For Quick Alerts
ALLOW NOTIFICATIONS  
For Daily Alerts

ಹೆರಿಗೆ ಸನ್ನಿಹಿತವಾಗುತ್ತಿದೆ ಎಂಬ ಸೂಚನೆಗಳಿವು

|

ಪ್ರಥಮ ಬಾರಿ ಗರ್ಭ ಧರಿಸಿದ ಪ್ರತಿ ಗರ್ಭವತಿಗೂ ಹೆರಿಗೆಯ ಬಗ್ಗೆ ಆತಂಕ ಉದ್ವೇಗ ಇದ್ದೇ ಇರುತ್ತದೆ. ಹೆರಿಗೆಯ ನೋವು ಈ ಜಗತ್ತಿನ ಅತಿ ದೊಡ್ಡ ನೋವು ಎಂದು ನಮಗೆಲ್ಲಾ ತಿಳಿದೇ ಇರುವ ವಿಷಯವಾಗಿದ್ದು ಇದನ್ನು ಅನುಭವಿಸಬೇಕಾಗಿರುವ ಆಕೆ ಈ ನೋವು ಎಷ್ಟು ಪ್ರಮಾಣದಲ್ಲಿರುತ್ತದೆ, ಎಷ್ಟು ಹೊತ್ತು ಇರುತ್ತದೆ, ನೋವು ಬಂದಾಗ ನಿಜವಾಗಿಯೂ ಹೆರಿಗೆಯಾಗುತ್ತದೆಯೇ ಅಥವಾ ಇದೊಂದು ತಪ್ಪು ಸೂಚನೆಯಾಗಿರಬಹುದೇ ಎಂಬೆಲ್ಲಾ ಪ್ರಶ್ನೆಗಳು ಆಕೆಯನ್ನು ಕಾಡುತ್ತವೆ.

Signs Of Labor Pain

ಆದರೆ ಈ ಪ್ರಶ್ನೆಗಳಿಗೆ ಉತ್ತರ ನೀಡುವುದು ಅಷ್ಟು ಸುಲಭವಲ್ಲ. ಪ್ರತಿ ಗರ್ಭವತಿಯ ಆರೋಗ್ಯ, ಮಗುವಿನ ಆರೋಗ್ಯ, ಗಾತ್ರ, ಇತರ ದೈಹಿಕ ಸ್ಥಿತಿಗಳು, ಕ್ಲಿಷ್ಟತೆಗಳು, ಈಗಾಗಲೇ ಇರುವ ಅನಾರೋಗ್ಯ, ಗರ್ಭಾವಸ್ಥೆಯಲ್ಲಿ ಎದುರಾದ ಬದಲಾವಣೆ, ತಾತ್ಕಾಲಿಕ ಮಧುಮೇಹ ಮೊದಲಾದ ಹತ್ತು ಹಲವು ಮಾಹಿತಿಗಳನ್ನು ಆಧರಿಸಿ ಪ್ರತಿ ಹೆರಿಗೆಯೂ ಭಿನ್ನವೇ ಆಗಿರುತ್ತದೆ.

ಆದರೆ, ಹೆರಿಗೆಯ ಸಮಯ ಹತ್ತಿರಾಗುತ್ತಿದೆ ಎಂಬುದನ್ನು ಸೂಚಿಸುವ ಕೆಲವು ಸಂಜ್ಞೆಗಳು ಮಾತ್ರ ಪ್ರತಿ ಗರ್ಭವತಿಗೂ ಎದುರಾಗಿಯೇ ಆಗುತ್ತವೆ. ಇವನ್ನು ಸೂಕ್ಷ್ಮವಾಗಿ ಗಮನಿಸಿದ ಹಿರಿಯ ಮಹಿಳೆಯರು ಹೆರಿಗೆಯ ಸಮಯವನ್ನೂ ಸ್ಥೂಲವಾಗಿ ಊಹಿಸಿಬಿಡುತ್ತಾರೆ. ಬನ್ನಿ, ಹೆರಿಗೆ ಸೂಚನೆಯನ್ನು ಯಾವ ಸಂಜ್ಞೆಗಳು ನೀಡುತ್ತವೆ ಎಂಬುದನ್ನು ನೋಡೋಣ:

ಹೆರಿಗೆ ಎಂದರೇನು?

ಹೆರಿಗೆ ಎಂದರೇನು?

ನವಮಾಸ ಕಳೆದು ಗರ್ಭದಲ್ಲಿರುವ ಮಗು ಈ ಜಗತ್ತಿಗೆ ಆಗಮಿಸುವ ಕ್ರಿಯೆಯೇ ಹೆರಿಗೆ. ಹೆರಿಗೆಯ ಮೊದಲ ಲಕ್ಷಣಗಳಲ್ಲಿ ಗರ್ಭಕೋಶ ಹಿಂದಿನಿಂದ ಸಂಕುಚಿತಗೊಳ್ಳುತ್ತಾ ಮಗುವನ್ನು ಹೊರದೂಡುವ ಸೂಚನೆ ಗರ್ಭವತಿಯ ಅನುಭವಕ್ಕೆ ಬರುತ್ತದೆ. ಮಗು ಪೂರ್ಣವಾಗಿ ಗರ್ಭದಿಂದ ಹೊರಬಂದು ಮೊದಲಾಗಿ ಅಳುವಾಗ ಹೆರಿಗೆಯ ಮುಖ್ಯ ಹಂತ ಮುಗಿಯುತ್ತದೆ. ನಂತರವೂ ಇತರ ಕಾರ್ಯಗಳನ್ನು ಪ್ರಸೂತಿ ತಜ್ಞರು ನಿರ್ವಹಿಸುತ್ತಾರೆ. ನುರಿತ ದಾದಿಯರು ನೆರವಿಗೆ ಬರುತ್ತಾರೆ ಹಾಗೂ ತಾಯಿ ಮತ್ತು ಮಗು ಆರೋಗ್ಯವಾಗಿರುವ ಬಗ್ಗೆ ಎಲ್ಲಾ ಕಾಳಜಿಯನ್ನು ವಹಿಸುತ್ತಾರೆ.

ಒಂದು ವೇಳೆ ನೀವು ಗರ್ಭವತಿಯಾಗಿದ್ದು ಮಗುವಿನ ನಿರೀಕ್ಷೆಯಲ್ಲಿದ್ದರೆ ನಿಮಗೆ ಗರ್ಭಾವಸ್ಥೆಯ ಕಡೆಯ ದಿನಗಳಲ್ಲಿ ಯಾವ ದಿನ ಹೆರಿಗೆಯಾಗಬಹುದು ಎಂಬುದನ್ನು ಕೆಲವು ಸಂಜ್ಞೆಗಳ ಮೂಲಕ ಊಹಿಸಬಹುದು. ಈ ಬಗ್ಗೆ ಕೆಲವು ಸೂಚನೆಗಳನ್ನು ನಿಮ್ಮ ದೇಹವೇ ನೀಡುತ್ತದೆ ಹಾಗೂ ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಇವುಗಳನ್ನು ಸ್ಪಷ್ಟವಾಗಿ ಅನುಭವಿಸಬಹುದು.

1. ನಿಮ್ಮ ಮಗು ಈಗ ಕೆಳಕ್ಕೆ ಜಾರುತ್ತಾ ಹೋಗುತ್ತಿರುವ ಅನುಭವ

1. ನಿಮ್ಮ ಮಗು ಈಗ ಕೆಳಕ್ಕೆ ಜಾರುತ್ತಾ ಹೋಗುತ್ತಿರುವ ಅನುಭವ

ಪ್ರಾರಂಭಿಕ ದಿನಗಳಿಂದ ಬೆಳೆಯುತ್ತಿದ್ದ ಮಗು ಬೆಳೆಯುತ್ತಿದ್ದರೂ ಹೆಚ್ಚೂ ಕಡಿಮೆ ಹೊಟ್ಟೆಯ ನಡುಭಾಗದಲ್ಲಿದ್ದು ಹೆರಿಗೆಯ ದಿನ ಹತ್ತಿರಾಗುತ್ತಿದ್ದಂತೆ ನಿಧಾನವಾಗಿ ಕೆಳಜಾರುತ್ತಿರುವ ಅನುಭವ ನಿಮಗಾಗುತ್ತದೆ. ಸಾಮಾನ್ಯವಾಗಿ ಮೂರನೆಯ ತ್ರೈಮಾಸಿಕದ ಮೂರನೆಯ ತಿಂಗಳಲ್ಲಿ ಈ ಪರಿ ಪ್ರಾರಂಭವಾಗುತ್ತದೆ ಹಾಗೂ ಮಗು ಹೆಚ್ಚೂ ಕಡಿಮೆ ಸೊಂಟದ ತಳಕ್ಕೆ ಹೋಗಿ ಕುಳಿತಂತಹ ಅನುಭವವಾಗುತ್ತದೆ. ಕೆಲವರಲ್ಲಿ ಇನ್ನೂ ಮೊದಲೇ ಕಾಣಿಸಿಕೊಳ್ಳಬಹುದು.

ಆದರೆ ಈ ಅನುಭವ ಮೊದಲ ಹೆರಿಗೆಯಲ್ಲಿ ಮಾತ್ರವೇ ಆಗುತ್ತದೆ, ಎರಡನೆಯ ಮತ್ತು ಮುಂದಿನ ಹೆರಿಗೆಗಳಲ್ಲಿ ಹೆರಿಗೆಯ ನೋವು ಪ್ರಾರಂಭವಾಗುವವರೆಗೂ ಈ ಅನುಭವ ಆಗುವುದಿಲ್ಲ ಎಂದು ಎರಡು ಮಕ್ಕಳ ತಾಯಂದಿರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಅಂದರೆ ಈ ಮೂಲಕ ಮಗು ಗರ್ಭದಿಂದ ಹೊರಬಂದು ಈ ಜಗತ್ತಿನಲ್ಲಿ ಕಣ್ಣುಬಿಡುವ ಕ್ರಿಯೆಗೆ ಚಾಲನೆ ದೊರಕುತ್ತದೆ. ಈ ಹಂತದಲ್ಲಿ ಮಗುವಿನ ತಲೆ ಮೊದಲಾಗಿ ಹೊರಬರುವಂತೆ ಪೂರ್ಣವಾಗಿ ತಲೆಕೆಳಗಾಗಿರುತ್ತದೆ.

ಇದುವರೆಗೂ ನೀವು ಸಹಜವಾಗಿ ಹೆಜ್ಜೆ ಹಾಕುತ್ತಿದ್ದು ಈಗ ಚಿಕ್ಕ ಚಿಕ್ಕ ಹೆಜ್ಜೆಗಳನ್ನು ಹಾಕುತ್ತಿರುವುದು ನಿಮಗೆ ಗಮನಕ್ಕೆ ಬರಬಹುದು.

ಅಲ್ಲದೇ ಇದುವರೆಗೆ ಹೆಚ್ಚೇ ಹಿಂದಕ್ಕೆ ಬಾಗಿರುತ್ತಿದ್ದ ನೀವು ಅಷ್ಟು ಹಿಂದಕ್ಕೆ ಬಾಗುತ್ತಿಲ್ಲವೆನ್ನುವುದೂ ನಿಮಗೆ ಗಮನಕ್ಕೆ ಬರುತ್ತದೆ. ಮೊದಲೇ ಹೇಳಿದಂತೆ ಈ ವ್ಯತ್ಯಾಸಗಳು ಅತಿ ಸೂಕ್ಷ್ಮವಾಗಿದ್ದು ನೀವು ಗಮನವಿಟ್ಟು ನೋಡಬೇಕಾಗುತ್ತದೆ. ಅಷ್ಟೇ ಅಲ್ಲ, ಮಗು ಈಗ ಹೆಚ್ಚು ಕೆಳಕ್ಕೆ ಬಂದಿರುವ ಕಾರಣ ನಿಮ್ಮ ಮೂತ್ರಕೋಶ ಹೆಚ್ಚು ಮೂತ್ರವನ್ನು ಸಂಗ್ರಹಿಸಿಟ್ಟುಕೊಳ್ಳಲು ಸ್ಥಳಾವಕಾಶ ಕಡಿಮೆ ಇರುವ ಕಾರಣ ಹಿಂದಿನ ದಿನಗಳಿಗಿಂತಲೂ ನಿಮಗೆ ಬೇಗ ಬೇಗನೇ ಮೂತ್ರಕ್ಕೆ ಅವಸರವಾಗುತ್ತದೆ ಮತ್ತು ಮೂತ್ರದ ಪ್ರಮಾಣ ಅಲ್ಪವಾಗಿರುವುದನ್ನು ಗಮನಿಸಬಹುದು.

ಆದರೆ ಒಳ್ಳೆಯ ಸಂಗತಿ ಎಂದರೆ ಇದುವರೆಗೂ ಹೊಟ್ಟೆಯ ಮೇಲ್ಭಾಗದಲ್ಲಿದ ಮಗು ನಿಮ್ಮ ಶ್ವಾಸಕೋಶಗಳು ಹೆಚ್ಚು ವಿಸ್ತರಿಸಲು ಅವಕಾಶ ಮಾಡಿಕೊಡುತ್ತಿರಲಿಲ್ಲ, ಹಾಗಾಗಿ ನೀವು ಚಿಕ್ಕ ಉಸಿರುಗಳನ್ನು ಎಳೆದುಕೊಳ್ಳುತ್ತಿದ್ದಿರಿ. ಈಗ ಹೆಚ್ಚು ವಿಸ್ತರಿಸಲು ಸ್ಥಳಾವಕಾಶ ದೊರೆತ ಕಾರಣ ನೀವು ಹೆಚ್ಚು ದೀರ್ಘವಾಗಿ ಉಸಿರಾಡಬಹುದು.

2. ನಿಮ್ಮ ಗರ್ಭಕಂಠ ತೆರೆಯತೊಡಗುತ್ತದೆ

2. ನಿಮ್ಮ ಗರ್ಭಕಂಠ ತೆರೆಯತೊಡಗುತ್ತದೆ

ಗರ್ಭಕೋಶ ಮಗುವನ್ನು ಹೊರದೂಡುವಾಗ ಸಹಜವಾಗಿಯೇ ಇದುವರೆಗೆ ಮುಚ್ಚಿದ್ದ ಗರ್ಭಕಂಠ (cervix) ಈಗ ತೆರೆಯತೊಡಗುತ್ತದೆ ಮತ್ತು ಇದುವರೆಗೆ ದೃಢವಾಗಿದ್ದ ಈ ಭಾಗ ಈಗ ಮೃದುವಾಗತೊಡಗುತ್ತದೆ. (ಈ ಕ್ರಿಯೆಗೆ efface ಎನ್ನುತ್ತಾರೆ) ಹೆರಿಗೆಯ ಕೆಲವೇ ದಿನಗಳ ಮುನ್ನಾದಿನಗಳಲ್ಲಿ ಇದು ಪ್ರಾರಂಭವಾಗುತ್ತವೆ.

ಕೆಲವರಿಗೆ ಇದು ಒಂದು ವಾರಕ್ಕೂ ಮೊದಲೇ ಪ್ರಾರಂಭವಾಗಬಹುದು. ವಾಸ್ತವದಲ್ಲಿ ನಿಮ್ಮ ನಿಯಮಿತ ತಪಾಸಣೆಯಲ್ಲಿ ವೈದ್ಯರು ಈ ಹಂತವನ್ನು ತಪ್ಪದೇ ಪರಿಶೀಲಿಸಿ ಗರ್ಭಕಂಠ ಎಷ್ಟು ತೆರೆದಿದೆ ಎಂಬುದನ್ನು ಗಮನಿಸಿ ಹೆರಿಗೆಯ ದಿನವನ್ನು ದೃಢೀಕರಿಸುತ್ತಾರೆ.

ಆದರೆ ಎಷ್ಟು ದಿನಗಳ ಮುನ್ನ ಮತ್ತು ಎಷ್ಟು ವೇಗವಾಗಿ ಈ ಕ್ರಿಯೆ ನಡೆಯುತ್ತದೆ ಎಂಬುದನ್ನು ಪ್ರತಿ ಗರ್ಭವತಿಗೂ ಏಕಸಮಾನವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಹಾಗಾಗಿ ಈ ಕ್ರಿಯೆ ನಿಮ್ಮಲ್ಲಿ ಅತಿ ನಿಧಾನವಾಗಿ ಆಗುತ್ತಿದ್ದರೆ ಅಥವಾ ಇನ್ನೂ ಆಗಿಲ್ಲದೇ ಇದ್ದರೆ ಇದಕ್ಕೆ ತಲೆಬಿಸಿ ಮಾಡಿಕೊಳ್ಳಬೇಕಾಗಿಲ್ಲ.

3. ನಿಮಗೆ ಹೆಚ್ಚು ಸೆಡೆತ ಮತ್ತು ಬೆನ್ನುನೋವು ಕಾಣಿಸಿಕೊಳ್ಳುತ್ತದೆ

3. ನಿಮಗೆ ಹೆಚ್ಚು ಸೆಡೆತ ಮತ್ತು ಬೆನ್ನುನೋವು ಕಾಣಿಸಿಕೊಳ್ಳುತ್ತದೆ

ಎರಡನೆಯ ಅಥವಾ ಮುಂದಿನ ಹೆರಿಗೆಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ಹೆರಿಗೆ ಹತ್ತಿರಾಗುತ್ತಿದ್ದಂತೆಯೇ ಬೆನ್ನು ನೋವು, ಸೊಂಟ ನೋವು ಮತ್ತು ಕೆಳಹೊಟ್ಟೆಯ ಭಾಗದಲ್ಲಿ ನೋವು ಹೆಚ್ಚುತ್ತವೆ. ಮೂಳೆಸಂದುಗಳು ಮತ್ತು ಸ್ನಾಯುಗಳಲ್ಲಿ ಆಗಾಗ ಸೆಡೆತ ಕಾಣಿಸಿಕೊಳ್ಳುತ್ತವೆ ಮತ್ತು ಹೆರಿಗೆಯ ದಿನ ಹತ್ತಿರಾಗುತ್ತಿದ್ದಂತೆಯೇ ಇವು ಇನ್ನಷ್ಟು ಹೆಚ್ಚುತ್ತವೆ.

4. ಮೂಳೆಸಂಧುಗಳು ಹೆಚ್ಚು ಸಡಿಲವಾದಂತೆ ಅನ್ನಿಸುತ್ತದೆ

4. ಮೂಳೆಸಂಧುಗಳು ಹೆಚ್ಚು ಸಡಿಲವಾದಂತೆ ಅನ್ನಿಸುತ್ತದೆ

ಗರ್ಭಾವಸ್ಥೆಯ ಎಲ್ಲಾ ದಿನಗಳಲ್ಲಿ ನಿಮ್ಮ ದೇಹದಲ್ಲಿ ಸ್ರವಿಸಿದ್ದ relaxin ಎಂಬ ರಸದೂತ ನಿಮ್ಮ ದೇಹದ ಎಲ್ಲಾ ಮೂಳೆಸಂಧುಗಳನ್ನು ಕೊಂಚವೇ ಸಡಿಲಗೊಳಿಸಿರುತ್ತದೆ. ಅಂದರೆ ಹಿಂದಿನ ದಿನಗಳಲ್ಲಿ ಬಾಗುವುದಕ್ಕಿಂತಲೂ ಕೊಂಚ ಹೆಚ್ಚೇ ಬಾಗುತ್ತದೆ.

ಹೆರಿಗೆಯ ಹಿಂದಿನ ದಿನಗಳಲ್ಲಿ ದೇಹದ ಎಲ್ಲಾ ಮೂಳೆಸಂಧುಗಳು ಸಡಿಲವಾಗಿವೆ ಮತ್ತು ಹೆಚ್ಚು ನಿರಾಳವಾಗಿರುವುದನ್ನು ನೀವು ಗಮನಿಸಬಹುದು. ವಾಸ್ತವದಲ್ಲಿ, ಹೀಗೆ ಆಗುವುದು ತುಂಬಾ ಅಗತ್ಯವಾಗಿದೆ. ಮಗು ಹೊರಬರುವಾಗ ನಿಮ್ಮ ದೇಹ ಅತಿ ಹೆಚ್ಚು ಬಳುಕಬೇಕಾಗುತ್ತದೆ ಮತ್ತು ತನ್ಮೂಲಕ ಹೆರಿಗೆ ಸುಲಭವಾಗುತ್ತದೆ.

5. ನಿಮಗೆ ಅತಿಸಾರ ಎದುರಾಗುತ್ತದೆ

5. ನಿಮಗೆ ಅತಿಸಾರ ಎದುರಾಗುತ್ತದೆ

ಹೆರಿಗೆಯ ದಿನ ಹತ್ತಿರಾಗುತ್ತಿದ್ದಂತೆಯೇ ಗರ್ಭಕೋಶ ಮಗುವನ್ನು ಹೊರದೂಡುವ ಕ್ರಿಯೆಯಲ್ಲಿ ಸಕ್ರಿಯವಾಗಿದ್ದರೆ ಇದೇ ಸಮಯದಲ್ಲಿ ದೇಹದ ಇತರ ಸ್ನಾಯುಗಳೂ ಹೆರಿಗೆಗೆ ತಮ್ಮ ಪಾಲಿನ ನೆರವು ನೀಡಲು ಸಜ್ಜಾಗತೊಡಗುತ್ತವೆ. ಇದರಲ್ಲಿ ಗುದನಾಳದ ಸ್ನಾಯುಗಳೂ ಸೇರಿವೆ. ಪರಿಣಾಮವಾಗಿ ಹೆರಿಗೆ ಹತ್ತಿರಾಗುತ್ತಿದ್ದಂತೆಯೇ ಹೆಚ್ಚು ಹೆಚ್ಚು ಅತಿಸಾರ ಎದುರಾಗುತ್ತದೆ.

ವಾಸ್ತವದಲ್ಲಿ ಹೆರಿಗೆಯ ಸಮಯದಲ್ಲಿ ಕರುಳುಗಳು ಬಹುತೇಕ ಖಾಲಿಯಾಗಿದ್ದಷ್ಟೂ ಒಳ್ಳೆಯದು. ಇದೇ ಕಾರಣಕ್ಕೆ ಹೆರಿಗೆಯ ಹಿಂದಿನ ದಿನದಿಂದಲೂ ಗರ್ಭವತಿಗೆ ಏನನ್ನೂ ತಿನ್ನಲು ಕೊಡುವುದಿಲ್ಲ. ಬದಲಿಗೆ ನರಗಳ ಮೂಲಕ ಅಗತ್ಯ ಪೋಷಕಾಂಶಗಳನ್ನು ನೀಡಲಾಗುತ್ತದೆ. ವಾಸ್ತವದಲ್ಲಿ ಕರುಳುಗಳು ಖಾಲಿ ಇದ್ದರೂ ಹೆರಿಗೆಯ ಸಮಯದಲ್ಲಿ ಕೊಂಚ ಮಲವಿಸರ್ಜನೆಯನ್ನು ನಿರೀಕ್ಷಿಸಬಹುದು.

ಗರ್ಭವತಿಗೆ ಕೊಂಚ ಮುಜುಗರ ಎನಿಸಿದರೂ ಇದು ನೈಸರ್ಗಿಕವಾಗಿದೆ ಹಾಗೂ ಆರೋಗ್ಯಕರ ಸಂಜ್ಞೆಯೂ ಆಗಿದೆ. ಆದರೆ ಸಾಕಷ್ಟು ನೀರನ್ನು ಕುಡಿಯುತ್ತಿರುವುದು ಮಾತ್ರ ಅಗತ್ಯ.

6. ತೂಕ ಏರಿಕೆ ನಿಲ್ಲುತ್ತದೆ, (ಕಡಿಮೆಯಾಗಲೂಬಹುದು)

6. ತೂಕ ಏರಿಕೆ ನಿಲ್ಲುತ್ತದೆ, (ಕಡಿಮೆಯಾಗಲೂಬಹುದು)

ಗರ್ಭಾವಸ್ಥೆಯ ಎರಡನೆಯ ತಿಂಗಳಿನಿಂದ ಸತತವಾಗಿ ಏರುತ್ತಿದ್ದ ನಿಮ್ಮ ತೂಕ ಈಗ ಏರದೇ ಇದ್ದಲೇ ಇರುತ್ತದೆ ಅಥವಾ ಕೆಲವರಲ್ಲಿ ಕೊಂಚ ಇಳಿಕೆಯೂ ಕಾಣಿಸಿಕೊಳ್ಳಬಹುದು. ಇದು ಸಹಜವಾಗಿದೆ ಹಾಗೂ ಇದರಿಂದ ನಿಮ್ಮ ಮಗುವಿನ ತೂಕವೇನೂ ಕಡಿಮೆಯಾಗುವುದಿಲ್ಲ.

ಮಗುವಿನ ತೂಕದಲ್ಲಿ ಏರಿಕೆ ಏಕಪ್ರಕಾರವಾಗಿ ಮುಂದುವರೆಯುತ್ತಿರುತ್ತದೆ. ನಿಮ್ಮ ತೂಕ ಇಳಿಕೆಗೆ ನಿಜವಾದ ಕಾರಣವೆಂದರೆ ಗರ್ಭಕೋಶವನ್ನು ಸುತ್ತುವರೆದಿರುವ ಆಮ್ನಿಯಾಟಿಕ್ ದ್ರವದ ಪ್ರಮಾಣ ತಗ್ಗುವುದು. ಹಾಗಾಗಿ ನೀವು ಹೆಚ್ಚು ಹೆಚ್ಚು ಹೆಚ್ಚು ಮೂತ್ರವಿಸರ್ಜನೆಗೆ ಹೋಗುತ್ತಿರುತ್ತೀರಿ ಮತ್ತು ಮೂತ್ರದ ಸಾಂದ್ರತೆಯೂ ಹೆಚ್ಚುತ್ತದೆ.

7. ದಿನವಿಡೀ ಸುಸ್ತು ಆವರಿಸುತ್ತದೆ, ಸುಮ್ಮನೇ ಮಲಗೋಣ ಎನ್ನಿಸುತ್ತದೆ

7. ದಿನವಿಡೀ ಸುಸ್ತು ಆವರಿಸುತ್ತದೆ, ಸುಮ್ಮನೇ ಮಲಗೋಣ ಎನ್ನಿಸುತ್ತದೆ

ಸಾಮಾನ್ಯವಾಗಿ ಮೊದಲ ತ್ರೈಮಾಸಿಕ ಮತ್ತು ಮೂರನೆಯ ತ್ರೈಮಾಸಿಕದಲ್ಲಿ ಗರ್ಭವತಿಗೆ ಹೆಚ್ಚಿನ ಆಯಾಸ ಕಾಣಿಸಿಕೊಳ್ಳುತ್ತದೆ. ಈ ಆಯಾಸ ಕೆಲವೊಮ್ಮೆ ಎಷ್ಟು ಹೆಚ್ಚಿರುತ್ತದೆ ಎಂದರೆ ಒಂದು ಕಡ್ಡಿಯನ್ನೂ ಎತ್ತಲಿಕ್ಕೆ ಸಾಧ್ಯವಿಲ್ಲ ಎನ್ನುವಷ್ಟಿರುತ್ತದೆ. ಇದಕ್ಕೆ ಕಾರಣವೂ ಇದೆ, ನಿಮ್ಮ ದೊಡ್ಡ ಗಾತ್ರದ ಹೊಟ್ಟೆ ಮೂತ್ರಕೋಶವನ್ನು ಹೆಚ್ಚು ಸಂಕುಚಿತಗೊಳಿಸಿ ಕೊಂಚ ಮೂತ್ರ ಸಂಗ್ರಹವಾದರೂ ಎಚ್ಚರಾಗಿಸಿ ಶೌಚಾಲಯಕ್ಕೆ ಹೋಗುವಂತೆ ಮಾಡುತ್ತಿರುವ ಕಾರಣ ನಿಮ್ಮ ನಿದ್ದೆ ಭಂಗಗೊಂಡಿದ್ದು ಇದು ಆಯಾಸಕ್ಕೆ ನೇರವಾಗಿ ಕಾರಣವಾಗಿದೆ.

ಹೆರಿಗೆ ಹತ್ತಿರಾಗುತ್ತಿದ್ದಂತೆಯೇ ನಿಮ್ಮ ಹೊಟ್ಟೆಗೆ ಹೆಚ್ಚಿನ ಬೆಂಬಲ ನೀಡಲು ಕೆಲವು ದಿಂಬುಗಳನ್ನು ಇರಿಸಿಕೊಳ್ಳಿ. ಕೆಲವು ಗರ್ಭವತಿಯರಿಗೆ ಹೆರಿಗೆಯ ದಿನ ಹತ್ತಿರಾಗುತ್ತಿದ್ದಂತೆಯೇ ಹೆಚ್ಚು ಚಟುವಟಿಕೆಯಲ್ಲಿ ತೊಡಗುವ ಹಂಬಲ ಎದುರಾಗುತ್ತದೆ. ಕಣ್ಣಿಗೆ ಕಂಡಿದ್ದನ್ನೆಲ್ಲಾ ಸ್ವಚ್ಛಗೊಳಿಸುವ ಮನಸ್ಸಾಗುತ್ತದೆ. ಎಲ್ಲಿಯವರೆಗೆ ಇದು ಅತಿರೇಕಕ್ಕೆ ಹೋಗುವುದಿಲ್ಲವೋ ಎಲ್ಲವೂ ಸರಿಯೇ ಹೌದು.

8. ನಿಮ್ಮ ಲೋಳೆಯ ಮುಚ್ಚಳ ಈಗ ಕಳಚಿಕೊಳ್ಳುತ್ತದೆ ಮತ್ತು ನಿಮ್ಮ ಜನನಾಂಗದ ಸ್ರಾವ ಬಣ್ಣ ಮತ್ತು ಸ್ಥಿರತೆಯನ್ನು ಬದಲಾಯಿಸುತ್ತದೆ

8. ನಿಮ್ಮ ಲೋಳೆಯ ಮುಚ್ಚಳ ಈಗ ಕಳಚಿಕೊಳ್ಳುತ್ತದೆ ಮತ್ತು ನಿಮ್ಮ ಜನನಾಂಗದ ಸ್ರಾವ ಬಣ್ಣ ಮತ್ತು ಸ್ಥಿರತೆಯನ್ನು ಬದಲಾಯಿಸುತ್ತದೆ

ನಿಮ್ಮ ಲೋಳೆಯ ಮುಚ್ಚಳ ಸಡಿಲಗೊಂಡು ಕಳಚಿಕೊಳ್ಳುವುದನ್ನು ಸಹ ನೀವು ಗಮನಿಸಬಹುದು - ಈ ಮುಚ್ಚಳ ನಿಮ್ಮ ಗರ್ಭಾಶಯವನ್ನು ಹೊರಗಿನ ಪ್ರಪಂಚದಿಂದ ಮುಚ್ಚಿರುತ್ತದೆ. ಇದು ಒಂದು ದೊಡ್ಡ ತುಂಡಿನಂತೆ ಹೊರಬರಬಹುದು (ಇದು ನಿಮ್ಮ ಮೂಗಿನ ಸಿಂಬಳದಂತೆಯೇ ಇರುತ್ತದೆ) ಅಥವಾ ಸಾಕಷ್ಟು ಚಿಕ್ಕದಾಗಿಯೂ ಇರಬಹುದು.

ಕೆಲವರಿಗೆ ಇದು ದ್ರವದಲ್ಲಿ ಪೂರ್ಣವಾಗಿ ಮಿಶ್ರಣಗೊಂಡು ವ್ಯತ್ಯಾಸವೇ ಕಾಣ ಸಿಗದಿರಬಹುದು ಮತ್ತು ಕೆಲವು ಮಹಿಳೆಯರಿಗೆ ಹೆರಿಗೆಗೂ ಮುನ್ನ ಇದು ಕಳಚದೇ ಇರಬಹುದು. ಹೆರಿಗೆ ಹತ್ತಿರಾಗುವ ಕೊನೆಯ ದಿನಗಳಲ್ಲಿ, ನೀವು ಹೆಚ್ಚಿದ ಮತ್ತು / ಅಥವಾ ಸ್ನಿಗ್ಧತೆ ಹೆಚ್ಚಿರುವ ಜನನಾಂಗದ ಸ್ರಾವವನ್ನು ಗಮನಿಸಬಹುದು. ಈ ಅತಿ ಸ್ನಿಗ್ಧವಾದ, ಗುಲಾಬಿ ಬಣ್ಣದ ಸ್ರಾವವನ್ನು ರಕ್ತಸಿಕ್ತ ಪ್ರದರ್ಶನ (bloody show) ಎಂದು ವೈದ್ಯರು ಗುರುತಿಸುತ್ತಾರೆ.

ಹೆರಿಗೆಯ ಸಮಯ ಸನ್ನಿಹಿತವಾಗಿದೆ ಎಂಬುದಕ್ಕೆ ಇದು ಉತ್ತಮ ಸೂಚನೆಯಾಗಿದೆ. ಆದರೆ ಗರ್ಭಕೋಶ ಸಂಕುಚಿತಗೊಳ್ಳುವಿಕೆ ಅಥವಾ ಗರ್ಭಕಂಠ 3 ರಿಂದ 4 ಸೆಂಟಿಮೀಟರ್ ಗಳಷ್ಟು ಹಿಗ್ಗದೇ ಇದ್ದರೆ ಹೆರಿಗೆಯ ದಿನ ಇನ್ನೂ ಕೆಲವು ದಿನ ಮುಂದೆ ಹೋಗಬಹುದು.

9. ನೀವು ಬಲವಾದ, ಹೆಚ್ಚು ಸತತವಾದ ಸಂಕೋಚನವನ್ನು ಅನುಭವಿಸುತ್ತೀರಿ

9. ನೀವು ಬಲವಾದ, ಹೆಚ್ಚು ಸತತವಾದ ಸಂಕೋಚನವನ್ನು ಅನುಭವಿಸುತ್ತೀರಿ

ಸಂಕೋಚನಗಳು ಹೆರಿಗೆ ಸಕ್ರಿಯಗೊಂಡಿರುವ ಆರಂಭಿಕ ಚಿಹ್ನೆಯಾಗಿದೆ. ಹೆರಿಗೆಗೂ ಕೆಲವು ವಾರಗಳ ಮೊದಲು ಮತ್ತು ತಿಂಗಳುಗಳವರೆಗೆ ನೀವು ಬ್ರಾಕ್ಸ್ಟನ್ ಹಿಕ್ಸ್ (Braxton Hicks) ಸಂಕೋಚನವನ್ನು (ಅಥವಾ "ಅಭ್ಯಾಸ ಸಂಕೋಚನಗಳನ್ನು") ಅನುಭವಿಸಬಹುದು. ನಿಮ್ಮ ಗರ್ಭಾಶಯದ ಸ್ನಾಯುಗಳು ಹೆರಿಗೆಯ ದೊಡ್ಡ ಕ್ಷಣದ ತಯಾರಿಕೆಯಲ್ಲಿ ಬಿಗಿಯಾದಂತೆ ನೀವು ಅದರ ಒತ್ತುವಿಕೆಯನ್ನು ಅನುಭವಿಸುವಿರಿ. ಒಳಗಿನಿಂದ ಮಗುವನ್ನು ಹೊರತಳ್ಳುವ ಸಂಕುಚನ ನಿಜವಾಗಿದ್ದೇ ಅಥವಾ ಕೇವಲ ಹೀಗಾದಂತೆ ಅನ್ನಿಸುವುದೇ ಎಂಬುದನ್ನು ನೀವು ನಿರ್ಧರಿಸಲು ಅಸರ್ಮರ್ಥರಾಗುತ್ತೀರಿ.

ಒಂದು ವೇಳೆ ನೀವು ಸಕ್ರಿಯರಾಗಿದ್ದರೆ, ಬ್ರಾಕ್ಸ್ಟನ್ ಹಿಕ್ಸ್ ಸಂಕೋಚನವನ್ನು ಸುಲಭಗೊಳಿಸುವ ಬದಲು ನಿಜವಾದ ಸಂಕೋಚನಗಳು ಇನ್ನಷ್ಟು ಹೆಚ್ಚುತ್ತವೆ.

ನೀವು ನಿಮ್ಮ ಭಂಗಿಯನ್ನು ಬದಲಾಯಿಸಿದರೂ ಹೆರಿಗೆಯ ಈ ಸಂಕೋಚನಗಳು ದೂರವಾಗುವುದಿಲ್ಲ ಆದರೆ ಬ್ರಾಕ್ಸ್ಟನ್ ಹಿಕ್ಸ್ ಆಗಾಗ್ಗೆ ಎದುರಾಗುತ್ತವೆ.

ನೈಜ ಸಂಕೋಚನಗಳಲ್ಲಿ ಹೆಚ್ಚಳ ಕಾಣುತ್ತದೆ. ಸಮಯ ಮುಂದುವರೆದಂತೆ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತದೆ ಮತ್ತು ಹೆಚ್ಚು ನೋವಿನಿಂದಲೂ ಕೂಡಿರುತ್ತವೆ. ಆಗಾಗ ನಿಯಮಿತ ಮಾದರಿಗೆ ಬೀಳುತ್ತದೆ. ಪ್ರತಿಯೊಂದೂ ಅದರ ಮೊದಲು ಇದ್ದಕ್ಕಿಂತ ಹೆಚ್ಚು ನೋವಿನಿಂದ ಅಥವಾ ಉದ್ದವಾಗಿರುವುದಿಲ್ಲ, ಆದರೆ ಹೆರಿಗೆಯ ದಿನ ಹತ್ತಿರಾಗುತ್ತಿದ್ದಂತೆ ತೀವ್ರತೆಯೂ ಹೆಚ್ಚುತ್ತಾ ಹೋಗುತ್ತದೆ. ಈ ಆವರ್ತನವೆಂದೂ ನಿಯಮಿತ ಮಾದರಿಯಲ್ಲಿ ಹೆಚ್ಚುವುದಿಲ್ಲ ಬದಲಿಗೆ ಅದು ಕ್ರಮೇಣ ಹೆಚ್ಚಾಗುತ್ತದೆ. ಬ್ರಾಕ್ಸ್ಟನ್ ಹಿಕ್ಸ್ ಸಂಕೋಚನಗಳು ಕಾಲಾನಂತರದಲ್ಲಿ ಹೆಚ್ಚು ತೀವ್ರತೆಯನ್ನು ಪಡೆಯದೆ ಬರುತ್ತವೆ.

ಆರಂಭಿಕ ಹೆರಿಗೆಯ ಸಂಕೋಚನಗಳು ಬಲವಾದ ಕೆಳಹೊಟ್ಟೆಯ ಸೆಳೆತ, ಹೊಟ್ಟೆಯ ಉಬ್ಬರಿಕೆ ಅಥವಾ ಕಿಬ್ಬೊಟ್ಟೆಯ ಒತ್ತಡದಂತೆ ಅನಿಸುತ್ತದೆ. ನೋವು ಕೆಳ ಹೊಟ್ಟೆಯಲ್ಲಿರಬಹುದು ಅಥವಾ ಜನನಾಂಗ ಮತ್ತು ಕೆಳ ಬೆನ್ನಿನಲ್ಲಿರಬಹುದು ಮತ್ತು ಅದು ಕಾಲುಗಳಿಗೂ ವ್ಯಾಪಿಸಬಹುದು. ನೋವಿನ ಕೇಂದ್ರ ಈಗ ಎದುರಾಗುವುದಕ್ಕಿಂತಲೂ ಹೆರಿಗೆಯ ಸಮಯದಲ್ಲಿ ಬೇರೆಯೇ ಇರಬಹುದು, ಆದಾಗ್ಯೂ, ಬ್ರಾಕ್ಸ್ಟನ್ ಹಿಕ್ಸ್ ಸಂಕೋಚನವನ್ನು ಆ ಎಲ್ಲಾ ಸ್ಥಳಗಳಲ್ಲಿಯೂ ಸಹ ಅನುಭವಿಸಬಹುದು.

10. ದ್ರವ ಸೋರತೊಡಗುತ್ತದೆ (water breaks)

10. ದ್ರವ ಸೋರತೊಡಗುತ್ತದೆ (water breaks)

ಚಲನಚಿತ್ರಗಳಲ್ಲಿ ನೀವು 'ನೀರು ಕಟ್ಟೆಯೊಡೆದು ಹೊರಬರುತ್ತಿದೆ' ಎಂಬ ವಿಷಯದ ಮೂಲಕ ಹೆರಿಗೆಯ ಸಮಯ ಆಗಮನವಾಗಿದೆ ಎಂದು ತಿಳಿಸುವುದನ್ನು(ಸಾಮಾನ್ಯವಾಗಿ ರಂಜನೀಯ ಸನ್ನಿವೇಶದ ನಡುವೆ) ನೋಡಿರಬಹುದು. ಆದರೆ ವಾಸ್ತವದಲ್ಲಿ ಹೀಗಾಗುವುದು ತೀರಾ ಅಪರೂಪ.

ದ್ರವ ಸೋರತೊಡಗುವುದು ಹೆರಿಗೆಯ ದಿನ ಹತ್ತಿರಾಗುತ್ತಿದೆ ಎಂಬ ಸಂಜ್ಞೆಯಾಗಿದ್ದು ಕೆಲವು ಗರ್ಭವತಿಯರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಸರಿಸುಮಾರು ಹದಿನೈದು ಶೇಖಡಾ ಮಾತ್ರ! ಹಾಗಾಗಿ ಈ ಸೂಚನೆ ಬಂದೇ ಬರುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ.

ಆದರೆ ಹೆರಿಗೆಯ ಸಮಯ ಹತ್ತಿರ ಬಂದಿದೆ ಎಂದು ತಿಳಿಯುವುದು ಹೇಗೆ? ಈ ಬಗ್ಗೆ ನೀವು ತಲೆ ಕೆಡಿಸಿಕೊಳ್ಳದೇ ಇದ್ದಷ್ಟೂ ನಿಮಗೇ ಒಳ್ಳೆಯದು. ನಿಮ್ಮ ಕಾಳಜಿ ವಹಿಸುತ್ತಿರುವ ವೈದ್ಯರು ಮತ್ತು ದಾದಿಯರು ಈ ಬಗ್ಗೆ ಸತತವಾಗಿ ಗಮನ ಹರಿಸುತ್ತಿರುತ್ತಾರೆ ಮತ್ತು ನಿಜವಾದ ಹೆರಿಗೆಯ ಸಮಯ ಬಂದಾಗ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆ.

ಹೆರಿಗೆ ಹತ್ತಿರಾಗುತ್ತಿದೆಯೇ? ನಾನೀಗ ವೈದ್ಯರನ್ನು ಕಾಣಬೇಕೇ?

ಹೆರಿಗೆ ಹತ್ತಿರಾಗುತ್ತಿದೆಯೇ? ನಾನೀಗ ವೈದ್ಯರನ್ನು ಕಾಣಬೇಕೇ?

ಒಂದು ವೇಳೆ ನಿಮಗೆ ಹೆರಿಗೆಯ ಕ್ಷಣ ಹತ್ತಿರಾಗುತ್ತಿದೆ ಎಂದು ಅನ್ನಿಸಿದರೆ ಮತ್ತು ಸಂಕುಚನಗಳು ಸತತವಾಗಿ ಕಾಣಿಸಿಕೊಳ್ಳುತ್ತಿದ್ದರೆ ನೀವೇನು ಮಾಡಬೇಕೆಂದು ನಿಮ್ಮ ವೈದ್ಯರು ನಿಮಗೆ ತಿಳಿಸಿಯೇ ಇರುತ್ತಾರೆ. (ಉದಾಹರಣೆಗೆ ಈ ಸಂಕುಚನಗಳು ಕನಿಷ್ಟ ಒಂದು ಘಂಟೆಯವರೆಗೆ ಪ್ರತಿ ಐದು ನಿಮಿಷಕ್ಕೊಮ್ಮೆ ಕಾಣಿಸಿಕೊಂಡರೆ ನಮಗೆ ಕರೆ ಮಾಡಿ ಎಂದು ವೈದ್ಯರು ಹೇಳಬಹುದು) ಹೆರಿಗೆಯ ಸಂಕುಚನಗಳು ಪ್ರತಿ ಬಾರಿಯೂ ಒಂದೇ ಅಂತರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಒಂದು ವೇಳೆ ಇವು ಲಯಬದ್ದವಾಗಿವೆ, ಹೆಚ್ಚು ನೋವು ಉಳ್ಳ ಮತ್ತು ಹೆಚ್ಚು ಅವಧಿಯ (ಸುಮಾರು ಮೂವತ್ತರಿಂದ ಎಪ್ಪತ್ತು ಸೆಕೆಂಡುಗಳು) ಸಂಕುಚನಗಳು ಎದುರಾದರೆ ತಕ್ಷಣ ವೈದ್ಯರನ್ನು ಕರೆಯಬೇಕು.

ಒಂದು ವೇಳೆ ನಿಮಗೆ ಹೆರಿಗೆಯಾಗುತ್ತಿದೆ ಅನ್ನಿಸುತ್ತಿದ್ದರೂ ಖಚಿತವಾಗಿ ಹೇಳಲು ಸಾಧ್ಯವಾಗದಿದ್ದರೆ ತಕ್ಷಣ ಫೋನ್ ಮಾಡಿ. ನಿಮ್ಮ ವೈದ್ಯರು ಈಗ ನಿಮಗೇನಾಗುತ್ತಿದೆ ಎಂಬುದನ್ನು ತಿಳಿದುಕೊಂಡು ನೀವು ಮುಂದೇನು ಮಾಡಬೇಕೆಂದು ತಿಳಿಸಬಹುದು.

ಹೆರಿಗೆ ಯಾವಾಗ ಆಗುತ್ತದೆ ಎಂಬುದನ್ನು ನಿಖರವಾಗಿ ಹೇಳಲು ನಿಮಗೆ ಸಾಧ್ಯವಿಲ್ಲದಿದ್ದು ಅವೇಳೆಯಲ್ಲಿ ಎದುರಾದರೂ ನಿಮ್ಮ ವೈದ್ಯರನ್ನು ಕರೆ ಮಾಡಲು ಹಿಂಜರಿಯದಿರಿ.

ಈ ಕೆಳಗಿನ ಯಾವುದೇ ಸಂಜ್ಞೆ ಎದುರಾದರೂ ತಕ್ಷಣ ವೈದ್ಯರನ್ನು ಅಥವಾ ದಾದಿಯನ್ನು ಕರೆಯಿರಿ

ಈ ಕೆಳಗಿನ ಯಾವುದೇ ಸಂಜ್ಞೆ ಎದುರಾದರೂ ತಕ್ಷಣ ವೈದ್ಯರನ್ನು ಅಥವಾ ದಾದಿಯನ್ನು ಕರೆಯಿರಿ

  • ಜನನಾಂಗದಿಂದ ಕೆಂಪಗಿನ, ಕಂದು ಅಥವಾ ಗುಲಾಬಿ ಬಣ್ಣದ ಸ್ರಾವ ಕಾಣಿಸಿಕೊಂಡರೆ
  • ಜನನಾಂಗದಿಂದ ನೀರು ಸೋರತೊಡಗುತ್ತಿದ್ದು - ಇದು ಹಸಿರು ಅಥವಾ ಕಂದು ಬಣ್ಣದಲ್ಲಿದ್ದರೆ. ಈ ಸ್ಥಿತಿಗೆ meconium ಎಂದು ಕರೆಯುತ್ತಾರೆ. ವಾಸ್ತವದಲ್ಲಿ ಇದು ಮಗುವಿನ ಉಚ್ಛಿಷ್ಟವಾಗಿದ್ದು ಇದನ್ನು ಮಗು ಸೇವಿಸಿದರೆ ಅಪಾಯವಿದೆ.
  • ನಿಮ್ಮ ದೃಷ್ಟಿ ಮಂಜಾಗಿದ್ದರೆ ಅಥವಾ ಎರಡೆರಡಾಗಿ ಕಾಣಿಸಲು ತೊಡಗಿದರೆ
  • ತಲೆನೋವು ವಿಪರೀತವಾದರೆ ಅಥವಾ ಥಟ್ಟನೇ ಮೈಯೆಲ್ಲಾ ಊದಿಕೊಳ್ಳತೊಡಗಿದರೆ. ಇವೆಲ್ಲವೂ preeclampsia ಎಂಬ ಸ್ಥಿತಿಯನ್ನು ಸೂಚಿಸುತ್ತವೆ. ಅಂದರೆ ಹೆರಿಗೆಗೂ ಮುನ್ನ ಎದುರಾಗುವ ಅಧಿಕ ರಕ್ತದೊತ್ತಡವಾಗಿದ್ದು ವೈದ್ಯರ ಆರೈಕೆಯ ಅಗತ್ಯವಿದೆ.
  • ಹೆರಿಗೆಯ ಸಮಯದಲ್ಲಿ ನಿರ್ವಹಿಸಬಹುದಾದ ನೈಸರ್ಗಿಕ ಕ್ರಿಯೆಗಳು

    ಹೆರಿಗೆಯ ಸಮಯದಲ್ಲಿ ನಿರ್ವಹಿಸಬಹುದಾದ ನೈಸರ್ಗಿಕ ಕ್ರಿಯೆಗಳು

    ಹೆರಿಗೆಗೂ ಮುನ್ನವೇ ಹೆರಿಗೆಯ ನೋವನ್ನು ಕೊಂಚ ಮಟ್ಟಿಗೆ ಅನುಭವಿಸಿ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಕೆಲವು ತಜ್ಞರು ಅಭಿಪ್ರಾಯ ಪಡುತ್ತಾರೆ. ನಡಿಗೆ, ಲೈಂಗಿಕ ಕ್ರಿಯೆ, ಖಾರವಾದ ಆಹಾರ, ಆಕ್ಯುಪಂಕ್ಚರ್ ಇತ್ಯಾದಿಗಳನ್ನು ಅನುಸರಿಸಬಹುದು ಎಂದು ಹೇಳುತ್ತಾರೆ.

    ಆದರೆ ಈ ಕ್ರಮಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ನೀವು ಯಾವುದಕ್ಕೂ ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಪಡೆಯಬೇಕು ಹಾಗೂ ನಿಮಗೇನು ಉತ್ತಮ ಎಂಬುದನ್ನು ವೈದ್ಯರೇ ಸಲಹೆ ಮಾಡುತ್ತಾರೆ.

    ಹೆರಿಗೆ ಎನ್ನುವುದು ನಿಸರ್ಗವೇ ನಿರ್ಧರಿಸುವ ಕಾಲಮಾನವಾಗಿದ್ದು ಇದನ್ನು ಹಿಂದೆ ಮುಂದೆ ಮಾಡಲು ಸರ್ವಥಾ ಯತ್ನಿಸದಿರಿ. ಹೆರಿಗೆಯ ಸಮಯ ಬಂದಾಗ ನಿಮ್ಮ ದೇಹವೇ ಇದಕ್ಕೆ ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತದೆ. ನಿಮ್ಮ ಗರ್ಭಾವಸ್ಥೆಯ ದಿನಗಳಿಗಾಗಿ ಸಂತೋಷಪಡಿ ಮತ್ತು ದೇವರು ನಿಮಗೆ ನೀಡುತ್ತಿರುವ ಈ ಅಮೂಲ್ಯ ಉಡುಗೊರೆಗಾಗಿ ಕೃತಜ್ಞರಾಗಿರಿ.

English summary

Signs of Labor Pain: How to Recognize the Signs

Here we are discussing about types of or signs of labor pain. since every birth is different, but knowing what labor is and what signs to look out for will help provide clues that it's almost time to meet your baby! Read more.
X
Desktop Bottom Promotion