For Quick Alerts
ALLOW NOTIFICATIONS  
For Daily Alerts

ಅಕ್ಕಿ- ಜೋಳದ ಹಿಟ್ಟಿನ ಸಮಾಗಮದ ರೊಟ್ಟಿ

By * ಉಮಾ ಸುಬ್ರಮಣ್ಯ
|
Rice-jowar flour mix roti recipe
ಉತ್ತರ ಕರ್ನಾಟಕದಲ್ಲಿ ಅಕ್ಕಿ ರೊಟ್ಟಿಗೂ, ಜೋಳದ ರೊಟ್ಟಿಗೂ ಅಂತಹ ವ್ಯತ್ಯಾಸವಿರುವುದಿಲ್ಲ. ಜೋಳದ ರೊಟ್ಟಿ ಮಾಡಿದಂತೆಯೇ ಅಕ್ಕಿ ರೊಟ್ಟಿಯನ್ನೂ ಮಾಡುತ್ತಾರೆ. ಅದಕ್ಕೆ ಎಣ್ಣೆ ಹಚ್ಚುವುದಿಲ್ಲ, ಈರುಳ್ಳಿ ಹೆಚ್ಚಿ ಹಾಕುವುದಿಲ್ಲ, ಮೆಣಸಿನಕಾಯಿ ಮತ್ತಿತರ ಪದಾರ್ಥಗಳನ್ನು ಬೆರೆಸುವುದೇ ಇಲ್ಲ. ಆದರೆ, ದಕ್ಷಿಣ ಕರ್ನಾಟಕದಲ್ಲಿ ಅಕ್ಕಿ ರೊಟ್ಟಿ ಮಾಡುವ ವಿಧಾನವೇ ಬೇರೆ.

ಅಕ್ಕಿ ರೊಟ್ಟಿಯನ್ನೂ ತಿಂದಿರುತ್ತೀರಿ, ಜೋಳದ ರೊಟ್ಟಿಯನ್ನೂ, ಮನೆಯಲ್ಲಿ ಮಾಡದಿದ್ದರೆ ಹೋಟೆಲುಗಳಲ್ಲಿ ಖಂಡಿತ ಸವಿದಿರುತ್ತೀರಿ. ಆದರೆ, ಜೋಳ ಮತ್ತು ಅಕ್ಕಿ ಮಿಶ್ರಣ ಮಾಡಿದ ರೊಟ್ಟಿ ತಿಂದಿದ್ದೀರಾ? ಖಂಡಿತ ತಿಂದಿರಲಾರಿರಿ. ಇವೆರಡು ಹಿಟ್ಟುಗಳನ್ನು ಬೆರೆಸಿ ರೊಟ್ಟಿ ತಯಾರಿಸಿದರೆ ರುಚಿಯೂ ಹೆಚ್ಚು ಮತ್ತು ಆರೋಗ್ಯಕರ ಕೂಡ.

ದಕ್ಷಿಣ ಕರ್ನಾಟಕದಲ್ಲಿ ಅಕ್ಕಿ ರೊಟ್ಟಿ ತಯಾರಿಸುವಂತೆ ಈ ಅಕ್ಕಿ, ಜೋಳದ ಹಿಟ್ಟಿನ ಮಿಶ್ರಣದ ರೊಟ್ಟಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು

ಅಕ್ಕಿ ಹಿಟ್ಟು 2 ಬಟ್ಟಲು
ಜೋಳದ ಹಿಟ್ಟು 2 ಬಟ್ಟಲು
ಈರುಳ್ಳಿ ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
ಈರುಳ್ಳಿ ಹೂವು ಅಥವ ಸ್ಪ್ರಿಂಗ್ ಆನಿಯನ್ ಸಿಕ್ಕಿದರೆ ಸಣ್ಣಗೆ ಹೆಚ್ಚಿ ಇಟ್ಟುಕೊಳ್ಳಿ
ಕ್ಯಾರೆಟ್ ತುರಿ 1 ಬಟ್ಟಲು
ಹಸಿಮೆಣಸಿನ ಕಾಯಿ - 3 ಸಣ್ಣಗೆ ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು - ಸಣ್ಣಗೆ ಹೆಚ್ಚಿದ್ದು
ಕರಿಬೇವಿನ ಸೊಪ್ಪು - ಸಣ್ಣಗೆ ಹೆಚ್ಚಿದ್ದು
ಇಂಗು ರುಚಿಗೆ ತಕ್ಕಷ್ಟು
ಬಿಳಿ ಎಳ್ಳು 1 ಚಮಚ
ಜೀರಿಗೆ 1 ಚಮಚ
ಓಮ್ ಕಾಳು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮೇಲಿನ ಎಲ್ಲ ಪದಾರ್ಥಗಳನ್ನು ಒಂದು ಅಗಲ ಪಾತ್ರೆಗೆ ಹಾಕಿ, ಸ್ವಲ್ಪ ಸ್ವಲ್ಪವೆ ನೀರು ಹಾಕಿ ರೊಟ್ಟಿ ಹದಕ್ಕೆ ಕಲೆಸಿಕೊಳ್ಳಿ. ಆಮೇಲೆ ಬಾಣಲೆಯಲ್ಲಿ ಅಥವ ತವದ ಮೇಲೆ ಎಣ್ಣೆ ಹಾಕಿ ರೊಟ್ಟಿಯಂತೆ ತಟ್ಟಿ ಚೆನ್ನಾಗಿ ಎಣ್ಣೆ ಹಾಕಿ ಎರಡು ಕಡೆ ಬೇಯಿಸಿ. ಬಾಣಲೆ ರೊಟ್ಟಿ ಬಲು ರುಚಿ.

ಇದನ್ನು ಚಟ್ನಿಪುಡಿ, ಉಪ್ಪಿನ ಕಾಯಿಯೊಂದಿಗೆ ತುಪ್ಪ ಹಾಕಿ ತಿಂದರೆ ಆಹಾ ಎಂಥ ರುಚಿ. ಇಲ್ಲವಾದರೆ ಕಾಯಿ ಚಟ್ನಿ ಜೊತೆ ಕೂಡ ತಿನ್ನಬಹುದು. ಮಾಡಲು ಸುಲಭ ಹಾಗು ದಿನಾ ಬೇರೆ ಬೇರೆ ರುಚಿ ಬಯಸುವರಿಗೆ ಇದೊಂದು ಉತ್ತಮ ಅವಕಾಶ. ಇದರ ಜೊತೆ ಸ್ವಲ್ಪ ಗೋಧಿ ಹಿಟ್ಟು ಕೂಡ ಬೆರೆಸಿ ಮಾಡಬಹುದು. ಆರೋಗ್ಯದ ಬಗ್ಗೆ ಕಾಳಜಿ ಇರುವವರು ಬರಿ ಅಕ್ಕಿ ಹಿಟ್ಟಿನ ಬದಲು ಈ ರೀತಿ ಮಾಡಬಹುದು. ಜೋಳ, ಗೋಧಿ ಆರೋಗ್ಯಕ್ಕೆ ಬಹಳ ಒಳ್ಳೆಯದು.

English summary

Rice-jowar flour mix roti recipe | Tasty and healthy food | ಅಕ್ಕಿ- ಜೋಳದ ಹಿಟ್ಟಿನ ಸಮಾಗಮದ ರೊಟ್ಟಿ

Rice-jowar flour mix roti recipe. Tasty and healthy food for the breakfast. Recipe by Uma Subramanya, Bangalore.
Story first published: Thursday, January 19, 2012, 14:42 [IST]
X
Desktop Bottom Promotion