For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗಲು ಹಾಗೂ ತಡೆಗಟ್ಟಲು ಅಂಡೋತ್ಪತ್ತಿ ಎಷ್ಟು ದಿನ ಇರುತ್ತದೆ ಎಂದು ತಿಳಿಯಿರಿ

|

ಮಾಸಿಕ ಅವಧಿಯೊಂದರಲ್ಲಿ ಲೈಂಗಿಕ ಸುರಕ್ಷತೆ ಅನುಸರಿಸದ ದಂಪತಿಗಳಲ್ಲಿ ಮಹಿಳೆ ಗರ್ಭ ಧರಿಸುವ ಸಾಧ್ಯತೆ 25 ರಿಂದ 30 ಶೇಖಡಾದಷ್ಟು ಮಾತ್ರವೇ ಇರುತ್ತದೆ. ಗರ್ಭಧಾರಣೆಗೆ ಹಲವಾರು ಅಂಶಗಳು ಪೂರಕವಾಗಬೇಕಾಗಿದೆ. ವಿಶೇಷವಾಗಿ ತೂಕ, ವಯಸ್ಸು, ರಸದೂತಗಳ ಮಟ್ಟ ಮೊದಲಾದವೆಲ್ಲಾ ಸರಿ ಇದ್ದಾಗಲೇ ಗರ್ಭ ಧರಿಸಲು ಸಾಧ್ಯವಾಗುತ್ತದೆ.

ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,

ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.

ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005

ಆದರೆ ಗರ್ಭಧರಿಸುವ ಸಾಧ್ಯತೆ ಅಂಡೋತ್ಪತ್ತಿಯ (ovulation) ಸಮಯದ ಮಿಲನದಿಂದ ಅತ್ಯಂತ ಹೆಚ್ಚಾಗಿರುವುದು ಮಾತ್ರ ಅಚ್ಚರಿಯ ವಿಷಯವಾಗಿದೆ. ಅಂಡೋತ್ಪತ್ತಿಯ ದಿನಗಳು ಎಂದರೆ ಮಾಸಿಕ ದಿನಗಳ ಚಕ್ರದಲ್ಲಿ ನಡುವೆ ಆಗಮಿಸುವ ಅಲ್ಪ ಸಮಯವಾಗಿದ್ದು ಈ ಸಮಯದಲ್ಲಿ ಅಂಡಾಣು ವೀರ್ಯಾಣುವಿನೊಂದಿಗೆ ಮಿಲನಗೊಂಡರೆ ಗರ್ಭಧಾರಣೆ ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಈ ಅವಧಿ ಹನ್ನೆರಡರಿಂದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಮಾತ್ರವೇ ಇರುತ್ತದೆ.

ಮಹಿಳೆಯ ದೇಹವನ್ನು ಪ್ರವೇಶಿಸಿದ ಬಳಿಕ ವೀರ್ಣಾಣುಗಳು ಸುಮಾರು ಮೂರರಿಂದ ಆರು ದಿನಗಳವರೆಗೂ ಜೀವಂತವಿರುತ್ತವೆ. ಆದರೆ ಬಿಡುಗಡೆಯಾದ ಅಂಡಾಣು ಕೇವಲ ಆರರಿಂದ ಹನ್ನೆರಡು ಘಂಟೆಗಳ ಕಾಲ ಮಾತ್ರವೇ ಕಾಯುತ್ತದೆ. ಈ ಸಮಯದಲ್ಲಿ ಫಲಿತಗೊಂಡರೆ ಮಾತ್ರ ಗರ್ಭಾಂಕುರವಾಗಲು ಸಾಧ್ಯ. ಅಂದರೆ ಅಂಡೋತ್ಪತ್ತಿಯ ದಿನಕ್ಕೂ ಕೆಲದಿನಗಳ ಮುನ್ನವೇ ಮಿಲನ ನಡೆದಿದ್ದರೂ ಅಂಡಾಣು ಫಲಿತಗೊಂಡು ಫೆಲೋಪಿಯನ್ ನಾಳದ ಕಡೆ ಮುಂದಿನ ಬೆಳವಣಿಗೆಗಾಗಿ ಮುಂದುವರೆಯಲು ಸಾಧ್ಯವಿದೆ.
ನಿಸರ್ಗದ ವಿಚಿತ್ರವನ್ನು ಬಲ್ಲವರಾರು, ಪುರುಷರಿಂದ ಸ್ಖಲನವಾಗುವ ವೀರ್ಯಾಣುಗಳು ಮಿಲಿಯಾಂತರ ಸಂಖ್ಯೆಯಲ್ಲಿದ್ದರೂ ಅಂಡಾಣುವನ್ನು ಫಲಿತಗೊಳಿಸಲು ಅಗತ್ಯವಿರುವುದು ಕೇವಲ ಒಂದೇ ಒಂದು ವೀರ್ಯಾಣು. ಉಳಿದವು ನಿರಾಶೆಗೊಳ್ಳಬೇಕಾಗುತ್ತದೆ.

ಒಂದು ವೇಳೆ ಮಹಿಳೆಯ ಮಾಸಿಕ ಚಕ್ರ ಮೂವತ್ತು ಅಥವಾ ಮೂವತ್ತೊಂದು ದಿನಗಳ ಅವಧಿಯಲ್ಲಿ ಪುನರಾವರ್ತನೆಯಾಗುತ್ತಿದ್ದರೆ ಅಂಡೋತ್ಪತ್ತಿಯಾಗುವ ದಿನ ಸುಮಾರು ಹನ್ನೊಂದರಿಂದ ಹದಿನಾಲ್ಕರ ದಿನಗಳ ನಡುವೆ ಇರುತ್ತದೆ. ಈ ದಿನಗಳನ್ನು ಖಚಿತಪಡಿಸಿಕೊಂಡು ಈ ದಿನಗಳಲ್ಲಿ ಕೂಡುವ ಮೂಲಕ ಸಫಲ ಗರ್ಭಧಾರಣೆಯಾಗಲು ಸಾಧ್ಯ.

 ಅಂಡೋತ್ಪತ್ತಿ ಎಂದರೇನು?

ಅಂಡೋತ್ಪತ್ತಿ ಎಂದರೇನು?

ಮಹಿಳೆಯ ದೇಹದಲ್ಲಿ ಒಂದು ನಿಗದಿತ ಲೆಕ್ಕದ ಅಂಡಾಣುಗಳಿರುತ್ತವೆ. ಪ್ರತಿ ತಿಂಗಳೂ ಒಂದು ಅಂಡಾಣು ಪೂರ್ಣವಾಗಿ ಬೆಳೆದು ವೀರ್ಯಾಣುವಿನೊಂದಿಗೆ ಫಲಿತಗೊಳ್ಳಲು ಸಿದ್ಧವಾಗುತ್ತದೆ. ಹೀಗೆ ಸಿದ್ದವಾದ ಒಂದೇ ಒಂದು ಅಂಡಾಣು ಅಂಡಕೋಶಗಳಿಂದ ಬಿಡುಗಡೆಗೊಳ್ಳುತ್ತದೆ. ಈ ಸಮಯದಲ್ಲಿ (ಅಥವಾ ಇದಕ್ಕೂ ಒಂದೆರಡು ದಿನ ಹಿಂದೆ) ಮಿಲನ ಕ್ರಿಯೆ ನಡೆದಿದ್ದರೆ ಸಂಗ್ರಹವಾಗಿದ್ದ ವೀರ್ಯಾಣುವಿನೊಂದಿಗೆ ಕೂಡಿ ಫಲಿತಗೊಳ್ಳುತ್ತದೆ. ಅಂಡಾಣು ಪೂರ್ಣವಾಗಿ ಫಲಿತಗೊಂಡು ಮಿಲನಕ್ಕೆ ಸಿದ್ಧವಾಗುವ ಕ್ರಿಯೆಯನ್ನೇ ಅಂಡೋತ್ಪತ್ತಿ ಎನ್ನುತ್ತೇವೆ.

ನಿಮಗೆ ಎಂದು ಅಂಡೋತ್ಪತ್ತಿ ಸಂಭವಿಸುತ್ತದೆ?

ನಿಮಗೆ ಎಂದು ಅಂಡೋತ್ಪತ್ತಿ ಸಂಭವಿಸುತ್ತದೆ?

ಇಪ್ಪತ್ತೆಂಟು ದಿನಗಳ ಮಾಸಿಕ ಅವಧಿಯನ್ನು ಪಡೆಯುವ ಮಹಿಳೆಯರಿಗೆ ಸ್ರಾವ ನಿಂತ ಮರುದಿನವನ್ನು ಮೊದಲ ದಿನವನ್ನಾಗಿ ಪರಿಗಣಿಸಿದರೆ ಸುಮಾರು ಹದಿನಾಲ್ಕನೆಯ ದಿನ ನಿಮ್ಮ ಅಂಡೋತ್ಪತ್ತಿಯ ದಿನ ಎಂದು ಸರಿಸುಮಾರಾಗಿ ಹೇಳಬಹುದು. ಇದೇ ಪ್ರಕಾರ ಎರಡು ಮಾಸಿಕ ಅವಧಿಗಳ ಮೊದಲ ದಿನಗಳ ಒಟ್ಟು ಅಂತರದ ನಡುವಿನ ದಿನವನ್ನು ಅಂಡೋತ್ಪತ್ತಿಯ ದಿನ ಎಂದು ಸರಿಸುಮಾರಾಗಿ ಅಂದಾಜಿಸಬಹುದು.

ಆದರೆ ಪ್ರತಿ ಮಹಿಳೆಯ ಮಾಸಿಕ ದಿನಗಳು 23 ರಿಂದ 35 ದಿನಗಳವರೆಗೆ ಏರುಪೇರಾಗಬಹುದು ಹಾಗೂ ಅಂಡೋತ್ಪತ್ತಿಯ ನಿಜವಾದ ದಿನ ಸರಿಯಾಗಿ ನಟ್ಟ ನಡುವೆ ಇಲ್ಲದೆಯೂ ಇರಬಹುದು. ಕೆಲವು ಮಹಿಳೆಯರಿಗೆ ಪ್ರತಿ ತಿಂಗಳ ಮಾಸಿಕ ಅವಧಿಯ ದಿನಗಳಲ್ಲೂ ಏರುಪೇರಾಗುತ್ತಿದ್ದರೆ ಅಂಡೋತ್ಪತ್ತಿಯ ದಿನಗಳನ್ನು ಖಚಿತವಾಗಿ ಹೇಳುವುದು ಕೊಂಚ ಕಷ್ಟವಾಗುತ್ತದೆ.

ಅಂಡೋತ್ಪತ್ತಿ ಎಷ್ಟು ಸಮಯದವರೆಗೆ ಇರುತ್ತದೆ?

ಅಂಡೋತ್ಪತ್ತಿ ಎಷ್ಟು ಸಮಯದವರೆಗೆ ಇರುತ್ತದೆ?

ಪೂರ್ಣವಾಗಿ ಫಲಿತ ಅಂಡಾಣು ಮಿಲನಕ್ಕೆ ಸಿದ್ಧವಾದ ಸಮಯ ಸುಮಾರು ಹನ್ನೆರಡರಿಂದ ಇಪ್ಪತ್ತನಾಲ್ಕು ಘಂಟೆಗಳ ಕಾಲ ವೀರ್ಯಾಣುವಿಗೆ ಕಾಯುತ್ತದೆ. ಅಂದರೆ ಈ ಅವಧಿಯಲ್ಲಿ ಅಂಡಾಣು ಅಂಡಾಶಯದಿಂದ ಫೆಲೋಪಿಯನ್ ನಾಳದವರೆಗೆ ಪಯಣಿಸುತ್ತದೆ. ಈ ಅವಧಿಯಲ್ಲಿ LH (luteinizing hormone, ಅಥವಾ LH) ಎಂಬ ರಸದೂತ ಸ್ರವಿಕೆಯಾಗಿ ಈ ಕಾರ್ಯವನ್ನು ನಿಯಂತ್ರಿಸುತ್ತದೆ.

ಅಂಡೋತ್ಪತ್ತಿಯಾಗುವ ಸಮಯವನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಕೆಲವು ಸಂಜ್ಞೆಗಳು

ಅಂಡೋತ್ಪತ್ತಿಯಾಗುವ ಸಮಯವನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಕೆಲವು ಸಂಜ್ಞೆಗಳು

ಒಂದು ವೇಳೆ ನೀವು ಗರ್ಭವತಿಯಾಗಬಯಸಿದ್ದು ನಿಮ್ಮ ಅಂಡೋತ್ಪತ್ತಿಯ ನಿಖರ ಸಮಯವನ್ನು ತಿಳಿದುಕೊಳ್ಳಲು ಇಚ್ಛಿಸಿದರೆ ನಿಮ್ಮ ದೇಹ ಸೂಚಿಸುವ ಅತಿ ಸೂಕ್ಷ್ಮವಾದ ಕೆಲವು ಬದಲಾವಣೆಗಳನ್ನು ನೀವು ನಿರೀಕ್ಷಿಸಬೇಕಾಗುತ್ತದೆ. ಇವುಗಳಲ್ಲಿ ಪ್ರಮುಖವಾದ ಏಳು ಸೂಚನೆಗಳು ಈ ಕೆಳಗಿನಂತಿವೆ:

1.ನಿಮ್ಮ ಬೆಳಿಗ್ಗೆದ್ದ ನಂತರ ವಿಶ್ರಾಂತ ದೇಹದ ತಾಪಮಾನ (basal body temperature) ಅಲ್ಪ ಮಟ್ಟದಲ್ಲಿ ಕಡಿಮೆಯಾಗುತ್ತದೆ, ನಂತರ ಮತ್ತೆ ಏರುತ್ತದೆ.

2. ನಿಮ್ಮ ಗರ್ಭಕಂಠದ ಲೋಳೆಯು ಪಾರದರ್ಶಕವಾಗಿ ಮೊಟ್ಟೆಯ ಬಿಳಿಭಾಗಕ್ಕೆ ಹೋಲುವಷ್ಟು ಸ್ನಿಗ್ಧವಾಗುತ್ತದೆ ಮತ್ತು ಎರಡು ಬೆರಳುಗಳ ನಡುವೆ ಜಾರುವಂತಿದ್ದು ಬೆರಳುಗಳನ್ನು ಬಿಡಿಸಿದಾಗ ಎರಡು ಬೆರಳುಗಳ ನಡುವೆ ದಾರದಂತೆ ಉಳಿದು ನಂತರ ತುಂಡಾಗುತ್ತದೆ.

3. ನಿಮ್ಮ ಗರ್ಭಕಂಠವು ಮೃದುವಾಗುತ್ತದೆ ಮತ್ತು ತೆರೆದ ಸ್ಥಿತಿಯಲ್ಲಿರುವುದನ್ನು ನೀವು ಅನುಭವಿಸಬಹುದು

4. ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ಕೊಂಚವೇ ನೋವು ಅಥವಾ ಸೌಮ್ಯವಾದ ಸೆಳೆತದ ಅನುಭವವಾಗುತ್ತದೆ

5. ಲೈಂಗಿಕ ಬಯಕೆ ಹೆಚ್ಚಬಹುದು

6. ಕಣ್ಣುಗಳನ್ನು ಮುಚ್ಚಿದಾಗ ಆಗಾಗ ಬೆಳಕಿನ ಎಳೆಗಳಂತೆ ಕಾಣಿಸಿಕೊಳ್ಳಬಹುದು

7. ನಿಮ್ಮ ಜನನಾಂಗದ ಒಳಭಾಗ ಅಥವಾ ಹೊರತುಟಿಗಳು ಕೊಂಚ ಊದಿಕೊಂಡಂತೆ ಮತ್ತು ಇತರ ಸಮಯಕ್ಕಿಂತ ಹೆಚ್ಚು ಸೂಕ್ಷ್ಮ ಸಂವೇದಿಯಾದಂತಹ ಅನುಭವವಾಗಬಹುದು.

ಅಂಡೋತ್ಪತ್ತಿಯ ಸಮಯ ಪ್ರಾರಂಭವಾಗಿರುವುದನ್ನು ನೀವು ಹೇಗೆ ಗುರುತಿಸುತ್ತೀರಿ?

ಈ ಸಮಯ ಪ್ರಾರಂಭವಾಗುವ ಅಂದಾಜು ಸಮಯವನ್ನು ಅರಿಯಲು ಕೆಲವಾರು ವಿಧಾನಗಳಿವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:

ಕ್ಯಾಲೆಂಡರ್ ಗುರುತು ಹಾಕಿಕೊಳ್ಳಿ

ಕ್ಯಾಲೆಂಡರ್ ಗುರುತು ಹಾಕಿಕೊಳ್ಳಿ

ನಿಮ್ಮ ಮಾಸಿಕ ದಿನಗಳ ನಿಖರವಾದ ದಿನಗಳನ್ನು ನಿಮ್ಮ ವೈಯಕ್ತಿಕ ಕ್ಯಾಲೆಂಡರ್ ನಲ್ಲಿ ಗುರುತು ಹಾಕಿಕೊಳ್ಳಿ. ಇಂದು ಇದೇ ಕಾರ್ಯಕ್ಕಾಗಿ ಮೊಬೈಲ್ ಆಪ್ ಗಳೂ ಲಭ್ಯವಿವೆ. ನಿಮ್ಮ ಆರೋಗ್ಯದ ಮಾಹಿತಿಗಳನ್ನೂ ಕಲೆಹಾಕುವ ಮೂಲಕ ಈ ಆಪ್ ಗಳು ಆದಷ್ಟೂ ನಿಖರವಾದ ದಿನವನ್ನು ನಿಮಗೆ ಸೂಚಿಸಲು ನೆರವಾಗುತ್ತವೆ. ಆಪ್ ಇಲ್ಲದಿದ್ದರೂ ಸರಳವಾಗಿ ಕಾಗದದ ಕ್ಯಾಲೆಂಡರುಗಳ ಮೇಲೆ ಗುರುತು ಹಾಕಿಕೊಳ್ಳುವುದರಿಂತಲೂ ಸ್ಥೂಲವಾಗಿ ನಿಮ್ಮ ಅಂಡೋತ್ಪತ್ತಿಯ ದಿನವನ್ನು ಅಂದಾಜಿಸಬಹುದು. ಹಾಗಾಗಿ ಈ ದಿನಗಳು ಬಂದಾಗ ನೀವು ಅತಿ ಎಚ್ಚರಿಕೆಯಿಂದ ನಿಮ್ಮ ದೇಹ ಪ್ರಕಟಿಸುವ ಸೂಚನೆಗಳನ್ನು ನಿರೀಕ್ಷಿಸಬಹುದು.

ನಿಮ್ಮ ದೇಹವನ್ನು ಸೂಕ್ಷ್ಮವಾಗಿ ಆಲಿಸಿ:

ನಿಮ್ಮ ದೇಹವನ್ನು ಸೂಕ್ಷ್ಮವಾಗಿ ಆಲಿಸಿ:

ಸಾಮಾನ್ಯವಾಗಿ ಪ್ರತಿ ಮಹಿಳೆಯ ದೇಹವೂ ಅಂಡೋತ್ಪತ್ತಿಯ ಸಂಕೇತವನ್ನು ನೀಡಿಯೇ ನೀಡುತ್ತವೆ. ಆದರೆ ಕೇವಲ ಇಪ್ಪತ್ತು ಶೇಖಡಾದಷ್ಟು ಮಹಿಳೆಯರಲ್ಲಿ ಇದು ಹೆಚ್ಚು ಸ್ಪಷ್ಟವಾಗಿರುತ್ತದೆ. ಈ ಸಂಕೇತಗಳೆಂದರೆ: ಹೊಟ್ಟೆಯ ಕೆಳಭಾವ, ವಿಶೇಷವಾಗಿ ಹೊಟ್ಟೆಯ ಒಂದು ಬದಿ, ಅಂದರೆ ಯಾವ ಬದಿಯ ಅಂಡಾಶಯದಿಂದ ಈ ತಿಂಗಳ ಅಂಡಾಣು ಬಿಡುಗಡೆಯಾಯಿತೋ ಆ ಭಾಗದಲ್ಲಿ ಅತಿ ಸೂಕ್ಷ್ಮವಾದ ನೋವು, (ವೈದ್ಯಕೀಯವಾಗಿ mittelschmerz -ಅಂದರೆ ಜರ್ಮನ್ ಭಾಷೆಯಲ್ಲಿ 'ನಡುವಿನ ನೋವು") ಈ ನೋವು ಎಷ್ಟು ಕ್ಷೀಣವಾಗಿರುತ್ತದೆ ಎಂದರೆ ನೀವು ಅತಿ ಗಮನವಿಟ್ಟು ನಿರೀಕ್ಷಿಸದೇ ಇದ್ದರೆ ಇದು ಬಂದಿರುವುದು ಅರಿವೇ ಆಗುವುದಿಲ್ಲ.

ವಿಶ್ರಾಂತ ದೇಹದ ತಾಪಮಾನ (basal body temperature) ಗುರುತು ಹಾಕಿಕೊಳ್ಳಿ:

ವಿಶ್ರಾಂತ ದೇಹದ ತಾಪಮಾನ (basal body temperature) ಗುರುತು ಹಾಕಿಕೊಳ್ಳಿ:

BBT ಎಂದು ಕರೆಯಲ್ಪಡುವ ಈ ತಾಪಮಾನವನ್ನು ನೀವು ನಿತ್ಯವೂ ಒಂದೇ ಸಮಯದಲ್ಲಿ ಬೆಳಿಗ್ಗೆದ್ದ ತಕ್ಷಣ ದಾಖಲಿಸಿಕೊಳ್ಳಬೇಕಾದ ತಾಪಮಾನವಾಗಿದೆ. ಇದಕ್ಕಾಗಿ ನಿಮಗೆ ನಿಖರವಾಗಿ ತಾಪಮಾನ ಅಳೆಯುವ ಉಪಕರಣವೊಂದರ ಅಗತ್ಯವಿದೆ. ಅಂದರೆ ಬೆಳಿಗ್ಗೆ ಏಳುವ ಮುನ್ನ ನೀವು ಕನಿಷ್ಟ ಮೂರರಿಂದ ಐದು ಘಂಟೆಗಳ ಗಾಢ ನಿದ್ದೆಯನ್ನು ಪಡೆದಿರಬೇಕು. ಎದ್ದ ತಕ್ಷಣ ಹಾಸಿಗೆಯಲ್ಲಿದ್ದೇ ತಾಪಮಾನ ಅಳೆಯಬೇಕು. ಇದಕ್ಕೂ ಮುನ್ನ ಮಾತನಾಡಲೂ ಬಾರದು! ಅಂಡೋತ್ಪತ್ತಿಯ ದಿನ ನಿಮ್ಮ ರಸದೂತಗಳ ಪ್ರಭಾವದಿಂದ ಈ ತಾಪಮಾನ ಮೊದಲು ಕೊಂಚವೇ ಇಳಿದು ಬಳಿಕ ಏರುತ್ತದೆ. ಏಕೆಂದರೆ ಮಾಸಿಕ ದಿನಗಳ ಮೊದಲ ಅರ್ಧ ಅವಧಿಯಲ್ಲಿ ಈಸ್ಟ್ರೋಜೆನ್ ಪ್ರಭಾವ ಹೆಚ್ಚಿರುತ್ತದೆ. ಇದೇ ದೇಹದ ತಾಪಮಾನಕ್ಕೆ ಕಾರಣವಾಗುತ್ತದೆ. ಅಂಡೋತ್ಪತ್ತಿಯ ದಿನ ಇದರ ಪ್ರಭಾವ ಕಡಿಮೆಯಾಗುವ ಮೂಲಕ ತಾಪಮಾನವೂ ಕಡಿಮೆಯಾಗುತ್ತದೆ.

ಎರಡನೆಯ ಅರ್ಧದ ಅವಧಿಯಲ್ಲಿ ಪ್ರೊಜೆಸ್ಟರಾನ್ ಎಂಬ ರಸದೂತ ತನ್ನ ಪ್ರಭಾವವನ್ನು ಬೀರತೊಡಗುತ್ತದೆ. ಇದೇ ನಿಮ್ಮ ದೇಹದ ತಾಪಮಾನ ಏರಿಸಲು ಕಾರಣ. ಅಂದರೆ ಗರ್ಭಕೋಶವನ್ನು ಸಿದ್ಧ ಪಡಿಸುವುದು, ಫಲಿತಗೊಂಡ ಅಂಡಾಣುವನ್ನು ಸ್ವಾಗತಿಸಿ ಜರಾಯುವಿನಲ್ಲಿ ಸ್ಥಿರಗೊಳಿಸಲು ಸಿದ್ಧತೆಗಳನ್ನು ನಡೆಸುತ್ತದೆ. ಹಾಗಾಗಿ ಇಡಿಯ ತಿಂಗಳಲ್ಲಿ ನಿಮ್ಮ ಮೊದಲ ಅರ್ಧದಲ್ಲಿ ದೇಹದ ತಾಪಮಾನ ಕಡಿಮೆ ಮತ್ತು ಉಳಿದ ಅರ್ಧದಲ್ಲಿ ಕೊಂಚ ಹೆಚ್ಚಿರುತ್ತದೆ. ಈ ತಾಪಮಾನಗಳಲ್ಲಿ ನಡುವೆ ಎಲ್ಲಿ ಕ್ಷಿಪ್ರವಾದ ಇಳಿಕೆ ಕಂಡುಬಂದೆಯೋ, ಆ ಅವಧಿಯ ನಡುವಿನ ದಿನವೇ ನಿಮ್ಮ ಅಂಡೋತ್ಪತ್ತಿಯ ದಿನ ಎಂದು ಹೆಚ್ಚೂ ಕಡಿಮೆ ನಿಖರವಾಗಿ ಅಳೆಯಬಹುದು.

ಆದರೆ ಈ ತಾಪಮಾನಗಳ ವ್ಯತ್ಯಾಸ ಕೇವಲ ಅರ್ಧ ಡಿಗ್ರಿ ಫ್ಯಾರನ್ ಹೀಟ್ ನಷ್ಟು ಮಾತ್ರವೇ ಇರುತ್ತದೆ. ಅಷ್ಟು ಸೂಕ್ಷ್ಮವಾದ ವ್ಯತ್ಯಾಸವನ್ನು ನೀವು ಅಳೆಯಬೇಕಾದ ಕಾರಣದಿಂದಲೇ ನೀವು ಬೆಳಿಗ್ಗೆ ಮಾತನಾಡಲೂ ಅವಕಾಶ ನೀಡದಂತೆ ಎಚ್ಚರಿಕೆಯಿಂದ ತಾಪಮಾನ ಅಳೆಯಬೇಕಾಗುತ್ತದೆ. ಅಲ್ಲದೇ ಈ ಉಪಕರಣವೂ ಆದಷ್ಟೂ ನಿಖರವಾದ ವಿವರಗಳನ್ನು ನೀಡುವಷ್ಟು ಉತ್ತಮ ಗುಣಮಟ್ಟದ್ದಾಗಿರಬೇಕು. ನೀವು ಕೇವಲ ಒಂದು ತಿಂಗಳು ಮಾತ್ರವೇ ಅಳೆದು ನಿಮ್ಮ ಅಂಡೋತ್ಪತ್ತಿಯ ನಿಖರ ದಿನವನ್ನು ಖಚಿತಪಡಿಸಿಕೊಳ್ಳುವ ಬದಲು ನಾಲ್ಕಾರು ತಿಂಗಳಾದರೂ ಏಕಪ್ರಕಾರವಾಗಿ ಅಳೆಯುವುದನ್ನು ಮುಂದುವರೆಸಿ ಸರಾಸರಿ ದಿನವನ್ನು ಪರಿಗಣಿಸಬಹುದು.

ಆದರೆ ಈ ಕ್ರಿಯೆಗಳು ಹೇಳುವಷ್ಟು ಸುಲಭವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ಬೆಳಗ್ಗಿನ ಸಮಯದ ಧಾವಂತ ಅಥವಾ ಬೇರಾವುದೋ ಕಾರಣದಿಂದ ಬೆಳಿಗ್ಗೇಳುವ ಸಮಯದ ಮೇಲೆ ಪ್ರಭಾವ ಬೀರಬಹುದು. ರಾತ್ರಿ ಮಲಗುವ ಸಮಯದಲ್ಲಿ ಏರುಪೇರಾದರೂ ಈ ವಿವರ ಸರಿಯಾಗಿ ಲಭಿಸದ ಸಾಧ್ಯತೆಗಳಿವೆ. ಆದ್ದರಿಂದ ಅಪಾರ ತಾಳ್ಮೆ ಮತ್ತು ಸಂಯಮ ಪಡೆಯುವುದು ಅವಶ್ಯಕ. ಇಂದು ಈ ಕಾರ್ಯವನ್ನು ನಿರ್ವಹಿಸುವ ಕಿಟ್ ಗಳೂ ಲಭ್ಯವಿವೆ. ಕೊಂಚ ದುಬಾರಿಯಾಗಿದ್ದರೂ, ಇವು ಕೊಂಚ ನಿಖರವಾದ ಸಮಯವನ್ನು ಖಚಿತಪಡಿಸುತ್ತವೆ.

ನಿಮ್ಮ ಗರ್ಭಕಂಠವನ್ನು ಅರಿತುಕೊಳ್ಳಿ

ನಿಮ್ಮ ಗರ್ಭಕಂಠವನ್ನು ಅರಿತುಕೊಳ್ಳಿ

ಅಂಡೋತ್ಪತ್ತಿಯಾಗುವ ಸಮಯದಲ್ಲಿ ಗರ್ಭಕಂಠ ಮಾತ್ರ ಸ್ಪಷ್ಟ ಸೂಚನೆಗಳನ್ನೇ ನೀಡುತ್ತದೆ. ದೇಹದಲ್ಲಿ ಎರಡು ಪ್ರಮುಖ ರಸದೂತಗಳ ಪ್ರಭಾವ ಅದಲು ಬದಲಾಗುವ ಸಮಯದಲ್ಲಿ ಅಂದರೆ, ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವ ಸಮಯದಲ್ಲಿ ಗರ್ಭಕಂಠವೂ ತೆರೆದು ವೀರ್ಯಾಣುಗಳಿಗೆ ಆಹ್ವಾನ ನೀಡುತ್ತದೆ ಹಾಗೂ ಅಂಡಾಣು ಫಲಿತಗೊಳ್ಳಲು ಆದಷ್ಟೂ ಹೆಚ್ಚಿನ ಬೆಂಬಲವನ್ನು ಒದಗಿಸುತ್ತದೆ.

ಈ ಸಮಯದಲ್ಲಿ ಸ್ಪಷ್ಟವಾಗಿ ಕಾಣುವ ವ್ಯತ್ಯಾಸವನ್ನು ಗರ್ಭಕಂಠ ತೋರುತ್ತದೆ. ಗರ್ಭಕಂಠ ಎಂದರೆ ಹೆಸರೇ ಸೂಚಿಸುವಂತೆ ಗರ್ಭಕೋಶದ ದ್ವಾರ. ಇದು ಜನನಾಂಗದ ನಾಳದ ತುದಿಯಲ್ಲಿ ಮತ್ತು ಗರ್ಭಕೋಶದ ಪ್ರಾರಂಭವಾಗುವಲ್ಲಿ ಕುತ್ತಿಗೆಯಂತಹ ಕೊಳವೆಯಾಗಿದೆ. ಇದು ಅಪಾರವಾಗಿ ವಿಸ್ತಾರವಾಗುವ ಗುಣವನ್ನು ಹೊಂದಿದೆ. ಅಂದರೆ ಹೆರಿಗೆಯ ಸಮಯದಲ್ಲಿ ಮಗುವಿನ ತಲೆ ಈ ವಿಸ್ತರಿಸಿದ ಗರ್ಭಕಂಠದ ಮೂಲಕ ಹೊರಬರುತ್ತದೆ. ಮಾಸಿಕ ಅವಧಿಯ ಪ್ರಾರಂಭಿಕ ದಿನಗಳಲ್ಲಿ ಇದು ಮುಚ್ಚಿರುತ್ತದೆ. ಇದನ್ನು ನೀವು ಬೆರಳನ್ನು ಸ್ಪರ್ಶಿಸುವ ಮೂಲಕ ಅನುಭವ ಪಡೆಯಬಹುದು. ಆದರೆ ಅಂಡೋತ್ಪತ್ತಿಯ ದಿನದಂದು ಈ ಕಂಠ ಹಿಂದಕ್ಕೆ ಸರಿಯುತ್ತದೆ, ಅಂದರೆ ನಿಮಗೆ ಇದನ್ನು ಸ್ಪರ್ಶಿಸಲು ಹಿಂದಿನ ದಿನಗಳಲ್ಲಿದ್ದ ಸ್ಥಾನಕ್ಕಿಂತಲೂ ಹೆಚ್ಚು ಒಳಭಾಗಕ್ಕೆ ಬೆರಳನ್ನು ಕೊಂಡೊಯ್ಯಬೇಕಾಗುತ್ತದೆ. ಅಲ್ಲದೇ ಹಿಂದೆ ಗಟ್ಟಿಯಾಗಿದ್ದ ಭಾಗ ಸ್ಪರ್ಶವಾಗುತ್ತಿದ್ದು ಈಗ ಈ ಭಾಗ ಮೃದುವಾಗಿರುವ ಅನುಭವವಾಗುತ್ತದೆ. ಅಲ್ಲದೇ ನಡುವಣ ರಂಧ್ರವೂ ಕೊಂಚವೇ ತೆರೆದಿರುವುದನ್ನು ಅನುಭವಿಸಬಹುದು. ಅಂದರೆ ವೀರ್ಯಾಣುಗಳು ಇದರೊಳಗೆ ಪ್ರವೇಶಿಸಲು ಈ ಕಂಠ ತೆರೆದಿದೆ! ಹಾಗಾಗಿ, ನೀವು ನಿತ್ಯವೂ ನಿಮ್ಮ ಗರ್ಭಕಂಠವನ್ನು ಪರೀಕ್ಷಿಸಿ ನೋಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಒಂದೇ ಬೆರಳಿನಿಂದ ಈ ಅನುಭವ ಪಡೆಯಲು ಸಾಧ್ಯವಾದರೂ ಎರಡು ಬೆರಳುಗಳಿಂದಲೂ ಪ್ರಯತ್ನಿಸಬಹುದು. ಅಲ್ಲದೇ ನಿಮ್ಮ ಅನುಭವಗಳನ್ನು ದಾಖಲಿಸುತ್ತಾ ಹೋಗುವ ಮೂಲಕ ಹೆಚ್ಚು ಸ್ಪಷ್ಟವಾದ ವಿವರಗಳನ್ನು ಪಡೆಯಬಹುದು.

ಗರ್ಭಕಂಠದಲ್ಲಿ ಕಾಣಬರುವ ಇನ್ನೊಂದು ಸ್ಪಷ್ಟ ಸೂಚನೆ ಎಂದರೆ ಗರ್ಭಕಂಠದ ಲೋಳೆ (Cervical mucus) ಹೆಚ್ಚು ಸ್ನಿಗ್ಧವಾಗುವುದು. ಈ ಲೋಳೆಯ ಕೆಲಸವೆಂದರೆ ವೀರ್ಯಾಣುಗಳನ್ನು ಅಂಡಾಣುಗಳತ್ತ ಕೊಂಡೊಯ್ಯುವುದು. ಸ್ವಾಭಾವಿಕವಾಗಿ ಮಾಸಿಕ ದಿನಗಳ ಕೊನೆಯಲ್ಲಿ ಈ ದ್ರವ ಇಲ್ಲವಾಗುತ್ತದೆ ಹಾಗೂ ಜನನಾಂಗದ ಒಳಭಾಗ ಒಣಗುತ್ತದೆ. ಅಂದರೆ ಮಾಸಿಕ ದಿನಗಳ ಅವಧಿಯಲ್ಲಿ ಏನೂ ಇಲ್ಲದ ಮತ್ತು ಗರಿಷ್ಟ ಇರುವ ಲೋಳೆ ನಿಮಗೆ ಅಂಡೋತ್ಪತ್ತಿಯ ದಿನಗಳನ್ನು ಖಚಿತಪಡಿಸಲು ನೆರವಾಗುತ್ತವೆ. ಅಲ್ಲದೇ ಅಂಡೋತ್ಪತ್ತಿಯ ಸಮಯದಲ್ಲಿ ಈ ಲೋಳೆ ಹೆಚ್ಚೂ ಕಡಿಮೆ ಪಾರದರ್ಶಕ ಮತ್ತು ಮೊಟ್ಟೆಯ ಬಿಳಿಭಾಗಕ್ಕೆ ಹೋಲುವಷ್ಟು ಸ್ನಿಗ್ಧವಾಗುತ್ತದೆ ಮತ್ತು ಎರಡು ಬೆರಳುಗಳ ನಡುವೆ ಜಾರುವಂತಿದ್ದು ಬೆರಳುಗಳನ್ನು ಬಿಡಿಸಿದಾಗ ಎರಡು ಬೆರಳುಗಳ ನಡುವೆ ದಾರದಂತೆ ಉಳಿದು ನಂತರ ತುಂಡಾಗುತ್ತದೆ. ಸಾಮಾನ್ಯವಾಗಿ ಈ ದಾರ ಕೆಲವು ಇಂಚುಗಳಷ್ಟು ಉದ್ದವಾಗಿರಬಹುದು. ಅಂದರೆ ಈ ದಾರ ಹೆಚ್ಚು ಸ್ಪಷ್ಟ ಮತ್ತು ಉದ್ದವಾಗುತ್ತದೆಯೋ ಅದೇ ನಿಮ್ಮ ಅಂಡೋತ್ಪತ್ತಿಯ ದಿನ!

ಅಂಡೋತ್ಪತ್ತಿಯ ದಿನ ಕಳೆದ ಬಳಿಕ ನಿಮ್ಮ ದೇಹದಿಂದ ಹೆಚ್ಚು ಸ್ನಿಗ್ಧವಾದ ಮತ್ತು ಬಿಳಿಯ ಸ್ರಾವ ಕಾಣಿಸಿಕೊಳ್ಳಬಹುದು. ದೇಹದ ತಾಪಮಾನ, ಗರ್ಭಕಂಠದ ಲೋಳೆಯ ವಿವರಗಳು ಎಲ್ಲವನ್ನೂ ಕಲೆಹಾಕಿದರೂ ನಿಜವಾದ ಅಂಡೋತ್ಪತ್ತಿಯ ಆಸು ಪಾಸಿನ ದಿನವೇ ಕಂಡುಬರಬಹುದು. ಆದರೆ ಈ ದಿನವನ್ನು ನೀವು ನಿರೀಕ್ಷಿಸಿ ಇದಕ್ಕಾಗಿ ತಯಾರಿ ಮಾಡುವುದರಲ್ಲಂತೂ ಈ ವಿಧಾನಗಳು ಅತ್ಯುತ್ತಮವಾಗಿವೆ. ಕೆಲವು ಮಹಿಳೆಯರಲ್ಲಿ ಗರ್ಭಕಂಠದ ಲೋಳೆ ಹೆಚ್ಚು ಉತ್ಪತ್ತಿಯಾಗುವುದಿಲ್ಲ. ವಿಶೇಷವಾಗಿ ಗರ್ಭಕಂಠದ ಶಸ್ತ್ರಕ್ರಿಯೆಗೆ ಒಳಗಾದ ಮಹಿಳೆಯರು ಅಥವಾ ಲೀಪ್ ವಿಧಾನದ ಚಿಕಿತ್ಸೆ ಪಡೆದ ಮಹಿಳೆಯರಲ್ಲಿ ಈ ವಿಧಾನ ಹೆಚ್ಚು ನಿಖರವಾದ ವಿವರಗಳನ್ನು ನೀಡುವುದಿಲ್ಲ.

ಅಂಡೋತ್ಪತ್ತಿಯ ಕಿಟ್ (ovulation predictor kit) ಖರೀದಿಸಿ

ಅಂಡೋತ್ಪತ್ತಿಯ ಸಮಯದಲ್ಲಿ ಹೆಚ್ಚು ಕ್ರಿಯಾಶೀಲವಾಗುವ luteinizing hormone, ಅಥವಾ LH ಎಂಬ ರಸದೂತದ ಇರುವಿಕೆಯನ್ನು ಸ್ಪಷ್ಟಪಡಿಸುವ ಉಪಕರಣವೇ ಈ ಕಿಟ್. ಕೊಂಚ ದುಬಾರಿಯಾಗಿದ್ದರೂ ಅಂಡೋತ್ಪತ್ತಿಯ 12 ರಿಂದ 24 ಘಂಟೆಗಳ ಮುನ್ನಾ ಸಮಯವನ್ನು ಹೆಚ್ಚು ನಿಖರವಾಗಿ ಇದು ತೋರಿಸುತ್ತದೆ. ಏಕೆಂದರೆ ಈ ರಸದೂತ ಅಂಡೋತ್ಪತ್ತಿಯ ಕೊಂಚ ಸಮಯ ಹಿಂದೆ ಅತಿ ಹೆಚ್ಚು ಕ್ರಿಯಾಶೀಲವಾಗುತ್ತದೆ. ಈ ಉಪಕರಣದಲ್ಲಿ ಒದಗಿಸಲಾಗಿರುವ ಪ್ರೇಕ್ಷಕ ಭಾಗದಲ್ಲಿ ಮಹಿಳೆಯ ಮೂತ್ರದ ಕೆಲವು ತೊಟ್ಟುಗಳನ್ನು ಹಾಕಿದಾಗ ಬದಲಾಗುವ ಬಣ್ಣ ಮಾಹಿತಿಯನ್ನು ಸ್ಪಷ್ಟವಾಗಿ ಕೆಲವೇ ನಿಮಿಷಗಳಲ್ಲಿ ನೀಡುತ್ತದೆ.

ಅಷ್ಟೇನೂ ನಿಖರವಲ್ಲದ ಇನ್ನೊಂದು ವಿಧಾನವಿದೆ. ಇದೇ ಜೊಲ್ಲಿನ ಪರೀಕ್ಷೆ. ಜೊಲ್ಲಿನಲ್ಲಿ ಈಸ್ಟ್ರೋಜೆನ್ ಮಟ್ಟಗಳನ್ನು ಪರಿಶೀಲಿಸುವ ಮೂಲಕ ಈ ದಿನವನ್ನು ಗುರುತಿಸಲು ಸಾಧ್ಯ. ಅಂಡೋತ್ಪತ್ತಿ ಸಮೀಪಿಸುತ್ತಿದ್ದಂತೆ ಇದು ನಿಮ್ಮ ಜೊಲ್ಲಿನಲ್ಲಿ ಹೆಚ್ಚಾಗಿರುವ ಈಸ್ಟ್ರೊಜೆನ್ ಮಟ್ಟವನ್ನು ಅಳೆಯುತ್ತದೆ. ನಿಮ್ಮ ಅಂಡೋತ್ಪತ್ತಿಯ ದಿನದಂದು, ಸೂಕ್ಷದರ್ಶಕದ ಅಡಿಯಲ್ಲಿರುವ ನಿಮ್ಮ ಜೊಲ್ಲಿನಲ್ಲಿ ಜರೀಗಿಡದ ಎಲೆಯಂತೆ ಅಥವಾ ಮಂಜಿನ ಕಣದಂತಹ ವಿನ್ಯಾಸ ಕಾಣಬಹುದು. ಆದರೆ ಎಲ್ಲಾ ಮಹಿಳೆಯರಲ್ಲಿಯೂ ಈ ವಿನ್ಯಾಸ ಕಾಣಬರುವ ಖಚಿತತೆ ಇಲ್ಲವಾದ್ದರಿಂದ ಇದನ್ನು ಪರಿಪೂರ್ಣ ಪರೀಕ್ಷೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಈ ಪರೀಕ್ಷೆ ಕಿಟ್ ಗಳಿಗಿಂತ ಅಗ್ಗವಾಗಿದೆ.

ಮಹಿಳೆಯ ಬೆವರಿನಲ್ಲಿರುವ ಲವಣಗಳನ್ನು (ಕ್ಲೋರೈಡ್, ಸೋಡಿಯಂ, ಪೊಟ್ಯಾಶಿಯಂ) ಅಳೆಯುವ ಮೂಲಕವೂ ಅಂಡೋತ್ಪತ್ತಿಯ ದಿನಗಳನ್ನು ಅಂದಾಜಿಸಬಹುದು. ಈ ಮಟ್ಟಗಳು ತಿಂಗಳ ಇತರ ದಿನಗಳಲ್ಲಿ ಬೇರೆಯೇ ಇದ್ದು ಅಂಡೋತ್ಪತ್ತಿಯ ದಿನಗಳಲ್ಲಿ ಕೊಂಚ ಬದಲಾಗುತ್ತವೆ. ಈ ಬದಲಾವಣೆಗೆ chloride ion surge ಎಂದು ಕರೆಯುತ್ತಾರೆ. ಅಂದರೆ ಅಂಡೋತ್ಪತ್ತಿಗೂ ಮುನ್ನ ಈಸ್ಟ್ರೋಜೆನ್ ಮತ್ತು ಎಲ್ ಹೆಚ್ ರಸದೂತಗಳ ಪ್ರಭಾವದಿಂದ ಇದು ಕಾಣೀಸಿಕೊಳ್ಳುತ್ತದೆ. ಆದರೆ ಈ ಪರೀಕ್ಷೆಯ ಧನಾತ್ಮಕ ಅಂಶ ಎಂದರೆ ಅಂಡೋತ್ಪತ್ತಿಗೂ ಸುಮಾರು ನಾಲ್ಕು ದಿನ ಮುನ್ನವೇ ಇದರ ಸಂಕೇತವನ್ನು ನೀಡುವುದು. ಆ ದಿನದಿಂದ ಅಂಡೋತ್ಪತ್ತಿ ಮುಗಿದ ಮರುದಿನದವರೆಗೂ ಖಚಿತವಾದ ಫಲವಂತಿಕೆಯ ದಿನಗಳಾಗಿದ್ದು ಈ ಸಮಯದ ಮಿಲನದಿಂದ ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚುತ್ತವೆ.

ನೆನಪಿಡಿ: ನೀವು ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವಾಗ ತಾಳ್ಮೆ ಮತ್ತು ಸತತ ಪ್ರಯತ್ನ ಮುಂದುವರೆಸುವುದು ಮುಖ್ಯವಾಗಿರುತ್ತದೆ ಮತ್ತು ನೀವು ಅಂಡೋತ್ಪತ್ತಿಯ ದಿನದದಲ್ಲಿದ್ದರೂ ಸಹ ನೀವು ಖಂಡಿತವಾಗಿಯೂ ಗರ್ಭಧರಿಸುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಈ ಸಾಮಾನ್ಯ ಅಂಡೋತ್ಪತ್ತಿಯ ರೋಗಲಕ್ಷಣಗಳನ್ನು ಗಮನದಲ್ಲಿರಿಸಿಕೊಂಡಿದ್ದರೆ ನಿಮ್ಮ ಪ್ರಯತ್ನಗಳು ಸರಿಯಾದ ದಾರಿಯಲ್ಲಿ ಮುಂದುವರೆಯುವುದನ್ನು ಖಚಿತಪಡಿಸಬಹುದು. ಈ ದಿನಗಳಲ್ಲಿ ದಂಪತಿಗಳು ಆದಷ್ಟೂ ಹೆಚ್ಚಿನ ಬಾರಿ ಕೂಡುವ ಮೂಲಕ ಗರ್ಭಧರಿಸುವ ಸಾಧ್ಯತೆಯನ್ನು ಅಪಾರವಾಗಿ ಹೆಚ್ಚಿಸಬಹುದು.

ನಿಮಗೆ ಶುಭವಾಗಲಿ ಮತ್ತು ಶೀಘ್ರದಲ್ಲಿಯೇ ನಿಮ್ಮ ಮನೆಯಂಗಳದಲ್ಲಿಯೂ ಮಗುವಿನ ನಸುನಗು ಮೂಡಲಿ ಎಂದು ಹಾರೈಸುತ್ತೇವೆ.

English summary

Ovulation Symptoms and How Long Does Ovulation Last?

What are the symtoms of ovulation, how long ovulation last, Here are more detail.
X
Desktop Bottom Promotion