಾಯಿ ಕೊಡಿಸಿದರೆ ನಿಮ್ಮ ಜವಾಬ್ದಾರಿ ಅಲ್ಲಿಗೆ ಮುಗಿಯಿತು. ಹೆಂಡತಿ ನಿಮಗಾಗಿ ಕಡಲೆಬೀಜದ ಖಾರಾ ಚಟ್ನಿ ಮರುದಿನ ತಯಾರಿಸಿರುತ್ತಾಳೆ. ಇಲ್ಲಿದೆ ನೋಡಿ ಪ್ರೋಟೀನು ಜಾಸ್ತಿಯಿರುವ ಬಡವರ ಬಾದಾಮಿಯಿಂದ ತಯಾರಿಸಿರುವ ಖಾರ ಚಟ್ನಿ.

* ಶಾಂತಲಾ, ವಿವಿ ಪುರಂ

ಪದಾರ್ಥಪಟ್ಟಿ : ಒಳ್ಳೆ ಜಾತಿ ಕಡಲೆ ಬೀಜ 1 ಕಪ್. ಕೆಂಪು ಮೆಣಸಿನಕಾಯಿ 8-10, ಬೆಳ್ಳುಳ್ಳಿ ಎರಡು ಎಸಳು. ನಿಂಬೆ ರಸ ಅಥವಾ ಹುಣಿಸೆಹಣ್ಣಿನ ರಸ ನಾಲಕ್ಕು ಚಮಚ. ರುಚಿಗೆ ಹೊಂದುವಷ್ಟು ಉಪ್ಪು.

ವಿಧಾನ : ಕಡಲೆಕಾಯಿ ಬೀಜವನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಬೀಜ ಸ್ಪಲ್ಪ ಮಟ್ಟಿಗೆ ಕೆಂಪಾಗುವ ರೀತಿಯಲ್ಲಿ ಹುರಿದಿರಬೇಕು. ಹುರಿದ ನಂತರ ಬೀಜವನ್ನು ಹಗುರವಾಗಿ ಹಿಚುಕಿದರೆ ಸಿಪ್ಪೆ ಬಿಟ್ಟುಕೊಳ್ಳುತ್ತದೆ. ಮನೆಯಲ್ಲಿ ಮರ ಇದ್ದರೆ ಕೇರಿ ಸಿಪ್ಪೆಯನ್ನು ತೆಗೆಯಿರಿ. ಮರ ಇಲ್ಲದಿದ್ದರೆ ತಟ್ಟೆ ಅಥವಾ ಸ್ಟೀಲ್ ಮರದಲ್ಲಿ ಬೀಜವನ್ನು ಕೇರಿ ಉಫ್ ಎಂದು ಊದಿ ಎಳ್ಳು ಬೆಲ್ಲಕ್ಕೆ ಮಾಡಿಕೊಂಡಂತೆ ಬೀಜ ಸಿದ್ಧಪಡಿಸಿಟ್ಟುಕೊಳ್ಳಿರಿ.

ಕೆಂಪುಮೆಣಸಿನಕಾಯಿಯನ್ನು ಇದೇ ರೀತಿ ಚೂರೇಚೂರು ಎಣ್ಣೆಯಲ್ಲಿ ಗರಿಗರಿಯಾಗುವತನಕ ಹುರಿಯಬೇಕು. ಆನಂತರ ಹುರಿದ ಬೀಜ, ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಮಿಕ್ಸಿಗೆ ಹಾಕಿ ರುಬ್ಬಿರಿ. ತೀರ ನುಣ್ಣಗಾಗಬಾರದು, ತೀರಾ ತರಿತರಿ ಇರಬಾರದು. ರುಬ್ಬುವಾಗಲೇ ಉಪ್ಪು ಹಾಕಿದರೆ ಚೆನ್ನಾಗಿ ಕೂಡಿಕೊಳ್ಳುತ್ತದೆ.

ಇದಕ್ಕೆ ನಿಂಬೆ ರಸ ಅಥವಾ ಹುಣಿಸೆರಸ ಬೆರಸಿ, ಸಾಸಿವೆ ಮತ್ತು ಕರಿಬೇವು ಒಗ್ಗರಣೆ ಸಿಂಪಡಿಸಿರಿ. ಚಪಾತಿ ಜತೆಗೆ ಚೆನ್ನಾಗಿರುತ್ತದೆ. ಅರ್ಜೆಂಟ್ ಅರ್ಜೆಂಟಾಗಿ ಕೆಲಸಕ್ಕೆ ಧಾವಿಸುವವರು ಚಪಾತಿ, ಕಡಲೆಬೀಜದ ಚಟ್ನಿಯ ರೋಲ್ ಮಾಡಿಕೊಂಡು ಹೋದರೆ ಕಾರಿನಲ್ಲಿ ಅಥವಾ ಆಟೋದಲ್ಲಿ ತಿಂದುಕೊಂಡು ಕೆಲಸಕ್ಕೆ ಹೋಗಬಹುದು.

Story first published: Monday, November 16, 2009, 15:19 [IST]
X
Desktop Bottom Promotion