For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯ ಕೊನೆಯ ತಿಂಗಳು ತಾಯಂದಿರು ಏನು ಯೋಚಿಸುತ್ತಾರೆ ಗೊತ್ತಾ?

By Divya Pandit
|

ಹೆಣ್ಣಿಗೊಂದು ಪರಿಪೂರ್ಣತೆಯ ಭಾವನೆ ಬರುವುದು ತಾನು ತಾಯ್ತನದ ಅನುಭವವನ್ನು ಹೊಂದಿದಾಗ. ತನ್ನ ಮಡಿಲಲ್ಲಿಯೇ ಒಂದು ಜೀವಕ್ಕೆ ಜೀವ ಹಾಗೂ ಪ್ರೀತಿಯನ್ನು ಎರೆದು, ಸಮಾಜಕ್ಕೊಂದು ಆಸ್ತಿಯನ್ನು ನೀಡುವ ಹೆಮ್ಮೆಯ ಭಾವನೆ ಅವಳದ್ದಾಗಿರುತ್ತದೆ. ಇಂತಹ ಒಂದು ಸುಮಧುರವಾದ ಬಾಂಧವ್ಯದ ಬೆಸುಗೆ ಹಾಗೂ ಪ್ರೀತಿಯ ಅನುಭವದ ಹಿಂದೆ ಸಾಕಷ್ಟು ನೋವುಗಳು ಇರುತ್ತವೆ ಎನ್ನುವುದು ಸಹ ಅಷ್ಟೇ ಸತ್ಯ. ಗರ್ಭದಲ್ಲಿ ಭ್ರೂಣವು ಬೆಳವಣಿಗೆ ಹೊಂದುತ್ತಿದ್ದಂತೆಯೇ ತಾಯಿಯ ಜೀವದಲ್ಲೂ ಅನೇಕ ಬದಲಾವಣೆಗಳು ಏರ್ಪಡುತ್ತವೆ.

ತಾಯಿಯ ಜೀವದಲ್ಲಿ ಉಂಟಾಗುವ ಬದಲಾವಣೆಯ ಹಿಂದೆ ಮಾನಸಿಕ ಹಾಗೂ ದೈಹಿಕ ನೋವು ಇರುತ್ತವೆ. ಆದರೆ ಒಡಲಲ್ಲಿ ಬೆಳೆಯುತ್ತಿರುವ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ತಾಯಿ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಅದೇ ಪ್ರಕೃತಿಯ ನಿಯಮ. ಅಂತಹ ಶಕ್ತಿಯನ್ನು ತಾಯಿ ನೈಸರ್ಗಿಕವಾಗಿಯೇ ಹೊಂದಿರುತ್ತಾಳೆ. ತನ್ನ ದೈಹಿಕ ಬದಲಾವಣೆಯಿಂದ ಹಾರ್ಮೋನ್‍ಗಳು ಬದಲಾವಣೆ ಕಾಣುತ್ತವೆ. ಅವು ಮಾನಸಿಕ ಚಿಂತನೆಗಳ ಮೇಲೆ ಪರಿಣಾಮ ಬೀರುವವು. ತಾಯಿ ಸದಾ ಯಾವೆಲ್ಲಾ ಭಾವನೆಗಳನ್ನು ಹೊಂದಿರುತ್ತಾಳೆ ಎನ್ನುವುದರ ಆಧಾರದ ಮೇಲೂ ಮಗುವಿನ ಬೆಳವಣಿಗೆ ನಿರ್ಧಾರವಾಗುತ್ತದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಿಸುತ್ತಾರೆ. ಹಾಗಾಗಿ ಉತ್ತಮ ಅಥವಾ ಸಮತೋಲಿತ ಭಾವನೆಗಳನ್ನು ತಾಯಿ ಹೊಂದಿದ್ದರೆ ಗರ್ಭಾವಸ್ಥೆಯ ಅವಧಿಯು ಸಂತೋಷಕರವಾಗಿರುತ್ತದೆ ಎಂದು ಹೇಳಲಾಗುವುದು.

pregnancy last month tips

ಗರ್ಭದಲ್ಲಿ ಇರುವ ಮಗುವಿನ ಬೆಳವಣಿಗೆಯ ಆಧಾರದ ಮೇಲೆ ತಾಯಿಯ ಮಾನಸಿಕ ಚಿಂತನೆಗಳು ಬದಲಾವಣೆ ಹೊಂದುತ್ತವೆ. ಈ ಹಿನ್ನೆಲೆಯಲ್ಲಿಯೇ ತನ್ನ ಗರ್ಭಾವಸ್ಥೆ ಹಾಗೂ ಮಗುವಿನ ಬೆಳವಣಿಗೆಯ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾರೆ. ಪ್ರಸವದ ದಿನಗಳು ಹತ್ತಿರ ಬಂದಂತೆ ಮಾನಸಿಕ ಸ್ಥಿರತೆಯು ಕೊಂಚ ಅಲ್ಲಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಗರ್ಭಾವಸ್ಥೆಯ ಕೊನೆಯ ತಿಂಗಳಲ್ಲಿ ಸಾಕಷ್ಟು ದೃಢ ಮನಸ್ಸು ಹಾಗೂ ಉತ್ತಮ ಮಾನಸಿಕ ಚಿಂತನೆಯನ್ನು ಒಳಗೊಂಡಿರಬೇಕು. ಹಾಗಾದರೆ ಆ ಮಾನಸಿಕ ಚಿಂತನೆಗಳು ಯಾವವು? ಎನ್ನುವುದರ ಕುರಿತು ಸಂಕ್ಷಿಪ್ತ ವಿವರಣೆಯನ್ನು ಬೋಲ್ಡ್ ಸ್ಕೈ ನಿಮಗೆ ಪರಿಚಯಿಸುತ್ತಿದೆ.

ಇದು ನಿಮಗೆ ನೋವುಂಟು ಮಾಡುವುದೇ?

ಹೆಣ್ಣಾಗಿ ಹುಟ್ಟಿದ ಮೇಲೆ ಅನುಭವಿಸುವ ಒಂದು ಭಯಾನಕ ನೋವು ಎಂದರೆ ಅದು ಹೆರಿಗೆ ನೋವು. ಇದೊಂದು ಸಹಿಸಲಾಗದ ಕೆಟ್ಟ ನೋವುಗಳಲ್ಲಿ ಒಂದು. ತಾಯಿ ಇನ್ನೊಂದು ಜೀವಕ್ಕೆ ನೈಸರ್ಗಿಕವಾಗಿಯೇ ಜನ್ಮ ನೀಡಬೇಕು ಎಂದಾದರೆ ಈ ನೋವನ್ನು ಸಾಮಾನ್ಯವಾಗಿ ಅನುಭವಿಸಲೇ ಬೇಕು. ಹಾಗಾಗಿ ತಾಯಿ ಪ್ರಸವದ ನೋವನ್ನು ಅನುಭವಿಸುವುದು ಎಂದರೆ ಅದು ಆಶ್ಚರ್ಯದ ವಿಷಯವಲ್ಲ. ಪ್ರಸವದ ಸಮಯದಲ್ಲಿ ಒಮ್ಮೆ ಸಹಿಸಲಾರದ ನೋವು ಎನಿಸಿದರೂ ಮಗುವಿನ ಜನ್ಮದ ನಂತರ ಆ ನೋವು ಸಂತೋಷದ ಅನುಭವವನ್ನು ನೀಡುತ್ತದೆ. ಪ್ರಸವದ ನೋವಿನ ಬಗ್ಗೆ ಭಯಭೀತರಾಗುವ ಬದಲು ನೋವನ್ನು ಸಹಿಸಿಕೊಳ್ಳುವ ಶಕ್ತಿ ಹಾಗೂ ಸುಲಭ ಪ್ರಸವಕ್ಕಾಗಿ ಸೂಕ್ತವಾದ ಲಘು ವ್ಯಾಯಾಮ, ಧ್ಯಾನವನ್ನು ಅನುಸರಿಸಿ. ಆಗ ನಿಮ್ಮ ಗರ್ಭಾವಸ್ಥೆಯ ಅಂತಿಮ ಹಂತದಲ್ಲಿ ಉಂಟಾಗುವ ಮಾನಸಿಕ ಒತ್ತಡವು ಕೊಂಚ ನಿರಾಳವಾಗುವುದು.

ಮಗುವಿನ ಆರೋಗ್ಯ

ಗರ್ಭಾವಸ್ಥೆಯ ಉದ್ದಕ್ಕೂ ತಾಯಿಯ ಮಾನಸಿಕ ಸ್ಥಿತಿ ಹೇಗಿರುತ್ತದೆ ಎನ್ನುವುದರ ಆಧಾರದ ಮೇಲೆ ಮಗುವಿನ ಬೆಳವಣಿಗೆ ಹಾಗೂ ಆರೋಗ್ಯವು ನಿಂತಿರುತ್ತದೆ. ಮಗುವಿನ ಜನನ ಮತ್ತು ಕಾಳಜಿಯ ಭಾವವು ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ತಾಯಿಯ ಭಾವನೆ ಮಗುವಿನ ಬೆಳವಣಿಗೆಯ ಮೇಲೆ ನೇರವಾಗಿ ಪ್ರಭಾವ ಬೀರುವುದು. ಹಾಗಾಗಿ ನಿಮಗೆ ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಅತಿಯಾದ ಚಿಂತೆ ಕಾಡುತ್ತಿದ್ದರೆ ವೈದ್ಯರಲ್ಲಿ ಸೂಕ್ತ ಸಲಹೆಯನ್ನು ಪಡೆದುಕೊಳ್ಳುವುದನ್ನು ಮರೆಯಬಾರದು. ತ್ವರಿತವಾದ ಪರೀಕ್ಷೆ ಮತ್ತು ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ನಿಮ್ಮ ಮಗು ಹೇಗಿದೆ? ಎನ್ನುವುದನ್ನು ತಿಳಿಸುತ್ತದೆ. ಧನಾತ್ಮಕ ಚಿಂತನೆ ಹಾಗೂ ಪ್ರಾರ್ಥನೆಗಳು ನಿಮ್ಮ ಮಗು ಆರೋಗ್ಯದಿಂದ ಇರುವಂತೆ ಮಾಡುವುದು.

ಪುರುಷರಿಗೆ ಯಾವ ತೊಂದರೆಯೂ ಇಲ್ಲ ಎನ್ನುವ ಭಾವ

ಸಾಮಾನ್ಯವಾಗಿ ಪ್ರಸವದ ಸಮಯಕ್ಕೆ ತಲುಪುತ್ತಿದ್ದಂತೆ ಕೆಲವರಿಗೆ ಪುರುಷರಿಗೆ ಈ ಬಗೆಯ ನೋವುಗಳು ಅನುಭವಿಸಬೇಕಿಲ್ಲ ಎನ್ನುವ ಭಾವನೆಯನ್ನು ಹೊಂದುತ್ತಾರೆ. ಆದರೆ ಈ ರೀತಿಯ ಭಾವನೆಯಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಮಾಡಬೇಕು. ಸಮುದ್ರ ಕುದುರೆ ಎನ್ನುವ ಪ್ರಾಣಿಗಳಲ್ಲಿ ಗಂಡು ಸಮುದ್ರ ಕುದುರೆಯು ಗರ್ಭವನ್ನು ಧರಿಸುತ್ತದೆ. ಹಾಗೆಯೇ ನೀವು ನಿಮ್ಮ ಪ್ರಸವದ ಸಮಯ ಸಮೀಪಿಸುತ್ತಿದ್ದಂತೆಯೇ ನಿಮ್ಮ ಗಂಡನು ನಿಮ್ಮ ನೋವಿನಲ್ಲಿ ಪಾಲು ಪಡೆದುಕೊಳ್ಳುವಂತೆ ಭಾವಿಸಿ. ಗಂಡನ ಪ್ರೀತಿ ಮತ್ತು ಬೆಂಬಲವನ್ನು ಪಡೆದುಕೊಳ್ಳುತ್ತಿದ್ದವರಂತೆ ಮಾನಸಿಕವಾಗಿ ಅಂದುಕೊಳ್ಳಿ. ಆಗ ನಿಮ್ಮ ಮಾನಸಿಕ ಸ್ಥಿತಿಯು ಗಟ್ಟಿಯಾಗುವುದು.

ಪತಿಯ ಪ್ರೀತಿಯನ್ನು ಅರ್ಥೈಸಿಕೊಳ್ಳಿ

ಒಂದು ಕ್ಷಣ ನೀವು ನಿಮ್ಮ ಪತಿಯು ನಿಮಗಾಗಿ ಹಾಗೂ ನಿಮ್ಮ ಗರ್ಭದಲ್ಲಿ ಬೆಳೆಯುತ್ತಿದ್ದ ಮಗುವಿಗಾಗಿ ತೋರುವ ಪ್ರೀತಿ ಹಾಗೂ ಆರೈಕೆಯ ಬೆಂಬಲವನ್ನು ಸ್ಮರಿಸಿಕೊಳ್ಳಿ. ಆಗ ನಿಮ್ಮ ಪತಿಯು ನಿಮಗಾಗಿ ತೋರುವ ಪ್ರೀತಿಯನ್ನು ಅರಿತುಕೊಳ್ಳುವಿರಿ. ಜೊತೆಗೆ ನಿಮ್ಮ ಮಾನಸಿಕ ಸ್ಥಿತಿಯು ಸಮಾಧಾನಕರವಾಗಿರುತ್ತದೆ. ಜೊತೆಗೆ ನೀವು ಉತ್ತಮ ಪತಿ ಹಾಗೂ ಮಗು ಉತ್ತಮ ತಂದೆಯನ್ನು ಪಡೆದುಕೊಂಡ ಹೆಮ್ಮೆ ನಿಮ್ಮದಾಗುವುದು.

ಮಗು ಹೇಗೆ ಕಾಣಿಸುವುದು?

ಗರ್ಭಾವಸ್ಥೆಯಲ್ಲಿರುವಾಗ ನಿಮ್ಮ ಮಗು ನಿಮಗೆ ಸಂಪೂರ್ಣವಾಗಿ ರಹಸ್ಯವಾದ ವ್ಯಕ್ತಿ. ಪ್ರಸವದ ನಂತರ ನಿಮ್ಮ ಮಗುವನ್ನು ನೋಡಿದಾಗ ನೀವು ಆಶ್ಚರ್ಯಕ್ಕೆ ಒಳಗಾಗುವಿರಿ. ಆ ಮಗು ಯಾರನ್ನು ಹೋಲುತ್ತದೆ? ಹೇಗೆ ಕಾಣುತ್ತದೆ ಎನ್ನುವುದರ ಬಗ್ಗೆ ವರ್ಣನೆ ಮಾಡುವುದರಲ್ಲಿಯೇ ಒಂದು ಬಗೆಯ ಸಂತೋಷವನ್ನು ಕಂಡುಕೊಳ್ಳುವಿರಿ. ಈ ಸಂತೋಷವು ನಿಮಗೆ ಹೊಸ ಅನುಭವವನ್ನು ತಂದುಕೊಡುವುದು.

ಕುಟುಂಬದ ಸಿದ್ಧತೆ

ಪ್ರಸವದ ದಿನಾಂಕ ಸಮೀಪಿಸುತ್ತಿದ್ದಂತೆಯೇ ನಿಮ್ಮ ಕುಟುಂಬಕ್ಕೆ ಸೇರುವ ಹೊಸ ಅತಿಥಿಯನ್ನು ಸ್ವಾಗತಿಸುವುದು ಹಾಗೂ ಆ ಮಗುವಿನ ಆಗಮನದಿಂದ ಮನಸ್ಸಿಗೆ ಉಂಟಾಗುವ ಸಂತೋಷವನ್ನು ಕಲ್ಪಿಸಿಕೊಳ್ಳಿ. ಜೊತೆಗೆ ಸಾಕಷ್ಟು ತಯಾರಿಗೆ ಸಿದ್ಧತೆಯನ್ನು ನಡೆಸುವ ಚಿಂತನೆಗಳನ್ನು ಕೈಗೊಳ್ಳಬೇಕು. ಈ ಭಾವನೆಗಳು ನಿಮ್ಮ ಪ್ರಸವದ ನೋವನ್ನು ಸಹಿಸಿಕೊಳ್ಳುವ ಶಕ್ತಿಯ ಭಾವವನ್ನು ತಂದುಕೊಡುವುದು. ಜೊತೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಶಕ್ತಿಯುತವಾದ ಭಾವನೆಯನ್ನು ಹೊಂದುವಿರಿ.

ಯೋನಿಯ ಆರೋಗ್ಯ ಸ್ಥಿತಿ

ನೈಸರ್ಗಿಕವಾಗಿ ಪ್ರಸವದ ಸಮಯ ಹತ್ತಿರವಾಗುತ್ತಿದ್ದಂತೆಯೇ. ತಾಯಿಯ ದೇಹದಲ್ಲೂ ಕೆಲವು ಬದಲಾವಣೆಗಳು ಉಂಟಾಗುತ್ತವೆ. ಮಗುವಿನ ಜನ್ಮಕ್ಕೆ ಸಿದ್ಧತೆ ನಡೆಸುವಂತೆ ಯೋನಿಯ ಸ್ಥಳವು ಸ್ವಲ್ಪ ವಿಸ್ತರಣೆ ಹೊಂದುವುದು. ಯೋನಿಯ ಒಳ ಭಾಗದಲ್ಲಿ ಮಗುವಿನ ಜನನಕ್ಕೆ ಅನುಕೂಲವಾಗುವಂತೆ ರಚನೆಯಾಗುವುದು. ಈ ಬದಲಾವಣೆಯು ನಿಮ್ಮ ನಂತರದ ಲೈಂಗಿಕ ಜೀವನದ ಬಗ್ಗೆ ಚಿಂತೆಯನ್ನುಂಟುಮಾಡಬಹುದು. ಪ್ರಸವದ ನಂತರ ಸೂಕ್ತ ವ್ಯಾಯಾಮ ಹಾಗೂ ಆರೈಕೆಗಳಿಂದ ಯೋನಿಯು ಪುನಃ ಬಿಗಿಗೊಳ್ಳುವುದು ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ತಾಯಿಯ ಹಂಬಲ:

ಪ್ರಸವದ ಸಮಯ ಹತ್ತಿರಾವಗುತ್ತಿದ್ದಂತೆ ಸಾಮಾನ್ಯವಾಗಿ ತನ್ನ ತಾಯಿಯ ಹಂಬಲವನ್ನು ಮಾಡುತ್ತಾರೆ. ಒಂದು ಮಗುವಿಗೆ ಜನ್ಮ ನೀಡಿದ ತಾಯಿಗೆ ಇನ್ನೊಂದು ಹೆಣ್ಣಿನ ಹೆರಿಗೆ ನೋವು ಏನು ಎನ್ನುವುದನ್ನು ಅರ್ಥೈಸಿಕೊಳ್ಳಲು ಸಾಧ್ಯ. ಗರ್ಭಿಣಿ ಮಗಳಿಗೆ ತನ್ನ ತಾಯಿಯಲ್ಲಿ ಕೇಳಿಕೊಳ್ಳಬೇಕಾದ ಅನೇಕ ಪ್ರಶ್ನೆಗಳು ಇರುತ್ತವೆ. ಹೆರಿಗೆಯ ಸಂದರ್ಭದ ಮಾನಸಿಕ ಹಾಗೂ ದೈಹಿಕ ತಯಾರಿ ಹೇಗಿರಬೇಕು ಎನ್ನುವುದರ ಬಗ್ಗೆ ತಾಯಿಯಲ್ಲಿ ಮುಕ್ತವಾಗಿ ಕೇಳಿಕೊಳ್ಳಲು ಅನುಕೂಲವಾಗುವುದು.

ಮಾನಸಿಕ ಸಿದ್ಧತೆ ಇರದಿದ್ದರೆ ಏನಾಗುವುದು?

ಸೂಕ್ತ ಮಾನಸಿಕ ಸಿದ್ಧತೆ ಇಲ್ಲದೆ ಇರುವಾಗ ಪ್ರಸವದ ಸಮಯದಲ್ಲಿ ತೊಂದರೆಯನ್ನು ಅನುಭವಿಸಬೇಕಾಗುವುದು. ಮಾನಸಿಕವಾಗಿ ನೀವು ಅಂದುಕೊಂಡ ರೀತಿಯಲ್ಲಿ ಅಪಾಯಗಳು ಇಲ್ಲದೆ ಇರಬಹುದು. ಆದರೆ ಕಲ್ಪನೆಯಲ್ಲಿ ಅಂದುಕೊಂಡಿರುವುದರ ಪರಿಣಾಮ ಭೀತಿ ಹಾಗೂ ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಜೊತೆಗೆ ವೈದ್ಯರ ಮಾತಿಗೆ ಸಹಕರಿಸದೆ ಪ್ರಸವದ ಸಮಯದಲ್ಲಿ ತೊಂದರೆ ಉಂಟಾಗಬಹುದು.

ಸಿದ್ಧತೆ ಇರಲಿ:

ಪ್ರಸವಕ್ಕೆ ಅನುಕೂಲವಾಗುವಂತಹ ಮಾನಸಿಕ ಹಾಗೂ ದೈಹಿಕ ಸಿದ್ಧತೆ ನಡೆಸಿಕೊಳ್ಳುವುದರ ಜೊತೆಗೆ ಮಗುವಿಗೆ ಬೇಕಾಗುವ ಬಟ್ಟೆಗಳು ಹಾಗೂ ಆರೈಕೆ ವಸ್ತುಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು. ಸಕಾರಾತ್ಮಕ ಚಿಂತನೆಗಳಿಂದ ಮಾನಸಿಕವಾಗಿ ಶಾಂತವಾಗಿರಬೇಕು. ಹೆತ್ತವರು ಮತ್ತು ಸಂಗಾತಿಯ ದೂರವಾಣಿಯ ಸಂಖ್ಯೆನ್ನು ಇಟ್ಟುಕೊಂಡಿರುವುದನ್ನು ಮರೆಯಬಾರದು. ಪ್ರಸವದ ನಂತರ ನಿಮಗೆ ಅಗತ್ಯವಾದ ವಸ್ತುಗಳ ಸಿದ್ಧತೆಯನ್ನು ಮಾಡಿಕೊಂಡಿರಬೇಕು.

English summary

What Moms-to-be Think In Their Last Month Of Pregnancy

Pregnancy is a miraculous time that is to be enjoyed and cherished; at the end of which, you will have your baby in your arms. But pregnancy is not a bed of roses. It can be terrifying too, especially towards the end of the pregnancy. No matter how much you prepare yourself, it is still hard to actually believe that there is a baby growing within you. For first-time moms-to-be, who have no idea what to expect in their pregnancy journey, it will be the case of contrasting feelings, all the more. By the time the pregnancy comes to an end, the mothers will have a lot of thoughts that roll through their minds.
X
Desktop Bottom Promotion