For Quick Alerts
ALLOW NOTIFICATIONS  
For Daily Alerts

ಫೈಬ್ರಾಯ್ಡ್ ಸಮಸ್ಯೆಯಿದ್ದರೆ ಗರ್ಭಧಾರಣೆಯಾದರೆ ತೊಂದರೆಯಿದೆಯೇ?

|

ಫೈಬ್ರಾಯ್ಡ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆ. ಇದು ಗರ್ಭಾಶಯದಲ್ಲಿ ಬೆಳೆಯುವ ಗಡ್ಡೆಯಾಗಿದ್ದು, ಅಷ್ಟೇನೂ ಅಪಾಯಕಾರಿಯಾಗಿಲ್ಲದಿದ್ದರೂ ಫರ್ಟಿಲಿಟಿ ಮತ್ತು ಗರ್ಭಧಾರಣೆಯ ಸಾಧ್ಯತೆಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು. ಫೈಬ್ರಾಯ್ಡ್‌ ಬೆಳವಣಿಗೆಯಾಗಲು ಕಾರಣಗಳೇನು, ಇದು ಗರ್ಭಾವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

 ಗರ್ಭಾವಸ್ಥೆಯ ಮೇಲೆ ಫ್ರೈಬ್ರಾಯ್ಡ್‌ ಪರಿಣಾಮ

ಗರ್ಭಾವಸ್ಥೆಯ ಮೇಲೆ ಫ್ರೈಬ್ರಾಯ್ಡ್‌ ಪರಿಣಾಮ

ಸಾಮಾನ್ಯವಾಗಿ 25 ರಿಂದ 44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಮೂವತ್ತು ಶೇಕಡಾದಷ್ಟು ಫೈಬ್ರಾಯ್ಡ್‌ ಸಾಧ್ಯತೆಗಳು ಹೆಚ್ಚಿರುತ್ತದೆ. ಅದರಲ್ಲೂ ಮಹಿಳೆಯು ಹೆರಿಗೆಗೆ ಸನ್ನದ್ಧವಾಗುವಂತಹ ವಯಸ್ಸಿನಲ್ಲೂ ಈ ಫೈಬ್ರಾಯ್ಡ್‌ ಗೆಡ್ಡೆ ಕಾಣಿಸಿಕೊಳ್ಳಬಹುದು. ಹೆಚ್ಚಿನವರು ಗರ್ಭಾವಸ್ಥೆಯಲ್ಲಿ ಫೈಬ್ರಾಯ್ಡ್‌ನಿಂದಾಗಿ ಯಾವುದೇ ಸಮಸ್ಯೆ ಅನುಭವಿಸುವುದಿಲ್ಲ. ಆದರೆ ಒಂದು ಅಧ್ಯಯನದ ಪ್ರಕಾರ 10ರಿಂದ 30ಪ್ರತಿಶತದಷ್ಟು ಮಹಿಳೆಯರಲ್ಲಿ ಗರ್ಭಾಶಯದ ಗಡ್ಡೆಯು ಗರ್ಭಧರಿಸುವಲ್ಲಿ ಸಮಸ್ಯೆಗಳನ್ನುಂಡು ಮಾಡುತ್ತದೆ ಎಂದು ತೋರಿಸಿದೆ. ಗರ್ಭಿಣಿಯರಲ್ಲಿ ಪೈಬ್ರಾಯ್ಡ್‌ ಇದ್ದಲ್ಲಿ ಕೊನೆಯ ಎರಡು ತ್ರೈಮಾಸಿಕದಲ್ಲಿ 5ಸೆಂ.ಮೀಗಳಿಗಿಂತ ದೊಡ್ಡದಾದ ಗಡ್ಡೆಯು ಸಮಸ್ಯೆಗೆ ಕಾರಣವಾಗುತ್ತದೆ.

ಫೈಬ್ರಾಯ್ಡ್‌ನ ಲಕ್ಷಣಗಳು

ಫೈಬ್ರಾಯ್ಡ್‌ನ ಲಕ್ಷಣಗಳು

ಕೆಲವೊಮ್ಮೆ ನೀವು ಫೈಬ್ರಾಯ್ಡ್‌ಗಳ ಯಾವುದೇ ಲಕ್ಷಣಗಳನ್ನು ಹೊಂದಿಲ್ಲದಿರಬಹುದು. ನೀವು ರೋಗಲಕ್ಷಣಗಳನ್ನು ಹೊಂದಿದ್ದರೆ, ಫೈಬ್ರಾಯ್ಡ್‌ನ್ನು ಪತ್ತೆಹಚ್ಚಬಹುದು. ಫೈಬ್ರಾಯ್ಡ್‌ನ ಲಕ್ಷಣಗಳು ಹೀಗಿವೆ ನೋಡಿ.

* ಹೆಚ್ಚು ರಕ್ತಸ್ರಾವ ಅಥವಾ ಋತುಸ್ರಾವದ ಸಂದರ್ಬದಲ್ಲಿ ನೋವು

* ಮುಟ್ಟಾದ ನಂತರವೂ ರಕ್ತಸ್ರಾವ (ಸ್ಪಾಟಿಂಗ್)

* ಭಾರೀ ಅಥವಾ ದೀರ್ಘಕಾಲದ ರಕ್ತಸ್ರಾವದಿಂದ ರಕ್ತಹೀನತೆ

* ದೀರ್ಘಾವಧಿಯ ಮುಟ್ಟು

* ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ಹೆಚ್ಚು ಅಥವಾ ಸೌಮ್ಯವಾದ ಒತ್ತಡದ ಭಾವನೆ

* ಲೈಂಗಿಕತೆಯ ಸಮಯದಲ್ಲಿ ನೋವು

* ಬೆನ್ನು ನೋವು

* ಮಲಬದ್ಧತೆ

* ಸಂತಾನೋತ್ಪತ್ತಿ ಸಮಸ್ಯೆಗಳು, ಬಂಜೆತನ, ಗರ್ಭಪಾತ ಮತ್ತು ಅವಧಿಪೂರ್ವ ಹೆರಿಗೆ ಸೇರಿದಂತೆ ಆಗಾಗ್ಗೆ ಮೂತ್ರ ವಿಸರ್ಜನೆ

ಈ ಲಕ್ಷಣಗಳನ್ನು ತಿಳಿದ ನಂತರ ವೈದ್ಯರು ಕೆಲವೊಂದು ಪರೀಕ್ಷೆಯನ್ನು ಮಾಡಬಹುದು. ಶ್ರೋಣಿಯ ಪರೀಕ್ಷೆಯ ಸಮಯದಲ್ಲಿ ಫೈಬ್ರಾಯ್ಡ್‌ಗಳನ್ನು ಗುರುತಿಸಬಹುದು. ನಿಮ್ಮ ವೈದ್ಯರು ನೀವು ಕ್ಯಾನ್ಸರ್ ರಹಿತ ಬೆಳವಣಿಗೆಯನ್ನು ಹೊಂದಿದ್ದೀರಿ ಎಂದು ಅನುಮಾನಿಸಿದರೆ, ಅವರು ಅಲ್ಟ್ರಾಸೌಂಡ್‌ನಂತಹ ಇಮೇಜಿಂಗ್ ಪರೀಕ್ಷೆಯನ್ನು ಮಾಡಿಸಹುದು.

ಗರ್ಭಿಣಿಯರಲ್ಲಿ ಫೈಬ್ರಾಯ್ಡ್‌ನಿಂದಾಗುವ ಸಮಸ್ಯೆ

ಗರ್ಭಿಣಿಯರಲ್ಲಿ ಫೈಬ್ರಾಯ್ಡ್‌ನಿಂದಾಗುವ ಸಮಸ್ಯೆ

ಫೈಬ್ರಾಯ್ಡ್‌ಗಳು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಇತರ ತೊಡಕುಗಳಿಗೆ ನಿಮ್ಮ ಅಪಾಯವನ್ನು ಹೆಚ್ಚಿಸಬಹುದು. ಅವೆಂದರೆ,

* ಭ್ರೂಣದ ಬೆಳವಣಿಗೆಗೆ ಅಡ್ಡಿ: ದೊಡ್ಡ ಫೈಬ್ರಾಯ್ಡ್‌ ಗಡ್ಡೆಯು ಗರ್ಭಾಶಯದಲ್ಲಿನ ಜಾಗವನ್ನು ಕಡಿಮೆ ಮಾಡುವದರಿಂದ ಭ್ರೂಣವು ಸಂಪೂರ್ಣವಾಗಿ ಬೆಳೆಯುವುದಕ್ಕೆ ಅನುವು ಮಾಡಿಕೊಡದಿರಬಹುದು.

* ಜರಾಯು ಬೇರ್ಪಡುವಿಕೆ: ಭ್ರೂಣಕ್ಕೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಾಗಿಸುವುದೆಂದರೆ ಅದು ಜರಾಯು. ಆದರೆ ಗರ್ಭಕೋಶದಲ್ಲಿ ಫೈಬ್ರಾಯ್ಡ್‌ ಗಡ್ಡೆಗಳಾದಾಗ ಜರಾಯು ಕೆಲವೊಮ್ಮೆ ಗರ್ಭಕೋಶದ ಗೋಡೆಯಿಂದ ಬೇರ್ಪಡಬಹುದು. ಇದು ಭ್ರೂಣಕ್ಕೆ ಅಗತ್ಯವಾಗಿರುವ ಪೋಷಕಾಂಶ ಹಾಗೂ ಆಮ್ಲಜನಕದ ಪೂರೈಕೆಯನ್ನು ಸ್ಥಗಿತಗೊಳಿಸಬಹುದು.

ಅವಧಿಪೂರ್ವ ಹೆರಿಗೆ: ಫೈಬ್ರಾಯ್ಡ್‌ನಿಂದಾಗುವ ನೋವು ಗರ್ಭಾಶಯದ ಸಂಕೋಚನಕ್ಕೆ ಕಾರಣವಾಗಬಹುದು. ಇದರಿಂದಾಗಿ ಅವಧಿಪೂರ್ವ ಹೆರಿಗೆಯೂ ಆಗಬಹುದು.

ಸಿಸೇರಿಯನ್‌ ಹೆರಿಗೆ: ಫೈಬ್ರಾಯ್ಡ್‌ ಹೊಂದಿರುವ ಗರ್ಭಿಣಿಯರಿಗೆ ಹೆಚ್ಚಾಗಿ ಸಿಸೆಕ್ಷನ್‌ ಹೆರಿಗೆ ಮಾಡುವ ಸಂಭೌ ಹೆಚ್ಚಾಗಿರುತ್ತದೆ. ಯಾಕೆಂದರೆ ಫೈಬ್ರಾಯ್ಡ್‌ನಿಂದಾಗಿ ಹೆರಿಗೆಯ ಸಮಯದಲ್ಲಿ ಮಗುವಿನ ತಲೆ ಕೆಳಗೆ ಬಾರದೇ ಇರಬಹುದು. ಈ ಕಾರಣದಿಂದಾಗಿ ಯೋನಿಯ ಮೂಲಕ ಹೆರಿಗೆಯಾಗುವುದು ಕಷ್ಟದ ಮಾತು. ಈ ಸಮಯದಲ್ಲಿ ಸಿ ಸೆಕ್ಷನ್‌ ಮೊರೆ ಹೋಗಲೇಬೇಕಾಗುತ್ತದೆ.

ಗರ್ಭಪಾತ: ಫೈಬ್ರಾಯ್ಡ್‌ ಹೊಂದಿರುವ ಮಹಿಳೆಯರಲ್ಲಿ ಗರ್ಭಪಾತವಾಗುವ ಸಂಭವಗಳು ಹೆಚ್ಚು ಎನ್ನುತ್ತದೆ ಸಂಶೋಧನೆ.

ಗರ್ಭಧಾರಣೆಯು ಫೈಬ್ರಾಯ್ಡ್‌ಗಳ ಮೇಲೆ ಪರಿಣಾಮ ಬೀರುತ್ತಾ.

ಗರ್ಭಧಾರಣೆಯು ಫೈಬ್ರಾಯ್ಡ್‌ಗಳ ಮೇಲೆ ಪರಿಣಾಮ ಬೀರುತ್ತಾ.

ಗರ್ಭಧರಿಸಿದರೂ ಹೆಚ್ಚಿನ ಫೈಬ್ರಾಯ್ಡ್‌ಗಳು ಗಾತ್ರದಲ್ಲಿ ಬದಲಾಗುವುದಿಲ್ಲ, ಆದರೆ ಕೆಲವರಲ್ಲಿ ಬದಲಾವಣೆಯಾಗಬಹುದು. ಕೆಲವು ತಜ್ಞರು, ಗರ್ಭಾಶಯದ ಫೈಬ್ರಾಯ್ಡ್‌ಗಳ ಮೂರನೇ ಒಂದು ಭಾಗವು ಮೊದಲ ತ್ರೈಮಾಸಿಕದಲ್ಲಿ ಬೆಳೆಯಬಹುದು ಎನ್ನುತ್ತಾರೆ. ಫೈಬ್ರಾಯ್ಡ್ ಬೆಳವಣಿಗೆಯು ಈಸ್ಟ್ರೊಜೆನ್‌ನಿಂದ ಪ್ರಭಾವಿತವಾಗಿರುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ಈಸ್ಟ್ರೊಜೆನ್ ಮಟ್ಟವು ಹೆಚ್ಚಾಗುತ್ತದೆ. ಇದು ಫೈಬ್ರಾಯ್ಡ್‌ನ ಬೆಳವಣಿಗೆಗೆ ಕಾರಣವಾಗಬಹುದು.

ಕೆಲವು ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಫೈಬ್ರಾಯ್ಡ್ಗಳು ವಾಸ್ತವವಾಗಿ ಕುಗ್ಗಬಹುದು. 2010 ರ ಅಧ್ಯಯನದಲ್ಲಿ ಕಂಡು ಬಂದ ಪ್ರಕಾರ ಗರ್ಭಧಾರಣೆಯ ಮೊದಲು ಇದ್ದ 79 ಪ್ರತಿಶತದಷ್ಟು ಫೈಬ್ರಾಯ್ಡ್‌ ಗಡ್ಡೆಯು ಗರ್ಭಧಾರಣೆಯ ನಂತರ ಗಾತ್ರದಲ್ಲಿ ಚಿಕ್ಕದಾಗುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಫಲವತ್ತತೆಯ ಮೇಲೆ ಫೈಬ್ರಾಯ್ಡ್‌ನ ಪರಿಣಾಮ

ಫಲವತ್ತತೆಯ ಮೇಲೆ ಫೈಬ್ರಾಯ್ಡ್‌ನ ಪರಿಣಾಮ

ಫೈಬ್ರಾಯ್ಡ್‌ ಹೊಂದಿರುವ ಅನೇಕ ಮಹಿಳೆಯರು ಸ್ವಾಭಾವಿಕವಾಗಿ ಗರ್ಭಿಣಿಯಾಗಬಹುದು, ಗರ್ಭಧಾರಣೆಯ ಸಮಯದಲ್ಲಿ ಇದಕ್ಕೆ ಚಿಕಿತ್ಸೆಯೂ ಬೇಕಾಗದಿರಬಹುದು. ಆದರೆ ಕೆಲವರಲ್ಲಿ ಗರ್ಭಧರಿಸಲು ಸಾಧ್ಯವಾಗದಿರಬಹುದು. ಗರ್ಭಾಶಯದ ಕುಹರದೊಳಗೆ ಬೆಳೆಯುವ ಮತ್ತು ಉಬ್ಬುವ ಒಂದು ರೀತಿಯ ಸಬ್‌ಮ್ಯುಕೋಸಲ್‌ ಫೈಬ್ರಾಯ್ಡ್‌ಗಳು ಬಂಜೆತನ ಮತ್ತು ಗರ್ಭಪಾತದ ಅಪಾಯವನ್ನು ಹೆಚ್ಚಿಸಬಹುದು. ಆದರೆ ಫೈಬ್ರಾಯ್ಡ್‌ ಅಲ್ಲದೆಯೂ ಇತರ ಕಾರಣಗಳಿಂದಲೂ ಬಂಜೆತನ ಉಂಟಾಗಬಹುದು. ನೀವು ಗರ್ಭಧರಿಸುವಲ್ಲಿ ಅಥವಾ ಗರ್ಭಾವಸ್ಥೆಯನ್ನು ನಿರ್ವಹಿಸುವಲ್ಲಿ ತೊಂದರೆಯನ್ನು ಹೊಂದಿದ್ದರೆ, ನಿಮ್ಮ ವೈದ್ಯರು ಫೈಬ್ರಾಯ್ಡ್‌ಗಳಿಗೆ ಸಮಸ್ಯೆಯನ್ನು ಸೂಚಿಸುವ ಮೊದಲು ಇತರ ಸಂಭವನೀಯ ಕಾರಣಗಳನ್ನು ಪತ್ತೆಹಚ್ಚಬಹುದು.

ಫೈಬ್ರಾಯ್ಡ್ ಇದ್ದೂ ಗರ್ಭಧರಿಸಲು ಯೋಚಿಸುತ್ತಿದ್ದರೆ ಇದನ್ನು ಮಾಡಿ

ಫೈಬ್ರಾಯ್ಡ್ ಇದ್ದೂ ಗರ್ಭಧರಿಸಲು ಯೋಚಿಸುತ್ತಿದ್ದರೆ ಇದನ್ನು ಮಾಡಿ

ನಿಮಗೆ ಫೈಬ್ರಾಯ್ಡ್‌ ಸಮಸ್ಯೆ ಇದ್ದಲ್ಲಿ ನೀವು ಗರ್ಭಧರಿಸಲು ಯೋಜನೆ ಹಾಕುತ್ತಿದ್ದಲ್ಲಿ ಮೊದಲು ನಿಮ್ಮ ವೈದ್ಯರ ಬಳಿ ಫೈಬ್ರಾಯ್ಡ್‌ನ ಗಾತ್ರ ಮತ್ತು ಅದಿರುವ ಸ್ಥಾನದ ಬಗ್ಗೆ ಮಾತನಾಡಿ. ಈ ಫೈಬ್ರಾಯ್ಡ್‌ನಿಂದ ಗರ್ಭಧರಿಸಲು ಸಮಸ್ಯೆಯಾಗಬಹುದೇ, ಗರ್ಭಿಣಿಯಾದ ನಂತರ ಸಮಸ್ಯೆಯಾಗುವ ಸಂಭವ ಇದೆಯೇ ಎನ್ನುವುದನ್ನು ಕೇಳಿ ತಿಳಿದುಕೊಳ್ಳಿ.ಅಲ್ಲದೇ ಫೈಬ್ರಾಯ್ಡ್‌ಗೆ ಚಿಕಿತ್ಸೆ ತೆಗೆದುಕೊಳ್ಳುವ ಮೂಲಕ ಗರ್ಭಧಾರಣೆ ಸಾಧ್ಯವೇ ಎನ್ನುವುದನ್ನು ಕೇಳಿ ತಿಳಿದುಕೊಂಡ ನಂತರ ಗರ್ಭಧರಿಸಲು ಸಿದ್ಧರಾಗಿ.

ಗರ್ಭಾವಸ್ಥೆಯಲ್ಲಿ ಫೈಬ್ರಾಯ್ಡ್‌ಗೆ ಚಿಕಿತ್ಸೆ

ಗರ್ಭಾವಸ್ಥೆಯಲ್ಲಿ ಫೈಬ್ರಾಯ್ಡ್‌ಗೆ ಚಿಕಿತ್ಸೆ

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಫೈಬ್ರಾಯ್ಡ್‌ಗೆ ಚಿಕಿತ್ಸೆ ನೀಡಲಾಗುವುದಿಲ್ಲ. ಯಾಕೆಂದರೆ ಭ್ರೂಣಕ್ಕೆ ಅಪಾಯವಾಗುವ ಸಾಧ್ಯತೆಗಳಿರುತ್ತದೆ. ಆದರೆ ಫೈಬ್ರಾಯ್ಡ್‌ ಇರುವ ಗರ್ಭಿಣಿಯರಿಗೆ ಅದನ್ನು ನಿರ್ವಹಿಸಲು ಬೆಡ್‌ರೆಸ್ಟ್‌, ಹೈಡ್ರೇಷನ್‌ ಮತ್ತು ನೋವು ನಿವಾರಣೆಗಾಗಿ ಔಷಧಿಗಳನ್ನು ವೈದ್ಯರು ಸಲಹೆ ನೀಡಬಹುದು. ವಿರಳವಾಗಿ ಕೆಲವು ಗರ್ಭಿಣಿಯರಿಗೆ ಗರ್ಭಧಾರಣೆಯ ಎರಡನೇ ತ್ರೈಮಾಸಿಕದಲ್ಲಿ ಮಯಮೋಕ್ಟೆಮಿಯನ್ನು ನಡೆಸಬಹುದು. ಈ ಚಿಕಿತ್ಸಾ ವಿಧಾನದಲ್ಲಿ ಗರ್ಭಾಶಯದ ಹೊರಭಾಗದಿಂದ ಅಥವಾ ಗರ್ಭಾಶಯದ ಗೋಡೆಯ ಒಳಗಿರುವಂತಹ ಫೈಬ್ರಾಯ್ಡ್‌ಗಳನ್ನು ತೆಗೆಯಲಾಗುತ್ತದೆ. ಆದರೆ ಗರ್ಭಾಶಯದ ಕುಳಿಯಲ್ಲಿ ಬೆಳೆದಿರುವ ಫ್ರೈಬ್ರಾಯ್ಡ್‌ಗಳನ್ನು ತೆಗೆಯುವುದಿಲ್ಲ ಯಾಕೆಂದರೆ ಭ್ರೂಣಕ್ಕೆ ಅಪಾಯವಾಗಬಹುದು.

 ಗರ್ಭಧಾರಣೆಯ ಮೊದಲು ಫಲವತ್ತತೆಯ ಸುಧಾರಣೆಗೆ ಫೈಬ್ರಾಯ್ಡ್‌ಗೆ ಚಿಕಿತ್ಸೆ

ಗರ್ಭಧಾರಣೆಯ ಮೊದಲು ಫಲವತ್ತತೆಯ ಸುಧಾರಣೆಗೆ ಫೈಬ್ರಾಯ್ಡ್‌ಗೆ ಚಿಕಿತ್ಸೆ

ಮುಂದೆ ಬರುವ ಅಪಾಯವನ್ನು ತಡೆಗಟ್ಟಲು ಮೊದಲೇ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯ ಎನ್ನುವ ಹಾಗೆ. ಗರ್ಭಧರಿಸುವುದಕ್ಕಿಂತ ಮುನ್ನವೇ ಫೈಬ್ರಾಯ್ಡ್‌ಗೆ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಕೆಲವೊಂದು ಚಿಕಿತ್ಸೆಗಳಿಂದ ಫಲವತ್ತತೆಯನ್ನೂ ಸುಧಾರಿಸಬಹುದು. ಆ ಚಿಕಿತ್ಸೆಗಳು ಯಾವುದೆಂದರೆ,

ಮೈಯೋಮೆಕ್ಟಮಿ: ಫೈಬ್ರಾಯ್ಡ್‌ಗಳನ್ನು ತೆಗೆದುಹಾಕಲು ಈ ಶಸ್ತ್ರಚಿಕಿತ್ಸಾ ವಿಧಾನವನ್ನು ಬಳಸಲಾಗುತ್ತದೆ. ಇದು ಸಿಸೇರಿಯನ್ ಹೆರಿಗೆಯ ಅಗತ್ಯವನ್ನು ಹೆಚ್ಚಿಸಬಹುದು ಮತ್ತು ಗರ್ಭಧರಿಸಲು ಪ್ರಯತ್ನಿಸುವ ಮೊದಲು ನೀವು ಈ ಶಸ್ತ್ರಚಿಕಿತ್ಸೆ ಮಾಡಿಸಬಹುದು. ಇದಾದ ನಂತರ ಸುಮಾರು ಮೂರು ತಿಂಗಳು ಗರ್ಭಧರಿಸಲು ಕಾಯಬೇಕಾಗುತ್ತದೆ.

ಹಾರ್ಮೋನುಗಳ ಜನನ ನಿಯಂತ್ರಣ ಮಾತ್ರೆಗಳು: ನೀವು ಮಾತ್ರೆಯನ್ನು ತೆಗೆದುಕೊಳ್ಳುವಾಗ ನೀವು ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ. ಆದರೆ ಈ ಗರ್ಭನಿರೋಧಕವು ಭಾರೀ ರಕ್ತಸ್ರಾವ ಮತ್ತು ನೋವಿನ ಅವಧಿಗಳಂತಹ ಸ್ಥಿತಿಯ ಲಕ್ಷಣಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.

ಗರ್ಭಾಶಯದ ಸಾಧನ (IUD): ಜನನ ನಿಯಂತ್ರಣ ಮಾತ್ರೆಯಂತೆ, ನೀವು IUD ಬಳಸುವವರೆಗೆ ಗರ್ಭಾವಸ್ಥೆಯನ್ನು ತಡೆಯುತ್ತದೆ. ಆದಾಗ್ಯೂ, ಫಲವತ್ತತೆ ಹೊಂದುವಾಗ ಕೆಲವು ರೋಗಲಕ್ಷಣಗಳನ್ನು ತೊಡೆದುಹಾಕಲು ಇದು ಸಹಾಯ ಮಾಡುತ್ತದೆ.

ಗೊನಾಡೋಟ್ರೋಪಿನ್-ಬಿಡುಗಡೆ ಮಾಡುವ ಹಾರ್ಮೋನ್ (Gn-RH) ಅಗೋನಿಸ್ಟ್‌ಗಳು: ಈ ಔಷಧಿಯು ಅಂಡೋತ್ಪತ್ತಿ ಮತ್ತು ಮುಟ್ಟಿಗೆ ಕಾರಣವಾಗುವ ಹಾರ್ಮೋನುಗಳ ಉತ್ಪಾದನೆಯನ್ನು ನಿರ್ಬಂಧಿಸುತ್ತದೆ, ಆದ್ದರಿಂದ ಈ ಔಷಧಿಗಳನ್ನು ತೆಗೆದುಕೊಳ್ಳುವಾಗ ನೀವು ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ. ಇದು ಫೈಬ್ರಾಯ್ಡ್‌ಗಳನ್ನು ಕುಗ್ಗಿಸಲು ಸಹಾಯ ಮಾಡುತ್ತದೆ.

ಮೈಯೋಲಿಸಿಸ್: ಈ ಚಿಕಿತ್ಸಾ ವಿಧಾನದಲ್ಲಿ ಫೈಬ್ರಾಯ್ಡ್‌ಗಳನ್ನು ಪೋಷಿಸುವ ರಕ್ತನಾಳಗಳನ್ನು ಕುಗ್ಗಿಸಲು ವಿದ್ಯುತ್ ಪ್ರವಾಹ, ಲೇಸರ್ ಅಥವಾ ರೇಡಿಯೊ-ಫ್ರೀಕ್ವೆನ್ಸಿ ಶಕ್ತಿಯ ಕಿರಣವನ್ನು ಬಳಸಲಾಗುತ್ತದೆ.

ಭವಿಷ್ಯದಲ್ಲಿ ಮಕ್ಕಳನ್ನು ಹೊಂದಲು ಬಯಸುವ ಫೈಬ್ರಾಯ್ಡ್ ಹೊಂದಿರುವ ಮಹಿಳೆಯರಿಗೆ ಇತರ ಚಿಕಿತ್ಸೆಗಳು ಲಭ್ಯವಿದೆ. ಪ್ರತಿಯೊಂದು ಚಿಕಿತ್ಸೆಯು ತನ್ನದೇ ಆದ ಅಪಾಯ ಮತ್ತು ಸಮಸ್ಯೆಗಳನ್ನು ಹೊಂದಿದೆ, ಆದ್ದರಿಂದ ನಿಮ್ಮ ಚಿಕಿತ್ಸಾ ಆಯ್ಕೆಗಳ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ. ಚಿಕಿತ್ಸೆಯ ನಂತರ ಗರ್ಭಿಣಿಯಾಗಲು ಪ್ರಯತ್ನಿಸುವ ಮೊದಲು ನೀವು ಎಷ್ಟು ಸಮಯ ಕಾಯಬೇಕು ಎಂದು ನಿಮ್ಮ ವೈದ್ಯರನ್ನು ಕೇಳುವುದು ಮುಖ್ಯ.

ಗರ್ಭಾಶಯದ ಫೈಬ್ರಾಯ್ಡ್‌ಗಳು ನಿಮ್ಮ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಗರ್ಭಾವಸ್ಥೆಯ ಮೇಲೂ ಪರಿಣಾಮ ಬೀರಬಹುದು. ಆದರೆ, ಹೆಚ್ಚಿನ ಮಹಿಳೆಯರು ಈ ಗೆಡ್ಡೆಗಳ ಪರಿಣಾಮವಾಗಿ ಫಲವತ್ತತೆ ಸಮಸ್ಯೆಗಳು ಅಥವಾ ಗರ್ಭಧಾರಣೆಯ ತೊಂದರೆಗಳನ್ನು ಅನುಭವಿಸುವುದಿಲ್ಲ. ಫೈಬ್ರಾಯ್ಡ್‌ಗಳನ್ನು ತಡೆಯಲು ಸಾಧ್ಯವಾಗದಿದ್ದರೂ ಆರೋಗ್ಯಕರ ಜೀವನಶೈಲಿಯ ಅಳವಡಿಕೆಯಿಂದ ಫೈಬ್ರಾಯ್ಡ್‌ನ ಅಪಾಯವನ್ನು ಕಡಿಮೆ ಮಾಡಬಹುದು.

English summary

Fibroids during pregnancy Symptoms effects and treatments in Kannada

Fibroids: How Fibroids Affects Pregnancy,It's Symptoms and Treatment,Read on...
X
Desktop Bottom Promotion