For Quick Alerts
ALLOW NOTIFICATIONS  
For Daily Alerts

ಪುಟ್ಟ ಮಗುವನ್ನು ಸುರಕ್ಷಿತವಾಗಿ ಎತ್ತಿಕೊಳ್ಳುವುದು ಹೇಗೆ?

|

ನವಜಾತ ಶಿಶುವಿನ ಪಾಲನೆ, ಪೋಷಣೆ ಮಾಡುವ ಕಾಲಾವಧಿಯು ಮಾನವ ಜೀವನದ ಅತ್ಯಂತ ಸುಮಧುರ ಕಾಲಘಟ್ಟವಾಗಿದೆ. ತನ್ನ ಒಡಲೊಳಗಿನಿಂದ ಮಗುವನ್ನು ಈ ಜಗತ್ತಿಗೆ ತಂದು ಪೋಷಿಸುವುದು ತಾಯಿಯಾದವಳಿಗೆ ಮಧುರ ಅನುಭೂತಿಯನ್ನು ನೀಡುತ್ತದೆ. ತನ್ನದೇ ಆದ ಮಗುವನ್ನು ನೋಡುವುದು ಒಂದು ಬೇರೆಯದೇ ಅನುಭವವನ್ನು ನೀಡುತ್ತದೆ.

ಒಂಬತ್ತು ತಿಂಗಳು ಗರ್ಭದಲ್ಲಿರುವ ಮಗುವಿನೊಂದಿಗೆ ಬೆಳೆದ ಮಾತೃತ್ವದ ಬಾಂಧವ್ಯ ಈಗ ತಂದೆಗೂ ಅನುಭವವಾಗತೊಡಗುತ್ತದೆ. ಇದು ಅತ್ಯಂತ ಆಹ್ಲಾದಕರ ವಾತಾವರಣ ಮೂಡಿಸುವುದರೊಂದಿಗೆ ಸಾಕಷ್ಟು ಜವಾಬ್ದಾರಿಗಳನ್ನು ಸಹ ಹೊತ್ತು ತರುತ್ತದೆ. ನೀವು ಹಾಗೂ ನಿಮ್ಮ ಸಂಗಾತಿ ಜೊತೆಗೂಡಿ ಪುಟ್ಟ ಕಂದನ ಲಾಲನೆ, ಪಾಲನೆ ಮಾಡಬೇಕಾಗುತ್ತದೆ. ಇಲ್ಲಿಂದ ಸಹಜವಾಗಿಯೇ ಪುಟ್ಟ ಕಂದನೇ ಇಬ್ಬರ ಸರ್ವಸ್ವ ಹಾಗೂ ಜಗತ್ತು ಆಗಿ ಬಿಡುತ್ತದೆ.

picking up a newborn under the arms

ನವಜಾತ ಶಿಶುವನ್ನು ಪೋಷಿಸುವುದರಲ್ಲಿ ತಾಯಿ, ತಂದೆ ಇಬ್ಬರೂ ಹಗಲಿರುಳೆನ್ನದೆ ಶ್ರಮ ಪಡುತ್ತಾರೆ. ಇದು ಮಾತೃತ್ವ ಹಾಗೂ ಪಿತೃತ್ವದ ಜವಾಬ್ದಾರಿ ನಿಭಾಯಿಸುವ ದೊಡ್ಡ ಅನುಭವವನ್ನು ನೀಡುತ್ತದೆ. ಆದರೆ ಕೆಲವೊಮ್ಮೆ ಹೇಗಪ್ಪಾ ಪುಟ್ಟ ಮಗುವನ್ನು ಪೋಷಿಸುವುದು ಎಂಬ ಚಿಂತೆಯೂ ಮೂಡಬಹುದು. ಅದರಲ್ಲೂ ಮೊದಲ ಮಗುವಾಗಿದ್ದಾಗ ಇಂಥ ಗೊಂದಲಗಳು ಮೂಡುವುದು ಸಹಜ. ಆದರೆ ಇದರಲ್ಲಿ ಗಾಬರಿಪಡುವಂಥದ್ದೇನೂ ಇಲ್ಲ. ಒಂಚೂರು ತಿಳುವಳಿಕೆ ಪಡೆದುಕೊಂಡರೆ ನೀವು ಸಮರ್ಥವಾಗಿ ಪಾಲಕರ ಜವಾಬ್ದಾರಿಯನ್ನು ನಿಭಾಯಿಸಬಲ್ಲಿರಿ.

ಪುಟ್ಟ ಮಗುವನ್ನು ಹೇಗೆ ಎತ್ತಿಕೊಳ್ಳುವುದು ಎಂಬುದೇ ಹೊಸ ಪಾಲಕರು ಮೊಟ್ಟ ಮೊದಲು ಎದುರಿಸುವ ಸಮಸ್ಯೆ ಆಗಿದೆ. ಈಗ ತಾನೆ ಹುಟ್ಟಿದ ಮಗು ಅತಿ ಸೂಕ್ಷ್ಮವಾಗಿದ್ದು, ನಿಮ್ಮ ಒಂದು ಸಣ್ಣ ತಪ್ಪು ಸಹ ಮಗುವಿನ ಜೀವಕ್ಕೆ ಮಾರಕವಾಗಬಲ್ಲದು. ಅಥವಾ ಕೆಲವೊಮ್ಮೆ ಮಗುವಿಗೆ ಶಾಶ್ವತ ಅಂಗವೈಕಲ್ಯವನ್ನೂ ತರಬಹುದು. ಹೀಗೆ ಏನಾದರೂ ಅಚಾತುರ್ಯ ಸಂಭವಿಸದಂತೆ ತಡೆಗಟ್ಟಲು ಪಾಲಕರು ಮಗುವಿನ ಪೋಷಣೆಯ ಬಗ್ಗೆ ಪ್ರಮುಖ ಮಾಹಿತಿಗಳನ್ನು ಅರಿತುಕೊಳ್ಳುವುದು ಒಳ್ಳೆಯದು. ಪುಟ್ಟ ಮಗುವನ್ನು ಸುರಕ್ಷಿತವಾಗಿ ಎತ್ತಿಕೊಳ್ಳುವುದು ಹೇಗೆ ಎಂಬ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

- ಮಗುವಿನ ದೇಹರಚನೆ ಅರ್ಥ ಮಾಡಿಕೊಳ್ಳಿ
- ಮಗುವಿನೊಂದಿಗೆ ಸಂಭಾಷಿಸಿ
- ಕುತ್ತಿಗೆಯನ್ನು ಅಂಗೈನಿಂದ ಕವರ್ ಮಾಡಿ
- ಬೆನ್ನ ಕೆಳಗೆ ಅಂಗೈನಿಂದ ಕವರ್ ಮಾಡಿ
- ಮಗುವನ್ನು ಮರಳಿ ಹಾಸಿಗೆಯಲ್ಲಿ ಮಲಗಿಸುವುದು

ಮಗುವಿನ ದೇಹರಚನೆ ಅರ್ಥ ಮಾಡಿಕೊಳ್ಳಿ

ಮಗು ಹುಟ್ಟಿದಾಕ್ಷಣ ಕುತ್ತಿಗೆಯ ಮೇಲ್ಭಾಗದಲ್ಲಿ ಅದಕ್ಕೆ ಯಾವುದೇ ಸ್ನಾಯುವಿನ ನಿಯಂತ್ರಣ ಇರುವುದಿಲ್ಲ. ಹೀಗಾಗಿ ತಲೆಯ ಭಾಗ ಅತ್ಯಂತ ದುರ್ಬಲ ಭಾಗವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮಗುವಿನ ಕುತ್ತಿಗೆ ಹಾಗೂ ತಲೆಗೆ ಯಾವಾಗಲೂ ಕೈಯಿಂದ ಸಪೋರ್ಟ್ ನೀಡುವುದು ಅತಿ ಅಗತ್ಯ. ಮಗು ಮಲಗಿದಾಗ ಸಹಜವಾಗಿ ಹಾಸಿಗೆಯು ತಲೆಗೆ ಸಪೋರ್ಟ್ ಮಾಡುತ್ತದೆ. ಆದರೆ ಯಾರಾದರೂ ಎತ್ತಿಕೊಂಡಾಗ, ಹಾಲೂಡಿಸಲು ತಾಯಿ ಎತ್ತಿ ಕೊಳ್ಳುವ ಸಂದರ್ಭದಲ್ಲಿ ತಲೆಗೆ ಸಪೋರ್ಟ್ ಇಲ್ಲವಾಗುತ್ತದೆ. ಹಾಗಾಗಿ ಎಲ್ಲ ಸಮಯದಲ್ಲಿಯೂ ಅಂಗೈಗಳ ಸಹಾಯದಿಂದ ತಲೆ ಹಾಗೂ ಕುತ್ತಿಗೆಗೆ ಸಪೋರ್ಟ್ ನೀಡಬೇಕಾಗುತ್ತದೆ. ಶಿಶುವಿನ ದೇಹರಚನೆ ತಿಳಿದ ನಂತರ ಈಗ ಶಿಶುವನ್ನು ಸುರಕ್ಷಿತವಾಗಿ ಎತ್ತಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ.

ನಿಮ್ಮ ಮಗುವಿನೊಂದಿಗೆ ಸಂಭಾಷಿಸಿ

ನವಜಾತ ಶಿಶುವಿಗೆ ಮಾತುಗಳು ಅರ್ಥವಾಗುವುದಿಲ್ಲವಾದ್ದರಿಂದ ಮಾತಾಡುವುದು ವ್ಯರ್ಥ ಎಂದು ಕೆಲ ಪಾಲಕರ ಭಾವನೆಯಾಗಿರುತ್ತದೆ. ಆದರೆ ಮಗು ನಮ್ಮ ಭಾವನೆಗಳನ್ನು ಹಾಗೂ ಧ್ವನಿಯನ್ನು ಗ್ರಹಿಸುವ ಶಕ್ತಿಯನ್ನು ಹೊಂದಿರುತ್ತದೆ. ಅದರಲ್ಲೂ ತಾಯಿಯ ಮಾತನ್ನು ಮಗು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತದೆ ಎಂಬುದು ಗೊತ್ತಿರಲಿ. ಹಿತವಾದ ಧ್ವನಿಯ ಮೂಲಕ ಮಗುವಿನೊಂದಿಗೆ ಮಾತಾಡಿ. ನೋಡುತ್ತಿದ್ದಂತೆಯೇ ಮಗು ನಿಮ್ಮ ಧ್ವನಿಯನ್ನು ಗುರುತಿಸಲು ಆರಂಭಿಸುವುದು ಹಾಗೂ ಮಾತಾಡಿದ ತಕ್ಷಣ ನೆಮ್ಮದಿ ಪಡೆಯಲಾರಂಭಿಸುವುದನ್ನು ನೋಡಿದರೆ ನೀವು ಅಚ್ಚರಿಗೊಳಗಾಗುವಿರಿ.

ಪ್ರತಿ ಬಾರಿ ಮಗುವನ್ನು ಎತ್ತಿಕೊಳ್ಳುವ ಮೊದಲು ಮಗುವಿನೊಂದಿಗೆ ಕೆಲ ನಿಮಿಷ ಮಾತನಾಡಿ. ಇದು ಮಗುವಿಗೆ ಒಂದು ರೀತಿಯ ಹಿತವಾದ ಹಾಗೂ ಭದ್ರತೆಯ ಭಾವನೆಯನ್ನು ಮೂಡಿಸುತ್ತದೆ. ಇದರಿಂದ ನಿಮ್ಮ ಅಪ್ಪುಗೆಯನ್ನು ಮಗು ಗುರುತಿಸುತ್ತದೆ ಹಾಗೂ ಮಗುವಿನ ಮನದಲ್ಲಿ ಸುರಕ್ಷತೆಯ ಭಾವನೆ ಮೂಡಿಸುತ್ತದೆ. ಇದು ನೀವು ಮುಟ್ಟಿದಾಕ್ಷಣ ಮಗು ನಿಮ್ಮನ್ನು ಗುರುತಿಸಲು ಸಹಾಯವಾಗುತ್ತದೆ. ಈ ವಿಧಾನಗಳನ್ನು ಅನುಸರಿಸುವುದರಿಂದ ಮಗುವನ್ನೆತ್ತಿಕೊಳ್ಳುವ ಕೆಲಸ ಸುಲಭವಾಗುತ್ತದೆ, ಜೊತೆಗೆ ಮಗುವಿಗೂ ಹಿತಕರವಾಗುತ್ತದೆ.

ಕುತ್ತಿಗೆಯನ್ನು ಅಂಗೈನಿಂದ ಕವರ್ ಮಾಡಿ

ಅಂಗೈ ಬಳಸುವುದು ಮಗುವನ್ನೆತ್ತಿಕೊಳ್ಳುವ ಸಂದರ್ಭದಲ್ಲಿ ಮಾಡಬೇಕಾದ ಮೊದಲ ಕೆಲಸವಾಗಿದೆ. ನಿಧಾನವಾಗಿ ಅಂಗೈಯನ್ನು ಮಗುವಿನ ಕುತ್ತಿಗೆಯ ಕೆಳಗೆ ಜರುಗಿಸಿ. ನೀವು ಬಲಗೈನವರಾಗಿದ್ದರೆ ಬಲಗೈ ಅಥವಾ ಎಡಗೈನವರಾಗಿದ್ದರೆ ಎಡಗೈ ಬಳಸಿ. ಈಗ ಮಗುವಿನ ಸಂಪೂರ್ಣ ಕುತ್ತಿಗೆಯನ್ನು ನಿಮ್ಮ ಅಂಗೈ ಕವರ್ ಮಾಡಿರುವಂತೆ ನೋಡಿಕೊಳ್ಳಿ. ಈ ಸಂದರ್ಭದಲ್ಲಿ ಏನಾದರೂ ನಿರ್ಲಕ್ಷ್ಯ ಮಾಡಿದರೆ ಮಗುವಿಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ ಎಂಬುದು ಸದಾ ಗಮನದಲ್ಲಿರಲಿ.

ಬೆನ್ನ ಕೆಳಗೆ ಅಂಗೈನಿಂದ ಕವರ್ ಮಾಡಿ

ಈಗ ನಿಮ್ಮ ಇನ್ನೊಂದು ಅಂಗೈಯನ್ನು ನಿಧಾನವಾಗಿ ಬೆನ್ನಿನ ಕೆಳಗೆ ಜರುಗಿಸಿ. ಈಗ ಸುರಕ್ಷಿತವಾಗಿ ಮಗುವನ್ನೆತ್ತಿಕೊಳ್ಳುವ ಭಂಗಿಯಲ್ಲಿ ನೀವಿರುತ್ತೀರಿ. ಈಗ ನಿಧಾನವಾಗಿ ಮಗುವನ್ನೆತ್ತಿಕೊಂಡು ಎದೆಗವಚಿಕೊಳ್ಳಿ. ಈ ಸ್ಥಿತಿಯಲ್ಲಿ ಮಗು ಅತ್ಯಂತ ಸುರಕ್ಷಿತವಾಗಿರುತ್ತದೆ. ಬಹಳ ಹೊತ್ತಿನವರೆಗೆ ಬೇಕಾದರೂ ಹೀಗೆ ಮಗುವನ್ನು ಎತ್ತಿಕೊಂಡಿದ್ದರೂ ಮಗು ಆರಾಮವಾಗಿರುತ್ತದೆ.

ಮಗುವನ್ನು ಮರಳಿ ಹಾಸಿಗೆಯಲ್ಲಿ ಮಲಗಿಸುವುದು

ಮಗುವನ್ನು ಮರಳಿ ಹಾಸಿಗೆಯಲ್ಲಿ ಮಲಗಿಸುವಾಗ ಎತ್ತಿಕೊಳ್ಳುವ ಕ್ರಿಯೆಯನ್ನು ರಿವರ್ಸ್ ಆಗಿ ಮಾಡಬೇಕಾಗುತ್ತದೆ. ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿದಾಗ ಮಗುವಿನ ಸಂಪೂರ್ಣ ದೇಹ ಹಾಸಿಗೆಗೆ ಟಚ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈಗ ನಿಧಾನವಾಗಿ ಬೆನ್ನ ಕೆಳಗಿನ ಕೈಯನ್ನು ಹೊರತೆಗೆಯಬಹುದು. ನಂತರ ಕುತ್ತಿಗೆಗೆ ಸಪೋರ್ಟ್ ನೀಡಿದ ಕೈಯನ್ನು ನಿಧಾನವಾಗಿ ತೆಗೆಯಿರಿ. ಮಗುವಿನ ಕುತ್ತಿಗೆ, ತಲೆಯ ಭಾಗ ಅತ್ಯಂತ ಸೂಕ್ಷ್ಮವಾಗಿರುವುದರಿಂದ ತಲೆ ಹಾಗೂ ಕುತ್ತಿಗೆ ಹಾಸಿಗೆಗೆ ಸಂಪೂರ್ಣವಾಗಿ ಟಚ್ ಆಗಿರುವುದನ್ನು ಖಚಿತ ಪಡಿಸಿಕೊಂಡ ಮೇಲೆಯೇ ಆ ಕೈಯನ್ನು ತೆಗೆಯಬೇಕಾಗುತ್ತದೆ ಎಂಬುದು ಗಮನದಲ್ಲಿರಲಿ.

ನವಜಾತ ಶಿಶುವಿನ ಆರೈಕೆಯಲ್ಲಿ ಸುರಕ್ಷತೆಯೇ ಮೊದಲ ಆದ್ಯತೆಯಾಗಿರುತ್ತದೆ. ಈಗ ತಾನೆ ಜಗತ್ತಿಗೆ ಕಾಲಿಟ್ಟ ಮಗುವಿನ ಸುರಕ್ಷತೆಗೆ ಎಷ್ಟು ಗಮನ ನೀಡುತ್ತೇವೆಯೋ ಅಷ್ಟು ಒಳ್ಳೆಯದು. ಎತ್ತಿಕೊಳ್ಳುವಾಗ, ಬಟ್ಟೆ ಬದಲಾಯಿಸುವಾಗ, ಸ್ನಾನ ಮಾಡಿಸುವಾಗ ಮುಂತಾದ ಸಂದರ್ಭಗಳಲ್ಲಿ ಮಗುವಿಗೆ ಯಾವುದೇ ನೋವಾಗದಂತೆ, ಅಪಾಯವಾಗದಂತೆ ಎಚ್ಚರಿಕೆ ವಹಿಸುವುದು ತಂದೆ, ತಾಯಿ ಅಥವಾ ಪೋಷಕರ ಕರ್ತವ್ಯವಾಗಿರುತ್ತದೆ. ಇಲ್ಲಿ ತಿಳಿಸಲಾದ ಸುರಕ್ಷತಾ ಕ್ರಮಗಳಲ್ಲದೆ ಇನ್ನೂ ಹಲವಾರು ಸುರಕ್ಷತೆಯ ವಿಧಾನಗಳನ್ನು ಅರಿತುಕೊಂಡು ಮಗುವನ್ನು ಸುರಕ್ಷಿತವಾಗಿ ಪಾಲನೆ, ಪೋಷಣೆ ಮಾಡಿ.

English summary

How To Pick Up A Newborn Baby?

Parenthood is one of the most blessed periods of a person's life. Carrying a child within you is indeed a miraculous experience for most mothers. However, having the child right in front of you is a whole new experience altogether. At this point, the bond that you experienced over the past nine months is shared by your partner as well. While this is indeed a pleasant experience, the fact is that this simple act brings in an entire surge of responsibilities.
Story first published: Tuesday, August 14, 2018, 12:23 [IST]
X
Desktop Bottom Promotion