For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಪೂರ್ವ ಮತ್ತು ಗರ್ಭಾವಸ್ಥೆಯ ಲಕ್ಷಣಗಳ ನಡುವಿನ ವ್ಯತ್ಯಾಸ

|

Premenstrual syndrome ಅಥವಾ PMS ಎಂದರೆ ಮುಟ್ಟು (ಮಾಸಿಕ ಸ್ರಾವ) ಎದುರಾಗುವ ಮುನ್ನಾ ದಿನಗಳಲ್ಲಿ ಕಾಣಬರುವ ಲಕ್ಷಣಗಳಾಗಿವೆ. ರಸದೂತಗಳ ಪ್ರಭಾವದಿಂದ ಕೆಳಹೊಟ್ಟೆಯ ಸೆಡೆತ, ದೇಹತ ತಾಮಪಾನದಲ್ಲಿ ಏರಿಕೆ, ಅಸಾಮಾನ್ಯವಾದ ಆಹಾರ ಸೇವನೆಯ ಬಯಕೆ ಮತ್ತು ಮನೋಭಾವದಲ್ಲಿ ಏರಿಳಿತ ಮೊದಲಾದವು ಪ್ರಮುಖವಾಗಿ ಕಂಡುಬರುತ್ತವೆ.

How To Differentiate PMS Symptoms And Pregnancy Symptoms

ಸಾಮಾನ್ಯವಾಗಿ ಇದೇ ತರಹದ ಲಕ್ಷಣಗಳು ಗರ್ಭಾವಸ್ಥೆಯ ಪ್ರಾರಂಭಿಕ ದಿನಗಳಲ್ಲೂ ಕಂಡುಬರುತ್ತವೆ. ಹಾಗಾಗಿ ಈ ಲಕ್ಷಣಗಳು ಎದುರಾದಾಗ ಇದು ಗರ್ಭ ನಿಂತಿರುವ ಸೂಚನೆಯೋ ಅಥವಾ ಮಾಸಿಕ ದಿನಗಳ ಆಗಮನದ ಸೂಚನೆಯೋ ಎಂದು ಕಂಡುಕೊಳ್ಳುವುದು ದುಸ್ತರವಾಗುತ್ತದೆ. ಆದರೆ ಮಾಸಿಕ ಸ್ರಾವ ಪ್ರಾರಂಭವಾಗುತ್ತಿದ್ದಂತೆಯೇ ಈ ಲಕ್ಷಣಗಳು ನಿಲ್ಲುವುದು ಒಂದು ಸಮಾಧಾನಕರ ವಿಷಯ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

ಮುಟ್ಟಿನ-ಪೂರ್ವ ಲಕ್ಷಣಗಳು ಮತ್ತು ಗರ್ಭಾವಸ್ಥೆಯ ಲಕ್ಷಣಗಳು ಇವೆರಡೂ ಲಕ್ಷಣಗಳ ವ್ಯತ್ಯಾಸವನ್ನು ಅರಿಯುವ ಮುನ್ನ ಇವೆರಡಲ್ಲೂ ಸಮಾನವಾದ ಲಕ್ಷಣಗಳು ಯಾವುವು ಎಂಬುದನ್ನು ನೋಡೋಣ:

ಮುಟ್ಟಿನ-ಪೂರ್ವ ಲಕ್ಷಣಗಳು ಮತ್ತು ಗರ್ಭಾವಸ್ಥೆಯ ಸಮಾನ ಲಕ್ಷಣಗಳು

ಮುಟ್ಟಿನ-ಪೂರ್ವ ಲಕ್ಷಣಗಳು ಮತ್ತು ಗರ್ಭಾವಸ್ಥೆಯ ಸಮಾನ ಲಕ್ಷಣಗಳು

  • ಮುಟ್ಟಿನ-ಪೂರ್ವ ಲಕ್ಷಣಗಳು ಮತ್ತು ಗರ್ಭಾವಸ್ಥೆಯ ಸಮಾನ ಲಕ್ಷಣಗಳು
  • ಒಂದು ವೇಳೆ ಕೆಳಗೆ ವಿವರಿಸಿದ ಲಕ್ಷಣಗಳು ನಿಮಗೆ ಸ್ಪಷ್ಟವಾಗಿ ಎದುರಾಗಿದ್ದರೆ ಇವೆರಡರಲ್ಲಿ ಯಾವ ಸ್ಥಿತಿ ಇದಕ್ಕೆ ಕಾರಣ ಎಂದು ಹೇಳುವುದು ಕಷ್ಟ.
  • ಬೆನ್ನು ನೋವು: ಮಾಸಿಕ ದಿನಗಳ ಪೂರ್ವದ ಸಮಯದಲ್ಲಿಯೂ ಗರ್ಭಾವಸ್ಥೆಯ ಪ್ರಾರಂಭಿಕ ದಿನಗಳಲ್ಲಿಯೂ ಇದು ಕಾಣಿಸಿಕೊಳ್ಳುತ್ತದೆ.
  • ತಲೆನೋವು: ತಲೆನೋವು ಮತ್ತು ಮೈಗ್ರೇನ್ ಸಹಾ ಇವೆರಡೂ ಅವಧಿಗಳಲ್ಲಿ ಸಾಮಾನ್ಯವಾಗಿದೆ.
  • ಮಲಬದ್ದತೆ: ಎಲ್ಲಾ ಸರಿ ಇದ್ದೂ ಮಲಬದ್ದತೆ ಎದುರಾಗಲು ಪ್ರೊಜೆಸ್ಟರಾನ್ ರಸದೂತವೇ ಕಾರಣ. ಈ ರಸದೂತ ಮಾಸಿಕ ಚಕ್ರದ ಎರಡನೇ ಅರ್ಧದಲ್ಲಿ ಹೆಚ್ಚುತ್ತವೆ ಹಾಗೂ ಮಾಸಿಕ ದಿನಗಳು ಎದುರಾದಾಗ ಅಥವಾ ಗರ್ಭಾವಸ್ಥೆಯಲ್ಲಿ ಬದಲಾಗುವ ರಸದೂತಗಳ ಮಟ್ಟದಿಂದಲೂ ಕಾಣಿಸಿಕೊಳ್ಳುತ್ತದೆ.
  • ಊದಿಕೊಂಡ ಮತ್ತು ಸೂಕ್ಷ್ಮಸಂವೇದಿ ಸ್ತನಗಳು: ಸ್ತನಗಳು ಮುಟ್ಟಿದರೆ ನೋವಾಗುವುದು ಮತ್ತು ಸೂಕ್ಷ್ಮಸಂವೇದಿಯಾಗುವುದು ಹಾಗೂ ಮುಟ್ಟಿನ ದಿನಗಳ ಪೂರ್ವ ಸಮಯದಲ್ಲಿ ಅಥವಾ ಗರ್ಭಾವಸ್ಥೆಯ ಪ್ರಾರಂಭಿಕ ದಿನಗಳಲ್ಲಿ ಗಾತ್ರವನ್ನು ಕೊಂಚ ಹೆಚ್ಚಿಸಿಕೊಳ್ಳುವುದು ಕಂಡುಬರುತ್ತದೆ.
  • ಮೂತ್ರ ವಿಸರ್ಜನೆ ಹೆಚ್ಚು ಸತತವಾಗುವುದು: ಇವೆರಡೂ ಸ್ಥಿತಿಗಳಲ್ಲಿ ಮೂತ್ರ ವಿಸರ್ಜನೆಗೆ ಅವಸರವಾಗುವುವು ಹೆಚ್ಚುತ್ತದೆ.
  • ಮನೋಭಾವದ ಏರಿಳಿತ: ಮಾನಸಿಕ ಕಿರಿಕಿರಿ, ಖಿನ್ನತೆ, ಉದ್ವೇಗ, ಯಾವುದಕ್ಕೂ ಅಳು ಬರುವಂತಾಗುವುದು ಮತ್ತು ಮನೋಭಾವ ಒಂದೇ ಪ್ರಕಾರ ಇಲ್ಲದಿರುವುದು ಮೊದಲಾದವು ಇವೆರಡೂ ಸ್ಥಿತಿಗಳಲ್ಲಿ ಕಾಣಬರುತ್ತವೆ.
  • ಈ ಲಕ್ಷಣಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕಂಡುಬಂದರೆ ಅಪೇಕ್ಷಿತ ಗರ್ಭಧಾರಣೆ ಈಗ ಸಾಧ್ಯವಾಯಿತೋ ಅಥವಾ ಅನಪೇಕ್ಷಿತ ಗರ್ಭಧಾರಣೆಗಾಗಿ ಸೇವಿಸಬೇಕಾಗಿದ್ದ ಗರ್ಭನಿರೋಧಕ ಗುಳಿಗೆ ಸೇವಿಸಿರಲಿಲ್ಲವೋ ಎಂದು ಆತಂಕ ಎದುರಾಗುತ್ತದೆ. ಹಾಗಾಗಿ, ಲಕ್ಷಣಗಳು ಒಂದೇ ಇದ್ದರೂ ಕೆಲವು ವ್ಯತ್ಯಾಸಗಳನ್ನು ಅರಿತುಕೊಂಡರೆ ನಿಜ ಸ್ಥಿತಿ ಅರಿಯುವುದು ಸುಲಭವಾಗುತ್ತದೆ.
  • ಮುಟ್ಟಿನ-ಪೂರ್ವ ಲಕ್ಷಣಗಳು ಮತ್ತು ಗರ್ಭಾವಸ್ಥೆಯ ವ್ಯತ್ಯಾಸಗಳು

    ಮುಟ್ಟಿನ-ಪೂರ್ವ ಲಕ್ಷಣಗಳು ಮತ್ತು ಗರ್ಭಾವಸ್ಥೆಯ ವ್ಯತ್ಯಾಸಗಳು

    1. ರಕ್ತಸ್ರಾವ

    ಮುಟ್ಟಿನ-ಪೂರ್ವ ಲಕ್ಷಣಗಳು: ಮಾಸಿಕ ದಿನ ಪ್ರಾರಂಭವಾಗುವವರೆಗೂ ರಕ್ತಸ್ರಾವ ಕಾಣಿಸಿಕೊಳ್ಳುವುದಿಲ್ಲ ಅಥವಾ ಬಿಂದುಗಳೂ ಕಾಣಿಸಿಕೊಳ್ಳುವುದಿಲ್ಲ

    ಗರ್ಭಾವಸ್ಥೆ: ನೀವು ಅಲ್ಪ ಮಟ್ಟಿನ ಬಿಂದುಗಳನ್ನು (ಗುಲಾಬಿ ಅಥವಾ ಗಾಢ ಕಂದು ಬಣ್ಣದ) ಕಾಣಬಹುದು. ಇದು ಸಾಮಾನ್ಯವಾಗಿ ಗರ್ಭಧಾರಣೆಯ ಹತ್ತರಿಂದ ಹದಿನಾಲ್ಕನೆಯ ದಿನದಲ್ಲಿ ಸಂಭವಿಸುತ್ತದೆ ಹಾಗೂ ಫಲಿತ ಅಂಡಾಣು ಗರ್ಭಾಶಯದಲ್ಲಿ ಸ್ಥಾಪಿಸಲ್ಪಡುತ್ತದೆ. ಅಂದರೆ ಈ ಸ್ಥಿತಿಯಲ್ಲಿ ಅಂಡಾಣು ಗರ್ಭಕೋಶದ ಒಳಗೋಡೆಯಲ್ಲಿ ಆಶ್ರಯ ಪಡೆಯುತ್ತದೆ. ಈ ಸ್ಥಿತಿ ಎರಡು ದಿನಗಳ ವರೆಗೆ ಇರಬಹುದು.

    2. ಸುಸ್ತು

    2. ಸುಸ್ತು

    ಮುಟ್ಟಿನ-ಪೂರ್ವ ಲಕ್ಷಣಗಳು : ಯಾವುದೇ ಸುಸ್ತಾಗುವಂತಹ ಕೆಲಸ ಮಾಡದಿದ್ದಾಗಲೂ ನಿಮಗೆ ಸುಸ್ತಾಗುತ್ತದೆ. ಮಾಸಿಕ ಸ್ರಾವ ಪ್ರಾರಂಭವಾಗುತ್ತಿದ್ದಂತೆಯೇ ಇದು ಇಲ್ಲವಾಗುತ್ತದೆ. ಕೊಂಚ ವಿಶ್ರಾಂತಿ ಪಡೆದರೆ ಈ ಸುಸ್ತು ಹೋಗುತ್ತದೆ.್

    ಗರ್ಭಾವಸ್ಥೆ: ಮುಟ್ಟಿನ ದಿನಗಳು ಆಗಬೇಕಾಗಿದ್ದ ದಿನ ದಾಟಿ ಹೋದರೆ ಮತ್ತು ನಿಮಗೆ ತುಂಬಾ ಸುಸ್ತು ಎದುರಾಗಿದ್ದರೆ ಇದು ಗರ್ಭಾವಸ್ಥೆಯ ಲಕ್ಷಣಗಳಾಗಿವೆ. ಗರ್ಭಾವಸ್ಥೆಯಲ್ಲಿ ಏರುವ ಪ್ರೊಜೆಸ್ಟರಾನ್ ರಸದೂತಗಳ ಮಟ್ಟಗಳ ಕಾರಣ ಈ ಸುಸ್ತು ಇಡಿಯ ಗರ್ಭಾವಸ್ಥೆಯಲ್ಲಿ ಮುಂದುವರೆಯಲಿದೆ. ಅಲ್ಲದೇ ರಕ್ತದಲ್ಲಿ ಸಕ್ಕರೆಯ ಮಟ್ಟ ಮತ್ತು ರಕ್ತದ ಒತ್ತಡವೂ ಕೊಂಚ ಇಳಿಯಲಿದೆ.

    3. ಅಸಾಮಾನ್ಯ ಆಹಾರ ಸೇವನೆಯ ಬಯಕೆಗಳು

    3. ಅಸಾಮಾನ್ಯ ಆಹಾರ ಸೇವನೆಯ ಬಯಕೆಗಳು

    ಮುಟ್ಟಿನ-ಪೂರ್ವ ಲಕ್ಷಣಗಳು : ನಿಮ್ಮ ಆಹಾರಕ್ರಮ ಕೊಂಚ ಬದಲಾಗಲಿದೆ. ನಿಮಗೆ ಸಿಹಿ, ಚಾಕಲೇಟು, ಕಾರ್ಬೋಹೈಡ್ರೇಟುಗಳು ಅಥವಾ ಉಪ್ಪಿನ ತಿನಿಸುಗಳು ಬೇಕೆನಿಸುತ್ತದೆ. ಅಲ್ಲದೇ ತಿನ್ನುವ ಪ್ರಮಾಣವೂ ಹೆಚ್ಚುತ್ತದೆ. ಆದರೆ ಈ ಆಹಾರಗಳು ಲಭ್ಯವಿಲ್ಲದಿದ್ದರೆ ನೀವು ಈ ಬಯಕೆಯನ್ನು ಹತ್ತಿಕ್ಕಿಕೊಳ್ಳಲೂಬಹುದು.

    ಗರ್ಭಾವಸ್ಥೆ: ನಿಮಗೆ ಕೆಲವು ಆಹಾರಗಳನ್ನು ಸೇವಿಸುವ ಬಯಕೆ ಭುಗಿಲೇಳುತ್ತದೆ. ಈ ಅಹಾರ ಲಭಿಸದೇ ಹೋದರೆ ಚಡಪಡಿಕೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಆಹಾರವಲ್ಲದ ವಸ್ತುವಿನ ಸೇವನೆಯ ಬಯಕೆಯೂ ಮೂಡಬಹುದು ( ಈ ಸ್ಥಿತಿಗೆ pica ಎಂದು ಕರೆಯುತ್ತಾರೆ). ಈ ಸ್ಥಿತಿಯಲ್ಲಿ ಆಕೆ ಲೋಹ, ಐಸ್ ಮೊದಲಾದವುಗಳನ್ನು ತಿನ್ನಲು ಇಚ್ಛಿಸುತ್ತಾಳೆ. ಈ ಸ್ಥಿತಿ ಇದ್ದರೆ ತಕ್ಷಣವೇ ವೈದ್ಯರನ್ನು ಕಾಣಬೇಕು. ಈ ತರಹದ ಬಯಕೆಗಳು ಮುಟ್ಟಿನ ಸ್ಥಿತಿಯಲ್ಲಿ ಇರುವುದಿಲ್ಲ.

    4. ವಾಕರಿಕೆ ಮತ್ತು ವಾಂತಿ

    4. ವಾಕರಿಕೆ ಮತ್ತು ವಾಂತಿ

    ಮುಟ್ಟಿನ-ಪೂರ್ವ ಲಕ್ಷಣಗಳು : ಮುಟ್ಟಿನ ದಿನಗಳು ದಾಟಿ ಹೋದರೂ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುವುದಿಲ್ಲ.

    ಗರ್ಭಾವಸ್ಥೆ: ಹೆಚ್ಚಿನ ಗರ್ಭವತಿಯರಿಗೆ ಪ್ರಾರಂಭದ ದಿನಗಳಲ್ಲಿ ವಾಕರಿಕೆ ಮತ್ತು ವಾಂತಿ ಸತತವಾಗಿರುತ್ತದೆ. ಒಂದು ವೇಳೆ ನಿಮ್ಮ ಮುಟ್ಟಿನ ದಿನಗಳು ದಾಟಿಹೋಗಿದ್ದು ವಿಪರೀತ ವಾಕರಿಕೆ ಇದ್ದರೆ ಇದು ಗರ್ಭಧಾರಣೆಯ ಸಂಕೇತವಾಗಿರಬಹುದು. ಗರ್ಭಧಾರಣೆಯ ಎರಡರಿಂದ ಎಂಟು ವಾರದವರೆಗೆ ಇದು ಅತಿ ಹೆಚ್ಚಾಗಿರುತ್ತದೆ ಮತ್ತು ಕೆಲವರಲ್ಲಿ ಗರ್ಭಾವಸ್ಥೆಯ ಎಲ್ಲಾ ದಿನಗಳಿಗೂ ಮುಂದುವರೆಯಬಹುದು.

    5. ಕೆಳಹೊಟ್ಟೆಯ ಸೆಡೆತ

    5. ಕೆಳಹೊಟ್ಟೆಯ ಸೆಡೆತ

    ಮುಟ್ಟಿನ ದಿನಗಳಲ್ಲಿ ಈ ಲಕ್ಷಣಗಳು ಸಾಮಾನ್ಯವಾಗಿವೆ. ಆದರೆ ಅನುವಂಶಿಕ ಮತ್ತು ದೈಹಿಕ ಲಕ್ಷಣಗಳನ್ನು ಆಧರಿಸಿ ಕೊಂಚ ಹೆಚ್ಚು ಕಡಿಮೆ ಇರಬಹುದು. ಆದರೆ ರಕ್ತಸ್ರಾವ ಪ್ರಾರಂಭವಾಗುತ್ತಲೇ ಈ ನೋವು ಇಳಿಯತೊಡಗುತ್ತದೆ ಹಾಗೂ ಸ್ರಾವ ನಿಂತ ಬಳಿಕ ತನ್ನಿಂತಾನೇ ಇಲ್ಲವಾಗುತ್ತದೆ.

    ಗರ್ಭಾವಸ್ಥೆ: ಫಲಿತ ಅಂಡಾಣು ಗರ್ಭಾಶಯದಲ್ಲಿ ಸ್ಥಿತಗೊಳ್ಳುವ ಸಮಯದಲ್ಲಿ ಕೆಳಹೊಟ್ಟೆಯ ಭಾಗದ ಸೆಡೆತ ಮತ್ತು ಬಿಂದುಗಳ ರೂಪದಲ್ಲಿ ಸ್ರಾವ ಕಾಣಿಸಿಕೊಳ್ಳಬಹುದು. ಕೆಳಬೆನ್ನು ಮತ್ತು ಹೊಟ್ಟೆಯ ಕೆಳಭಾಗದಲ್ಲಿಯೂ ನೋವು ಕಾಣಿಸಿಕೊಳ್ಳಬಹುದು. ಇದು ಮುಂದಿನ ಕೆಲವು ವಾರಗಳವರೆಗೂ, ಕೆಲವು ಗರ್ಭವತಿಯರಲ್ಲಿ ಕೆಲವು ತಿಂಗಳುಗಳವರೆಗೂ ಮುಂದುವರೆಯಬಹುದು. ಅಂದರೆ ಈ ನೋವು ಮುಟ್ಟಿನ ದಿನಗಳಿಗಿಂತಲೂ ಹೆಚ್ಚು ದಿನ ಬಾಧಿಸುತ್ತದೆ.

    ವಿಶಿಷ್ಟ ಗರ್ಭಧಾರಣೆಯ ಲಕ್ಷಣಗಳು ಮುಟ್ಟಿನ-ಪೂರ್ವ ಸಮಯದಲ್ಲಿ ಸಂಭವಿಸುವ ಸಾಧ್ಯತೆ ಕಡಿಮೆ

    ವಿಶಿಷ್ಟ ಗರ್ಭಧಾರಣೆಯ ಲಕ್ಷಣಗಳು ಮುಟ್ಟಿನ-ಪೂರ್ವ ಸಮಯದಲ್ಲಿ ಸಂಭವಿಸುವ ಸಾಧ್ಯತೆ ಕಡಿಮೆ

    ಕೆಲವು ರೋಗಲಕ್ಷಣಗಳು ಗರ್ಭಧಾರಣೆಗೆ ನಿರ್ದಿಷ್ಟವಾಗಿವೆ ಮತ್ತು ಮುಟ್ಟಿನ-ಪೂರ್ವ ಸಂದರ್ಭದಲ್ಲಿ ಕಾಣಬರುವುದಿಲ್ಲ ಅವುಗಳೆಂದರೆ:

    ಸ್ತನತೊಟ್ಟುಗಳ ಕಪ್ಪಾಗುವಿಕೆ

    ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವು ಹೆಚ್ಚಾಗುತ್ತದೆ, ಇದು ಸ್ತನತೊಟ್ಟಿನ ವ್ಯಾಸದಲ್ಲಿ ಹೆಚ್ಚಳ ಅಥವಾ ಮೊಲೆತೊಟ್ಟುಗಳ ವಿಸ್ತರಣೆಗೆ ಕಾರಣವಾಗುತ್ತದೆ. ಗರ್ಭಧಾರಣೆಯ ಸಮಯ ಮುಂದುವರೆದಂತೆ, ಈ ಬೆಳವಣಿಗೆ ಹೆಚ್ಚುತ್ತಾ ತೊಟ್ಟಿನ ಬಣ್ಣ ಕಪ್ಪಾಗಲು ಕಾರಣವಾಗುತ್ತದೆ, ಇದು ಹೆರಿಗೆಯ ನಂತರವೂ ಹೆಚ್ಚು ಗಾಢವೇ ಆಗಿರುತ್ತದೆ.

    ಗರ್ಭಕಂಠದ ಲೋಳೆಯ ಬದಲಾವಣೆಗಳು

    ಗರ್ಭಕಂಠದ ಲೋಳೆಯ ಬದಲಾವಣೆಗಳು

    ಅಂಡೋತ್ಪತ್ತಿಯ ಸಾಮಾನ್ಯ ಸೂಚನೆಯೆಂದರೆ ಗರ್ಭಕಂಠದ ಲೋಳೆಯ ಬದಲಾವಣೆ. ಮಹಿಳೆ ಗರ್ಭಧರಿಸಿದ್ದರೆ, ಲೋಳೆಯು ಕೊಂಚ ಬಿಳಿಬಣ್ಣದಲ್ಲಿದ್ದು ಇತರ ಸಮಯಕ್ಕಿಂತ ಕೊಂಚ ತೆಳ್ಳಗಾಗಿರುತ್ತದೆ ಮತ್ತು ಅಂಟಂಟಾಗಿಯೂ ಇರಬಹುದು. ಆದರೆ ಮುಟ್ಟಿಗೂ ಮೊದಲು ಜನನಾಂಗದಿಂದ ಒಸರುವ ದ್ರವ ಹೆಚ್ಚೂ ಕಡಿಮೆ ಪಾರದರ್ಶಕವಾಗಿರುತ್ತದೆ ಮತ್ತು ಇದು ಬಹುತೇಕ ಮೊಟ್ಟೆಯ ಬಿಳಿಭಾಗವನ್ನು ಹೋಲುವಷ್ಟಿರುತ್ತದೆ.

    ಉಸಿರು ತೀವ್ರತರವಾಗುವುದು

    ಉಸಿರು ತೀವ್ರತರವಾಗುವುದು

    ಗರ್ಭಧಾರಣೆಯಾಗಿದ್ದರೆ ಈಗ ಬೆಳೆಯುತ್ತಿರುವ ಮಗುವಿಗೂ ಆಮ್ಲಜನಕದ ಅವಶ್ಯಕತೆ ಇದ್ದು ನಿಮ್ಮ ಉಸಿರಾಟದಿಂದಲೇ ಆ ಅಗತ್ಯತೆಯೂ ಪೂರೈಸಬೇಕಾದ ಕಾರಣ ಉಸಿರಾಟದ ಗತಿ ಕೊಂಚ ಹೆಚ್ಚುತ್ತದೆ.

    ವಿಶ್ರಾಂತ ದೇಹದ ತಾಪಮಾನ (ಬಿಬಿಟಿ) ಯಲ್ಲಿ ಹೆಚ್ಚಳ

    ವಿಶ್ರಾಂತ ದೇಹದ ತಾಪಮಾನ (ಬಿಬಿಟಿ) ಯಲ್ಲಿ ಹೆಚ್ಚಳ

    ಒಂದು ವೇಳೆ ನೀವು ಗರ್ಭವತಿಯಾಗಿದ್ದರೆ ನಿಮ್ಮ ಬಿಬಿಟಿ (basal body temperature (BBT)) ತಾಪಮಾನದಲ್ಲಿ ಕೊಂಚವೇ ಏರಿಕೆ ಕಂಡುಬರುತ್ತದೆ. ಅಂದರೆ ಅಂಡೋತ್ಪತ್ತಿಯ ದಿನದಿಂದ ಮುಂದಿನ ಹದಿನೆಂಟು ದಿನಗಳವರೆಗೆ 0.5 ರಿಂದ 1.5 ಡಿಗ್ರಿ. ಫ್ಯಾರನ್ ಹೀಟ್ ನಷ್ಟು ಏರುತ್ತದೆ. ಆದರೆ ಬಿಬಿಟಿ ಮುಟ್ಟಿನ ಮುನ್ನಾದಿನದ ಸೂಚನೆಯೂ ಹೌದು. ಆದರೆ ರಕ್ತಸ್ರಾವ ಪ್ರಾರಂಭವಾಗುತ್ತಿದ್ದಂತೆಯೇ ಈ ತಾಪಮಾನ ಮೊದಲಿನಂತಾಗುತ್ತದೆ.

    ಹಾಗಾಗಿ, ನಿಮ್ಮ ದೇಹದ ಲಕ್ಷಣಗಳಿಗೆ ಕಾರಣವೇನು ಎಂಬುದನ್ನು ಅರಿಯುವುದು ಮುಖ್ಯ. ಇದರಿಂದ ನೀವು ಗರ್ಭಿಣಿಯಾಗಿದ್ದೀರೋ ಇಲ್ಲವೋ ಎಂಬುದನ್ನು ಅರಿಯಲು ನೆರವಾಗುತ್ತದೆ. ಇದನ್ನು ಇನ್ನೂ ಖಚಿತವಾಗಿ ಹೇಳಬಹುದಾದ ವಿಧಾನವೆಂದರೆ ಗರ್ಭಾವಸ್ಥೆ ಪರೀಕ್ಷಾ ಉಪಕರಣ (home pregnancy test) ಬಳಸುವುದು.

    ನೀವು ಹೊಂದಿರಬಹುದಾದ ಮುಟ್ಟಿನ ಪೂರ್ವ ಮತ್ತು ಗರ್ಭಧಾರಣೆಯ ರೋಗಲಕ್ಷಣಗಳಿಗೆ ಸಂಬಂಧಿಸಿದ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ತಜ್ಞರು ನೀಡಿರುವ ಉತ್ತರಗಳನ್ನು ವಿವರಿಸಲಾಗಿದೆ

    1. ಮಾಸಿಕ ಋತುಚಕ್ರ ಎಂದರೇನು?

    1. ಮಾಸಿಕ ಋತುಚಕ್ರ ಎಂದರೇನು?

    ಋತುಮತಿಯಾದ ಪ್ರತಿ ಹೆಣ್ಣಿನ ದೇಹದಲ್ಲಿ ಎದುರಾಗುವ ಬದಲಾವಣೆಗಳ ಸರಣಿಗಳ ಮೂಲಕ ಗರ್ಭಾವಸ್ಥೆಗಾಗಿ ದೇಹವನ್ನು ತಯಾರು ಮಾಡುವುದೇ ಈ ಚಕ್ರದ ಉದ್ದೇಶವಾಗಿದೆ. ಅಂಡಾಶಯಗಳು ಪ್ರತಿ ತಿಂಗಳಿಗೆ ಒಂದರಂತೆ ಅಂಡಾಣುವನ್ನು ಬಿಡುಗಡೆ ಮಾಡುತ್ತವೆ (ಈ ಕ್ರಿಯೆಗೆ ಓವ್ಯುಲೇಶನ್ ಅಥವಾ ಅಂಡೋತ್ಪತ್ತಿ ಎಂದು ಕರೆಯಲಾಗುತ್ತದೆ). ಈ ಸಮಯದಲ್ಲಿ ಕೆಲವು ರಸದೂತಗಳು ಸ್ರವಿಸಿ ಗರ್ಭಧಾರಣೆಗಾಗಿ ಗರ್ಭಕೋಶವನ್ನು ಸಿದ್ಧಗೊಳಿಸುತ್ತವೆ. ಒಂದು ವೇಳೆ ಅಂಡಾಣು ಬಿಡುಗಡೆಯಾಗಿ ಫಲಿತಗೊಳ್ಳದಿದ್ದರೆ, ಇದಕ್ಕೆಂದೇ ಸಿದ್ಧ ಪಡಿಸಲಾಗಿದ್ದ ಗರ್ಭಕೋಶದ ಒಳಪದರ ಕಳಚಿಕೊಂಡು ಗಾಢ ರಕ್ತದ ರೂಪದಲ್ಲಿ ದೇಹದಿಂದ ಹೊರಹೋಗುತ್ತದೆ. ಇದೇ ಮುಟ್ಟು! ಮುಂದಿನ ತಿಂಗಳು ಇನ್ನೊಂದು ಅಂಡಾಣು ಬಿಡುಗಡೆಯಾಗುತ್ತದೆ ಹಾಗೂ ಫಲಿತಗೊಳ್ಳದೇ ಇದ್ದರೆ ಇದೂ ವಿಸರ್ಜನೆಗೊಳ್ಳುತ್ತದೆ. ಈ ಚಕ್ರವೇ ಮಾಸಿಕ ಋತುಚಕ್ರ. ಈ ಅವಧಿಯನ್ನು ಮಾಸಿಕ ಸ್ರಾವ ಪ್ರಾರಂಭವಾದ ದಿನವನ್ನು ಮೊದಲ ದಿನ ಎಂದು ಪರಿಗಣಿಸಿ ವಯಸ್ಕರಲ್ಲಿ 21 ರಿಂದ 35 ದಿನಗಳವರೆಗೂ ಇರಬಹುದು ಮತ್ತು ಹದಿಹರೆಯದ ಯುವತಿಯರಲ್ಲಿ 21 ರಿಂದ 45 ದಿನಗಳವರೆಗೂ ಇರಬಹುದು.

    2. ಮುಟ್ಟಿನ-ಪೂರ್ವ ಲಕ್ಷಣಗಳು ಯಾವಾಗ ಪ್ರಾರಂಭವಾಗುತ್ತವೆ?

    2. ಮುಟ್ಟಿನ-ಪೂರ್ವ ಲಕ್ಷಣಗಳು ಯಾವಾಗ ಪ್ರಾರಂಭವಾಗುತ್ತವೆ?

    ಈ ಲಕ್ಷಣಗಳು ಋತುಚಕ್ರದ ಹದಿನಾಲ್ಕನೆಯ ದಿನದಿಂದ ಪ್ರಾರಂಭಗೊಂಡು ಮುಟ್ಟಿನ ಮೊದಲ ದಿನದ ನಂತರ ಒಂದು ವಾರದವರೆಗೂ ಇರಬಹುದು.

    3. ಮುಟ್ಟಿನ-ಪೂರ್ವ ಲಕ್ಷಣಗಳು ಸಾಮಾನ್ಯವೇ?

    3. ಮುಟ್ಟಿನ-ಪೂರ್ವ ಲಕ್ಷಣಗಳು ಸಾಮಾನ್ಯವೇ?

    ಮುಟ್ಟಿನ-ಪೂರ್ವ ಲಕ್ಷಣಗಳು ಸಾಮಾನ್ಯವೇ ಸರಿ. ಇದರ ಜೊತೆಗೇ ಕೆಲವು ದೈಹಿಕ, ಮಾನಸಿಕ ಮತ್ತು ನಡವಳಿಕೆಯಲ್ಲಿ ಬದಲಾವಣೆಗಳೂ ಇರಬಹುದು. ನಿತ್ಯದ ಚಟುವಟಿಕೆಗಳಲ್ಲಿ ಕೊಂಚ ಮಾರ್ಪಾಡು ಮಾಡಿಕೊಳ್ಳುವ ಮೂಲಕ ಈ ಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಬಹುದು. ಒಂದು ವೇಳೆ ಈ ಸ್ಥಿತಿಗಳು ಉಲ್ಬಣಗೊಂಡು premenstrual dysphoric disorder (PMDD) ಎಂಬ ಸ್ಥಿತಿ ಎದುರಾದರೆ ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು.

    4. ಮುಟ್ಟಿನ-ಪೂರ್ವ ಲಕ್ಷಣಗಳು ಎದುರಾದ ಮಹಿಳೆಯರಿಗೆ ರಸದೂತಗಳ ಪ್ರಭಾವ ಇರುತ್ತದೆಯೇ?

    4. ಮುಟ್ಟಿನ-ಪೂರ್ವ ಲಕ್ಷಣಗಳು ಎದುರಾದ ಮಹಿಳೆಯರಿಗೆ ರಸದೂತಗಳ ಪ್ರಭಾವ ಇರುತ್ತದೆಯೇ?

    ಹೌದು, ಮುಟ್ಟಿನ-ಪೂರ್ವ ಲಕ್ಷಣಗಳು ರಜೋನಿವೃತಿಯವರೆಗೂ ಹಲವಾರು ಪ್ರಭಾವಗಳನ್ನು ಬೀರುತ್ತಲೇ ಇರುತ್ತವೆ. ದೇಹದ ತೂಕ, ಮನೋಭಾವ ಮೊದಲಾದ ಎಲ್ಲವೂ ಇದಕ್ಕೆ ಒಳಗಾಗುತ್ತವೆ. ಅಲ್ಲದೇ ಮೆದುಳಿನ ಸೆರೋಟೋನಿನ್ ಪ್ರಮಾಣದಲ್ಲಿ ಏರುಪೇರಿನಿಂದ ಮನೋಭಾವದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತದೆ. ಕೆಲವು ಮಹಿಳೆಯರಲ್ಲಿ ಮುಟ್ಟಿನ-ಪೂರ್ವ ಲಕ್ಷಣಗಳು ಹೆಚ್ಚು ತೊಂದರೆ ಕೊಡದಿದ್ದರೆ ಕೆಲವರಲ್ಲಿ ಭಾರೀ ಪ್ರಮಾಣದ ರಸದೂತಗಳ ಏರುಪೇರಿಗೆ ಕಾರಣವಾಗಬಹುದು.

    5. ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸುತ್ತಿದ್ದರೆ ನಿಮಗೆ ಮುಟ್ಟಿನ-ಪೂರ್ವ ಲಕ್ಷಣಗಳು ಇರುತ್ತವೆಯೇ?

    5. ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸುತ್ತಿದ್ದರೆ ನಿಮಗೆ ಮುಟ್ಟಿನ-ಪೂರ್ವ ಲಕ್ಷಣಗಳು ಇರುತ್ತವೆಯೇ?

    ಜನನ ನಿಯಂತ್ರಣ ಮಾತ್ರೆಗಳು ಮುಟ್ಟಿನ-ಪೂರ್ವ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ, ಇತರರು ತೀವ್ರವಾದ ಮುಟ್ಟಿನ-ಪೂರ್ವ ಲಕ್ಷಣಗಳನ್ನು ಅನುಭವಿಸುತ್ತಾರೆ. ನೀವು ಜನನ ನಿಯಂತ್ರಣ ಮಾತ್ರೆಗಳಲ್ಲಿದ್ದರೆ ಮುಟ್ಟಿನ-ಪೂರ್ವ ಲಕ್ಷಣದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳು ಮತ್ತು ಹಾರ್ಮೋನುಗಳ ಮಟ್ಟವು ಇಳಿಯುವುದಿಲ್ಲ. ಇದರರ್ಥ ಕೆಲವು ಮಹಿಳೆಯರಲ್ಲಿ ಕಡಿಮೆ ಅಥವಾ ಮುಟ್ಟಿನ-ಪೂರ್ವ ಲಕ್ಷಣಗಳು ಇರುವುದೇ ಇಲ್ಲ. ಆದಾಗ್ಯೂ, ಕೆಲವು ನಿದರ್ಶನಗಳಲ್ಲಿ, ಜನನ ನಿಯಂತ್ರಣ ಮಾತ್ರೆಗಳಲ್ಲಿರುವಾಗ ಹಾರ್ಮೋನುಗಳು ಏರಿಳಿತಗೊಳ್ಳುತ್ತವೆ ಮತ್ತು ಮುಟ್ಟಿನ-ಪೂರ್ವ ಲಕ್ಷಣಗಳೂ ಪ್ರಕಟಗೊಳ್ಳುತ್ತವೆ.

    6. ನನಗೆ ಮುಟ್ಟು ಇಲ್ಲದೆಯೇ ಮುಟ್ಟಿನ-ಪೂರ್ವ ಲಕ್ಷಣಗಳು ಎದುರಾಗಬಹುದೇ?

    6. ನನಗೆ ಮುಟ್ಟು ಇಲ್ಲದೆಯೇ ಮುಟ್ಟಿನ-ಪೂರ್ವ ಲಕ್ಷಣಗಳು ಎದುರಾಗಬಹುದೇ?

    ಹೌದು, ಮುಟ್ಟು ಇಲ್ಲದೆಯೂ ಮುಟ್ಟಿನ-ಪೂರ್ವ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹಲವಾರು ಕಾರಣಗಳಿಂದಾಗಿ ಯಾವುದೇ ಮುಟ್ಟು ಎದುರಾಗದೇ ಇರಬಹುದು. ಅವುಗಳಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್), ರಕ್ತಹೀನತೆ, ಮಾನಸಿಕ ಒತ್ತಡ, ಪೌಷ್ಠಿಕಾಂಶದ ಅಸಮತೋಲನ, ಗರ್ಭನಿರೋಧಕ ಕ್ರಮ, ತೂಕ ಕಳೆದುಕೊಳ್ಳುವುದು, ಶ್ರಮದಾಯಕ ವ್ಯಾಯಾಮ ಮತ್ತು ಹೆಚ್ಚಿನವು ಸೇರಿವೆ.

    7.ಮುಟ್ಟಿನ-ಪೂರ್ವ ಲಕ್ಷಣಗಳಿಗೆ ನಾನು ಚಿಕಿತ್ಸೆ ಪಡೆದುಕೊಳ್ಳಬೇಕೇ?

    7.ಮುಟ್ಟಿನ-ಪೂರ್ವ ಲಕ್ಷಣಗಳಿಗೆ ನಾನು ಚಿಕಿತ್ಸೆ ಪಡೆದುಕೊಳ್ಳಬೇಕೇ?

    ಹೌದು. ಮುಟ್ಟಿನ-ಪೂರ್ವ ಲಕ್ಷಣಗಳು ಚಿಕಿತ್ಸೆಯ ಮೂಲಕ ಕೊಂಚ ಕಡಿಮೆಯಾಗಬಹುದು. ಈ ಮೂಲಕ ನಿಮ್ಮ ನಿತ್ಯದ ಚಟುವಟಿಕೆಗಳು ಬಾಧೆಗೊಳಗಾಗದಂತೆ ತಡೆಯಬಹುದು. ಆಹಾರಕ್ರಮ ಮತ್ತು ಜೀವನಶೈಲಿಯ ಬದಲಾವಣೆಯಿಂದಲೂ ಅಲ್ಪ ಮಟ್ಟಿನ ಸುಧಾರಣೆ ಕಂಡುಬರಬಹುದು. ಆದರೆ ಈ ಲಕ್ಷಣಗಳು ಹೆಚ್ಚೇ ಇದ್ದರೆ ವೈದ್ಯರನ್ನು ಕಾಣುವುದು ಅವಶ್ಯಕ. ನಿಮ್ಮ ವೈದ್ಯರು ಸೂಕ್ತ ಔಷಧಿಗಳನ್ನು ಸೂಚಿಸುತ್ತಾರೆ ಅಥವಾ ಚಿಕಿತ್ಸೆಯ ವಿಧಾನಗಳನ್ನು ಸೂಚಿಸುತ್ತಾರೆ. ಆದಾಗ್ಯೂ, ವೈದ್ಯಕೀಯ ಚಿಕಿತ್ಸೆಯ ಯಶಸ್ಸು ಮಹಿಳೆಯಿಂದ ಮಹಿಳೆಗೆ ಬದಲಾಗುತ್ತದೆ.

    8. ಮುಟ್ಟಿನ-ಪೂರ್ವ ಲಕ್ಷಣಗಳಿಂದ ಶಮನ ಪಡೆಯಲು ನನಗೆ ಆಹಾರಕ್ರಮ ಮತ್ತು ಜೀವನಕ್ರಮದಲ್ಲಿ ಯಾವ ಬದಲಾವಣೆ ಪಡೆಯಬೇಕು?

    8. ಮುಟ್ಟಿನ-ಪೂರ್ವ ಲಕ್ಷಣಗಳಿಂದ ಶಮನ ಪಡೆಯಲು ನನಗೆ ಆಹಾರಕ್ರಮ ಮತ್ತು ಜೀವನಕ್ರಮದಲ್ಲಿ ಯಾವ ಬದಲಾವಣೆ ಪಡೆಯಬೇಕು?

    ಆದಷ್ಟೂ ಹೆಚ್ಚು ವಿಟಮಿನ್ನುಗಳಿರುವ ಪೌಷ್ಟಿಕ ಅಹಾರ ಸೇವಿಸಿ. ವ್ಯಾಯಾಮ, ಮಾನಸಿಕ ಒತ್ತಡಕ್ಕೆ ಒಳಗಾಗದೇ ಇರುವುದು, ಹಾಗೂ ನೈಸರ್ಗಿಕ ಪರಿಹಾರಗಳನ್ನೂ ಪ್ರಯತ್ನಿಸಿ.

    9. ಮುಟ್ಟಿನ-ಪೂರ್ವ ಲಕ್ಷಣಗಳಿಂದ ಶಮನ ಪಡೆಯಲು ಗಿಡಮೂಲಿಕೆಗಳೇನಾದರೂ ಇವೆಯೇ?

    9. ಮುಟ್ಟಿನ-ಪೂರ್ವ ಲಕ್ಷಣಗಳಿಂದ ಶಮನ ಪಡೆಯಲು ಗಿಡಮೂಲಿಕೆಗಳೇನಾದರೂ ಇವೆಯೇ?

    ಪ್ರಿಂರೋಸ್ ಎಣ್ಣೆ, chaste tree extracts, ಕೇಸರಿ, Ginkgo Biloba, St. John's wort ಮೊದಲಾದವು ಹೆಚ್ಚು ಪ್ರಯೋಜನಕಾರಿಯಾಗಿವೆ. ಆದರೂ ಇವುಗಳ ಬಳಕೆಗೂ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಅವಶ್ಯ.

    10. ಒಂದು ವೇಳೆ ನಾನು ಗರ್ಭಿಣಿಯಾಗಿದ್ದರೂ ಮುಟ್ಟಿನ-ಪೂರ್ವ ಲಕ್ಷಣಗಳು ಕಾಣಿಸಿಕೊಳ್ಳಬಹುದೇ?

    10. ಒಂದು ವೇಳೆ ನಾನು ಗರ್ಭಿಣಿಯಾಗಿದ್ದರೂ ಮುಟ್ಟಿನ-ಪೂರ್ವ ಲಕ್ಷಣಗಳು ಕಾಣಿಸಿಕೊಳ್ಳಬಹುದೇ?

    ನೀವು ಗರ್ಭವತಿಯಾಗಿದ್ದರೆ ಮುಟ್ಟಿನ-ಪೂರ್ವ ಲಕ್ಷಣಗಳು ಮುಂದುವರೆಯುವ ಸಾಧ್ಯತೆಗಳಿಲ್ಲ. ಗರ್ಭಧಾರಣೆಯಾದ ಬಳಿಕ ನಿಮ್ಮ ದೇಹದಲ್ಲಿ ಬೇರೆಯೇ ರಸದೂತಗಳು ಸ್ರವಿಸುತ್ತವೆ ಹಾಗೂ ಇವುಗಳ ಪ್ರಭಾವ ಮುಟ್ಟಿನ-ಪೂರ್ವ ಲಕ್ಷಣಗಳಿಗಿಂತ ಭಿನ್ನವಾಗಿರುತ್ತವೆ.

    ಯಾವುದೇ ಪೂರ್ವ ಗರ್ಭಧಾರಣೆಯ ಅನುಭವವಿಲ್ಲದ ಮಹಿಳೆಗೆ, ವ್ಯತ್ಯಾಸವು ತುಂಬಾ ಕಷ್ಟಕರವಾಗಿರುತ್ತದೆ. ಆದ್ದರಿಂದ, ನಿಮಗೆ ಸಂದೇಹವಿದ್ದರೆ, ಯಾವಾಗಲೂ ಮನೆಯ ಗರ್ಭಧಾರಣೆಯ ಖಚಿತತೆಯ ಕಿಟ್ ಬಳಸಿ.

English summary

How To Differentiate PMS Symptoms And Pregnancy Symptoms

Here we are discussing about How To Differentiate PMS Symptoms And Pregnancy Symptoms. Premenstrual syndrome or PMS is as troublesome as early pregnancy and may lead to symptoms that are similar to that of pregnancy. Read more.
Story first published: Monday, March 30, 2020, 11:50 [IST]
X
Desktop Bottom Promotion