For Quick Alerts
ALLOW NOTIFICATIONS  
For Daily Alerts

ಮತ್ತೆ ಮಸಾಲೆ ದೋಸೆ

By * ನಿವೇದಿತಾ ಪ್ರಭಾಕರ್, ಬೆಂಗಳೂರು
|
Delicious Masala Dosa recipe
ಕನ್ನಡ ನಾಲಗೆಗಳ ಸಾರ್ವಕಾಲಿಕ ಮೆಚ್ಚಿನ ತಿಂಡಿ ಮಸಾಲೆ ದೋಸೆ. ಈ ತಿಂಡಿಯ ಮಹತ್ವ ಗೊತ್ತಾಗುವುದೇ ಕರ್ನಾಟಕದಿಂದ ಆಚೆಕಡೆ ಹೊಟೇಲಿನಲ್ಲಿ ಮಸಾಲೆ ದೋಸೆ ತಿಂದಾಗ. ಆ ಮಟ್ಟಿಗೆ ಕರ್ನಾಟಕ ರಾಜ್ಯವು ಮಸಾಲೆ ದೋಸೆ ಮೇಲೆ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿಕೊಂಡಿದೆ.

ಆದರೆ, ಬಹುಜನರ ಫೆವರಿಟ್ ಅಡ್ಡಾ ಆಗಿರುವ ಬಸವನಗುಡಿಯ ವಿದ್ಯಾರ್ಥಿ ಭವನ ಸೇರಿದಂತೆ, ಇತರ ಹೊಟೇಲು, ದರ್ಶಿನಿಗಳಲ್ಲಿ ಮಸಾಲೆ ದೋಸೆ ತನ್ನ ಎಂದಿನ ರೂಪ ಮತ್ತು ರುಚಿಯನ್ನು ಕಳೆದುಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇರುತ್ತವೆ. ಅದರ ಉಳಿವಿಗಾಗಿ ಒಂದು ಆಂದೋಲನವೇ ಆರಂಭವಾಗಬೇಕು, ಕನ್ನಡದ ಕಟ್ಟಾಳುಗಳೆಲ್ಲ ಮಸಾಲೆ ದೋಸೆಯ ಮೇಲಿನ ಆಸೆಗಾದರೂ ದೋಸೆಯ ಮೇಲೆ ಆಣೆ ಮಾಡಿ ಅದರ ಉಳಿವಿಗಾಗಿ ಹೋರಾಡಬೇಕು ಎಂದು ಕೂಗೆದ್ದಿರುವ ಲೇಖನವನ್ನು ನೀವು ಓದಿರುತ್ತೀರಿ.

ನಮ್ಮ ಬೀದಿಯನ್ನು ಸ್ವಚ್ಛಗಿಡುವ ಮೊದಲು ನಮ್ಮ ಅಂಗಳವನ್ನು ಸ್ವಚ್ಛಗಿಡಬೇಕು ಅನ್ನುವಂತೆ ಹೊಟೇಲುಗಳಲ್ಲಿ ಅತ್ಯುತ್ತಮವಾದ ಮಸಾಲೆ ದೋಸೆಯನ್ನು ಅಪೇಕ್ಷಿಸುವ ಮೊದಲು ನಮ್ಮ ಮನೆಯಲ್ಲಿಯೇ ಅತ್ಯುತ್ಕೃಷ್ಟ ಮಸಾಲೆ ದೋಸೆಯನ್ನು ಮಾಡಿ ತಿನ್ನಬೇಕು. ಅದಕ್ಕಾಗಿ ತಯಾರಾಗಿದ್ದೀರಿ ತಾನೆ? ಇಲ್ಲಿದೆ ನೋಡಿ ಮಸಾಲೆ ದೋಸೆ ಮಾಡುವ ವಿಧಾನ.

ಇದೆಲ್ಲ ಮುಗಿದ ನಂತರ. ಅಂದರೆ ಮಸಾಲೆ ದೋಸೆ ಮನೆಯಲ್ಲಿಯೇ ಮಾಡಿ ತಿಂದಾದ ನಂತರ, ಬೆಂಗಳೂರಿನಲ್ಲಿ ಅಥವಾ ಕರ್ನಾಟಕದ ಎಲ್ಲಿಯಾದರೂ ಸವಿಯಾಗಿರುವ ಮತ್ತು ಸೋವಿಯಾಗಿ ಮಸಾಲೆ ದೋಸೆ ಸಿಗುವ ನೆಚ್ಚಿನ ಹೊಟೇಲು ಯಾವುದೆಂದು ನಮಗೆ ತಿಳಿಸಿ. ಓದುಗರೂ ರುಚಿ ನೋಡಿ ಬರಲಿ.

ಪದಾರ್ಥಗಳ ಪಟ್ಟಿ ಮಾಡಿಕೊಳ್ಳಿ

ಒಂದು ಸೇರು ಅಕ್ಕಿ
ಕಾಲು ಸೇರು ಉದ್ದಿನಬೇಳೆ
ಹಿಡಿಯಷ್ಟು ಮೆಂತೆಕಾಳು
ಎರಡು ಚಮಚದಷ್ಟು ಕಡಲೆಬೇಳೆ
ಮುಷ್ಟಿಯಷ್ಟು ಗಟ್ಟಿ ಅವಲಕ್ಕಿ (ದೊಸೆ ಮೆತ್ತಗಾಗಲು)
ಚಿಟಿಕೆ ತಿನ್ನು ಸೋಡಾ (ದೊಸೆ ಉಬ್ಬೇರಿ ಬರಲು)
ರುಚಿಗೆ ಸ್ವಲ್ಪ ಉಪ್ಪು
ಅಡುಗೆ ಎಣ್ಣೆ ಅಥವಾ ತುಪ್ಪ

ತಯಾರಿಸುವ ವಿಧಾನ

ದೋಸೆ ಹಿಟ್ಟನ್ನು ರುಬ್ಬುವ ಆರು ತಾಸು ಮೊದಲು ಮೇಲೆ ತಿಳಿಸಿರುವ ಎಲ್ಲಾ ಬೇಳೆ ಕಾಳು ಅವಲಕ್ಕಿಯನ್ನು ಒಂದು ದೊಡ್ಡ ಪಾತ್ರೆಯಲ್ಲಿ ನೆನೆಸಿಡಿ. ರಾತ್ರಿ ರುಬ್ಬಿ. ಮರುದಿನ ದೋಸೆ ಹುಯ್ಯುವ ಯೋಚನೆಯಿದ್ದರೆ ಮಧ್ಯಾಹ್ನವೇ ನೆನೆಸಿಡಿ.

ರಾತ್ರಿ ಮಲಗುವ ಮೊದಲು ನಿಮ್ಮ ನೆಚ್ಚಿನ ಸೀರಿಯಲ್ ಗಳೆಲ್ಲ ಮುಗಿದ ಮೇಲೆ ಒಂದು ಬಾರಿ ಮಿಕ್ಸಿಯನ್ನು ಆನ್ ಮಾಡಿಕೊಂಡು ನೆನೆಸಿಟ್ಟವನ್ನೆಲ್ಲ ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ಒಂದು ದೊಡ್ಡದಾದ ಸ್ಟೀಲ್ ಪಾತ್ರೆಯಲ್ಲಿ ಸುರುವಿಕೊಳ್ಳಿ. ಹಿಟ್ಟಿಗೆ ಚಿಟಿಕೆ ತಿನ್ನುವ ಸೋಡಾ ಮತ್ತು ಚಮಚದಷ್ಟು ಉಪ್ಪನ್ನು ಬೆರೆಸಿ ಮುಚ್ಚಿಟ್ಟು ನಿದ್ದೆಗೆ ಜಾರಿಕೊಳ್ಳಿ. ಪಾತ್ರೆಯ ಕೆಳಗಡೆ ಒಂದು ತಟ್ಟೆಯನ್ನು ಇಡಲು ಮರೆಯಬೇಡಿ. ಏಕೆಂದರೆ, ದೋಸೆ ಬೆಳಿಗ್ಗೆ ಉಬ್ಬೇರಿ ಬಂದು ನೆಲವನ್ನೆಲ್ಲ ರಾಡಿ ರಂಪಾಟ ಮಾಡಿರುತ್ತದೆ. ತಟ್ಟೆಯಲ್ಲಿ ಬಿದ್ದರೆ ಮತ್ತೆ ಪಾತ್ರೆಗೆ ಸುರುವಿಕೊಳ್ಳಬಹುದು.

ದೋಸೆ ಹಿಟ್ಟು ನೀರಾಗಿರಬೇಕೆಂದು ಬಯಸುವವರು ಮರುದಿನ ದೋಸೆ ಹುಯ್ಯುವ ಮೊದಲು ಸ್ವಲ್ಪ ನೀರು ಬೆರೆಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ನಾನ್ ಸ್ಟಿಕ್ ತವಾಗಳು ಬಂದು ದೋಸೆಯ ರೂಪ, ರುಚಿಯನ್ನು ಬದಲಿಸಿವೆ ಅಂತ ಗೊಣಗುವವರಿದ್ದಾರೆ. ಕಬ್ಬಿಣದ ಹೆಂಚನ್ನು ಬಳಸುವವರು ಅದನ್ನೂ ಬಳಸಬಹುದು. ಎಣ್ಣೆ ಸವರಿದ ಕಬ್ಬಿಣದ ಹೆಂಚಿನ ಮೇಲಿಂದ ಎದ್ದುಬಂದ ತೂತುತೂತಿನ ದೋಸೆಯ ಸವಿ ತಿಂದವನೇ ಬಲ್ಲ.

ಈ ಅನುಕೂಲ ಇಲ್ಲದವರು ನಾನ್ ಸ್ಟಿಕ್ ತವಾವನ್ನೇ ಬಳಸಬಹುದು. ಚೆನ್ನಾಗಿ ಕಾದ ತವಾದ ಮೇಲೆ ದೋಸೆ ಹಿಟ್ಟು ಹುಯ್ದು ಒಂದು ಬದಿ ಕೆಂಪಗಾದ ಮೇಲೆ ಅದರೊಳಗೆ ಆಲೂಗಡ್ಡೆ ಪಲ್ಯವನ್ನು ಜೋಪಾನವಾಗಿ ಸುರುಳಿ ಸುತ್ತಿ ಇಟ್ಟರೆ ಮಸಾಲೆ ದೋಸೆ ತಯಾರು. ಪಕ್ಕದಲ್ಲಿ ಕೊಬ್ಬರಿ ಚಟ್ನಿ, ಒಂದು ಬಟ್ಟಲಲ್ಲಿ ಬಿಸಿಬಿಸಿ ಸಾಂಬಾರು, ಜೊತೆಗಿಷ್ಟು ಬೆಣ್ಣೆ ಇದ್ದುಬಿಟ್ಟರೆ ಹೊಟ್ಟೆ ತಾನಾಗಿಯೇ ಹಸಿಯಲು ಪ್ರಾರಂಭಿಸುತ್ತದೆ.

X
Desktop Bottom Promotion