For Quick Alerts
ALLOW NOTIFICATIONS  
For Daily Alerts

ದಿಢೀರ್ ಗೋಧಿ ಹಿಟ್ಟಿನ ಚಕ್ಕುಲಿ

By Staff
|
Crunchy wheat chakkuli
ಮಳೆಗಾಲದ, ಇಲ್ಲವೇ ಚಳಿಗಾಲದ ಸಂಜೆ ಕಾಫಿಗೋ, ಮುನ್ಸೂಚನೆ ನೀಡದೆ ಆತ್ಮೀಯರು, ಸ್ನೇಹಿತರು ಮನೆಗೆ ಬಂದಾಗಲೋ, ಇಲ್ಲಾ ಬಾಯಿಗೆ ಏನಾದರೂ ಕುರು ಕುರು ತಿನಿಸು ತಕ್ಷಣ ಬೇಕೆನಿಸಿದರೆ, ಈ ಗೋಧಿಹಿಟ್ಟಿನ ಚಕ್ಕುಲಿಯನ್ನು ಕೇವಲ ಅರ್ಧಗಂಟೆಯಲ್ಲಿ ತಯಾರಿಸಿ ಅತಿಥಿಗಳನ್ನು ಸತ್ಕರಿಸಬಹುದು. ಬಾಯಿ ಚಪಲವನ್ನೂ ತೀರಿಸಿಕೊಳ್ಳಬಹುದು. ಹೆಚ್ಚು ಸಾಮಗ್ರಿಗಳಾಗಲೀ, ಸಮಯವಾಗಲೀ ಇದನ್ನು ತಯಾರಿಸಲು ಬೇಕಾಗಿಲ್ಲ. ಮನೆಯಲ್ಲೇ ತಯಾರಿಸುವುದರಿಂದ ಆರೋಗ್ಯಕ್ಕೂ ಹಿತಕರ. ನಾಲಗೆಗೂ ರುಚಿಕರ.

* ತೇಜಸ್ವಿನಿ ಹೆಗಡೆ, ಬೆಂಗಳೂರು

ತಯಾರಿಸಲು ಬೇಕಾಗುವ ಸಾಮಗ್ರಿಗಳು

* ಗೋಧಿ ಹಿಟ್ಟು - 2 ಲೋಟ
* ಅಚ್ಚ ಖಾರದ ಪುಡಿ - ಖಾರಕ್ಕೆ ತಕ್ಕಷ್ಟು
* ಉಪ್ಪು - ರುಚಿಗೆ ತಕ್ಕಷ್ಟು
* ಬಿಳೇ ಎಳ್ಳು ಅಥವಾ ಕರೀ ಎಳ್ಳು - 1 ಚಮಚ
* ಇಂಗು - ಕಡಲೇಕಾಳು ಗಾತ್ರದಷ್ಟು
* ಕರಿಯಲು ಎಣ್ಣೆ - ಪ್ರಮಾಣಕ್ಕೆ ತಕ್ಕಂತೆ

ಮಾಡುವ ವಿಧಾನ

* ಮೊದಲಿಗೆ ಗೋಧಿ ಹಿಟ್ಟನ್ನು ಒಂದು ಒಣಗಿನ ತೋಪಿನಲ್ಲಿ ಹಾಕಿ, ಇಡ್ಲಿ ಬೇಯಿಸುವ ದಳ್ಳೆಯಲ್ಲಿ ಹಿಟ್ಟಿಗೆ ನೀರನ್ನು ಹಾಕದೇ ಹಾಗೇ ಸುಮಾರು 20 ನಿಮಿಷಗಳ ಕಾಲ ಬೇಯಿಸಬೇಕು.
* 20 ನಿಮಿಷಗಳಲ್ಲಿ ಹಿಟ್ಟು ಗಟ್ಟಿಯಾಗಿ ಬೆಂದಿರುತ್ತದೆ. ನಂತರ ಅದು ತಣಿದ ಮೇಲೆ ಹೊರ ತೆಗೆದು, ಸರಿಯಾಗಿ ಕೈಯಲ್ಲೇ ಹುಡಿಮಾಡಬೇಕು.
* ಚೆನ್ನಾಗಿ ಹುಡಿ ಹುಡಿಯಾದ ಹಿಟ್ಟಿಗೆ ಕೈಯಾಡಿಸಲು ಆಗುವಷ್ಟು ಬಿಸಿ ನೀರನ್ನು ಹಾಕಿ ಜೊತೆಗೆ ಇಂಗಿನ ನೀರು, ಖಾರದ ಪುಡಿ, ಉಪ್ಪು, ಎಳ್ಳು ಎಲ್ಲವನ್ನೂ ಸೇರಿಸಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಬೇಕು.
* ಬಾಣಲೆಯೊಳಗೆ ಎಣ್ಣೆಯನ್ನು ಹಾಕಿ ಅದು ಬಿಸಿಯಾಗಲು, ಕಲಸಿಟ್ಟ ಹಿಟ್ಟನ್ನು ಚೆನ್ನಾಗಿ ಒಮ್ಮೆ ನಾದಿ, ಚಕ್ಕುಲಿ ಮಟ್ಟಿನೊಳಗೆ ತುಂಬಿ, ಗರಿ ಗರಿಯಾಗಿ ಕರಿಯಬೇಕು.
* ಗರಿ ಗರಿ ಚಕ್ಕುಲಿಯನ್ನು ಒಣಗಿದ ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟರೆ ಸುಮಾರು ಒಂದು ತಿಂಗಳವರೆಗೂ ರುಚಿ ಕೆಡದಂತೆ ಇರುವುದು.

Story first published: Friday, August 13, 2010, 13:19 [IST]
X
Desktop Bottom Promotion