Just In
Don't Miss
- News
ಕೋಪ ಕಡಿಮೆ ಮಾಡಲು AC ಹೆಲ್ಮೆಟ್, ಬೆಂಗಳೂರಿಗನ ಸಾಧನೆ
- Technology
ಇನ್ಮುಂದೆ ಜಿಯೋ ಗ್ರಾಹಕರಿಗೆ ಫಸ್ಟ್ ಡೇ - ಫಸ್ಟ್ ಶೋ ಸಿನಿಮಾ..!
- Movies
ನಟಿ ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರ್
- Automobiles
ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!
- Sports
ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ನಡೆದ ಬೆಟ್ ಮೌಲ್ಯವೆಷ್ಟು ಗೊತ್ತ?!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Finance
7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಮಕ್ಕಳನ್ನು ಈ ರೀತಿ ಬೆಳೆಸಿದರೆ ಮಾತ್ರ ಅವರ ಭವಿಷ್ಯಕ್ಕೆ ಒಳಿತಾಗುವುದು
ಮಕ್ಕಳು ಎಷ್ಟು ದೊಡ್ಡವರಾದರೂ ತಂದೆ ತಾಯಿಗೆ ಮಕ್ಕಳೇ, ಹಾಗಂತ ಅವರು ದೊಡ್ಡದಾದ ಮೇಲೂ ಅವರನ್ನು ಚಿಕ್ಕ ಮಕ್ಕಳಂತೆ ನೋಡಿಕೊಳ್ಳುವುದು ಇದೆಯೆಲ್ಲಾ ಅದು ದೊಡ್ಡ ತಪ್ಪು. ಪೋಷಕರಿಗೆ ನಾವು ಮಾಡುತ್ತಿರುವುದು ಪ್ರೀತಿಯಿಂದ ಅಂತ ಅನಿಸಬಹುದು, ಆದರೆ ನಿಜವಾಗಲೂ ನೋಡಿದರೆ ಹಾಗೆ ಮಾಡುವುದು ಪೋಷಕರು ಮಕ್ಕಳಿಗೆ ಮಾಡುವ ದ್ರೋಹ.
ಆ ಬಾಲಕ ಆರನೇ ತರಗತಿ ಓದುತ್ತಿರುತ್ತಾನೆ. ಆದರೂ ಅವನಿಗೆ ಶೂ ಲೇಸ್ ಕಟ್ಟಲು ಬರುವುದಿಲ್ಲ, ಅದನ್ನು ಪೋಷಕರೇ ಮಾಡುತ್ತಿರುತ್ತಾರೆ, ಇನ್ನು ಆ ಹುಡುಗಿಗೆ ವಯಸ್ಸು ಹದಿನೆಂಟು ದಾಟಿದೆ, ಆದರೆ ಒಬ್ಬಳೇ ಕಾಲೇಜಿಗೆ ಹೋಗಿ ಬಾ ಅಂತ ಹೇಳಿದರೆ ಹೋಗಿ ಬರುವ ಧೈರ್ಯ ಆಕೆಗಿಲ್ಲ, ಏಕೆಂದರೆ ಅವಳನ್ನು ಅವರ ಪೋಷಕರು ಒಂಟಿಯಾಗಿ ಎಲ್ಲಿಗೂ ಕಳುಹಿಸುವುದಿಲ್ಲ, ಶಾಲೆಗೆ ಕರೆದುಕೊಂಡು ಹೋಗುವುದು, ಬಿಟ್ಟು ಬರುವುದನ್ನು ಪೋಷಕರೇ ಮಾಡುತ್ತಿದ್ದರು, ಆದರೆ ಕಾಲೇಜು ತಲುಪಿದ ಮೇಲೂ ಪರಿಸ್ಥಿತಿ ಬದಲಾಗಬಹುದೆಂದು ಭಾವಿಸಿದರೆ ಕಾಲೇಜಿಗೆ ಡ್ರಾಪ್ ಮಾಡುವುದು-ಪಿಕ್ ಮಾಡುವುದನ್ನು ಪೋಷಕರು ಆಕೆಯ ಅಣ್ಣನಿಗೆ ಒಪ್ಪಿಸಿದ್ದಾರೆ. ಹೀಗಾಗಿ ಆಕೆಗೆ ಪಕ್ಕದ ಬೀದಿಗೆ ಒಂಟಿಯಾಗಿ ಹೋಗಿ ಬಾ ಎಂದರೆ ಹೋಗುವುದಿಲ್ಲ. ಆದರೆ ಪೋಷಕರು ಮಾತ್ರ ಅಯ್ಯೋ ಆಕೆಗೆ ತುಂಬಾ ಭಯ, ಅವಳ ಅಂಜಿಕೆಯನ್ನು ಹೇಗೆ ಹೋಗಲಾಡಿಸುವುದು ಎಂದು ಗೊತ್ತೇ ಆಗುತ್ತಿಲ್ಲ ಎಂಬ ಕಳವಳ ವ್ಯಕ್ತ ಪಡಿಸುತ್ತಾರೆ. ಇಲ್ಲಿ ಅವಳು ಆ ರೀತಿ ಬೆಳೆಯಲು ಯಾರು ಕಾರಣ?
ಮಕ್ಕಳೆಂದ ಮೇಲೆ ಪ್ರೀತಿ, ಹೊರಗಡೆ ಒಬ್ಬಂಟಿ ಹೋದಾಗ ಎಲ್ಲಿ ಅವರಿಗೆ ತೊಂದರೆ ಉಂಟಾಗುತ್ತದೋ ಎಂಬ ಭಯ ಪ್ರತಿಯೊಬ್ಬ ಪೋಷಕರಲ್ಲೂ ಇರುತ್ತದೆ. ಆದರೆ ನಮ್ಮ ಅತಿಯಾದ ಕಾಳಜಿ ಹಾಗೂ ಭಯದಿಂದ ಅವರ ಮುಂದಿನ ಭವಿಷ್ಯವನ್ನು ನರಕ ಮಾಡಬಾರದು. ಮಕ್ಕಳಲ್ಲಿ ಸ್ವಾವಲಂಬನೆ, ಛಲ, ಕಷ್ಟವನ್ನು ಎದುರಿಸುವ ಸಾಮರ್ಥ್ಯ, ಒಳ್ಳೆಯ ಸಂಸ್ಕಾರ ಬೆಳೆಯಬೇಕೆಂದರೆ ಪೋಷಕರು ಮಕ್ಕಳನ್ನು ಹೀಗೆ ಬೆಳೆಸಬೇಕು.

1. ಮಕ್ಕಳನ್ನು ಅವರಷ್ಟಕ್ಕೆ ಚಿಂತಿಸಿ ಪ್ರವೃತಿಸಲು ಬಿಡಿ
ಮಕ್ಕಳು ಒಳ್ಳೆಯ ಕೆಲಸ ಮಾಡುವಾಗ ಅವರನ್ನು ಹುರಿದುಂಬಿಸಿ, ಆದರೆ ನಿಮ್ಮ ನಿರ್ಧಾರಗಳನ್ನು ಅವರ ಮೇಲೆ ಹೇರಲು ಹೋಗಬೇಡಿ. ನಿಮಗೆ ನಿಮ್ಮ ಸಂಗೀತ ಕಲಿಯಬೇಕೆಂಬ ಆಸೆಯಿದೆ ಅಂತ ಆ ಮಗುವಿನ ಮೇಲೆ ಸಂಗೀತ ಕಲಿಯುವಂತೆ ಒತ್ತಡ ಹಾಕಬೇಡಿ. ಆ ಮಗು ಅದಕ್ಕೆ ಇಷ್ಟ ಬಂದದ್ದು ಕಲಿಯುವ ಸ್ವಾತಂತ್ರ್ಯ ನೀಡಿ. ಮಕ್ಕಳು ಏನಾದರೂ ಹೇಳುವಾಗ ಅವರ ಮಾತುಗಳನ್ನು ಕೇಳಿಸಿಕೊಳ್ಳಿ. ನೀವು ಹೇಳಿದ್ದೇ ಸರಿ, ಅದನ್ನೇ ಅವರು ಪಾಲಿಸಬೇಕು ಎಂದು ನೀವು ಯೋಚಿಸುತ್ತಿದ್ದರೆ ಮೊದಲು ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ. ಅವರು ಏನಾದರೂ ಹೇಳುವಾಗ ದೊಡ್ಡವರು ಮಾತನಾಡುವಾಗ ನಿನ್ನದೇನು ಅಧಿಕ ಪ್ರಸಂಗ ಅಂತ ಗದರಿಸಿದರೆ ಅವರು ಮುಂದೆ ನಿಮ್ಮೊಂದಿಗೆ ಅಂತರ ಕಾಯ್ದುಕೊಳ್ಳುತ್ತಾರೆ, ನಿಮ್ಮೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಿಲ್ಲ.

2. ಸ್ವತಂತ್ರವಾಗಿ ಬಿಡಿ
ಕಟ್ಟಿ ಹಾಕಿದಂಥ ವಾತಾವರಣದಲ್ಲಿ ಬೆಳೆಯಲು ಮಕ್ಕಳು ಇಷ್ಟಪಡುವುದಿಲ್ಲ. ಎಷ್ಟೊತ್ತಿಗೆ ತಿನ್ನಬೇಕು, ಎಷ್ಟು ಹೊತ್ತು ಓದಬೇಕು, ಯಾರ ಜತೆ ಆಟವಾಡಬೇಕು ಎಂದೆಲ್ಲಾ ನೀವು ನಿರ್ಧರಿಸಬೇಡಿ. ಮಕ್ಕಳಿಗೆ ಸ್ವತಂತ್ರ ನೀಡಿ, ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಮನ ಮುಟ್ಟುವಂತೆ ತಿದ್ದುವ ಪ್ರಯತ್ನ ಮಾಡಿ. ನೀವು ಅವರ ಸ್ವತಂತ್ರವನ್ನು ಹತ್ತಿಕ್ಕಿದರೆ ಅಂಥ ಮಕ್ಕಳೇ ಮುಂದೆ ನಟೋರಿಯಸ್ ಆಗಿ ಬೆಳೆಯುತ್ತಾರೆ.
ನಿಮ್ಮ ಮಗ ಅಥವಾ ಮಗಳು ಸಿನಿಮಾಕ್ಕೆ ಹೋಗುತ್ತೇನೆ ಅಂದರೆ ಓ... ಹೌದಾ ಯಾವ ಸಿನಿಮಾ, ಯಾರು ಬರ್ತಾರೆ ಎಂದು ಕೇಳಿ. ಆಗ ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಹಾಗೇ ಮಾಡದೆ ನೀನು ಸಿನಿಮಾಕ್ಕೆ ಹೋಗಬಾರದು, ಬೇಕಾದರೆ ನಾನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರೆ ಮುಂದೆ ಅವರು ನಿಮಗೆ ತಿಳಿಯದಂತೆ ಚಟುವಟಿಕೆಗಳನ್ನು ಮಾಡುತ್ತಾರೆ. ಆಗ ಅವರನ್ನು ತಿದ್ದಲು ಹೋದರೂ ನಿಮ್ಮ ಮಾತು ಕೇಳಲು ಸಿದ್ಧವಿರುವುದಿಲ್ಲ. ಆದ್ದರಿಂದ ಅವರಿಗೆ ಸ್ವತಂತ್ರ ನೀಡಿ, ಅದರ ಮಿತಿಯನ್ನೂ ತಿಳಿಸಿಕೊಡಿ.

3. ಮನೆಯಲ್ಲಿ ಸರಳವಾದ ಕೆಲಸಗಳನ್ನು ನೀಡಿ
ಕೆಲವರಿಗೆ ನಾನು ಕಷ್ಟ ಪಟ್ಟಂತೆ ನನ್ನ ಮಕ್ಕಳು ಕಷ್ಟಪಡಬಾರದು ಎಂಬ ಬಾವನೆ ಇರುತ್ತದೆ, ಹಾಗಾಗಿ ಮಕ್ಕಳಿಗೆ ಯಾವುದೇ ಕೆಲಸ ಹೇಳದೆ ಬೆಳೆಸುತ್ತಾರೆ. ಇನ್ನು ಕೆಲವರು ನಮ್ಮ ಬಳಿ ಹಣವಿದೆ ಹಾಗಾಗಿ ಅವರು ಕೆಲಸ ಕಲಿಯಬೇಕಾಗಿಲ್ಲ ಎಂದು ಭಾವಿಸುತ್ತಾರೆ. ಈ ರೀತಿ ಭಾವನೆ ಇದೆಯೆಲ್ಲಾ ದೊಡ್ಡ ತಪ್ಪು. ಮಕ್ಕಳಿಗೆ ಅವರ ಕೆಲಸಗಳನ್ನು ಮಾಡಲು ಕಲಿಸಿದರೆ ಮುಂದೆ ಬೆಳೆಯುತ್ತಿದ್ದಂತೆ ಅವರಿಗೆ ಸ್ವಾವಲಂಬನೆ ಅಧಿಕವಾಗುತ್ತದೆ. ಯಾರೂ ಇಲ್ಲದಿದ್ದರೂ, ಎಂತಹ ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕು, ಹೇಗೆ ಬಾಳಬೇಕು ಎಮಬ ಸಾಮರ್ಥ್ಯ ಬೆಳೆಯುತ್ತದೆ.
ಇದರಿಂದ ಮುಂದೆಕ್ಕೆ ನಿಮಗೆ ಸಹಾಯವಾಗುತ್ತದೆ. ನೀವು ಬ್ಯುಸ್ನೆಸ್ ಮಾಡುತ್ತಿದ್ದರೆ ಮೆಲ್ಲನೆ ನಿಮ್ಮ ಬ್ಯುಸ್ನೆಸ್ ಟ್ರಿಕ್ಸ್ ಅವರಿಗೆ ಕಲಿಸಿ. ಇನ್ನು ಮನೆ ಸ್ವಚ್ಛವಾಗಿ ಇಡುವುದು, ಕೆಲವೊಂದು ಸರಳವಾದ ಆಹಾರಗಳನ್ನು ಮಾಡುವುದನ್ನು ಕಲಿಸಿ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುವುದು. ನಿಮ್ಮ ಹಣ ಅವರನ್ನು ರಕ್ಷಣೆ ಮಾಡುವುದಕ್ಕಿಂತ ನೀವು ಕಲಿಸುವ ಗುಣಗಳು, ಕೆಲಸಗಳು ಅವರಿಗೆ ಮುಂದೆ ಸಹಾಯಕ್ಕೆ ಬರುತ್ತದೆ ಎಂಬುವುದು ನೆನಪಿರಲಿ.

4. ಸ್ನೇಹಿತರ ಜತೆ ಬೆರೆಯಲು ಬಿಡಿ
ಎಷ್ಟೋ ಮನೆಯಲ್ಲಿ ಮಕ್ಕಳು ಯಾರ ಜತೆ ಸ್ನೇಹ ಬೆಳೆಸಬೇಕೆಂದು ಪೋಷಕರು ನಿರ್ಧರಿಸುತ್ತಾರೆ. ಮಕ್ಕಳು ಯಾರ ಜತೆ ಸ್ನೇಹ ಬೆಳೆಸಬೇಕೆಂದು ಪೋಷಕರು ಗಮನಿಸುವುದು ತಪ್ಪಲ್ಲ, ಆದರೆ ಆದರೆ ನಿನ್ನ ಸ್ನೇಹಿತರ ಬಳಗ ಹೀಗೆ ಇರಬೇಕೆಂದು ಬಯಸುವುದು ಮಾತ್ರ ತಪ್ಪು. ಕೆಟ್ಟ ಬುದ್ಧಿಯ ಮಕ್ಕಳ ಜತೆ ಸೇರಿದಾಗ ಅದರ ಅಪಾಯದ ತಿಳುವಳಿಕೆ ನೀಡಿ ದೂರ ಸರಿಯಲು ಹೇಳಬಹುದು. ಆದರೆ ಸ್ಟೇಟಸ್, ಬುದ್ಧಿಶಕ್ತಿ ಇವುಗಳನ್ನು ನೋಡಿ ಸ್ನೇಹ ಮಾಡು ಎಂದು ಮಕ್ಕಳಿಗೆ ಹೇಳುವುದು ತಪ್ಪು.
ಇನ್ನು ಕೆಲ ಪೋಷಕರಿಗೆ ಮಕ್ಕಳು ಶಾಲೆ ಬಿಟ್ಟರೆ ಮನೆಗೆ ಬಂದು ಓದುವುದು ಮಾಡಬೇಕು, ಸ್ನೇಹಿತರ ಜತೆ ಆಡಬಾರದು ಎಂದು ಬಯಸುತ್ತಾರೆ, ಆದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸ್ನೇಹ ಅಮೂಲ್ಯ ಎಂಬುವುದನ್ನು ಪೋಷಕರು ಮರೆಯಬಾರದು. ಮಕ್ಕಳು ಒಳ್ಳೆಯ ಗುಣವಿರುವವರ ಜತೆ ಸ್ನೇಹ ಬಳಸುವಂತೆ ಹೇಳಿ ಇದರಿಂದ ಮಕ್ಕಳ ಭವಿಷ್ಯ ಒಳ್ಳೆಯದಾಗುವುದು.

5. ಸ್ಪೋರ್ಟ್ಸ್, ಮತ್ತಿತರ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹಿಸಿ
ಮಕ್ಕಳಿಗೆ ಸದಾ ಓದು ಓದು ಅಂತ ಒತ್ತಾಯ ಹೇರಬೇಡಿ. ಓದಿನ ಜತೆ ಸ್ಪೋರ್ಟ್ಸ್, ಮತ್ತಿತರ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ. ಮಕ್ಕಳು ಮೊಬೈಲ್ನಲ್ಲಿ ಕಳೆಯುವುದಕ್ಕಿಂತ ಹೆಚ್ಚು ಸಮಯವನ್ನು ದೈಹಿಕ ಚಟುವಟಿಕೆಯಲ್ಲಿ ಕಳೆಯುವಂತೆ ಮಾಡಿ. ಅವರ ಇಷ್ಟದ ಗೇಮ್ ಯಾವುದೆಂದು ತಿಳಿದು ಪ್ರೋತ್ಸಾಹ ನೀಡಿ. ಸ್ಪೋರ್ಟ್ಸ್ ಕ್ಲಬ್ಗಳಲ್ಲಿ ಸೇರಿಸಿ. ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ಒಂದೊಂದು ಮಗುವಿಗೆ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅದನ್ನು ಬೆಳೆಸಲು ಪ್ರೋತ್ಸಾಹಿಸಿ. ಅವರ ಆಸಕ್ತಿಯ ವಿಷಯವೇನು ಅದರತ್ತ ಗಮನ ಹರಿಸಲು ಪ್ರೋತ್ಸಾಹ ನೀಡಿ, ಅವರಲ್ಲಿ ಮನೋಬಲವನ್ನು ತುಂಬಿ. ಹೀಗೆ ಮಾಡುವುದರಿಂದ ಮಕ್ಕಳು ಬೆಳೆಯುತ್ತಿದ್ದಂತೆ ಅವರ ವ್ಯಕ್ತಿತ್ವ ವಿಕಸನವಾಗುತ್ತದೆ, ಆರ್ಥಿಕವಾಗಿಯೂ ನಿಮ್ಮನ್ನು ಅವಲಂಭಿಸುವುದಿಲ್ಲ.