For Quick Alerts
ALLOW NOTIFICATIONS  
For Daily Alerts

ರೊಟ್ಟಿ ಬೊಂಬಾಟಾಗಿದೆ ಬೊಂಬಾಟಾಗಿದೆ!

By * ಶಾಂತಾ ನರಸೇಗೌಡ, ಭದ್ರಾವತಿ
|
Avarekalu for Akki Rotti recipe
ಮೂರು ತಿಂಗಳಿನಿಂದ ನಾನು ಭಾರತದಲ್ಲಿ ಇರಲಿಲ್ಲ. ಮಗಳ ಬಾಣಂತನಕ್ಕೆಂದು ಮೆಲ್ಬೋರ್ನ್ ಗೆ ಹೋದವಳು ಬಂದು ಒಂದೇ ದಿನ ಆಗಿತ್ತು. ನಾನಿಲ್ಲದಾಗ ಮನೆಯಲ್ಲಿ ಇವರೆಲ್ಲ ಅಡುಗೆ ಮಾಡಿದ್ದೇ ಕಡಿಮೆ ಎಂದು ಬಂದ ತಕ್ಷಣವೇ ಗೊತ್ತಾಯ್ತು. ಮನೆ ಯಜಮಾನರು ಮಧ್ಯಾನ್ಹದ ಊಟವನ್ನು ಪೇಪರ್ ಮಿಲ್ಸ್ ಆಫೀಸ್ ಕ್ಯಾಂಟೀನಿನಲ್ಲಿ ಮಾಡಿ ರಾತ್ರಿ ಊಟವನ್ನು ಕ್ಲಬ್ಬಿನಲ್ಲಿ ಮುಗಿಸುತ್ತಿದ್ದರಂತೆ. ಮಗರಾಯನಿಗೆ ಊಟದ ಕಾಳಜಿನೇ ಇಲ್ಲ. ಲೇಯ್ಸ್ ತಿಂದುಕೊಂಡೇ ಬದುಕಬಲ್ಲ ಶಕ್ತಿಯನ್ನು ದೇವರು ಅವನಿಗೆ ಕೊಟ್ಟಿದ್ದಾನೆ.

ನಾನು ಊರಿಗೆ ಬರಲಿ ಎಂದೇ ಕಾಯುತ್ತಿದ್ದ ಇವರೆಲ್ಲ ಈಗ ಬಂದಕೂಡಲೇ 'ಅದು ಮಾಡೆ, ಇದು ಮಾಡಮ್ಮಾ' ಎಂದು ಅಡುಗೆ ತಿಂಡಿಗಳ ಪಟ್ಟಿ ಹಿಡಿದುಕೊಂಡು ನಿಂತಿದ್ದರು. ನಾಲಗೆ ಕೆಟ್ಟಿರಬೇಕು, ಪಾಪ. ಆದರೆ, ಅಡುಗೆ ಮನೆ ಖಾಲಿ ಖಾಲಿ. ಯಾರೂ ಕೂಡ ತಿಂಗಳ ಸಾಮಾನುಗಳನ್ನು ಸೊಸೈಟಿಗೆ ಹೋಗಿ ತಂದಿಟ್ಟಿರಲಿಲ್ಲ. ಮನೆಯಲ್ಲಿ ತರಕಾರಿಗಳೂ ಇರಲಿಲ್ಲ. ಯೋಚನೆ ಮಾಡುತ್ತಿರುವಾಗ ಅಷ್ಟುಹೊತ್ತಿಗೆ ಸರಿಯಾಗಿ ಕೈಗಾಡಿ ತರಕಾರಿಯ ಪುಣ್ಯಾತ್ಮ ಲಕ್ಷ್ಣಣ ಮನೆಮುಂದೆ ಬಂದ. ಬಾರಪ್ಪಾ ಬಾರಪ್ಪಾ ಎಂದು ಬುಟ್ಟಿ ಹಿಡಿದು ಹೋದರೆ ಗಾಡಿಯಲ್ಲಿ ಅಂಥದೇನೂ ತಾಜಾ ತರಕಾರಿ ಕಾಣಿಸಲಿಲ್ಲ.

ಗಾಡಿಯ ಮೂಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸ್ವಲ್ಪ ಅವರೇಕಾಯಿ ಇಟ್ಟಿದ್ದ. ಈಗ ಎಚ್ಚೆತ್ತುಕೊಂಡೆ. ಹೌದಲ್ಲಾ! ಈ ಸೀಸನ್ನಿನಲ್ಲಿ ನಾನು ಅವರೇಕಾಯಿ ಅಡುಗೆ ಮಾಡೇ ಇಲ್ಲವಲ್ಲಾ ಎಂದುಕೊಂಡು 1 ಕೆಜಿ ಖರೀದಿಸಿದೆ. ಕಾಯಿ ಒಣಗಿತ್ತು. ಸೀಸನ್ ಹೋಗುತ್ತಿದೆ, ಈಗ ಬಿಟ್ಟರೆ ಆಮೇಲೆ ಸಿಕ್ಕಲ್ಲ ಎಂದು 'ಹೇಗಾದರೂ ಇರಲಿ ಕೊಡಪ್ಪಾ' ಎಂದು ಲಕ್ಷ್ಣಣನಿಗೆ ಹೇಳಿದೆ.

ಕಾಯಿ ಸುಲಿದರೆ ಬರೀ ಹುಳ. ಕಾಯಿಗಳೂ ಚಪ್ಪಟೆ ಚಪ್ಪಟೆ. ಚೆನ್ನಾದ ಕಾಯಿಗಳು ಕೆಲವು ಇದ್ದವು. ಆದರೆ ಕಾಳುಗಳು ಕಪ್ಪುಕಪ್ಪು, ಸ್ವಲ್ಪ ಬಲಿತಿತ್ತು ಕೂಡ. ಅದನ್ನೇ ಹಾಗೂ ಹೀಗೂ ಕ್ಲೀನ್ ಮಾಡಿ ಸುಲಿದೆ. ಎರಡು ಕಪ್ಪು ಕಾಳು ರೆಡಿ ಆಯಿತು. ಅಡುಗೆ ಮನೆಯ ಶೆಲ್ಫ್ ನಾನು ಆಸ್ಟ್ರೇಲಿಯಾಗೆ ಹೋದಾಗ ಹೇಗೆ ಇಟ್ಟಿದ್ದೇನೋ ಹಾಗೇ ಇತ್ತು. ಧೂಳು ಕೂಡ ಒರೆಸಿರಲಿಲ್ಲ. ನಾನಷ್ಟೇ ಉಪಯೋಗಿಸುವ ಸಾಮಾನುಗಳನ್ನು ನಮ್ಮ ಮನೆಯಲ್ಲಿ ಯಾರೂ ಮುಟ್ಟಿಕೂಡ ನೋಡುವುದಿಲ್ಲ. ತುಂಬಾ ಒಳ್ಳೆ ಜನ. ಶೆಲ್ಫ್ ನಲ್ಲಿ ಸ್ಟೀಲ್ ಡಬ್ಬಿಯಲ್ಲಿ ಇಟ್ಟಿದ್ದ ಅಕ್ಕಿ ಹಿಟ್ಟು ಹಾಗೇ ಇತ್ತು. ಪುಣ್ಯಕ್ಕೆ ಕೆಟ್ಟುಹೋಗಿರಲಿಲ್ಲ. ಅದನ್ನೇ ಇನ್ನೊಂದು ಸರತಿ ಜರಡಿ ಹಿಡಿದು ನಾಲಕ್ಕು ಕಪ್ಪು ಹಿಟ್ಟಿಗೆ ಸ್ವಲ್ಪ ಮಜ್ಜಿಗೆ ಸ್ವಲ್ಪ ನೀರು ಉಪ್ಪು ಹಾಕಿ ಕಲಸಿಟ್ಟೆ.

ಹಿತ್ತಲಲ್ಲಿ ಕರಿಬೇವು ಎಲೆ ಬಿಡಿಸಿ ತಂದೆ. ಒಣ ಮೆಣಸಿನಕಾಯಿ ಹೇಗೂ ಸ್ಟಾಕ್ ಇದ್ದೇ ಇರತ್ತೆ. ಅದನ್ನೇ ಒಂದಿಷ್ಟು ಕೈಯಲ್ಲೇ ಪುಡಿಪುಡಿ ಮಾಡಿ ಹಿಟ್ಟಿಗೆ ಸೇರಿಸಿ ಕಲಸಿದೆ. ಕುಕ್ಕರ್ ನಲ್ಲಿ ಬೆಂದು ಇನ್ನಷ್ಟು ಕಪ್ಪು ಕಪ್ಪಾಗಿದ್ದ ಅವರೇಕಾಳುಗಳನ್ನು ಹಿಟ್ಟಿಗೆ ಹಾಕಿದೆ. ಎಣ್ಣೆ ಸವರಿ ಬಾಣಲಿ ರೊಟ್ಟಿ ಮಾಡಿದರೆ "ಅಕ್ಕಿ ರೊಟ್ಟಿ ಬೊಂಬಾಟಾಗಿದೆ ಬೊಂಬಾಟಾಗಿದೆ" ಎಂದು ಬರಗೆಟ್ಟವರಂತೆ ಎಲ್ಲಾ ತಿಂದು ಖಾಲಿಮಾಡಿದರು. ಇವರಿಗೆಲ್ಲ ನಾನು ಮಾಡುವ ಅಡುಗೆ ಬೆಲೆ ಗೊತ್ತಾಗಬೇಕಾದರೆ ಮತ್ತೆ ನಾನು ಮೆಲ್ಬೋರ್ನ್ ಮಗಳ ಮನೆಗೆ ಹೋಗಬೇಕು ಅಂದು ಮನಸ್ಸಿನಲ್ಲೇ ಅಂದುಕೊಂಡೆ. ಇದೇ ಜೀವನವಲ್ಲವೇ?

(ನಿರೂಪಣೆ : ದಟ್ಸ್ ಕನ್ನಡ ಅಡುಗೆ ಶಾಲೆ)

X
Desktop Bottom Promotion