For Quick Alerts
ALLOW NOTIFICATIONS  
For Daily Alerts

ಸಿ ಸೆಕ್ಷನ್ ಬಳಿಕ ಬಾಣಂತಿಯರು ಹೇಗೆ ಮಲಗಬೇಕು?

|

ಗರ್ಭಾವಸ್ಥೆಯ ಗರ್ಭಿಣಿಯ ದೇಹದ ಮೇಲೆ ಹಲವಾರು ಪರಿಣಾಮಗಳನ್ನೂ ಅಪಾರ ನೋವನ್ನೂ ತಂದಿರುತ್ತದೆ ಹಾಗೂ ಹೆರಿಗೆಯ ಬಳಿಕ ದೇಹ ಅತಿಯಾಗಿ ನಿತ್ರಾಣವಾಗುತ್ತದೆ. ಈ ನಿತ್ರಾಣವನ್ನು ಕೇವಲ ಸಮಯ ಮತ್ತು ಸಾಕಷ್ಟು ವಿಶ್ರಾಂತಿ ಮಾತ್ರವೇ ಸರಿಪಡಿಸಬಲ್ಲುದು. ಒಂದು ವೇಳೆ ಸಹಜ ಹೆರಿಗೆಯಾಗದೇ ಸಿಸರೇನಿಯನ್ ಅಥವಾ ಸಿ-ಸೆಕ್ಷನ್ ಹೆರಿಗೆಯಾಗಿದ್ದರೆ ಸಾಮಾನ್ಯ ಹೆರಿಗೆಗಿಂತಲೂ ಹೆಚ್ಚಿನ ಕಾಳಜಿ ಮತ್ತು ಆರೈಕೆಯ ಅವಶ್ಯಕತೆ ಇರುತ್ತದೆ ಹಾಗೂ ಕೆಳಹೊಟ್ಟೆಯಲ್ಲಿ ಮಾಡಲಾಗಿರುವ ಶಸ್ತ್ರಚಿಕಿತ್ಸೆಯ ಗಾಯ ಮಾಗಿ ಮೊದಲಿನಂತಾಗಲು ಸಾಕಷ್ಟು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಈ ಮರುಚೇತರಿಕೆಗೆ ಬಾಣಂತದಲ್ಲಿ ಹೆಚ್ಚಿನ ಆರಾಮ ಅಗತ್ಯವಾಗಿದೆ ಹಾಗೂ ಆರೋಗ್ಯವನ್ನು ವೃದ್ದಿಸಿಕೊಂಡು ಹಾಲೂಡುತ್ತಿರುವ ಮಗುವಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ಹೆರಿಗೆ ಮತ್ತು ಬಾಣಂತನದ ಬಗ್ಗೆ ಹಲವಾರು ಅಗತ್ಯ ಮಾಹಿತಿಗಳನ್ನು ಒದಗಿಸುತ್ತಿರುವ ಬೋಲ್ಡ್ ಸ್ಕೈ ತಾಣದ ಈ ಲೇಖನ ಬಾಣಂತಿಯರಿಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಈ ಮೂಲಕ ಸಿಸೇರಿಯನ್ ಹೆರಿಗೆಯ ಬಳಿಕ ಬಾಣಂತಿ ಪಡೆಯಬೇಕಾದ ನಿದ್ದೆ ಪರಿಣಾಮಕಾರಿಯಾಗಿ ಪಡೆಯುವುದನ್ನು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ.

ಸಿಸರೇನಿಯನ್ ಹೆರಿಗೆಯಾದ ತಕ್ಷಣ ಬಲಮಗ್ಗುಲಿಗೆ ಮಲಗಬೇಕಾದ ಮಹತ್ವ

ಸಿಸರೇನಿಯನ್ ಹೆರಿಗೆಯಾದ ತಕ್ಷಣ ಬಲಮಗ್ಗುಲಿಗೆ ಮಲಗಬೇಕಾದ ಮಹತ್ವ

ಸಿಸರೇನಿಯನ್ ಹೆರಿಗೆಯಲ್ಲಿ ಶಸ್ತ್ರಚಿಕಿತ್ಸೆಯಾಗಿರುವ ಭಾಗದ ಮೇಲೆ ಯಾವುದೇ ಒತ್ತಡ ಅಥವಾ ಭಾರ ಬೀಳದಂತೆ ಮಲಗಬೇಕಾದುದು ಅಗತ್ಯವಾಗಿದೆ. ಬಲಮಗ್ಗುಲಲ್ಲಿ ಮಲಗುವುದರಿಂದ ಮಾತ್ರವೇ ಇದು ಸಾಧ್ಯವಾಗುತ್ತದೆ. ಅಲ್ಲದೇ ಹಾಸಿಗೆಯಿಂದ ಏಳಬೇಕಾದಾಗಲೂ ಈ ಭಾಗದ ಮೇಲೆ ಯಾವುದೇ ಒತ್ತಡ ಬೀಳದಿರಲು ಸಾಧ್ಯವಾಗುತ್ತದೆ. ಅಲ್ಲದೇ ಸರಾಗವಾಗಿ ಉಸಿರಾಡಲು ಮತ್ತು ಗಾಢ ನಿದ್ದೆ ಪಡೆಯಲು ಸಾಧ್ಯವಾಗುತ್ತದೆ. ಈ ಭಂಗಿಯಲ್ಲಿ ಹೊಟ್ಟೆಯ ಸ್ನಾಯುಗಳಿಗೆ ನೀಡುವ ಒತ್ತಡವನ್ನು ಕಡಿಮೆಯಾಗಿಸಬಹುದು ಹಾಗೂ ಶಸ್ತ್ರಚಿಕಿತ್ಸೆಯ ಗಾಯ ತೆರೆದುಕೊಳ್ಳುವ ಸಾಧ್ಯತೆಯನ್ನು ಇಲ್ಲವಾಗಿಸಬಹುದು.

ಸಿಸರೇನಿಯನ್ ಹೆರಿಗೆಯ ಬಳಿಕ ನಿದ್ದೆ ಮಾಡುವುದು ಕಷ್ಟ, ಏಕೆ?

ಸಿಸರೇನಿಯನ್ ಹೆರಿಗೆಯ ಬಳಿಕ ನಿದ್ದೆ ಮಾಡುವುದು ಕಷ್ಟ, ಏಕೆ?

ಗರ್ಭಾವಸ್ಥೆಯ ಈ ದೀರ್ಘ ಅವಧಿಯಲ್ಲಿ ಗರ್ಭಿಣಿಯ ದೇಹದಲ್ಲಿ ಹಲವಾರು ರಸದೂತಗಳು ಸ್ರವಿಸಿ ಹೊಸಜೀವ ಈ ಭೂಮಿಯ ಮೇಲೆ ಬಂದಿರುವಂತೆ ಮಾಡಿರುತ್ತವೆ. ಸ್ವಾಭಾವಿಕವಾಗಿಯೇ ಸೊಂಟದ ಭಾಗದಲ್ಲಿ ಹೆಚ್ಚಿನ ಕೊಬ್ಬು ತುಂಬಿಕೊಳ್ಳುತ್ತದೆ. ಬಾಣಂತನದ ಅವಧಿಯಲ್ಲಿ ಗರ್ಭಾವಸ್ಥೆಯಲ್ಲಿ ನಡೆದಿದ್ದ ಹಲವಾರು ಕಾರ್ಯಗಳು ಹಿಮ್ಮುಖವಾಗಿ ನಡೆಯಬೇಕು. ಈ ಕಾರ್ಯದಲ್ಲಿ ಶ್ವಾಸನಾಳಗಳಲ್ಲಿ ಕೊಂಚ ತಡೆ ಕಾಣಬರುತ್ತದೆ. ಈ ಸ್ಥಿತಿಯನ್ನು ವೈದ್ಯರು Obstructive Sleep Apnea (OSA) ಅಥವಾ ನಿದ್ದೆಯಲ್ಲಿ ಉಸಿರುಗಟ್ಟುವ ತೊಂದರೆ ಎಂದು ಕರೆಯುತ್ತಾರೆ. ದಿನದ ಇತರ ಸಮಯದಲ್ಲಿ ಬಾಧಿಸದ ಈ ತೊಂದರೆ ನಿದ್ದೆಯಲ್ಲಿಯೇ ಹೆಚ್ಚಾಗಿ ಬಾಧಿಸುತ್ತದೆ. ಅತ್ತ ಹೆರಿಗೆಯ ನೋವು, ಇತ್ತ ಉಸಿರಾಟ ಸರಾಗವಾಗಿ ಆಗುತ್ತಿಲ್ಲ ನಡು ನಡುವೆ ಮಗುವಿನ ಕಾಳಜಿ ವಹಿಸಬೇಕು, ಇವೆಲ್ಲಾ ಬಾಣಂತಿಯ ನಿದ್ದೆಯನ್ನು ಭಂಗಗೊಳಿಸುತ್ತಾ ಇರುತ್ತವೆ.

ಸಿಸರೇನಿಯನ್ ಹೆರಿಗೆಯಾದ ಬಳಿಕ ಬಾಣಂತಿ ಪವಡಿಸಬಹುದಾದ ಸುರಕ್ಷಿತ ಭಂಗಿಗಳು ಯಾವುವು?

ಸಿಸರೇನಿಯನ್ ಹೆರಿಗೆಯಾದ ಬಳಿಕ ಬಾಣಂತಿ ಪವಡಿಸಬಹುದಾದ ಸುರಕ್ಷಿತ ಭಂಗಿಗಳು ಯಾವುವು?

ಒಂದೇ ಮಗ್ಗುಲಲ್ಲಿ ಹೆಚ್ಚು ಹೊತ್ತು ಮಲಗಿದ್ದರೆ ಇತರ ತೊಂದರೆಗಳು ಎದುರಾಗಬಹುದು. ಹಾಗಾಗಿ ಹೆಚ್ಚು ತೊಂದರೆ ಕೊಡದ ಕೆಲವು ಭಂಗಿಗಳನ್ನು ಇಲ್ಲಿ ವಿವರಿಸಲಾಗಿದ್ದು

ಇವುಗಳಲ್ಲಿ ಬಾಣಂತಿ ತನಗೆ ಯಾವುದು ಅತಿ ಹೆಚ್ಚು ಸೂಕ್ತವೋ ಅದನ್ನು ಅನುಸರಿಸಬಹುದು ಹಾಗೂ ಆಗಾಗ ಇವುಗಳನ್ನು ಬದಲಾಯಿಸಿಕೊಳ್ಳುತ್ತಲೂ ಇರಬಹುದು.

ಬೆನ್ನ ಮೇಲೆ ಮಲಗುವುದು:

ಬೆನ್ನ ಮೇಲೆ ಮಲಗುವುದು:

ಸಿಸೇರಿಯನ್ ಹೆರಿಗೆಯ ಬಳಿಕ ಮತ್ತು ಕೆಲವು ವಾರಗಳವರೆಗೆ ಹಾಸಿಗೆಯಲ್ಲಿ ಬೆನ್ನ ಮೇಲೆ ಮಲಗುವುದು ಬಾಣಂತಿಗೆ ಆರಾಮದಾಯಕವಾಗಿರುತ್ತದೆ. ಈ ಭಂಗಿಯಲ್ಲಿ ಹೆರಿಗೆಯ ಗಾಯದ ಮೇಲೆ ಯಾವುದೇ ಒತ್ತಡ ಬೀಳುವುದಿಲ್ಲ. ಆದರೆ ಹೀಗೆ ಮಲಗಿದ್ದಾಗ ಮೊಣಕಾಲುಗಳ ಕೆಳಗೆ ಚಿಕ್ಕ ದಿಂಬುಗಳನ್ನಿರಿಸಿಕೊಳ್ಳಬೇಕು. ಇದರಿಂದ ಹೆಚ್ಚಿನ ಆರಾಮ ದೊರಕುತ್ತದೆ. ದಿಂಬು ಇಲ್ಲದಿದ್ದರೆ ಕಾಲುಗಳು ಪೂರ್ಣವಾಗಿ ಸೆಳೆತಕ್ಕೊಳಗಾಗುತ್ತವೆ ಹಾಗೂ ಹೊಟ್ಟೆಯ ಕೆಳಭಾಗಕ್ಕೆ ಕೊಂಚವೇ ಸೆಳೆತ ನೀಡುತ್ತದೆ. ಆದರೆ ಈ ಭಂಗಿಯಲ್ಲಿ ಮಲಗಿದ್ದಾಗ ಹಾಸಿಗೆಯಿಂದ ಎದ್ದು ಅಗತ್ಯ ಕಾರ್ಯಗಳಿಗೆ ಹೋಗಲು ಕಷ್ಟವಾಗುತ್ತದೆ. ಹಾಗಾಗಿ ಜೊತೆಗೊಬ್ಬರು ನೆರವು ನೀಡಲು ಇದ್ದರೆ ಒಳ್ಳೆಯರು. ಅಲ್ಲದೇ ಕೊಂಚವೇ ಒತ್ತಡ ಹೊಟ್ಟೆಯ ಮೇಲೆ ಬಿದ್ದರೂ ಗಾಯ ತೆರೆದುಕೊಳ್ಳುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಬಾಣಂತಿಯ ರಕ್ತದೊತ್ತಡ ಸಾಮಾನ್ಯವಿಲ್ಲದಿದ್ದರೆ ಈ ಭಂಗಿ ಸೂಕ್ತವಲ್ಲ. ಈ ಭಂಗಿಯಲ್ಲಿ ಮಲಗಿದ್ದಾಗ ನೇರವಾಗಿ ಏಳದೇ ಮೊದಲು ಬಲಮಗ್ಗುಲಿಗೆ ತಿರುಗಿಕೊಂಡು ಸಾವಕಾಶವಾಗಿ ಹೊಟ್ಟೆಯ ಮೇಲೆ ಯಾವುದೇ ಒತ್ತಡ ಬಾರದಂತೆ ನಿಧಾನವಗಿ ಮಂಚದ ಮೇಲೆ ಕುಳಿತು ಬಳಿಕ ಇಳಿಯಬೇಕು.

ಬಲಮಗ್ಗುಲಲ್ಲಿ ಮಲಗುವುದು

ಬಲಮಗ್ಗುಲಲ್ಲಿ ಮಲಗುವುದು

ಹೆರಿಗೆಯ ಬಳಿಕ ಈ ಭಂಗಿಯೇ ಅತಿ ಸುರಕ್ಷಿತವಾದ ಮಲಗುವ ಭಂಗಿಯಾಗಿದೆ. ಇದರಿಂದ ಗಾಯವಾಗಿರುವ ಭಾಗದ ಮೇಲೆ ಯಾವುದೇ ಒತ್ತಡ ಬೀಳುವುದಿಲ್ಲ ಹಾಗೂ ಮಂಚದಿಂದ ಎದ್ದು ಹೋಗಲು ಮತ್ತು ಹಿಂದಿರುಗಿ ಮಲಗಲು ಅತಿ ಕಡಿಮೆ ನೋವು ಎದುರಾಗುತ್ತದೆ. ಆದರೆ ಇದಕ್ಕೆ ವಿರುದ್ದವಾದ ಅಂದರೆ ಎಡಮಗ್ಗುಲಲ್ಲಿ ಮಲಗುವ ಭಂಗಿಯಲ್ಲಿ ಜೀರ್ಣಕ್ರಿಯೆ ಮತ್ತು ರಕ್ತಪರಿಚಲನೆಗೆ ಹೆಚ್ಚಿನ ನೆರವು ದೊರಕುತ್ತದಾದರೂ ಗಾಯದ ಮೇಲೆ ಒಳ ಅಂಗಗಳ ಭಾರ ಹೆಚ್ಚಾಗಿ ಬೀಳುತ್ತದೆ. ಹಾಗಾಗಿ ಈ ಭಂಗಿಯಲ್ಲಿ ಅಗತ್ಯವಿಲ್ಲದೇ ಮಲಗಬಾರದು ಬೇರೆ ಭಂಗಿಗಳಲ್ಲಿ ಮಲಗಿ ದೇಹದ ಆ ಭಾಗ ಜೋಮು ಹಿಡಿದಾಗ ಬದಲಾವಣೆಗಾಗಿ ಎಡಮಗ್ಗುಲಲ್ಲಿ ಮಲಗಬಹುದು. ಆದರೆ ಈ ಸಮಯದಲ್ಲಿ ಹೊಟ್ಟೆಯ ಭಾಗಕ್ಕೆ ಮತ್ತು ಹಿಂಭಾಗದ ಕೆಳಗೆ ಸಾಕಷ್ಟು ದಿಂಬುಗಳನ್ನಿರಿಸಿ ದೇಹಕ್ಕೆ ಹೆಚ್ಚಿನ ಆಧಾರವನ್ನು ಒದಗಿಸಬೇಕು. ಒಂದು ವೇಳೆ ಬಾಣಂತಿಗೆ ರಕ್ತದ ಒತ್ತಡದ ತೊಂದರೆ ಇದ್ದರೆ ಈ ಭಂಗಿ ಆಕೆಗೆ ಹೆಚ್ಚು ಸೂಕ್ತವಾಗಿರುತ್ತದೆ.

ದೇಹದ ಮೇಲ್ಭಾಗವನ್ನು ಕೊಂಚ ಮೇಲಕ್ಕೆತ್ತಿರುವ ಭಂಗಿ: ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿರುವ ಮಂಚದಲ್ಲಿ ಸೊಂಟದ ಮೇಲ್ಭಾಗವನ್ನು ಸಾಕಷ್ಟು ಮೇಲೆ ಎತ್ತುವಂತೆ ಮಾಡುವ ವ್ಯವಸ್ಥೆ ಇರುತ್ತದೆ. ಆದರೆ ಈ ವ್ಯವಸ್ಥೆ ಮನೆಯಲ್ಲಿರುವ ಮಂಚಗಳಲ್ಲಿ ಇರುವುದಿಲ್ಲವಾದ್ದರಿಂದ ಬೆನ್ನ ಹಿಂದೆ ಕೆಲವಾರು ದಿಂಬುಗಳನ್ನು ಬಳಸಿ ಸೊಂಟದ ಮೇಲ್ಭಾಗವನ್ನು ಕೊಂಚ ಮೆಲೆ ಇರಿಸುವಂತೆ ಮಲಗಬಹುದು. ಇದರಿಂದ ಉಸಿರಾಟ ಸರಾಗವಾಗುತ್ತದೆ ಹಾಗೂ ನಿದ್ದೆಯೂ ತಡೆಯಿಲ್ಲದೇ ಇರುತ್ತದೆ. ಒಂದು ವೇಳೆ ಬಾಣಂತಿಗೆ OSA ತೊಂದರೆ ಇದ್ದರೆ ಈ ಭಂಗಿ ಹೆಚ್ಚು ಸೂಕ್ತವಾಗಿದೆ. ಒಂದು ವೇಳೆ ಬಾಣಂತಿಗೆ ಈ ಭಂಗಿ ಅನುಕೂಲಕರ ಎನಿಸದಿದ್ದಲ್ಲಿ ಹಿಂಭಾಗದ ಕೆಳಗೆ ಮತ್ತು ಮೊಣಕಾಲುಗಳ ಕೆಳಗೂ ದಿಂಬುಗಳನ್ನಿರಿಸಿಕೊಳ್ಳಬಹುದು.

ಕುಳಿತುಕೊಂಡಿರುವ ಭಂಗಿ:

ಕುಳಿತುಕೊಂಡಿರುವ ಭಂಗಿ:

ಒಂದು ವೇಳೆ ಮೇಲಿನ ಯಾವುದೇ ಭಂಗಿಯಲ್ಲಿ ಬಾಣಂತಿಗೆ ಆರಾಮ ಎನಿಸದೇ ಇದ್ದರೆ ಆಕೆ ಆರಾಮ ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಂಗಿಯನ್ನು ಅನುಸರಿಸಬಹುದು. ಆಕೆಗೆ ಆಧಾರ ನೀಡಲು ಕೆಲವಾರು ದಿಂಬುಗಳೇ ಬೇಕಾಗಬಹುದು. ಆದರೆ ಈ ಭಂಗಿ ತಾತ್ಕಾಲಿಕವಾಗಿರಬೇಕೇ ವಿನಃ ಹೆಚ್ಚು ಹೊತ್ತು ಹೀಗೆ ಕುಳಿತಿರಬಾರದು. ಬಾಣಂತಿ ತನ್ನ ಮಗುವಿಗೆ ಹಾಲೂಡಿಸಲು ಈ ಭಂಗಿ ಅತ್ಯುತ್ತಮವಾಗಿದೆ. ಅಲ್ಲದೇ ಮಲಗಿ ಎದ್ದ ಬಳಿಕವೂ ಕೊಂಚ ಹೊತ್ತು ಕುಳಿತುಕೊಳ್ಳುವುದು ಒಳ್ಳೆಯದು. ಈ ಕ್ರಮದಿಂದ ಹೆರಿಗೆಯಾದ ನಂತರದ ಎರಡು ವಾರಗಳವರೆಗೆ ಆರಾಮ ಕುರ್ಚಿಗಳಿಂದ ಬಾಣಂತಿ ತನಗೆ ಅಗತ್ಯವಾಗಿರುವ ವಿಶ್ರಾಂತಿಯನ್ನು ನೀಡಬಹುದು.

 ನಿದ್ದೆಯನ್ನು ಉತ್ತಮಗೊಳಿಸಲು ಕೆಲವು ಸಲಹೆಗಳು:

ನಿದ್ದೆಯನ್ನು ಉತ್ತಮಗೊಳಿಸಲು ಕೆಲವು ಸಲಹೆಗಳು:

ಹೆರಿಗೆಯ ಬಳಿಕ ಬಾಣಂತಿಗೆ ಆದಷ್ಟೂ ಹೆಚ್ಚು ನಿದ್ದೆಯ ಅವಶ್ಯಕತೆ ಇರುತ್ತದೆ. ಇದರಿಂದ ಶೀಘ್ರ ಸಮಯದಲ್ಲಿ ಚೇತರಿಸಿಕೊಳ್ಳಬಹುದು. ಬಾಣಂತಿಯ ನಿದ್ದೆ ಉತ್ತಮಗೊಳ್ಳಲು ಹೀಗೆ ಮಾಡಬಹುದು:

* ನಿಮ್ಮ ವೈದ್ಯರು ನೀಡಿರುವ ನೋವು ನಿವಾರಕಗಳನ್ನು ಮಾತ್ರವೇ ಸೇವಿಸಿ. ನಿಮಗೆ ನಿದ್ದೆಯ ಕೊರತೆ ಇದೆ ಎಂದು ವೈದ್ಯರು ಗಮನಿಸಿದರೆ ಸೂಕ್ತ ಔಷಧಿಯನ್ನು ಅವರೇ ಸೂಚಿಸುತ್ತಾರೆ. ವೈದ್ಯರ ಸಲಹೆಯ ಹೊರತಾಗಿ ಯಾವುದೇ ಕಾರಣಕ್ಕೂ ಬೇರೆ ಔಷಧಿಗಳನ್ನಾಗಲೀ ಮನೆಮದ್ದುಗಳನ್ನಾಗಲೀ ಸೇವಿಸದಿರಿ. ಇದು ಕೇವಲ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲ, ನಿಮ್ಮ ಎದೆಹಾಲಿನ ಮೂಲಕ ಮಗುವಿನ ಆರೋಗ್ಯವನ್ನೂ ಬಾಧಿಸಬಹುದು ಹಾಗೂ ಮಗುವಿನ ಮಾನಸಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರಬಹುದು.

* ವೈದ್ಯರ ಅನುಮತಿಯ ಜೊತೆಗೇ ನಿಮಗೆ ಸಾಧ್ಯವಾಗುವ ಲಘು ವ್ಯಾಯಾಮಗಳನ್ನು ಮಾಡಿ. ಕಾಲುಗಳಿಗೆ ಸೆಳೆತ ನೀಡುವ ವ್ಯಾಯಾಮಗಳು ಮತ್ತು ಲಘು ನಡಿಗೆಯ ಮೂಲಕ ನಿಮ್ಮ ದೇಹದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಸ್ನಾಯುಗಳನ್ನು ಬಲಪಡಿಸಿ ಚೇತರಿಕೆಯನ್ನು ಶೀಘ್ರವಾಗಿಸುವ ಜೊತೆಗೇ ಮಾನಸಿಕ ನಿರಾಳತೆಯನ್ನೂ ನೀಡುತ್ತದೆ. ಇವೆಲ್ಲವೂ ಸುಖನಿದ್ದೆಗೆ ಸಹಕರಿಸುತ್ತವೆ.

* ಸಮತೋಲನ ಆಹಾರ ಕ್ರಮ ಅನುಸರಿಸಿ. ಇದರಿಂದ ನಿಮ್ಮ ಚೇತರಿಕೆ ಶೀಘ್ರವಾಗುತ್ತದೆ. ವಿಟಮಿನ್ ಸಿ ಮತ್ತು ಒಮೆಗಾ -೩- ಕೊಬ್ಬಿನ ಆಮ್ಲಗಳು ಇರುವ ಆಹಾರಗಳನ್ನು ಸೇವಿಸುವ ಮೂಲಕ ಉರಿಯೂತ ಕಡಿಮೆಯಾಗುತ್ತದೆ ಹಾಗೂ ಚೇತರಿಕೆ ಶೀಘ್ರವಾಗುತ್ತದೆ. ತನ್ಮೂಲಕ ನಿದ್ದೆ ಚೆನ್ನಾಗಿ ಆಗಲು ಸಾಧ್ಯವಾಗುತ್ತದೆ.

* ದಿನದ ಅವಧಿಯಲ್ಲಿ ಸಾಕಷ್ಟು ನೀರು ಮತ್ತು ನಾರಿನಂಶವಿರುವ ಆಹಾರಗಳನ್ನು ಸೇವಿಸಿ. ಇದರಿಂದ ಮಲಬದ್ದತೆಯಾಗದಂತೆ ನೋಡಿಕೊಳ್ಳಬಹುದು. ಒಂದು ವೇಳೆ ಜೀರ್ಣಕ್ರಿಯೆಯ ತೊಂದರೆ ಇದ್ದರೆ ಇದು ನಿದ್ದೆಯನ್ನು ಬಾಧಿಸಬಹುದು. ಅಗತ್ಯ ಕಂಡುಬಂದರೆ ಕಲ್ಮಶಗಳನ್ನು ಮೆದುಗೊಳಿಸುವ ಔಷಧಿಗಳ ಸೇವನೆಯನ್ನು ನಿಮ್ಮ ವೈದ್ಯರು ನಿಮಗೆ ಸೂಚಿಸಬಹುದು. ಈ ಮೂಲಕವೂ ನಿಮ್ಮ ನಿದ್ದೆ ಉತ್ತಮಗೊಳ್ಳುತ್ತದೆ.

* ಅನಗತ್ಯವಾಗಿ, ಆಗಾಗ ಹಾಸಿಗೆಯಿಂದ ಏಳದಿರಿ. ಮೊದಲ ಕೆಲವು ವಾರಗಳವರೆಗಾದರೂ ನಿಮ್ಮ ಚಲನೆಯನ್ನು ಆದಷ್ಟೂ ಸೀಮಿತಗೊಳಿಸಿ. ನಿಮ್ಮ ಚಲನೆಗೆ ಹಾಗೂ ಮಗುವಿಗೆ ಹಾಲೂಡಿಸಲು ಅಗತ್ಯ ನೆರವನ್ನು ನಿಮ್ಮ ಕುಟುಂಬದವರಿಂದ ಹಾಗೂ ಸಂಗಾತಿಯಿಂದ ಪಡೆಯಿರಿ.

1. ಸಿಸರೇನಿಯನ್ ಹೆರಿಗೆಯ ನಂತರ ಹಾಸಿಗೆಯಿಂದ ಏಳುವ ಸುರಕ್ಷಿತ ಕ್ರಮ ಯಾವುದು?

1. ಸಿಸರೇನಿಯನ್ ಹೆರಿಗೆಯ ನಂತರ ಹಾಸಿಗೆಯಿಂದ ಏಳುವ ಸುರಕ್ಷಿತ ಕ್ರಮ ಯಾವುದು?

ಮೊದಲು ಬಲಮಗ್ಗುಲಿಗೆ ಹೊರಳಿ ಹಾಸಿಗೆಯ ಅಂಚಿಗೆ ಬರುವಂತೆ ಮಾಡಿ. ಈ ಕ್ರಿಯೆಗೆ ಕನಿಷ್ಟ ಶ್ರಮ ವ್ಯಯವಾಗುತ್ತದೆ. ಅಗತ್ಯವೆನಿಸಿದರೆ ನಿಮ್ಮ ಕುಟುಂಬದ ಸದಸ್ಯರನ್ನು ನೆರವಿಗೆ ಕರೆಯಬಹುದು. ಮಲಗಿದ್ದಲ್ಲಿಂದ ಏಳಲು ಮೊಣಕೈಯನ್ನು ಬಳಸಿ ದೇಹವನ್ನು ಮೇಲಕ್ಕೆತ್ತಬಹುದು. ನಂತರ ನಿಧಾನವಾಗಿ ಮಂಚದಲ್ಲಿಯೇ ಕುಳಿತು ಕಾಲುಗಳನ್ನುಮಾತ್ರವೇ ಕೆಳಗಿಡಿ. ಈ ಕ್ರಿಯೆ ನಿಧಾನವಾಗಿ, ಹೊಟ್ಟೆಯ ಮೆಲೆ ಯಾವುದೇ ಒತ್ತಡವಿಲ್ಲದಂತೆ ಆಗಬೇಕು. ನಂತರ ಪಾದವನ್ನು ನಿಧಾನವಾಗಿ ನೆಲದ ಮೇಲಿಟ್ಟು ಕೊಂಚ ಹೊತ್ತು ಕುಳಿತೇ ಇರಿ, ತಕ್ಷಣ ಎದ್ದೇಳಬೇಡಿ. ಕೊಂಚ ಹೊತ್ತಿನ ಬಳಿಕವೇ ಎದ್ದು ನಿಲ್ಲಿ. ಈ ಸಮಯದಲ್ಲಿಯೂ ನಿಮ್ಮ ಆಪ್ತರು ನಿಮ್ಮ ಹತ್ತಿರವೇ ಇರಲಿ.

ಸಿಸರೇನಿಯನ್ ಹೆರಿಗೆಯ ನಂತರ ಹೊಟ್ಟೆಯ ಮೇಲೆ ಮಲಗಬಹುದೇ:

ಸಿಸರೇನಿಯನ್ ಹೆರಿಗೆಯ ನಂತರ ಹೊಟ್ಟೆಯ ಮೇಲೆ ಮಲಗಬಹುದೇ:

ಹೆರಿಗೆಯಾಗಿ ಗಾಯ ಮಾಗುವವರೆಗೂ ಹೊಟ್ಟೆಯ ಮೇಲೆ ಮಲಗಬಾರದು. ಏಕೆಂದರೆ ಈ ಭಂಗಿಯಲ್ಲಿ ಗಾಯದ ಮೇಲೆ ಗರಿಷ್ಟ ಒತ್ತಡ ಬೀಳುತ್ತದೆ ಮತ್ತು ನೋವು ಉಲ್ಬಣಿಸುತ್ತದೆ. ಗಾಯ ಪೂರ್ಣವಾಗಿ ಮಾಗಿದ ಬಳಿಕ ನಿಮ್ಮ ದೇಹ ಹಿಂದಿನ ಸ್ಥಿತಿಗೆ ಬಂದ ಬಳಿಕವೇ ನೀವು ಹೊಟ್ಟೆಯ ಮೇಲೆ ಮಲಗುವ ಧೈರ್ಯ ಮಾಡಬಹುದು.

ಹೆರಿಗೆಯ ಬಳಿಕ ಸೂಕ್ತ ಭಂಗಿ

ಹೆರಿಗೆಯ ಬಳಿಕ ಸೂಕ್ತ ಭಂಗಿ

ಹೆರಿಗೆಯ ಬಳಿಕ ನಿಮಗೆ ಯಾವ ಭಂಗಿ ಸೂಕ್ತವೆಂದು ಕಂಡುಕೊಳ್ಳಲು ಕೊಂಚ ಕಾಲಾವಕಾಶ ಬೇಕಾಗಬಹುದು. ಹಾಗಾಗಿ ಒಂದೇ ಭಂಗಿಯಲ್ಲಿರದೇ ಬೇರೆ ಭಂಗಿಗಳನ್ನೂ ಕೊಂಚ ಕಾಲದವರೆಗೆ ಪ್ರಯತ್ನಿಸುತ್ತಿರಬೇಕು. ಕೆಲವು ದಿನಗಳಲ್ಲಿಯೇ ನಿಮಗೆ ಯಾವುದು ಅತ್ಯಂತ ಸೂಕ್ತ ಎಂಬುದು ನಿಮಗೆ ಅರ್ಥವಾಗುತ್ತದೆ. ದಿನ ಕಳೆದಂತೆ ನೋವು ಕಡಿಮೆಯಾಗುತ್ತಾ ಗಾಯವೂ ವಾಸಿಯಾಗುತ್ತಾ ಹೋಗುತ್ತದೆ. ಆಗ ಹಿಂದಿನ ದಿನಗಳಲ್ಲಿ ಆಗುತ್ತಿದ್ದ ಕಷ್ಟ ಈಗ ಆಗುವುದಿಲ್ಲ. ಹಾಗಾಗಿ ಚೇತರಿಕೆಯ ಹಂತದಲ್ಲಿ ಭಿನ್ನವಾದ ಭಂಗಿಗಳು ವಿವಿಧ ಸಮಯದಲ್ಲಿ ಆಹ್ಲಾದಕರ ಎನಿಸಬಹುದು. ಕೊನೆಗೊಂದು ದಿನ ನೀವು ಯಾವುದೇ ಭಂಗಿಯಲ್ಲಿಯೂ ಆರಾಮವಾಗಿ ಪವಡಿಸಬಹುದು. ಹೆರಿಗೆಯ ಬಳಿಕವೂ ನೀವು ಮಾನಸಿಕರಾಗಿ ಧನಾತ್ಮಕ ಚಿಂತನೆಯನ್ನೇ ಮಾಡಬೇಕು ಹಾಗೂ ಈ ಮನಃಸ್ಥಿತಿಯೂ ಶೀಘ್ರ ಚೇತರಿಕೆಗೆ ನೆರವಾಗುತ್ತದೆ.

ಕೊನೆಯದಾಗಿ

ಕೊನೆಯದಾಗಿ

ಒಂದು ವೇಳೆ ನಿಮಗೂ ಸಿಸರೇನಿಯನ್ ಹೆರಿಗೆಯಾಗಿದ್ದು ಯಾವ ಭಂಗಿಯಲ್ಲಿ ಮಲಗಿದ್ದಾಗ ನಿಮಗೆ ಹೆಚ್ಚು ಆಹ್ಲಾದಕರ ಎನಿಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ವಿವರಿಸಿ. ನಿಮ್ಮ ಅನುಭವ ಇನ್ನೂ ಹಲವಾರು ನವ ತಾಯಂದಿರಿಗೆ ನೆರವಾಗಬಲ್ಲುದು:

ಸೂಚನೆ: ಮೇಲೆ ವಿವರಿಸಿದ ಮಲಗುವ ಭಂಗಿಗಳು ಮತ್ತು ಸಲಹೆಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ, ಮತ್ತು ಅವು ವೈದ್ಯಕೀಯ ಸಲಹೆಗೆ ಪರ್ಯಾಯವಾಗುವಂತೆ ಉದ್ದೇಶಿಸಲ್ಪಟ್ಟಿಲ್ಲ

English summary

Best Sleeping Position After A C Section Delivery

After C Section delivery sleeping position and sitting way is very important to heal the wound fast. Here are information about better sleeping position after c section to heal wound fast.
X
Desktop Bottom Promotion