For Quick Alerts
ALLOW NOTIFICATIONS  
For Daily Alerts

ರುಚಿರುಚಿಯಾದ ಶುಂಠಿ-ಕಾಯಿ ಚಟ್ನಿ: ಹತ್ತೇ ನಿಮಿಷದಲ್ಲಿ ರೆಡಿ!

|

ನೀವು ಅತಿ ಅಕ್ಕರೆಯಿಂದ ತಯಾರಿಸಿದ ರುಚಿಕರ ಇಡ್ಲಿಯನ್ನು ಮನೆಯವರು ಪೂರ್ತಿಯಾಗಿ ಖಾಲಿ ಮಾಡಿಲ್ಲವೇ? ಕೆಲವಾರು ಉಳಿದೇ ಹೋದವೇ? ಇದಕ್ಕೆ ಇಡ್ಲಿ ಕಾರಣವಾಗಿರಲಿಕ್ಕಿಲ್ಲ, ಬದಲಿಗೆ ಅದೇ ಹಳೆಯ ರುಚಿಯ ಚಟ್ನಿ ಕಾರಣವಾಗಿರಬಹುದು. ಒಂದೇ ರೀತಿಯ, ಅದೇ ರುಚಿಯ ಚಟ್ನಿಯನ್ನು ತಿಂದೂ ತಿಂದೂ ನಾಲಿಗೆ ಜಡ್ಡುಗಟ್ಟಿದ್ದು ನಿಮ್ಮೆದುರಿಗೆ ಏನೂ ಅನ್ನಲಾಗದೇ ನಾಮಕಾವಾಸ್ತೆ ಕೆಲವು ಇಡ್ಲಿ ತಿಂದು ಹೊರಡುತ್ತಿರಬಹುದು.

ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ನಿಮಗೆ ಅಗತ್ಯವಿರುವುದು ಕೇವಲ ಹತ್ತು ನಿಮಿಷ ಮತ್ತು ಸ್ವಲ್ಪ ಶುಂಠಿ ಮಾತ್ರ. ಜೀರ್ಣಶಕ್ತಿಯನ್ನು ಹೆಚ್ಚಿಸುವ ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶುಂಠಿಯನ್ನು ಅರೆದು ಚಟ್ನಿಯ ರೂಪದಲ್ಲಿ ಸೇವಿಸುವಾಗ ಪ್ರಮಾಣ ಕಡಿಮೆ ಇರುವುದು ಅಗತ್ಯ. ಏಕೆಂದರೆ ಹಸಿಶುಂಠಿ ಕೊಂಚ ಖಾರ ಮತ್ತು ತೀಕ್ಷ್ಣವಾದ ಗುಣ ಹೊಂದಿದ್ದು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ರುಚಿಯೂ ಕೆಡುತ್ತದೆ ಹಾಗೂ ಹೊಟ್ಟೆಯಲ್ಲಿ ಉರಿ ತರಿಸಬಹುದು.

10 Minute : Ginger Coconut Chutney

ಆದರೆ ಸೂಕ್ತ ಪ್ರಮಾಣದಲ್ಲಿರುವ ಶುಂಠಿಯನ್ನು ಕಾಯಿತುರಿಯೊಂದಿಗೆ ಅರೆದು ಚಟ್ನಿ ಮಾಡಿ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮಗೊಳ್ಳುವ ಜೊತೆ ಬಾಯಿಯ ದುರ್ವಾಸನೆಯಿಂದಲೂ ಮುಕ್ತಿ ದೊರಕುತ್ತದೆ. ಇದುವರೆಗೆ ಉಳಿಯುತ್ತಿದ್ದ ಇಡ್ಲಿ ಹೇಳ ಹೆಸರಿಲ್ಲದಂತೆ ಮಾಯವಾಗಿರುತ್ತದೆ. ಬನ್ನಿ ಇಂತಹ ರುಚಿಕರವಾದ ಚಟ್ನಿಯನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.. ಊಟದ ರುಚಿ ಹೆಚ್ಚಿಸುವ ಬೆಳ್ಳುಳ್ಳಿ ಚಟ್ನಿ

*ಪ್ರಮಾಣ: ಆರು ಜನರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು (ಚಟ್ನಿಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಸಿದ್ದಪಡಿಸಿ ಫ್ರಿಜ್ಜಿನಲ್ಲಿ ಶೇಖರಿಸಿಡಬಹುದು)
*ತಯಾರಿಕಾ ಸಮಯ: ಹತ್ತರಿಂದ ಹನ್ನೆರಡು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು
*ತೆಂಗಿನಕಾಯಿತುರಿ: ಒಂದು ಕಪ್
*ಶುಂಠಿ: ಒಂದು ಇಂಚಿನ ಎರಡು ತುಂಡುಗಳು (ಸಿಪ್ಪೆ ಸುಲಿದು ಸ್ವಚ್ಛಗೊಳಿಸಿದ್ದು)
*ಹಸಿಮೆಣಸು: 3 (ಉದ್ದಕ್ಕೆ ಸೀಳಿದ್ದು)
*ಹುಣಸೆ ಹುಳಿ: ಎರಡು ಹಿಸಕು (1 ಹಿಸಕು=ಎರಡು ಬೆರಳುಗಳ ತುದಿಯಲ್ಲಿ ಬರುವಷ್ಟು)-ಬಿಳಿ ಹುಣಸೆ ಉತ್ತಮ.
*ಉಪ್ಪು - ರುಚಿಗನುಸಾರ
*ಕೊಬ್ಬರಿ ಎಣ್ಣೆ- ಒಂದು ಚಿಕ್ಕ ಚಮಚ

ತಯಾರಿಕಾ ವಿಧಾನ:
1) ಮಿಕ್ಸಿಯ ಚಿಕ್ಕ ಜಾರ್‌ನಲ್ಲಿ ಕೊಬ್ಬರಿ ಎಣ್ಣೆಯ ಹೊರತಾಗಿ ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಕೊಂಚ ದೊರಗಾಗುವಷ್ಟು ರುಬ್ಬಿಕೊಳ್ಳಿ.
2) ಒಂದು ವೇಳೆ ತೀರಾ ಒಣಗಿರುವಂತೆ ಕಂಡು ಬಂದರೆ ಕೊಂಚ ನೀರು ಸೇರಿಸಿ.
3) ರುಬ್ಬಿಕೊಂಡು ಇಳಿಸಿದ ಬಳಿಕ ಕೊಬ್ಬರಿ ಎಣ್ಣೆ ಹಾಕಿ ಚಮಚದಲ್ಲಿ ತಿರುವಿ
4) ನಿಮ್ಮ ನೆಚ್ಚಿನ ಇಡ್ಲಿ, ದೋಸೆ ಮೊದಲಾದ ತಿಂಡಿಗಳೊಡನೆ ಸವಿಯಲು ನೀಡಿ

ಸಲಹೆ:
ಈಗಷ್ಟೇ ತಯಾರಾದ ಚಟ್ನಿ ಕೊಂಚ ಬಿಸಿ ಇರುವುದರಿಂದ ಸ್ವಾದ ಕೊಂಚ ಸಪ್ಪೆ ಎನಿಸುತ್ತದೆ. ಹಾಗಾಗಿ ರುಬ್ಬಿಕೊಂಡ ಬಳಿಕ ಕೊಂಚ ಹೊತ್ತು ಅಂದರೆ ಸುಮಾರು ಅರ್ಧಗಂಟೆ ಫ್ರಿಜ್ಜಿನಲ್ಲಿಟ್ಟು ತಣ್ಣಗೆ ಮಾಡಿ ನೀಡುವುದರಿಂದ ಇದರ ಸ್ವಾದ ಹೆಚ್ಚುತ್ತದೆ.

English summary

10 Minute : Ginger Coconut Chutney

This morning if you are planning to make yummy soft idlis for breakfast, try out a different chutney to go with it. The ginger coconut chutney is one of the best in the list that goes perfectly well with idlis. This 10 minute chutney recipe, will not accommodate too much of your time too, which is why many mums opt for this recipe. Here is the ginger coconut chutney recipe to enjoy with your fluffy idlis:
Story first published: Tuesday, July 14, 2015, 12:18 [IST]
X
Desktop Bottom Promotion