For Quick Alerts
ALLOW NOTIFICATIONS  
For Daily Alerts

ಮಗುವಿಗೆ ಎದೆ ಹಾಲುಣಿಸುವ ಮಹಿಳೆಯರು ಮದ್ಯಪಾನ ಮಾಡಲೇಬಾರದು

|

ಮಗು ಹುಟ್ಟಿದ ಬಳಿಕ ಮಗುವಿಗೆ ಈ ಜಗತ್ತಿನಲ್ಲಿ ಲಭ್ಯವಿರುವ ಅತ್ಯುತ್ತಮ ಆಹಾರವೆಂದರೆ ತಾಯಿಹಾಲು. ಇದೇ ಕಾರಣಕ್ಕೆ ಮಗುವಿನ ಜನನದ ಬಳಿಕ ಆರು ತಿಂಗಳವರೆಗಾದರೂ ತಾಯಿಹಾಲನ್ನು ಮಗುವಿಗೆ ಕುಡಿಸುವಂತೆ ವೈದ್ಯರು ಸಲಹೆ ಮಾಡುತ್ತಾರೆ. ತಾಯಿಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಪೂರಕವಾದ ಪೋಷಕಾಂಶಗಳಿರುವುದು ಮಾತ್ರವಲ್ಲ ಬಾಲ್ಯದಲ್ಲಿ ಎದುರಾಗುವ ಹಲವಾರು ಕಾಯಿಲೆಗಳನ್ನು ದೂರವಿಸಿರಲೂ ನೆರವಾಗುತ್ತದೆ. ಬೆಳವಣಿಗೆಯ ಹಂತದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತಿದ್ದಂತೆ ತಾಯಿಹಾಲಿನ ಸೇವನೆಯನ್ನು ಕಡಿಮೆಗೊಳಿಸುತ್ತಾ ಹೋಗಬಹುದು ಹಾಗೂ ಕಡೆಗೆ ನಿಲ್ಲಿಸಬಹುದು.

ಅಷ್ಟೇ ಅಲ್ಲ, ನವಜಾತ ಶಿಶುಗಳು ದಿನಗಳೆದಂತೆ ಸೂಕ್ತವಾದ ತೂಕವನ್ನು ಪಡೆಯಲೂ ತಾಯಿಹಾಲು ನೆರವಾಗುತ್ತದೆ. ಈ ಕ್ರಿಯೆಗೆ ನೆರವಾಗುವ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿರಲು ಕೇವಲ ತಾಯಿಹಾಲಿಗೆ ಮಾತ್ರವೇ ಸಾಧ್ಯ,. ಈ ಹಾಲನ್ನು ಉತ್ಪಾದಿಸಲೂ ತಾಯಿಯ ದೇಹವೂ ಉತ್ತಮ ಪೋಷಕಾಂಶಗಳನ್ನು ಪಡೆದಿರಬೇಕಾದ ಕಾರಣ ತಾಯಿಯೂ ಅಗತ್ಯ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ.

Drinking Alcohol

ಒಂದು ವೇಳೆ ನೀವು ಹಾಲೂಡಿಸುತ್ತಿರುವ ತಾಯಿಯಾಗಿದ್ದರೆ ನೀವು ಈಗಾಗಲೇ ತಾಯ್ತನದ ಬಗ್ಗೆ ಹಲವಾರು ಲೇಖನಗಳನ್ನು ಓದಿಯೇ ಇರುತ್ತೀರಿ ಹಾಗೂ ಹಾಲೂಡಿಸುವ ತಾಯಂದಿರಿಗೆ ಸೂಕ್ತವಾದ ಆಹಾರಕ್ರಮಗಳ ಬಗ್ಗೆಯೂ ತಿಳಿದುಕೊಂಡಿರಬಹುದು. ಬಾಣಂತನದ ಅವಧಿಯಲ್ಲಿ ನೀವು ಹೆಚ್ಚು ಪೌಷ್ಟಿಕ ಅಹಾರಗಳನ್ನು ಸೇವಿಸಬೇಕಾಗಿರುವುದು ಅವಶ್ಯವಾಗಿದೆ ಹಾಗೂ ಇದೇ ರೀತಿ ಬಾಣಂತನದ ಅವಧಿಯಲ್ಲಿ ನೀವು ಕೆಲವು ಆಹಾರ ಅಥವಾ ಇತರ ವಸ್ತುಗಳನ್ನು ಸೇವಿಸಬಾರದು. ಸೇವಿಸಬಾರದ ಆಹಾರಗಳ ಪಟ್ಟಿಯಲ್ಲಿ ಮದ್ಯ ಮೊದಲಾಗಿರಲು ಹತ್ತು ಹಲವಾರು ಕಾರಣಗಳಿವೆ. ಅಲ್ಲದೇ ಒಂದು ವೇಳೆ ನೀವು ಮದ್ಯಸೇವಿಸುವ ಅಭ್ಯಾಸವುಳ್ಳವರಾಗಿದ್ದರೂ ಬಾಣಂತನದ ಅವಧಿಯಲ್ಲಿ ಸಂಪೂರ್ಣವಾಗಿ ವರ್ಜಿಸಬೇಕು ಎಂದು ನಿಮಗೆ ಈಗಾಗಲೇ ಹಲವು ಹಿತೈಷಿಗಳು ಸಲಹೆ ಮಾಡಿದ್ದಿರಬಹುದು.

Most Read: ಎದೆ ಹಾಲು ಹೆಚ್ಚಿಸಲು ಇಲ್ಲಿದೆ ನೋಡಿ ಆರು ನೈಸರ್ಗಿಕ ಮನೆಮದ್ದುಗಳು

ಬಾಣಂತನದ ಅವಧಿಯಲ್ಲಿ ಎದುರಾಗುವ ನೋವು - ಬಳಲಿಕೆಗಳಿಗೆ ಮದ್ಯಪಾನ ಉತ್ತರವೆಂದು ಕೆಲವು ತಾಯಂದಿರು ಪರಿಗಣಿಸುತ್ತಾರೆ, ಆದರೂ ಮಗುವಿನ ಹಾಲೂಡಿಸುತ್ತಿರುವ ಅವಧಿಯಲ್ಲಿ ಮದ್ಯರಿಂದ ಪೂರ್ಣವಾಗಿ ವಿಮುಖರಾಗುವುದೇ ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ಅಗತ್ಯವಾಗಿದೆ. ಮುಖ್ಯವಾಗಿ ನೀವು ಸೇವಿಸುವ ಮದ್ಯ ನಿಮ್ಮ ತಾಯಿಹಾಲಿಗೆ ಕೆಲವಾರು ಋಣಾತ್ಮಕ ಪರಿಣಾಮಗಳನ್ನು ಒದಗಿಸುತ್ತದೆ ಹಾಗೂ ಇದನ್ನು ಕುಡಿಯುವ ಮಗುವಿನ ಆರೋಗ್ಯದ ಮೇಲೆ ಪರಿಣಾಮವುಂಟಾಗುತ್ತದೆ. ಯಾವ ಬಗೆಯ ದುಷ್ಪರಿಣಾಮಗಳೂ ಎದುರಾಗುತ್ತವೆ? ಇಂದಿನ ಲೇಖನದಲ್ಲಿ ಈ ವಿಷಯಗಳನ್ನು ವಿವರಿಸಲಾಗಿದೆ. ಬನ್ನಿ, ಈ ವಿವರಗಳನ್ನು ಅರಿತುಕೊಳ್ಳೋಣ...

ತಾಯಿಹಾಲಿನ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತದೆ

ಅಧ್ಯಯನಗಳಲ್ಲಿ ಸಾಬೀತಾಗಿರುವ ಪ್ರಕಾರ ಬಾಣಂತಿಯರ ಮದ್ಯಸೇವನೆಯ ಪರಿಣಾಮವಾಗಿ ತಾಯಿಹಾಲಿನ ಉತ್ಪಾದನೆಯಲ್ಲಿ 20% ರಿಂದ 23% ರಷ್ಟು ಪ್ರಮಾಣ ಇಳಿಕೆಯಾಗಿರುತ್ತದೆ. ನಿಮ್ಮ ಮಗುವಿಗೆ ತಾಯಿಹಾಲೇ ಜಗತ್ತಿನ ಏಕಮಾತ್ರ ಜೀವದ್ರವವಾಗಿದ್ದು ಈ ಪ್ರಮಾಣ ಇಳಿಕೆಯಾದರೆ ನಿಮ್ಮ ಮಗುವಿನ ಪಾಲಿನ ಆಹಾರವೂ ಇಳಿಕೆಯಾದಂತೆಯೇ ಸರಿ. ಮಗುವಿನ ಪ್ರಾರಂಭಿಕ ದಿನಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಅಗತ್ಯವಾಗಿದ್ದು ದೇಹದ ಬೆಳವಣಿಗೆಗೆ ಅಗತ್ಯವಾಗಿರುವ ಕಾರಣ ಕುಂಠಿತವಾದ ಹಾಲಿನ ಪ್ರಮಾಣ ಮಗುವಿನ ಬೆಳವಣಿಗೆ ಪರಿಪೂರ್ಣವಾಗದಂತೆ ತಡೆಯುತ್ತದೆ

ತಾಯಿಹಾಲಿನಿಂದ ಮಗುವಿನ ದೇಹಕ್ಕೂ ಮದ್ಯ ಸೇರಿಕೊಳ್ಳಬಹುದು

ಬಾಣಂತನದಲ್ಲಿ ತಾಯಿ ಸೇವಿಸುವ ಮದ್ಯದ ಪ್ರಮಾಣದ 0.5% ರಿಂದ 3% ದಷ್ಟು ಪ್ರಮಾಣ ನೇರವಾಗಿ ತಾಯಿಹಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಅಂದರೆ ಈ ಹಾಲನ್ನು ಕುಡಿಸುವ ಮೂಲಕ ನಿಮ್ಮ ಮಗುವನ್ನು ನೀವೇ ನಿಮ್ಮ ಕೈಯಾರೆ ಮದ್ಯವ್ಯಸನಿಯಾಗಿಸುತ್ತಿದ್ದೀರಿ! ಈ ಪ್ರಮಾಣ ನಿಮಗೆ ಅಲ್ಪವೇ ಎನಿಸಬಹುದು. ಆದರೆ ಆ ಪುಟ್ಟ ಮಗುವಿನ ದೇಹಕ್ಕೆ ಈ ಪ್ರಮಾಣವೇ ಅತಿಯಾಗಿರುತ್ತದೆ. ವಾಸ್ತವವಾಗಿ ಈ ಅಲ್ಪ ಪ್ರಮಾಣ ಮಗುವಿನ, ಇನ್ನೂ ಬೆಳೆಯುತ್ತಿರುವ ಯಕೃತ್ ಅನ್ನು ಹಾನಿಗೆಡವಲು ಸಾಕು!

ಹಾಲಿನ ಪೌಷ್ಟಿಕ ಮೌಲ್ಯವನ್ನು ಕಡಿಮೆಯಾಗಿಸುತ್ತದೆ

ತಾಯಿಯ ದೇಹದಲ್ಲಿರುವ ಮದ್ಯ ಪೌಷ್ಟಿಕಾಂಶಗಳನ್ನು ತಾಯಿಹಾಲಿನಲ್ಲಿ ಬೆರೆತುಕೊಳ್ಳದಂತೆ ತಡೆಯುತ್ತವೆ. ಈ ಮೂಲಕ ತಾಯಿಹಾಲಿನಲ್ಲಿ ಇರಬೇಕಾದ ಒಟ್ಟಾರೆ ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುತ್ತದೆ. ತಾಯಿಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಫೋಲೇಟ್ ಇರಬೇಕಾಗಿದ್ದು ಮದ್ಯವ್ಯಸನಿ ತಾಯಿಯ ಹಾಲಿನಲ್ಲಿ ಈ ಪ್ರಮಾಣ ಗಣನೀಯ ಮಟ್ಟದಲ್ಲಿ ಕಡಿಮೆ ಇರುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ.

ರೋಗ ನಿರೋಧಕ ಶಕ್ತಿ ಉಡುಗುತ್ತದೆ

ನವಜಾತ ಶಿಶುವಿನ ದೇಹದ ರೋಗ ನಿರೋಧಕ ಶಕ್ತಿ ಗರ್ಭದಲ್ಲಿದ್ದಾಗಲಿಂದಲೇ ಅಲ್ಪಮಟ್ಟಿನಲ್ಲಿ ಪ್ರಾರಂಭವಾಗಿ ಹುಟ್ಟಿದ ಬಳಿಕ ಬೆಳವಣಿಗೆಯ ಹಂತದಲ್ಲಿ ನಿಧಾನವಾಗಿ ಪಕ್ವಗೊಳ್ಳುತ್ತಾ ಹೋಗುತ್ತದೆ. ದೇಹಕ್ಕೆ ಎದುರಾಗುವ ಹಲವಾರು ಸೋಂಕುಗಳನ್ನು ಎದುರಿಸುವ ಶಕ್ತಿಯನ್ನು ಮಗು ಗರ್ಭದಲ್ಲಿದ್ದಾಗ ತಾಯಿಯ ರಕ್ತದಿಂದ ಪ್ರತಿಜೀವಕಗಳ ಮೂಲಕ (antibodies) ಪಡೆದುಕೊಂಡರೆ ಹುಟ್ಟಿದ ಬಳಿಕ ತಾಯಿಯ ಹಾಲಿನ ಸೇವನೆಯ ಮೂಲಕ ಪಡೆದುಕೊಳ್ಳುತ್ತದೆ. ಒಂದು ವೇಳೆ ತಾಯಿಹಾಲಿನಲ್ಲಿ ಮದ್ಯದ ಒಂದಂಶವೂ ಇದ್ದರೆ, ಈ ಪ್ರತಿಜೀವಕಗಳನ್ನು ಮಗುವಿನ ಹೇಹ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಮಗುವಿನ ರೋಗ ನಿರೋಧಕ ಶಕ್ತಿ ಅಗತ್ಯವಿದ್ದಷ್ಟು ಪ್ರಬಲವಾಗಿರದೇ ಚಿಕ್ಕ ಪುಟ್ಟ ಸೋಂಕುಗಳಿಗೂ ಸುಲಭವಾಗಿ ತುತ್ತಾಗುತ್ತದೆ. ಬಾಲ್ಯದ ಹಂತದಲ್ಲಿ ಹೀಗೆ ಸೋಂಕಿಗೆ ಸುಲಭವಾಗಿ ತುತ್ತಾಗುವುದು ಮಾರಣಾಂತಿಕವಾಗಿ ಪರಿಣಮಿಸಬಹುದು.

Most Read: ಪ್ರತಿಯೊಬ್ಬ ಮಹಿಳೆಯರೂ ತಿಳಿಯಲೇಬೇಕಾದ ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳು

ಮೆದುಳಿನ ಬೆಳವಣಿಗೆ ಅಪೂರ್ಣವಾಗುತ್ತದೆ

ತಾಯಿಹಾಲಿನಲ್ಲಿರುವ ಮದ್ಯ ಮಗುವಿನ ಯಕೃತ್ ಮತ್ತು ಜೀವನಿರೋಧಕ ಶಕ್ತಿಯ ಮೇಲೆ ಮಾತ್ರವಲ್ಲ ನಂತರದ ಜೀವನದಲ್ಲಿ ಮೆದುಳಿನ ಬೆಳವಣಿಗೆಯ ಮೇಲೂ ಉಂಟುಮಾಡಬಹುದು. ಮೆದುಳಿನ ಸೂಕ್ತ ಬೆಳವಣಿಗೆಗೆ ಅಗತ್ಯವಿದ್ದಷ್ಟು ಮಟ್ಟದ ಜೀವಕೋಶಗಳು ಬೆಳವಣಿಗೆಯಾಗದೇ ಮಾನಸಿಕ ಕೌಶಲತೆ ಕಡಿಮೆಯಾಗುತ್ತದೆ. ಈ ಸ್ಥಿತಿಗೆ ವೈದ್ಯಕೀಯ ಭಾಷೆಯಲ್ಲಿ wet brain ಎಂದು ಕರೆಯುತ್ತಾರೆ.

ಅಸಮರ್ಪಕ ನಿದ್ದೆ ಮತ್ತು ಆಹಾರಾಭ್ಯಾಸ

ತಾಯಿಹಾಲಿನಲ್ಲಿ ಅಲ್ಪ ಮದ್ಯದ ಅಂಶವಿದ್ದರೂ ಈ ಹಾಲನ್ನು ಕುಡಿದ ಮಕ್ಕಳಿಗೆ ಸರಿಯಾದ ಕ್ರಮದಲ್ಲಿ ನಿದ್ದೆಯಾಗದಿರುವುದನ್ನು ಅದ್ಯಯನಗಳಲ್ಲಿ ಕಂಡುಕೊಳ್ಳಲಾಗಿದೆ. ಈ ಮಕ್ಕಳು ಕಡಿಮೆ ಪ್ರಮಾಣದ ಗಾಢನಿದ್ದೆ (REM sleep-random eye movement sleep) ಪಡೆಯುತ್ತಾರೆ. ಬೆಳೆಯುತ್ತಿರುವ ಮಕ್ಕಳಿಗೆ ಹೆಚ್ಚಿನ ನಿದ್ದೆಯ ಅವಶ್ಯಕತೆ ಇರುತ್ತದೆ. ನಿದ್ದೆಯ ಅವಧಿಯಲ್ಲಿ ದೇಹದ ಹಲವಾರು ಬೆಳವಣಿಗೆಯ ಕಾರ್ಯಗಳು ನಡೆಯುತ್ತವೆ. ಗಾಢನಿದ್ದೆ ಕಡಿಮೆಯಾದರೆ ಈ ಬೆಳವಣಿಗೆ ಮೇಲೆ ಪ್ರಭಾವವುಂಟಾಗುತ್ತದೆ. ಅಲ್ಲದೇ ಮಕ್ಕಳು ಸರಿಯಾಗಿ ನಿದ್ದೆ ಮಾಡದೇ ಇದ್ದರೆ ಅವರ ಆಹಾರ ಸೇವನೆಯ ಕ್ರಮದ ಮೇಲೂ ಪ್ರಭಾವವುಂಟಾಗುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ತಾಯಿಹಾಲು ಊಡಿಸುವ ತಾಯಿ ಮದ್ಯ ಸೇವಿಸಿದರೆ ಈ ಹಾಲು ಕುಡಿಯುವ ಮಗು ಸರಿಯಾಗಿ ನಿದ್ದೆ ಮಾಡುವುದೂ ಇಲ್ಲ, ಸರಿಯಾಗಿ ಆಹಾರ ಸೇವಿಸುವುದೂ ಇಲ್ಲ.

ಮಕ್ಕಳ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ

ಮಗುವಿಗೆ ಈ ಜಗತ್ತಿನಲ್ಲಿಯೇ ಅತ್ಯಂತ ಆಪ್ತವಾದ ಸಂಗಾತಿ ಎಂದರೆ ತಾಯಿ! ಹುಟ್ಟಿದ ಕ್ಷಣದಿಂದ ಬೆಳವಣಿಗೆಯ ಹಂತದಲ್ಲಿ ಮಗುವಿಗೆ ತಾಯಿಯ ಆಪ್ತತೆ ಅತಿ ಹೆಚ್ಚು ಅಗತ್ಯವಾಗಿದೆ. ಅಲ್ಲದೇ ಹುಟ್ಟಿದ ಮಗು ತನ್ನ ಯಾವುದೇ ಕೆಲಸವನ್ನು ಸ್ವತಃ ನಿರ್ವಹಿಸಿಕೊಳ್ಳಲು ಅಸಮರ್ಥವಾಗಿರುವ ಕಾರಣ ಈ ಕಾರ್ಯಗಳನ್ನು ತಾಯಿಯೇ ನಿರ್ವಹಿಸಬೇಕಾಗಿರುತ್ತದೆ. ಒಂದು ವೇಳೆ ಬಾಣಂತಿ ಮದ್ಯದ ಅಮಲಿನಲ್ಲಿದ್ದರೆ ತನ್ನ ಮಗುವಿನ ಲಾಲನೆ ಪಾಲನೆಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ನಿಮ್ಮ ಮಗುವಿನ ರಕ್ಷಣೆಗಾಗಿಯಾದರೂ ಸರಿ, ನೀವು ಹಾಲೂಡಿಸುವಷ್ಟೂ ಅವಧಿಯಲ್ಲಿ ಮದ್ಯ ಸೇವಿಸಲೇ ಬಾರದು.

ತಾಯಿಹಾಲಿನ ರುಚಿ ಬದಲಾಗುತ್ತದೆ

ತಾಯಿಹಾಲಿನಲ್ಲಿ ಮದ್ಯ ಬೆರೆತರೆ ಇದು ತಾಯಿಹಾಲಿನ ರುಚಿಯನ್ನು ಬದಲಿಸುತ್ತದೆ. ರುಚಿ ಬದಲಾದರೆ ಹಾಲನ್ನು ಕುಡಿಯಲು ಮಗು ನಿರಾಕರಿಸಬಹುದು ಅಥವಾ ಕಡಿಮೆ ಕುಡಿಯಬಹುದು. ಪರಿಣಾಮವಾಗಿ ಮಗುವಿಗೆ ಅಗತ್ಯವಿದ್ದಷ್ಟು ತಾಯಿಹಾಲು ದೊರಕದೇ ಹೋಗಬಹುದು. ಇದು ಮಗುವಿನ ದೇಹ ಪಡೆದುಕೊಳ್ಳಬೇಕಾದಷ್ಟು ತೂಕವನ್ನು ಪಡೆಯಲು ಸಾಧ್ಯವಾಗದೇ ಇರಲು ನೇರವಾಗಿ ಕಾರಣವಾಗಿದೆ. ಜನನದ ಬಳಿಕ ಕೆಲವು ತಿಂಗಳವರೆಗೆ ಸೂಕ್ತ ತೂಕವನ್ನು ಮಗು ಪಡೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಅಗತ್ಯವಾಗಿದೆ.

ಮಗು ಅಕಸ್ಮಿಕ ಮರಣಕ್ಕೆ ತುತ್ತಾಗಬಹುದು

ಹಾಲೂಡಿಸುವ ಅವಧಿಯಲ್ಲಿ ತಾಯಿಯ ಮದ್ಯಸೇವನೆಯಿಂದ ಮಗುವಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ ಹಾಗೂ ವಿಶೇಷವಾಗಿ ಮಗುವಿನ ಯಕೃತ್ ಪ್ರಭಾವಿತಗೊಳ್ಳುತ್ತದೆ. ಪರಿಣಾಮವಾಗಿ ಮಗು Sudden Infant Death Syndrome ಎಂಬ ಅಕಸ್ಮಿಕ ಸಾವಿಗೆ ತುತ್ತಾಗುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ.

ಚಲನಕೌಶಲ್ಯ (Motor Skills)ಪಡೆಯುವುದು ನಿಧಾನವಾಗುತ್ತದೆ

ಮಗು ಬೆಳೆಯುತ್ತಾ ಹೋದಂತೆ ದೇಹದ ಹಲವಾರು ಸ್ನಾಯುಗಳು ಮೆದುಳಿನ ಸೂಚನೆಗಳಿಗನುಸಾರವಾಗಿ ಸ್ಪಂದಿಸಬೇಕಾಗುತ್ತದೆ. ಬೆಳವಣಿಗೆಯ ಹಂತದಲ್ಲಿ ಈ ಕೌಶಲ (Motor Skills)ನಿಧಾನವಾಗಿ ಪಕ್ವಗೊಳ್ಳುತ್ತಾ ಸಾಗುತ್ತದೆ. ಈ ಕೌಶಲವನ್ನು ಹೆಚ್ಚಿಸಲೆಂದೇ ಮಗುವಿಗೆ ಆಟಿಕೆಗಳನ್ನು ನೀಡಲಾಗುತ್ತದೆ. ತಾಯಿಹಾಲಿನಲ್ಲಿರುವ ಮದ್ಯ ಈ ಕೌಶಲವನ್ನು ನಿಧಾನಗೊಳಿಸುತ್ತದೆ. ಮಗು ಹೆಚ್ಚಿನ ಹೊತ್ತು ನಿದ್ದೆಯ ಮಂಪರಿನಲ್ಲಿರುತ್ತದೆ ಹಾಗೂ ದೇಹದಲ್ಲಿರುವ ಮದ್ಯ ಮಗುವನ್ನು ಸರಿಯಾಗಿ ನಿದ್ದೆ ಮಾಡಲೂ ಬಿಡದೇ ಎಚ್ಚರಾಗಿರಲೂ ಬಿಡದೇ ಜಡವಾಗಿಸುತ್ತದೆ. ಈ ಮಕ್ಕಳು ವಯೋಸಹಜವಾದ ಚಲನೆಗಳನ್ನು ಪ್ರಕಟಿಸದೇ, ಆಟಿಕೆಗಳನ್ನು ಆಡದೇ ಮೊದ್ದುಗಳಾಗಿಯೇ ಬೆಳೆಯುತ್ತವೆ. ಈ ಮಕ್ಕಳು ಬಾಹ್ಯ ಪ್ರಚೋದನೆಗಳಿಗೆ ಇತರ ಮಕ್ಕಳಷ್ಟು ಬೇಗನೇ ಸ್ಪಂದಿಸುವುದಿಲ್ಲ ಹಾಗೂ ಬೆಳವಣಿಗೆಯ ಹಂತದಲ್ಲಿ, ವಿಶೇಷವಾಗಿ ಮಾನಸಿಕ ಬೆಳವಣಿಗೆಯಲ್ಲಿ ಹಿಂದುಳಿಯುತ್ತವೆ.

English summary

Why Is Alcohol Bad For Breastfeeding Mothers?

Breast milk is said to be the best kind of nutrition your newborn baby can get, right after delivery. Doctors do stress on the importance of exclusive breastfeeding your baby for the first six months. Breast milk not only has all the important nutrients required for the baby to grow, but it also keeps them away from illness for the first few months of the life, until their natural immune system starts kicking. Moreover, breast milk also helps them gain the right weight which is an essential parameter of growth in newborn babies.
X
Desktop Bottom Promotion