For Quick Alerts
ALLOW NOTIFICATIONS  
For Daily Alerts

ಹುಣ್ಣಿಮೆ ಚಂದ್ರನ ಹೋಲುವ ಅಕ್ಕಿ ರೊಟ್ಟಿ

By Super
|
Akki rotti
ಹಿಟ್ಟು (ಮುದ್ದೆ) ತಿಂದು ಗಟ್ಟಿಯಾಗು ಅನ್ನುವ ಮಾತಿಗೆ ಸಂವಾದಿಯಾಗಿ ರೊಟ್ಟಿ ತಿಂದು ಜಟ್ಟಿಯಾಗು ಅನ್ನುವ ಮಾತನ್ನು ಸೇರಿಸಬಹುದು. ಮುದ್ದೆಯ ಸುಧಾರಿತ ರೂಪವೇ ರೊಟ್ಟಿಯಾದುದರಿಂದ ಆ ಹೇಳಿಕೆ ಅರ್ಥಪೂರ್ಣವೂ ಹೌದು. ಅಂಥಾ ತಿರುಳುಳ್ಳ ಬೆಳಗಿನ ಉಪಾಹಾರ ನಿಮ್ಮ ಅಡುಗೆಮನೆಗೆ. ಅಕ್ಕಿಯಲ್ಲಿ ಹತ್ತಾರು ಬಗೆಯಾದ್ದರಿಂದ ಮೊದಲ ಕಂತಿಗೆ ಅಕ್ಕಿ ರೊಟ್ಟಿಯನ್ನು ಬೇಯಿಸುತ್ತಿದ್ದೇವೆ. ಹೊಟ್ಟೆ ತುಂಬಿಸಿಕೊಳ್ಳಿ.

ಈ ಎಲ್ಲಾ ಸಾಮಗ್ರಿಗಳು ಇದ್ದರಷ್ಟೇ ಮುಂದಿನ ಮಾತು

ಅಕ್ಕಿ ಹಿಟ್ಟು - 2 ಕಪ್ಪು
ಬಲಿತ ತೆಂಗಿನ ತುರಿ(ತಾಜಾ ಆಗಿರಲಿ)- ಹಿಟ್ಟಿನ ಗುಣ ಮರೆಸದಷ್ಟು
ಹಸಿ ಮೆಣಸಿನಕಾಯಿ - 8 ರಿಂದ 10
ಈರುಳ್ಳಿ - 1(ಸಣ್ಣನೆಯದಾದರೆ 2)
ಎಣ್ಣೆ , ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು

ಅಕ್ಕಿ ಹಿಟ್ಟು ತಯಾರಿಸಿಕೊಳ್ಳುವುದೂ ಒಂದು ಕಲೆ

ಸಾಮಾನ್ಯವಾಗಿ ಅಂಗಡಿಯಿಂದ ತಂದ ಅಕ್ಕಿಯನ್ನು ನೇರವಾಗಿ ಗಿರಣಿಗೆ ತೆಗೆದುಕೊಂಡು ಹೋಗಿ ಹಿಟ್ಟು ಮಾಡಿಸಿಕೊಂಡು ಬರುವವರು ಹೆಚ್ಚು ಮಂದಿ. ನೀವೂ ಈ ರೀತಿ ಹಿಟ್ಟು ತಯಾರಿಸಿಕೊಳ್ಳಬಹುದು. ರೊಟ್ಟಿ ಹಲ್ಲಿಗೆ ಸ್ವಲ್ಪ ಗಟ್ಟಿ ಅನ್ನಿಸಿದರೆ, ಕಣ್ಣಿಗೆ ರೊಟ್ಟಿಯ ಬಣ್ಣ ಮಂಕು ಎನಿಸಿದರೆ ನಮ್ಮನ್ನು ಬಯ್ದುಕೊಳ್ಳಬೇಡಿ. ದೋಸೆಯಷ್ಟು ಮೆದುವಾದ ಬೆಳ್ಳನೆ ರೊಟ್ಟಿ ಬೇಕೆಂದರೆ ಸ್ವಲ್ಪ ಸಂಸ್ಕಾರ ಕಾರ್ಯಗಳು ನಡೆಯಬೇಕು.

ಮೊದಲಿಗೆ ಅವಶ್ಯವಾದಷ್ಟು ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ, ನೆನೆಸಿಡಿ. ಒಂದು ಗಂಟೆಯ ನಂತರ ಬಿಳಿ ಬಟ್ಟೆಯ ಮೇಲೆ ಆ ಅಕ್ಕಿಯನ್ನು ಒಣಗಲು ಬಿಟ್ಟು ಆನಂತರ ಹಿಟ್ಟು ಮಾಡುವ ಕಾರ್ಯಕ್ಕೆ ಮುಂದಾಗಿ. ಇದರಿಂದ ನೀವು ತಿಳಿಯಬೇಕಾದ ನೀತಿ- ಹಿಟ್ಟು ಮಾಡಿಕೊಳ್ಳುವ ಕೆಲಸ ತಕ್ಷಣಕ್ಕೆ ಆಗುವಂಥದ್ದಲ್ಲ . ಅಂದಮೇಲೆ ಮುಂಚೆಯೇ ಹಿಟ್ಟು ತಯಾರಿಸಿಟ್ಟು ಕೊಳ್ಳುವ ಜಾಣರು ನೀವಾಗಬೇಕು.

ಹಿಟ್ಟನ್ನು ಕಲೆಸುವುದೂ ಒಂದು ಹಿತಕರ ಅನುಭವ

ಉಗುರು ಬೆಚ್ಚನೆ ನೀರಿನಿಂದ ಹಿಟ್ಟನ್ನು ಕಲೆಸಿಕೊಳ್ಳುವ ಮುನ್ನ ತೆಂಗಿನ ತುರಿ ಹಾಗೂ ಹಸಿ ಮೆಣಸಿನಕಾಯಿಯನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ಈ ಮಿಶ್ರಣದೊಂದಿಗೆ ಈಗಾಗಲೇ ಸಿದ್ಧಪಡಿಸಿಕೊಂಡಿರುವ ಉಳಿದ ಸಾಮಗ್ರಿಗಳನ್ನೂ ಅಕ್ಕಿ ಹಿಟ್ಟಿಗೆ ಸೇರಿಸಿ. ಹಿಟ್ಟನ್ನು ಗಟ್ಟಿಯಾಗಿ ಕಲಸಿ.

ಈಗಾಗಲೇ ಹಂಚಿಗೆ ಎಣ್ಣೆಯನ್ನು ಸವರಿಯಾಗಿದೆ. ಈಗ, ದೋಸೆ ಹಂಚಿನ ಮೇಲೆ ಹಿಟ್ಟನ್ನು ತಟ್ಟಿರಿ. ಹುಣ್ಣಿಮೆ ಚಂದ್ರನಾಕೃತಿಯ ರೊಟ್ಟಿಯ ನಡುವೆ ಒಂದೆರಡು ರಂಧ್ರಗಳನ್ನು ಕೊರೆದು, ಅಲ್ಲಿ ಹಾಗೂ ರೊಟ್ಟಿಯ ಸುತ್ತಲೂ ಎಣ್ಣೆ ಹಾಕಿ. ಸಣ್ಣ ಉರಿಯಲ್ಲಿ ರೊಟ್ಟಿ ಬೇಯಲಿ. ಕಾವು ಎಲ್ಲೆಡೆ ಮುಟ್ಟುವಂತೆ ಆಗಾಗ ಹಂಚನ್ನು ತಿರುಗಿಸುತ್ತಿರಿ. ನೆನಪಿರಲಿ, ರೊಟ್ಟಿಯನ್ನು ಮಗ್ಗುಲು ಬದಲಿಸುವುದು ಬೇಡ. ಒಂದೇ ಕಡೆ ಗರಿ ಗರಿಯಾಗಿ ಬೆಂದ ಬಿಸಿಯಾದ ಗರಿರುಚಿ ರೊಟ್ಟಿಯನ್ನು ಚಟ್ನಿ, ಚಟ್ನಿಪುಡಿ ಜತೆಗೆ .. .. ಆಹಾ .. ಏನಾ ಸುಖ. ಸುಖ ಇಲ್ಲಿಗೇ ಕೊನೆಯಾಗದು. ಅಸಲು ಅಕ್ಕಿರೊಟ್ಟಿಯಾಂದಿಗೆ ಝುಣಕ ಇದ್ದರೆ ಚಹಾದ ಜೋಡಿ ಚೂಡಾ ಇದ್ಹಂಗ ! ಸರಿ, ಝುಣಕ ಮಾಡುವುದು ಹೇಗೆ?

ಮೇಲಿನ ಥರಾನೇ ಉಳಿದ ರೊಟ್ಟಿಗಳನ್ನು ತಯಾರಿಸಿ ಮನೆಯವರ ಮನಸ್ಸನ್ನು ಕದಿಯಬಹುದು. ನಿಮಗೆ ಹೇಳಲೇಬೇಕಾದ ಮತ್ತೊಂದು ಮಾತು, ರೊಟ್ಟಿ ತಟ್ಟುವ ಬಗೆಯದು. ನಿಮಗೆ ಗೊತ್ತೋ ಇಲ್ಲವೋ - ನಮ್ಮ ಹಳ್ಳಿಯ ಅಡುಗೆಮನೆ ಕಲಾವಿದೆಯರು ಹಲಗೆಯ ಮೇಲೆ ನೆನೆಬಟ್ಟೆಯ ಹರವಿ ಅದರ ಮೇಲೆ ರೊಟ್ಟಿಯನ್ನು ಎರಡೂ ಕೈಗಳಿಂದ ತಟ್ಟಿ ಆಮೇಲೆ ಹಂಚಿಗೆ ವರ್ಗಾಯಿಸುವುದುಂಟು. ಮತ್ತೆ ಕೆಲವರು, ಅಕ್ಕಿಯಾರಿಸುವ ಮೊರದ ಮೇಲೆ ಅಕ್ಕಿಹಿಟ್ಟನ್ನು ಸಿಂಪಡಿಸಿಕೊಂಡು ರೊಟ್ಟಿ ತಟ್ಟುವುದೂ ಉಂಟು. ಅದಕ್ಕೆಲ್ಲಾ ಅನುಭವ ಬೇಕು. ಮನಸ್ಸು ಮಾಡಿದರೆ ನೀವೂ ತಟ್ಟುತ್ತೀರಿ, ಒಂದಲ್ಲಾ ಒಂದು ದಿನ.

English summary

Akki Rotti | Rice flour roti | This could be your tomorrows breakfast | ಬೆಳಗಿನ ತಿಂಡಿಗೆ ಅಕ್ಕಿರೊಟ್ಟಿ

Akki Rotti for breakfast : Mouth watering delicacies from Karnataka.
Story first published: Wednesday, March 28, 2012, 16:26 [IST]
X
Desktop Bottom Promotion