For Quick Alerts
ALLOW NOTIFICATIONS  
For Daily Alerts

ಭಕ್ಕರಿಯ ಪ್ರೇಯಸಿ ಭಯಂಕರ ಖಾರದ ರಂಜಕ

By * ನಿವೇದಿತಾ ಪ್ರಭಾಕರ್, ಬೆಂಗಳೂರು
|
Ranjaka or Byadagi Menasinakayi chutney
ರಂಜಕ ಅಂತ ಉತ್ತರ ಕರ್ನಾಟಕದಲ್ಲಿ ಕರೆಯಲಾಗುವ ಒಣ ಬ್ಯಾಡಗಿ ಮೆಣಸಿನಕಾಯಿಯಿಂದ ತಯಾರಿಸುವ ಭಯಂಕರ ಖಾರದ ಚಟ್ನಿಯನ್ನು ಇಷ್ಟಪಟ್ಟು ತಿನ್ನುವವರು ನಿಜಕ್ಕೂ ಗಟ್ಟಿಯಾಗಿರಬೇಕು. ಆದರೆ, ಹೆದರಬೇಕಿಲ್ಲ. ಅಲ್ಪ ಪ್ರಮಾಣದಲ್ಲಿ ಇದನ್ನು ತಿಂದರೆ ಇದಕ್ಕೆ ಸರಿಸಾಟಿಯಾದ ಮತ್ತು ರುಚಿಯಾದ ಚಟ್ನಿ ಇನ್ನೊಂದಿಲ್ಲ.

ಎಣ್ಣೆಗಾಯಿ ಪಲ್ಯ, ಝುಣಕ, ಮಾಟವಾಡಿ ಪಲ್ಯಗಳನ್ನು ಬದಿಗಿಟ್ಟರೆ ಭಕ್ಕರಿ ಯ ನಿಜವಾದ ಪ್ರೇಯಸಿ ಅಂದರೆ ರಂಜಕ ಅರ್ಥಾತ್ ಕೆಂಪು ಮೆಣಸಿನಕಾಯಿ ಖಾರ ಚಟ್ನಿ. ಬಾಯಿಗಿಟ್ಟಾಗ ನಾಲಿಗೆ ಚುರುಗುಟ್ಟುತ್ತಿರುತ್ತದೆ, ಕಣ್ಣಲ್ಲಿ ಮತ್ತು ಮೂಗಲ್ಲಿ ಬಳಬಳನೆ ನೀರು ಸುರಿಯುತ್ತಿರುತ್ತದೆ ಆದರೆ ತಿನ್ನುವುದನ್ನು ಮಾತ್ರ ಬಿಡುವುದಿಲ್ಲ. ಈ ಖಾರದ ರುಚಿ ಆಪರಿಯದ್ದು. ಖಾರದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದರೆ ಆಗಾಗ ಬಟ್ಟಲಲ್ಲಿ ತೆಗೆದು ಅದಕ್ಕೆ ಹಸಿ ಕೊಬ್ಬರಿಯನ್ನು ತುರಿದು ಹಾಕಬಹುದು.

ಗದಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಚಟ್ನಿಯನ್ನು ಜರೂರ ಮಾಡಿರುತ್ತಾರೆ. ಇಷ್ಟವಿದ್ದವರು ಒಮ್ಮೆ ರುಚಿ ನೋಡಿ. ಮತ್ತೊಂದು ವಿಷಯವೇನೆಂದರೆ ಸರಿಯಾಗಿ ತಯಾರಿಸಿ ಭದ್ರವಾಗಿ ಬಾಟಲಿಯಲ್ಲಿ ಬಂಧಿಸಿಟ್ಟರೆ ವರ್ಷಾನುಗಟ್ಟಲೆ ಕೆಡುವುದಿಲ್ಲ, ನೀರನ್ನು ಮಾತ್ರ ಸೋಂಕಿಸಲೇಬಾರದು.

ಈ ಚಟ್ನಿಗೆ ರಂಜಕ ಅಂತ ಯಾಕೆ ಕರೆಯುತ್ತಾರೆಂದು ನನಗಂತೂ ತಿಳಿದಿಲ್ಲ. ಬಲ್ಲವರು ತಿಳಿದಿದ್ದರೆ ನಮಗೂ ತಿಳಿಸಿದರು ಉಪಕಾರವಾಗುತ್ತದೆ. ನೆನಪಿರಲಿ, ಇದಕ್ಕೆ ಬ್ಯಾಡಗಿ ಮೆಣಸಿನಕಾಯಿಯನ್ನೇ ಬಳಸಬೇಕು, ಗುಂಟೂರು ಮೆಣಸಿನಕಾಯಿ ಬಳಸಬಾರದು.

ರಂಜಕ್ಕೆ ಬೇಕಾದ ಪದಾರ್ಥಗಳು :

ಒಣ ಬ್ಯಾಡಗಿ ಮೆಣಸಿನಕಾಯಿ 1 ಕಿ.ಗ್ರಾಂ.

ಹರಳುಪ್ಪು 1/4 ಕಿ.ಗ್ರಾಂ.

ಹುಣಸೆಹಣ್ಣು ಅರ್ಧ ಬಟ್ಟಲು

ಇಂಗು ಸಣ್ಣ ಡಬ್ಬಿ

ಮೆಂತೆಕಾಳು 2 ಚಮಚ

ಸಾಸಿವೆ ಸ್ವಲ್ಪ

ತಯಾರಿಸುವ ವಿಧಾನ :

ತಯಾರಿಸುವ ಮುನ್ನ ನಿಮ್ಮ ಕೈಗಳಿಗೆ ಅಜೀಬಾತ್ ನೀರು ಸೋಂಕಿರಬಾರದು. ನೀರು ಹತ್ತಿದ್ದರೆ ಕೆಲಸ ಕೆಟ್ಟಿತೆಂದೇ ಅರ್ಥ. ಸೋ, ಕೈ ಒಣಒಣ ಆಗಿರಲಿ.

ಒಣ ಬ್ಯಾಡಗಿ ಮೆಣಸಿನಕಾಯಿಯ ತುಂಬುಗಳನ್ನು ತೆಗೆದಿಟ್ಟು ಅದಕ್ಕೆ ಹರಳುಪ್ಪು ಮತ್ತು ಹುಣಸೆಹಣ್ಣನ್ನು ಸೇರಿಸಿಡಿ. ಎರಡು ಗಂಟೆ ಅದರ ತಂಟೆಗೆ ಹೋಗಬೇಡಿ. ನಂತರ, ಮೆಂತೆ ಮತ್ತು ಸಾಸಿವೆಗೆ ಇಂಗನ್ನು ಸೇರಿಸಿ ಅದನ್ನು ಮಿಕ್ಸಿಯಲ್ಲಿ ಪುಡಿಪುಡಿ ಮಾಡಿಟ್ಟುಕೊಳ್ಳಿ. ಇಂಗು ಸ್ವಲ್ಪ ಹೆಚ್ಚೂಕಡಿಮೆಯಾಗಿದ್ದರೆ ತೊಂದರೆಯೇನಿಲ್ಲ. ಆರೋಗ್ಯಕ್ಕೂ ಒಳ್ಳೆಯದು.

ಇಷ್ಟೆಲ್ಲ ಮುಗಿದ ನಂತರ, ಬೆರೆಸಿಟ್ಟ ಬ್ಯಾಡಗಿ ಮೆಣಸಿನಕಾಯಿ ಮಿಶ್ರಣಕ್ಕೆ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಂಡ ಪದಾರ್ಥಗಳನ್ನು ಸೇರಿಸಿ ಮತ್ತೊಮ್ಮೆ ಮಿಕ್ಸಿಯಲ್ಲಿ ಗಿರಿಗಿರಿ ಅನ್ನಿಸಿ. ಚಟ್ನಿ ತೀರ ಸಣ್ಣಗಾಗುವುದು ಬೇಡ, ತರಿತರಿಯಾಗಿದ್ದರೆ ಸಾಕು. ಅಷ್ಟೆ, ಬ್ರಹ್ಮಾಂಡ ಖಾರ ಬ್ಯಾಡಗಿ ಮೆಣಸಿನಕಾಯಿ ಚಟ್ನಿ ಅಥವಾ ರಂಜಕ ರೆಡಿ.

ಕಟಕು ಭಕ್ಕರಿಯನ್ನೇ ತಟ್ಟೆಯಾಗಿಸಿಕೊಂಡು ಮಧ್ಯದಲ್ಲಿ ಮುದ್ದೆ ರಂಜಕ ಹಾಕಿಸಿಕೊಂಡು ಖಾರದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೇ ಸುಮ್ಮನೆ ಅದರ ರುಚಿಯನ್ನು ಆಸ್ವಾದಿಸಿ.

English summary

Ranjaka | Byadagi Menasinakayi chutney | Red chilli | Spicy food - ಭಕ್ಕರಿಯ ಪ್ರೇಯಸಿ ಭಯಂಕರ ಖಾರದ ರಂಜಕ

Ranjaka or byadagi menasinakayi chutney or red chilli chutney by niveditha prabhakar, a north karnataka recipe.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more