For Quick Alerts
ALLOW NOTIFICATIONS  
For Daily Alerts

ಮಳವಳ್ಳಿ ಅವರೆಕಾಳು, ಭಿಲಾಯ್ ಉಪ್ಪಿಟ್ಟು

By * ಶುಭಶ್ರೀ ಅಭಿ, ಭಿಲಾಯ್
|
Winter Food Specialities : Avarakalu Uppittu
ಊರಿಗೆ ಹೋದಾಗ ನಮ್ಮ ಅಮ್ಮ (ಜಯಂತಿ ಪಾಂಡುರಂಗ) ಹೇಳಿಕೊಟ್ಟ ಉಪ್ಪಿಟ್ಟು ತಿಂಡಿಯನ್ನು ಮನೆಗೆ ವಾಪಸ್ಸು ಬಂದಮೇಲೆ ಮಾಡಿದೆವು. ನಾನು ಮತ್ತು ನನ್ನ ಗಂಡ ಅಭಿಷೇಕ್ ಜತೆಯಾಗಿ ಮಾಡಿ ಸವಿದ ಉಪ್ಪಿಟ್ಟು ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮಳವಳ್ಳಿಯಿಂದ ಬರುವಾಗ ತಂದಿದ್ದ ಸುಲಿದ ಅವರೆಕಾಳು ಮತ್ತು ಅಕ್ಕಿ ರವೆ ಸೇರಿಸಿ ತಯಾರಿಸಿದ ತಿಂಡಿಯನ್ನು ನಾವು ಮಾಡುವ ವಿಧಾನ ಇಂತಿವೆ.

ಬೇಕಾಗುವ ಪದಾರ್ಥಗಳೆಂದರೆ ಒಂದು ಲೋಟ ಯಾವುದಾದರು ಅಕ್ಕಿ. ಒಂದು ಲೋಟ ಅವರೆಕಾಳು. ಯಥಾಪ್ರಕಾರ ಒಗ್ಗರಣೆ ಸಾಮಾನುಗಳು. ಕೊತ್ತಂಬರಿ ಮತ್ತು ಹಸಿ ತೆಂಗಿನಕಾಯಿ ತುರಿ. ಚೂರು ಇಂಗು. ಈ ಉಪ್ಪಿಟ್ಟನ್ನು ಪ್ರೆಷರ್ ಕುಕ್ಕರಿನಲ್ಲೇ ಮಾಡಬೇಕು.

ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿಯಬೇಕು. ಅಕ್ಕಿಯ ಬಿಳುಪು ಮಾಯವಾಗಿ ಕಂದು ಬಣ್ಣಕ್ಕೆ ಹೊರಳುವವರೆಗೆ ಹುರಿಯಬೇಕು. ಹುರಿದ ನಂತರ ಅದನ್ನು ಆರಲು ಬಿಟ್ಟು ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ರುಬ್ಬಬೇಕು. ಅಕ್ಕಿ ಸಣ್ಣಸಣ್ಣ ಚೂರುಗಳಾಗುವಷ್ಟು, ಅಂದರೆ ದಪ್ಪ ರವೆ ಗಾತ್ರಕ್ಕೆ ರುಬ್ಬಿದರೆ ಸಾಕು. ಇನ್ನೊಂದು ಕಡೆ ಅವರೆಕಾಳನ್ನು ಬರೀ ನೀರಿನಲ್ಲಿ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಂಡಿರಬೇಕು. ಅವರೆ ಬೇಗ ಬೇಯುವುದಿಲ್ಲವಾದ್ದರಿಂದ ಐದಾರು ವಿಷಲ್ ಬರುವವರೆಗೂ ಸ್ಟೌವ್ ಮೇಲೆ ಕುಕ್ಕರ್ ಇಟ್ಟಿರಬೇಕು.

ಇನ್ನೊಂದು ಕುಕ್ಕರಿನಲ್ಲಿ ಸ್ವಲ್ಪ ಎಣ್ಣೆ ಸ್ವಲ್ಪ ತುಪ್ಪ ಹಾಕಿರಿ. ಅದು ಬಿಸಿಯಾದ ನಂತರ ಅದಕ್ಕೆ ಜೀರಿಗೆ, ಕರಿಬೇವು, ಸಾಸಿವೆ, ಹಸಿಮೆಣಸಿನಕಾಯಿ, ಇಂಗು ಬೆರೆಸಿ ಒಗ್ಗರಣೆ ತಯಾರಿಸಿಕೊಳ್ಳಿರಿ. ಇದಕ್ಕೆ ಬೇಯಿಸಿದ ಅವರೆಕಾಳು ಮತ್ತು ಅದರಲ್ಲಿರುವ ಬಿಸಿ ನೀರನ್ನು ಸುರಿಯಿರಿ. ಅವರೆಕಾಳು ಉಪ್ಪಿಟ್ಟಿಗೆ ನೀರಿನ ಪ್ರಮಾಣ ಒಂದಕ್ಕೆ ಮೂರರಷ್ಟು ಇರಬೇಕು. ಅಂದರೆ, ಒಂದು ಲೋಟ ಅಕ್ಕಿ ರವೆಗೆ ಮೂರು ಲೋಟ ನೀರು.

ಕುದಿಯುತ್ತಿರುವ ಅವರೆಕಾಳು ಒಗ್ಗರಣೆ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿದ ನಂತರ ಮಾಡಿಟ್ಟುಕೊಂಡ ರವೆ ಹಾಕಿ ಚೆನ್ನಾಗಿ ಕದಡಿರಿ. ಉಪ್ಪಿಟ್ಟು ಗಂಟಾಗದಂತೆ ಎಚ್ಚರವಹಿಸಿ. ರವೆ ಕೂಡಿಕೊಂಡು ಉಪ್ಪಿಟ್ಟಿನ ಹದಕ್ಕೆ ಬರುವವರೆಗೆ ನಿರಂತರವಾಗಿ ಸೌಟಿನಿಂದ ಕಲಕುತ್ತಿರಬೇಕು. ಆನಂತರ ಕುಕ್ಕರಿನ ಮುಚ್ಚಳ ಮುಚ್ಚಿ ಮತ್ತೆ ಸ್ವಲ್ಪ ಹೊತ್ತು ಬೇಯಲು ಬಿಡಿ. ಮುಖ್ಯವಾದ ವಿಚಾರವೆಂದರೆ ಕುಕ್ಕರಿನ ವೈಟ್ ಇಡಬಾರದು.

ಐದಾರು ನಿಮಿಷ ಹಬೆಯಲ್ಲಿ ಬೆಂದ ನಂತರ ಅಕ್ಕಿರವೆ ಉಪ್ಪಿಟ್ಟು ಮೃದುವಾಗುತ್ತದೆ. ಈಗ ಕುಕ್ಕರನ್ನು ಕೆಳಗಿಳಿಸಿ ಮುಚ್ಚಳ ತೆಗೆದು ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಕಲಸಿರಿ. ಇದು ತುಂಬಾ ರುಚಿಕಟ್ಟಾಗಿರುತ್ತದೆ. ಇತರ ಉಪ್ಪಿಟ್ಟುಗಳಂತೆ ಇದೂ ಇರುತ್ತದೆ ಎಂದು ನಿಮಗೆ ಅನಿಸಿದರೂ ಸಹ ಇದರ ವಿಶೇಷ ಏನಪ್ಪಾ ಅಂದರೆ ಅಕ್ಕಿ ರವೆ ಮತ್ತು ಅವರೆಕಾಳು ಚೆನ್ನಾಗಿ ಬೆಂದು ಪರಸ್ಪರ ಉಪ್ಪಿಟ್ಟಿನಲ್ಲಿ ಬೆರೆತುಕೊಂಡಿರಬೇಕು.

English summary

Winter Food Specialities | Avarakalu Uppittu | South Indian Cuiscine | ಅವರೆಕಾಳು ಉಪ್ಪಿಟ್ಟು | ಚಳಿಗಾಲದ ತಿಂಡಿ ತಿನಿಸುಗಳು

South Indian Vegetarian dishes: Avarekalu Uppittu or avarekalu upma recipe.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more