For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಾಡುವ ಸೋಂಕುಗಳಿವು: ಈ ಬಗ್ಗೆ ಇರಲಿ ಎಚ್ಚರ

|

ಗರ್ಭಾವಸ್ಥೆ ಅನ್ನುವುದು ಒಂದು ಹೆಣ್ಣಿನ ಅದ್ಭುತ ಸಮಯ. ಗರ್ಭಿಣಿ ಮಹಿಳೆ ಅದೆಷ್ಟು ಜಾಗರೂಕರಾಗಿದ್ದರೂ ಸಾಲದು. ತಪಸ್ಸಿನ ಹಾಗೆ ೯ ತಿಂಗಳು ಕಾದು , ಹೆತ್ತು ಆ ನಂತರ ಮಗುವನ್ನು ಸಾಕುವುದು ಒಂದು ವಿಶೇಷ ಅನುಭವ. ಒಂದು ಹೆಣ್ಣಿನ ಜನ್ಮ ಸಾರ್ಥಕತೆ ಪಡೆಯುವುದು ತಾಯ್ತನ ಅನುಭವಿಸಿದ ಮೇಲೆ.

Common Viral Infections During Pregnancy in Kannada

ಗರ್ಭಾವಸ್ಥೆಯಲ್ಲಿ ತಾಯಿಯು ಯಾವುದಾದರೂ ವೈರಲ್ ಸೋಂಕಿಗೆ ತುತ್ತಾದರೆ ಅದು ಆಕೆಯ ಹೊಟ್ಟೆಯಲ್ಲಿರುವ ಮಗವಿಗೂ ಹರಡುವ ಸಾಧ್ಯತೆ ಇದೆ. ಕೇವಲ ಗರ್ಭದಲ್ಲಿರುವಾಗ ಮಾತ್ರವಲ್ಲ, ಹೆರಿಗೆಯ ನಂತರವೂ ತಾಯಿಯ ವೈರಲ್ ಇನ್ಫೆಕ್ಷನ್ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮಗುವಿಗೆ ತಾಯಿಯ ಸೋಂಕು ಹರಡದಂತೆ ಅದೆಷ್ಟೇ ಜಾಗರೂಕತೆ ವಹಿಸಿದರೂ ಸಹ ಕೆಲವು ವೈರಲ್ ಸಂಬಂಧಿತ ಸಮಸ್ಯೆಯಿಂದ ಮಗು ಬಳಲುವ ಸಾಧ್ಯತೆ ಇದೆ.

ಮನುಷ್ಯ ಬೆಳೆದಂತೆ ಆತನಲ್ಲಿ ಸಾಮಾನ್ಯ ಸೋಂಕನ್ನು ಎದುರಿಸುವಂತಹ ರೋಗ ನಿರೋಧಕ ಶಕ್ತಿಗಳು ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಗರ್ಭಿಣಿಯರಿಗೆ ಯಾವುದೇ ಸೋಂಕು ಬರದಂತೆ ತಡೆಯಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ತ್ರೀ ರೋಗ ತಜ್ಞರು ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯಕ. ಇದರಿಂದಾಗಿ ಪ್ರೆಗ್ನೆನ್ಸಿಯಲ್ಲಿ ಸೋಂಕಿನಿಂದ ಎದುರಾಗುವ ಸಮಸ್ಯೆಗಳ ಪ್ರಮಾಣ ಕಡಿಮೆ ಮಾಡಬಹುದು.

ಇನ್ನು ಹೆಚ್ಚಿನ ಸೋಂಕುಗಳು ತಾಯಿಯಿಂದ ಮಗುವಿಗೆ ಬರುವುದಿಲ್ಲ. ಆದರೂ ಕೆಲವು ಸೋಂಕುಗಳು ಹೆರಿಗೆ ಸಮಯದಲ್ಲಿ ಜರಾಯುವಿನ ಮೂಲಕ ಮಗುವಿಗೆ ಬರುವ ಸಾಧ್ಯತೆಗಳಿವೆ.

ಹೀಗೆ ಆದಲ್ಲಿ ಅದು ಮಗುವಿನ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಹಾಗೂ ಅಕಾಲಿಕ ಹೆರಿಗೆ ಆಗಿ ತೊಂದರೆ ಎದುರಾಗಬಹುದು.

ಗರ್ಭಿಣಿಯರ ಮೇಲೆ ಪರಿಣಾಮ ಬೀರುವ ಕೆಲವು ವೈರಲ್ ಸೋಂಕುಗಳ ಪಟ್ಟಿ ಇಲ್ಲಿದೆ:

1. ಚಿಕನ್ಪಾಕ್ಸ್ ಅಥವಾ ಸಿಡುಬು

1. ಚಿಕನ್ಪಾಕ್ಸ್ ಅಥವಾ ಸಿಡುಬು

ಹೆಚ್ಚಿನ ಮಕ್ಕಳಿಗೆ ಚಿಕನ್ ಫಾಕ್ಸ್ ಬರುವುದನ್ನು ನೋಡಿರುತ್ತೇವೆ. ಇದನ್ನು ಸಿಡುಬು ಅಂತಲೂ ಕರೆಯುತ್ತಾರೆ. ಇದು ವರಿಸೆಲ್ಲಾ - ಜೋಸ್ಟರ್ ವೈರಸ್ ನಿಂದ ಹರಡುವ ಸೋಂಕು. ಒಂದು ವೇಳೆ ಗರ್ಭಿಣಿ ಮಹಿಳೆಯು ತನ್ನ ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ಈ ಚಿಕನ್ಪಾಕ್ಸ್ ಸೋಂಕಿಗೆ ಒಳಗಾದರೆ ಆಗ ಆ ವೈರಸ್ ತಾಯಿಯ ಜರಾಯುವಿನಿಂದ ಮಗುವಿಗೆ ಬರಬಹುದು. ಇದರಿಂದಾಗಿ ಮಗುವಿಗೆ ಸೋಂಕು ತಗಲುವ ಅಪಾಯವಿದೆ. ಇದು ಮಗುವಿನ ಜನನ ದೋಷಗಳಾದ ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್, ಕಾಲು ಊನ , ಹೈಡ್ರೋನೆಫ್ರೋಸಿಸ್ ಎಂದು ಕರೆಯಲ್ಪಡುವ ಮೂತ್ರಪಿಂಡದ ಸಮಸ್ಯೆ, ರೆಟಿನಾದಲ್ಲಿ ಸಮಸ್ಯೆಗಳು ಎದುರಾಗಬಹುದು. ಅದರಲ್ಲೂ ಹೆರಿಗೆಯ ಸಮಯದಲ್ಲಿ ಮಗುವಿಗೆ ಚಿಕನ್ಪಾಕ್ಸ್ ಸೋಂಕು ಹರಡಿದರೆ, ಅದು ಮಗುವಿನ ಕೇಂದ್ರ ನರಮಂಡಲದಲ್ಲಿ ಸಮಸ್ಯೆ ಉಂಟುಮಾಡುತ್ತದೆ.

2. ಎಂಟರೊವೈರಸ್ ಸೋಂಕುಗಳು

2. ಎಂಟರೊವೈರಸ್ ಸೋಂಕುಗಳು

ಈ ಸೋಂಕು ಹೆಪಟೈಟಿಸ್, ಪೋಲಿಯೊವೈರಸ್, ಕಾಕ್ಸ್ಸಾಕಿವೈರಸ್ ಗಳಿಂದ ಬರುತ್ತದೆ. ಇದರಲ್ಲಿ ಹೆಪಟೈಟಿಸ್ ವೈರಸ್ ಅನ್ನುವುದು ತುಂಬಾ ಸಾಮಾನ್ಯ.

ಈ ವೈರಸ್ ನಿಂದ ತ್ವಚೆ, ಶ್ವಾಸಕೋಶ, ಕೇಂದ್ರ ನರಮಂಡಲಕ್ಕೆ ಸೋಂಕು ಉಂಟಾಗುತ್ತದೆ. ಇದು ತಾಯಿ ಮತ್ತು ಭ್ರೂಣ ಎರಡಕ್ಕೂ ಮಾರಕವಾಗಿದೆ. ಹೆಪಟೈಟಿಸ್ ನಲ್ಲಿ ಹೆಪಟೈಟಿಸ್ ಎ ಮತ್ತು ಬಿ ಎಂಬ ಎರಡು ವೈರಲ್ ಸೋಂಕುಗಳು ಇವೆ. ಈ ಸೋಂಕುಗಳಿಗೆ ಮೊದಲ ಹಂತಗಳಲ್ಲಿ ಚಿಕಿತ್ಸೆ ನೀಡದಿದ್ದರೆ ಅದು ತುಂಬಾನೇ ಅಪಾಯಕಾರಿ ಪರಿಣಾಮ ಬೀರುತ್ತದೆ.

3. ಹೆಪಟೈಟಿಸ್ ಎ ಸೋಂಕು

3. ಹೆಪಟೈಟಿಸ್ ಎ ಸೋಂಕು

ಇದು ಹೆಪಟೈಟಿಸ್ ಬಿ ಯಷ್ಟು ಮಾರಕವಾದ ವೈರಸ್ ಅಲ್ಲ. ಇದು ಮಲವಿಸರ್ಜನೆಯಿಂದ ಹರಡುವ ವೈರಸ್. ಗರ್ಭಾವಸ್ಥೆಯಲ್ಲಿ ಹೆಪಟೈಟಿಸ್ ಎ ವೈರಲ್ ಸೋಂಕು ಬಂದರೆ ಆಯಾಸ, ಕಾಮಾಲೆ, ಹಸಿವಿನ ಕೊರತೆ, ಹೊಟ್ಟೆ ನೋವು, ಜ್ವರ, ಅತಿಸಾರ ಮತ್ತು ವಾಕರಿಕೆ ಇಂತಹ ಲಕ್ಷಣಗಳು ಕಂಡು ಬರುತ್ತದೆ.

ಹಾಗಂತ, ಈ ರೋಗ ಲಕ್ಷಣಗಳು ಕಂಡು ಬಂದರೆ ಅದು ಹೆಪಟೈಟಿಸ್ ಎ ವೈರಸ್ ಆಗಿರಬೇಕು ಅಂತೇನೂ ಇಲ್ಲ. ಯಾಕಂದರೆ ಈ ರೋಗಲಕ್ಷಣಗಳು ಬಹುತೇಕ ವೈರಲ್ ಕಾಯಿಲೆಗಳಲ್ಲಿ ಕಂಡುಬರುತ್ತವೆ. ಅದೂ ಅಲ್ಲದೆ ಕೆಲವು ರೋಗಿಗಳು ಹೆಪಟೈಟಿಸ್ ಎ ಸೋಂಕಿಗೆ ಒಳಗಾಗಿದ್ದರೂ ಸಹ ಈ ರೋಗಲಕ್ಷಣಗಳು ಕಂಡು ಬರುವುದಿಲ್ಲ. ಹೀಗಾಗಿ ಹೆಪಟೈಟಿಸ್ ಎ ವೈರಸ್ ನ ಕಂಡು ಹಿಡಿಯುವುದು ಕಷ್ಟ.

ಇನ್ನು ಸಮಧಾನಕರ ವಿಷಯ ಅಂದರೆ ಈ ಸೋಂಕು ತಾಯಿ ಮತ್ತು ಮಗುವಿನ ಮೇಲೆ ಯಾವುದೇ ದೀರ್ಘಕಾಲೀನ ಅಡ್ಡಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಗರ್ಭಿಣಿಗೆ ಹೆಪಟೈಟಿಸ್ ಎ ಲಸಿಕೆ ನೀಡುವ ಮೂಲಕ , ಅದೇ ರೀತಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಈ ವೈರಸ್ ನಿಂದ ಸೋಂಕು ಬಾರದಂತೆ ತಡೆಗಟ್ಟ ಬಹುದು.

4. ಹೆಪಟೈಟಿಸ್ ಬಿ ವೈರಲ್ ಸೋಂಕು

4. ಹೆಪಟೈಟಿಸ್ ಬಿ ವೈರಲ್ ಸೋಂಕು

ಹೆಪಟೈಟಿಸ್ ಬಿ ತುಂಬಾ ಗಂಭೀರವಾದ ವೈರಲ್ ಸೋಂಕು. ಇದು ನೇರವಾಗಿ ಗರ್ಭಿಣಿ ಸ್ತ್ರೀಯ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಹೆಪಟೈಟಿಸ್ ಬಿ ಯ ರೋಗಲಕ್ಷಣಗಳು ಕೂಡ ಹೆಪಟೈಟಿಸ್ ಎ ಯಲ್ಲಿರುವಂತೆಯೇ ಇರುತ್ತವೆ, ಆದರೆ ಅದರಿಂದ ತಲೆದೋರುವ ಸಮಸ್ಯೆಯ ಮಟ್ಟ ಮಾತ್ರ ಹೆಚ್ಚು ತೀವ್ರವಾಗಿರುತ್ತವೆ.

ಈ ಸೋಂಕಿಗೆ ತುತ್ತಾದವರಿಗೆ ತಕ್ಷಣ ಚಿಕಿತ್ಸೆ ನೀಡಬೇಕಾಗುತ್ತದೆ. ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಗರ್ಭಿಣಿ ಸ್ತ್ರೀ ದೀರ್ಘ ಕಾಲದ ಸಮಸ್ಯೆಯಾದ ಯಕೃತ್ತಿನ ಕ್ಯಾನ್ಸರ್, ಪಿತ್ತಜನಕಾಂಗದ ವೈಫಲ್ಯ , ಹಾಗು ಸಾವು ಕೂಡ ಉಂಟಾಗಬಹುದು.

5. ಸೈಟೊಮೆಗಾಲೊ ವೈರಸ್

5. ಸೈಟೊಮೆಗಾಲೊ ವೈರಸ್

ಸೈಟೊಮೆಗಾಲೊ ವೈರಸ್ ಅಥವಾ ಸಿಎಂಡಬ್ಲ್ಯು ನಿಂದ ಉಂಟಾಗುವ ಸೋಂಕು ಅಷ್ಟೇನೂ ಹಾನಿಕಾರಕವಲ್ಲ. ಈ ವೈರಸ್ ಸಾಮಾನ್ಯವಾಗಿ ನವಜಾತ ಶಿಶುಗಳಿಗೆ ಮತ್ತು ಚಿಕ್ಕಮಕ್ಕಳಿಗೆ ಸೋಂಕು ಉಂಟು ಮಾಡುತ್ತದೆ.

ಮುಖ್ಯವಾಗಿ ನರ್ಸರಿಗಳು ಮತ್ತು ಡೇ ಕೇರ್ ಕೇಂದ್ರಗಳಲ್ಲಿ ಕೆಲಸ ಮಾಡುವ ಗರ್ಭಿಣಿ ಮಹಿಳೆಯರಿಗೆ ಈ ಸೋಂಕು ತಗಲುವ ಅಪಾಯ ಹೆಚ್ಚು ಇದೆ. ಹಾಗಾಗಿ ಅವರು ನೈರ್ಮಲ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಪ್ರತಿ ಬಾರಿ ಮೂತ್ರ ವಿಸರ್ಜನೆ ಮಾಡುವಾಗ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಆಗಾಗ್ಗೆ ಕೈಗಳನ್ನು ತೊಳೆಯುತ್ತಿರಬೇಕು.

ಇದು ಸುಮಾರು 0.5% -1.5 ಶೇಕಡಾದಷ್ಟು ಜನನ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಮಾನ್ಯ ವೈರಸ್ ಆಗಿದೆ . ಕೆಲ ಸಂಶೋಧನೆ ಪ್ರಕಾರ ಈ ಸೈಟೊಮೆಗಾಲೊ ವೈರಸ್ ಸುಮಾರು 40 ಶೇಕಡಾದಷ್ಟು ಗರ್ಭಾವಸ್ಥೆಯಲ್ಲಿಯೇ ಮಗುವಿಗೆ ಹರಡುತ್ತದೆ ಎಂದು ಹೇಳಲಾಗಿದೆ.

ಇನ್ನೂ ಅನೇಕ ರೀತಿಯ ವೈರಲ್ ಸೋಂಕುಗಳು ಗರ್ಭಿಣಿಯರ ಮೇಲೆ ಪರಿಣಾಮ ಬೀರುತ್ತವೆ. ಗರ್ಭಿಣಿಯರಿಗೆ ಕೆಲ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಕಷ್ಟವಾದರೂ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮತ್ತು ಉತ್ತಮ ನೈರ್ಮಲ್ಯವನ್ನು ಕಾಪಾಡುವ ಮೂಲಕ ಸೋಂಕು ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

ಇನ್ನು ಮೇಲೆ ಹೇಳಲಾದ ಯಾವುದೇ ರೋಗಲಕ್ಷಣಗಳು ನಿಮ್ಮಲ್ಲಿ ಕಂಡು ಬಂದಿದ್ದಲ್ಲಿ ತಡಮಾಡದೆ ವೈದ್ಯರನ್ನು ಕಾಣುವುದು ಒಳ್ಳೆಯದು.

English summary

Common Viral Infections During Pregnancy in Kannada

Here we are going discuss about Common Viral Infections During Pregnancy in Kannada. Just as during pregnancy, whatever the mother ingests is passed on to the baby after delivery too! Similarly, if she acquires some viral infection or diseases during pregnancy, chances are that the child may suffer from some related problems even if he is saved from infection. Read more
Story first published: Saturday, May 22, 2021, 18:04 [IST]
X
Desktop Bottom Promotion