For Quick Alerts
ALLOW NOTIFICATIONS  
For Daily Alerts

ಜೋಳದ ರೊಟ್ಟಿ

By * ಪೂರ್ಣಿಮಾ, ಗುಲ್ಬರ್ಗ
|
Jolada Rotti
ದಕ್ಷಿಣ ಕರ್ನಾಟಕದ ಮಂದಿಗೆ ರಾಗಿ ಹೇಗೋ ಉತ್ತರ ಕರ್ನಾಟಕದ ಮಂದಿಗೆ ಜೋಳ. ಉತ್ತರ ಕರ್ನಾಟಕದ ಮಂದಿಗೆ ಜೋಳ ಎಂದರೆ ಪ್ರಾಣ. ಜೋಳದಲ್ಲಿ ಮಾಡಿದ ರೊಟ್ಟಿ, ಬಕ್ರಿ ಜತೆ ಚಟ್ನಿಪುಡಿ, ಗುರೆಳ್ಳು, ಕುರೆಸಾಣಿ ಪುಡಿ, ಎಣ್ಣೆಗಾಯಿ ಇದ್ದರಂತೂ ಸ್ವರ್ಗವೇ ಸಿಕ್ಕಂತೆ.

ಇತ್ತೀಚೆಗೆ ದಕ್ಷಿಣ ಕರ್ನಾಟಕ ಭಾಗದಲ್ಲೂ ಜೋಳದ ರೊಟ್ಟಿ ಖ್ಯಾತಿ ಪಡೆಯುತ್ತಿದೆ. ಜೋಳದ ರೊಟ್ಟಿ ತಿನ್ನಲು ಎಷ್ಟು ಸೊಗಸೋ ಮಾಡುವುದೂ ಅಷ್ಟೇ ಸುಲಭ. ಬನ್ನಿ ಜೋಳದ ರೊಟ್ಟಿ ರೆಡಿ ಮಾಡೇ ಬಿಡೋಣ...

ಬೇಕಾಗುವ ಪದಾರ್ಥ :

3 ಕಪ್‌ ಜೋಳದ ಹಿಟ್ಟು. 100 ಗ್ರಾಂನಷ್ಟು ಎಳ್ಳು, ರುಚಿಗೆ ಬೇಕಾದಷ್ಟು ಹದವಾಗಿ ಉಪ್ಪು, ಇಂಗು, ಅಚ್ಚ ಮೆಣಸಿನಪುಡಿ ಹಾಗೂ ಒಂದು ಕಪ್‌ ಎಣ್ಣೆ.

ಮಾಡುವ ವಿಧಾನ :

ಅಗಲವಾದ ಬಾಯಿಯ ಪಾತ್ರೆಗೆ ಮೊದಲು ಜೋಳದ ಹಿಟ್ಟು ಹಾಕಿಕೊಳ್ಳಿ. ಅದಕ್ಕೆ 1 ಕಪ್‌ ಬಿಸಿ ನೀರು ಹಾಕಿ ಒಂದರ್ಧ ಗಂಟೆ ಬಿಡಿ. ಹಿಟ್ಟು ಚೆನ್ನಾಗಿ ನೆನೆಯುತ್ತದೆ. ಆನಂತರ ಹುರಿದ ಎಳ್ಳು, ಉಪ್ಪು, ಖಾರ ಬೆರೆಸಿ. ಚಪಾತಿ ಹಿಟ್ಟಿನ ರೀತಿ ಹದವಾಗಿ ಕಲೆಸಿ. ಇದಕ್ಕೆ ಸ್ವಲ್ಪ ಎಣ್ಣೆ ಬೆರೆಸಿ ಚೆನ್ನಾಗಿ ನಾದಿಟ್ಟುಕೊಳ್ಳಿ.

ಒಂದು ಗಂಟೆ ಕಳೆದ ಬಳಿಕ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ. ಚಪಾತಿ ಮಣೆಯ ಮೇಲೆ ತುಸು ಹಿಟ್ಟು ಹಾಕಿ ಚಪಾತಿಯಂತೆಯೇ ಹಾಳೆಗಳನ್ನು ತಯಾರಿಸಿ. ಒಲೆಯ ಮೇಲೆ ಕಾವಲಿ ಇಟ್ಟು ಹಿಟ್ಟಿನ ಹಾಳೆಯನ್ನು ಹಾಕಿ ಬೇಯಿಸಿ. ಹದವಾಗಿ ಬೆಂದ ಬಳಿಕ ಮತ್ತೊಮ್ಮೆ ಕಾವಲಿಯಲ್ಲಿ ರೊಟ್ಟಿಯನ್ನು ಮಗುಚಿ ಬೇಯಿಸಿ.

ರೊಟ್ಟಿಯೊಂದಿಗೆ ಉಪ್ಪಿನಕಾಯಿ, ಎಣ್ಣೆಗಾಯಿ, ಚಟ್ನಿಪುಡಿ ಗುರೆಳ್ಳು, ಕುರೆಸಾಣಿ ಪುಡಿ, ಒಳ್ಳೆ ಎಳ್ಳೆಣ್ಣೆ ಇದ್ದರಂತೂ ರೊಟ್ಟಿಯ ಗಮ್ಮತ್ತೇ ಗಮ್ಮತ್ತು.

English summary

Jolada Rotti: North Karnataka's Delight | ಜೋಳದ ರೊಟ್ಟಿ

Jolada Rotti: North Karnataka's Delight recipe by Purnima, Gulbarga.
Story first published: Wednesday, March 28, 2012, 12:34 [IST]
X
Desktop Bottom Promotion