For Quick Alerts
ALLOW NOTIFICATIONS  
For Daily Alerts

ಹದಿನೈದು ನಿಮಿಷದಲ್ಲಿ ಬ್ರೆಡ್ ಉಪ್ಪಿಟ್ಟು ರೆಡಿ

By Staff
|
Super fast bread uppittu
ಉಪ್ಪಿಟ್ಟು ಮಾಡಲು ಬಾರದವರಿಗೆ, ರವೆ ಉಪ್ಪಿಟ್ಟು ತಿಂದು ತಿಂದು ಬೇಜಾರಾಗಿರುವವರಿಗೆ, ಬೇರೇನು ತಿಂಡಿ ಮಾಡಲು ಬಾರದ ಬ್ಯಾಚಲರುಗಳಿಗೆ, ಆಗಾಗ ವೆರೈಟಿ ಬೇಕೆನ್ನುವ ತಿಂಡಿಪೋತರಿಗೆ ಇಲ್ಲೊಂದು ದಿಢೀರನೆ ತಯಾರಿಸಬಹುದಾದ ತಿಂಡಿಯೊಂದಿದೆ. ಅದೇ ಬ್ರೆಡ್ ಉಪ್ಪಿಟ್ಟು. ದಯವಿಟ್ಟು ಮುಖ ಸಿಂಡರಿಸಬೇಡಿ, ತಯಾರಿಸಿ ತಿಂದು ನೋಡಿ, ನಂತರ ಮಾತನಾಡಿ.

* ಯಶ್

ಬ್ರೆಡ್ ಉಪ್ಪಿಟ್ಟು ಮಾಡಲು ರವೆ ಉಪ್ಪಿಟ್ಟು ಮಾಡಲು ಬೇಕಾಗುವ ಸಮಯ ಬೇಕಾಗಿಲ್ಲ. ಇನ್ನೊಂದು ಅಡ್ವಾಂಟೇಜ್ ಅಂದರೆ, ಒಗ್ಗರಣೆ ಹಾಕಿ ಮಾಡುವ ಯಾವುದೇ ತಿಂಡಿಗಿಂತ ವೇಗವಾಗಿ ಬ್ರೆಡ್ ಉಪ್ಪಿಟ್ಟನ್ನು ತಯಾರಿಸಬಹುದು. ಇಲ್ಲಿ ಬಳಸಲಾಗುವ ಸಾಮಗ್ರಿಗಳನ್ನು ಅಳೆದು ತೂಗುವ ಅಗತ್ಯವೂ ಇಲ್ಲ. ಯಾರ ಸಹಾಯವೂ ಇಲ್ಲದೆ, ಯಾವುದೇ ಸಮಯದಲ್ಲಿ ದಿಢೀರನೆ ತಯಾರಿಸಬಹುದಾದ ರೆಸಿಪಿ ಇದು. ಬೆಳಿಗ್ಗೆ ಮತ್ತೆ ರವೆ ಉಪ್ಪಿಟ್ಟಾ, ಅವಲಕ್ಕಿ ಒಗ್ಗರಣೆಯಾ ಅಂತ ಮುಖ ಕಿವುಚುವರಿಗೆ ಇದು ಹೇಳಿ ಮಾಡಿಸಿದ ಬ್ರೆಕ್ ಫಾಸ್ಟ್ ಅಲ್ಲ ಬ್ರೆಡ್ ಫಾಸ್ಟ್.

ಬೇಕಾಗುವ ಪದಾರ್ಥಗಳು

ಒಂದು ಪೌಂಡ್ ಬ್ರೆಡ್
ಮೂರು ಈರುಳ್ಳಿ
ಆರೆಂಟು ಹಸಿ ಮೆಣಸಿನಕಾಯಿ
ತುಣುಕು ಹಸಿ ಶುಂಠಿ
ತುರಿದ ಹಸಿ ಕೊಬ್ಬರಿ
ಕರಿಬೇವು, ಕೋತಂಬರಿ, ನಿಂಬೆಹಣ್ಣು ಇತ್ಯಾದಿ ಇತ್ಯಾದಿ.

ಮಾಡುವ ವಿಧಾನ

ಮೊದಲು ಅಂಗಡಿಗೆ ಹೋಗಿ ತಾಜಾ ಬ್ರೆಡ್ ತೆಗೆದುಕೊಂಡು ಬನ್ನಿ. ತಾಜಾ ಆಗಿ, ಮೆದುವಾಗಿದ್ದರೆ ಒಳ್ಳೆಯದು. ಪುಡಿಪುಡಿಯಾಗುವಂತಿದ್ದರೆ ಉಪ್ಪಿಟ್ಟು ಮಾಡಲೂ ಸರಿಯಾಗಿರುವುದಿಲ್ಲ, ತಿನ್ನಲೂ ಸರಿಯಾಗಿರುವುದಿಲ್ಲ. ಜಾಸ್ತಿ ಶಿಸ್ತು ಬಯಸುವವರು ಬ್ರೆಡ್ ಸ್ಲೈಸುಗಳನ್ನು ಚಾಕುವಿನ ಸಹಾಯದಿಂದ ನೀಟಾಗಿ ತುಂಡು ಮಾಡಿಕೊಳ್ಳಬಹುದು. ವ್ಯವಧಾನವಿಲ್ಲದವರು ಪರಪರ ಕೈಯಿಂದಲೇ ತುಣುಕುಗಳನ್ನಾಗಿ ಮಾಡಿಕೊಳ್ಳಬಹುದು.

ನಂತರ, ಈರುಳ್ಳಿ, ಹಸಿ ಮೆಣಸಿನಕಾಯಿ, ಹಸಿ ಶುಂಠಿಗಳನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಅಳತೆಗೊಂದಿಷ್ಟು ಎಳ್ಳೆಣ್ಣೆ ಬುಟ್ಟಿಯಲ್ಲಿ ಹಾಕಿ ಸಾಸಿವೆ, ಅರಿಷಿಣ, ಕರಿಬೇವು, ಇಂಗನ್ನು ಸೇರಿಸಿದ ನಂತರ ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಶುಂಠಿ, ತುರಿದ ಹಸಿಕೊಬ್ಬರಿಯನ್ನು ಹಾಕಿ ಚೆನ್ನಾಗಿ ತಾಳಿಸಿಕೊಳ್ಳಬೇಕು. ನಂತರ ಅದಕ್ಕೆ ತುಂಡು ಮಾಡಿದ ಬ್ರೆಡನ್ನು ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ತಾಳಿಸಬೇಕು. ಕೆಳಗೆ ಇಳಿಸಿದ ನಂತರ ಅದಕ್ಕೆ ನಿಂಬೆಹಣ್ಣನ್ನು ಹಿಂಡಿ ಕೈಆಡಿಸಿದರಾಯಿತು, ಬ್ರೆಡ್ ಉಪ್ಪಿಟ್ ತಯಾರ್.

Story first published: Wednesday, September 9, 2009, 17:25 [IST]
X
Desktop Bottom Promotion