For Quick Alerts
ALLOW NOTIFICATIONS  
For Daily Alerts

ಪೋಷಕರೇ, ಮಕ್ಕಳ ಬೆಳವಣಿಗೆಯ ಸೂಕ್ಷ್ಮ ಹಂತಗಳಿವು, ಜಾಗ್ರತೆ

|

ಮಕ್ಕಳಾದ ಮೇಲೆ ಪೋಷಕರ ಜವಾಬ್ದಾರಿ ಹೆಚ್ಚಾಗುತ್ತದೆ. ನವಜಾತ ಶಿಶುವಿನಿಂದ ಹಿಡಿದು ಪ್ರಬುದ್ಧರಾಗುವವರೆಗಿನ ಪ್ರತಿಯೊಂದು ಹಂತವೂ ಕೂಡಾ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ.

ಅಲ್ಲಿಯವರೆಗೂ ಮಕ್ಕಳ ಪ್ರತಿಯೊಂದು ನಡವಳಿಕೆಯಲ್ಲೂ ನೀವು ಬದಲಾವಣೆಯನ್ನು ಕಾಣುತ್ತೀರಿ. ಹುಟ್ಟಿದಾಗ ಬರೀ ಅಳುವಿನ ಮೂಲಕ ಎಲ್ಲವನ್ನೂ ವ್ಯಕ್ತಪಡಿಸುತ್ತಿದ್ದ ಮಗು ಬೆಳೆಯುತ್ತಾ ಹೋದಂತೆ ಹಠ, ಕೋಪ, ಅಳುವಿನ ಮೂಲಕ ತಮ್ಮ ನಡವಳಿಕೆಯಲ್ಲಿ ಆಗುವಂತಹ ಬದಲಾವಣೆಯ ಮೂಲಕ ತಾವು ಬೆಳೆದಿದ್ದೇವೆ ಎನ್ನುವುದನ್ನು ತೋರಿಸಿಕೊಡುತ್ತಾರೆ.

ಪೋಷಕರಾಗಿ ನಾವು ಅದನ್ನು ಅರ್ಥಮಾಡಿಕೊಳ್ಳಬೇಕು. ಮಕ್ಕಳ ಬಾಲ್ಯವು ಹೇಗಿರುತ್ತದೋ ಅದರಂತೆ ಬೆಳೆದು ದೊಡ್ಡವರಾದ ಮೇಲೆ ಅವರ ವ್ಯಕ್ತಿತ್ವ ಬಾಲ್ಯದ ಪರಿಣಾಮಗಳನ್ನು ತೋರಿಸುತ್ತದೆ ಎನ್ನುತ್ತಾರೆ. ಹಾಗಾಗಿ ನವಜಾತ ಶಿಶುವಿನಿಂದ ಹಿಡಿದು ಐದನೇ ವಯಸ್ಸಿನವರೆಗೂ ಮಕ್ಕಳ ನಡವಳಿಕೆಯಲ್ಲಿ ಆಗುವಂತಹ ಸೂಕ್ಷ್ಮ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಬೇಕು.

ಈ ಬೆಳವಣಿಗೆಯ ಹಂತವು ಯಾಕೆ ಮುಖ್ಯ ಎನ್ನುವುದಾದರೆ ಈ ಕೆಳಗಿನ ಅಂಶಗಳನ್ನು ನೀವು ಪರಿಗಣಿಸಲೇಬೇಕು.

1. ನವಜಾತ ಶಿಶುವಿನಿಂದ ಮೂರು ತಿಂಗಳ ಮಗುವರೆಗಿನ ಅವಧಿ

1. ನವಜಾತ ಶಿಶುವಿನಿಂದ ಮೂರು ತಿಂಗಳ ಮಗುವರೆಗಿನ ಅವಧಿ

ಮಗು ಹುಟ್ಟಿದಾಗ ಅಳಲೇಬೇಕು. ಈ ಅಳುವೇ ಮಗುವಿಗೆ ಮೂರು ತಿಂಗಳಿನವರೆಗೂ ಪ್ರಮುಖ ಸಂವಹನವಾಗಿರುತ್ತದೆ. ನೀವು ಈ ಅಳುವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.ಈ ಹಂತದಲ್ಲಿ ಮಗು ಅಳುವುದು ಹಸಿವು, ದಣಿವು ಮತ್ತು ಹುಷಾರಿಲ್ಲದಾದಾಗ ಮಾತ್ರ. ಈ ಅಳುವಿನ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸುವ ಕೆಲಸವನ್ನು ಪೋಷಕರಾಗಿ ನೀವು ಕಲಿಯುವುದು ಮೊದಲು ಮಾಡಬೇಕಾದ ಕೆಲಸ.

ಆದರೆ ಕೆಲವೊಮ್ಮೆ ಈ ಮೂರು ಕಾರಣಗಳನ್ನು ಹೊರತುಪಡಿಸಿ ಬೇರೆ ಕಾರಣಕ್ಕಾಗಿಯೂ ಅಳಬಹುದು. ಯಾಕೆಂದರೆ ಅದುವರೆಗೂ ತಾಯಿಯ ಗರ್ಭದಲ್ಲಿ ಬೆಚ್ಚಗೆ ಸುರಕ್ಷಿತವಾಗಿದ್ದ ಮಗು ಹೊರಗಿನ ಪ್ರಪಂಚವನ್ನು ನೋಡುವಾಗ ಭಯಪಡಬಹುದು. ಆ ಸಮಯದಲ್ಲಿ ತಾಯಿಯಾದವಳು ತನ್ನ ಸ್ಪರ್ಶ, ಮೃದು ಮಾತಿನ ಮೂಲಕ ಮಗುವಿಗೆ ಸುರಕ್ಷಿತತೆಯ ಅನುಭವ ನೀಡಬೇಕಾಗುತ್ತದೆ.

ಹುಟ್ಟಿದ ಮಗುವಿಗೆ ತನ್ನ ತಾಯಿಯ ಧ್ವನಿಯ ನೆನಪು ಹೊಟ್ಟೆಯಲ್ಲಿದ್ದಾಗಲೇ ಆಗಿರುತ್ತಂತೆ. ಹಾಗಾಗಿ ನವಜಾತ ಶಿಶು ತಾಯಿಯ ಧ್ವನಿಯಲ್ಲಿನ ಭಾವನೆಗಳನ್ನು ಗ್ರಹಿಸುತ್ತದೆ. ಆದ್ದರಿಂದ ನವಜಾತ ಶಿಶುವಿನೊಂದಿಗೆ ಮಾತನಾಡುವಾಗ, ಲಾಲಿಸುವಾಗ ನಿಮ್ಮ ಮಾತುಗಳು ಮೃದುವಾಗಿರಲಿ, ಮಗುವಿಗೆ ತಾನು ಅಮ್ಮನ ಮಡಿಲಿನಲ್ಲಿ ಸುರಕ್ಷಿತವಾಗಿದ್ದೇನೆಂಬ ಭಾವನೆ ಬರಲಿ. ತಾಯಂದಿರು ಪುಳಕಗೊಳ್ಳುವ ಇನ್ನೊಂದು ವಿಚಾರವೆಂದರೆ ಮೂರು ತಿಂಗಳವರೆಗೂ ತನ್ನ ತಾಯಿಯ ಮುಖವನ್ನು ಮಾತ್ರ ಗುರುತು ಹಿಡಿಯುವುದಂತೆ..!

2. ನಾಲ್ಕು ತಿಂಗಳಿನಿಂದ ಆರು ತಿಂಗಳ ಅವಧಿ

2. ನಾಲ್ಕು ತಿಂಗಳಿನಿಂದ ಆರು ತಿಂಗಳ ಅವಧಿ

ಮಗು ಮೂರು ತಿಂಗಳಿನಿಂದ ಪರಿಚಿತರ ಮುಖ, ಧ್ವನಿಯನ್ನು ಕೇಳಿ ನಗುವಿನ ಮೂಲಕ ಪ್ರತಿಕ್ರಿಯೆ ನೀಡಲು ಪ್ರಾರಂಭಿಸುತ್ತೆ. ಮೂರು ತಿಂಗಳಾದ ಮೇಲೆ ಮಗು ನಗಬಹುದು, ಕಿರುಚಲು ಆರಂಬಿಸಬಹುದು ಮತ್ತು ಕೆಲವೊಮ್ಮೆ ಜೋರು ಮಾಡಲೂ ಬಹುದು. ಅವರ ಮುಂದೆ ತೋರಿಸುವಂತ ಆಟಿಕೆಗಳಿಗೂ ಮಗು ಪ್ರತಿಕ್ರಿಯಿಸಬಹುದು. ಈ ಹಂತದಿಂದ ಮಗು ಎಲ್ಲವನ್ನೂ ಗಮನಿಸುತ್ತಾ ಬೆಳೆಯಲು ಆರಂಭಿಸುತ್ತೆ. ಈ ಸಮಯದಲ್ಲಿ ಪೋಷಕರಾಗಿ ನೀವು ಮಗುವಿಗೆ ಸ್ಪಂದಿಸುವುದು ಅಗತ್ಯ. ಈ ಸಮಯದಲ್ಲಿ ಮಗುವನ್ನು ನಗಿಸುವುದು, ಕಿರುಚುವಂತೆ ಮಾಡಿ. ಅಲ್ಲದೇ ಈ ಅವಧಿಯಲ್ಲಿ ಮಗು ಪೋಷಕರನ್ನು ಹೊರತುಪಡಿಸಿ ಇತರರನ್ನು ಗುರುತಿಸಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ಕುಟುಂಬದ ಇತರ ಮಕ್ಕಳು ಅಥವಾ ಮನೆಯ ಸದಸ್ಯರನ್ನು ಮಗುವಿಗೆ ಪರಿಚಯಿಸಿ, ಮಗುವನ್ನು ಅವರ ಕೈಗಿತ್ತು ಆಡಲು ತಿಳಿಸಿ. ಈ ಮೂಲಕ ಇತರ ಸಂವಹನವನ್ನು ಮಗು ಕಲಿತುಕೊಳ್ಳಲು ಪ್ರಾರಂಭಿಸುತ್ತದೆ.

3. ಏಳು ತಿಂಗಳಿನಿಂದ ಹನ್ನೆರಡು ತಿಂಗಳ ಅವಧಿ

3. ಏಳು ತಿಂಗಳಿನಿಂದ ಹನ್ನೆರಡು ತಿಂಗಳ ಅವಧಿ

ಆರು ತಿಂಗಳ ನಂತರ ಮಗುವಿಗೆ ತನ್ನವರು ಯಾರು, ಅಪರಿತರು ಯಾರು ಎನ್ನುವುದು ತಿಳಿದುಬಿಡುತ್ತದೆ. ಹಾಗಾಗಿ ಅಪರಿಚಿತರ ಕೈಗಿತ್ತಾಗ ಅಥವಾ ನೋಡಿದಾಗ ಅಳಲು ಪ್ರಾರಂಭಿಸುತ್ತದೆ. ಅದರಲ್ಲೂ ಮುಖ್ಯವಾಗಿ ಈ ಅವಧಿಯಲ್ಲಿ ಮಗು ತಾಯಿಯನ್ನೇ ಹೆಚ್ಚು ಬಯಸುತ್ತದೆ. ತನ್ನಮ್ಮ ಕಾಣಿಸದಿದ್ದಾಗ ರಚ್ಚೆ ಹಿಡಿದು ಅಳಬಹುದು. ಹೆಚ್ಚಾಗಿ ಅಮ್ಮನಿಗೆ ಮಗು ಅಂಟಿಕೊಂಡಿರುತ್ತದೆ. ನಿದ್ದೆಯಿಂದ ಎದ್ದಾಗಲೂ ಅಮ್ಮ ಕಣ್ಮುಂದೆ ಇರಲೇ ಬೇಕು. ಮಗು ಹೀಗೆ ಆಡುತ್ತಿದ್ದಲ್ಲಿ ಮಗು ಸುರಕ್ಷಿತ ಸ್ಥಳದಲ್ಲಿ ತನ್ನ ಆಟದಲ್ಲಿ ಮುಳುಗಿರುವಾಗ ನೀವು ಅಲ್ಲಿಂದ ಎದ್ದು ನಡೆಯಿರಿ ಅಥವಾ ಕುಟುಂಬದ ಹಿರಿಯರೊಂದಿಗೆ ಆಟವಾಡಲು ಬಿಡಿ. ಸ್ವಲ್ಪ ಸಮಯದ ನಂತರ ನೀವು ಹಿಂದಿರುಗಿದಾಗ ಮಗುವಿಗೆ ನೀವು ಹಿಂತಿರುಗುತ್ತೀರಿ, ಮತ್ತೆ ತನ್ನ ಬಳಿಗೆ ಬಂದೇ ಬರುತ್ತೀರಿ ಎನ್ನುವುದು ಅರ್ಥವಾಗುತ್ತದೆ.

4. ಒಂದರಿಂದ ಎರಡು ವರ್ಷದ ಅವಧಿ

4. ಒಂದರಿಂದ ಎರಡು ವರ್ಷದ ಅವಧಿ

ಒಂದು ವರ್ಷವಾದ ನಂತರ ಹೆಚ್ಚಿನ ಮಕ್ಕಳಿಗೆ ದೊಡ್ಡವರಾಡುವ ಮಾತುಗಳು ಅರ್ಥವಾಗಲು ಆರಂಭವಾಗುತ್ತೆ. ಜೋರು ಮಾಡಿದರೂ, ಮುದ್ದು ಮಾಡಿದರೂ ಮಗುವಿಗೆ ಅರ್ಥವಾಗಿ ಬಿಡುತ್ತದೆ. ಒಂದು ರೀತಿಯಲ್ಲಿ ಹೇಳಬೇಕಾದರೆ ಪೋಷಕರು ಕಣ್ಣಿಗೆ ಎಣ್ಣೆ ಬಿಟ್ಟುಕೊಮಡು ಮಗುವನ್ನು ನೋಡಿಕೊಳ್ಳಬೇಕಾದ ಅವಧಿ. ಈ ಸಮಯದಲ್ಲಿ ಮಗು ಮನೆಯಿಂದ ಹೊರಗೆ ಹೋಗಲು ಹಠ ಮಾಡಬಹುದು. ಹೀಗಿದ್ದಾಗ ಪೋಷಕರಾಗಿ ನೀವು ಮಗುವಿಗೆ ಮನೆಯಿಂದ ಹೊರಗಿನ ಪ್ರಂಪಂಚವನ್ನು ತೋರಿಸುವುದು ಅವಶ್ಯಕ. ಈ ಅವಧಿಯಲ್ಲಿ ಮಗು ಇತರ ಮಕ್ಕಳೊಂದಿಗೆ ಸಂವಹನ ಮಾಡುತ್ತಿದೆಯೇ ಎನ್ನುವುದನ್ನು ಗಮನಿಸಿ.

ಸಾಮಾನ್ಯವಾಗಿ ಕೆಲವು ಮಕ್ಕಳು ಇತರ ಮಕ್ಕಳೊಂದಿಗೆ ಸಂವಹನ ಮಾಡುವುದಾಗಲಿ, ಆಟದ ಸಾಮಾನು ಕೊಡುವುದಾಗಲಿ ಮಾಡಲಾರರು. ಈ ವಯಸ್ಸಿನಲ್ಲಿ ಮಕ್ಕಳಲ್ಲಿ ಕೋಪ, ಹಠಮಾರಿತನ ಹೆಚ್ಚಾಗುವುದರಿಂದ ನೀವು ಶಾಂತವಾಗಿದ್ದುಕೊಂಡೇ ಮಗುವಿಗೆ ಅರ್ಥಮಾಡಿಸುವ ಪ್ರಯತ್ನ ಮಾಡಬೇಕು. ಹೊಡೆಯುವುದಾಗಲಿ, ಬೈಯುವುದಾಗಲಿ ಮಾಡಬಾರದು, ಪ್ರೀತಿಯ ಮಾತುಗಳಿಂದಲೇ ಆದಷ್ಟು ಸಮಾಧಾನ ಪಡಿಸುವ ಪ್ರಯತ್ನ ಮಾಡಬೇಕು.

5. ಮೂರು ವರ್ಷ

5. ಮೂರು ವರ್ಷ

ಮಗುವಿಗೆ ಮೂರು ವರ್ಷವಾದಾಗ ಸ್ಪಷ್ಟವಾಗಿ ಮಾತನಾಡಲು ಆರಮಭಿಸುತ್ತದೆ. ಈ ಸಮಯದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುವುದು ಮತ್ತು ಇತರ ಮಕ್ಕಳೊಂದಿಗೆ ಸ್ನೇಹಿತರಾಗಬಹುದು. ಈ ವಯಸ್ಸಿನಲ್ಲಿ ಇತರರೊಂದಿಗೆ ಹಂಚಿಕೊಳ್ಳುವುದು ಹಾಗೂ ಬೆರೆಯುವುದನ್ನು ಕಲಿಯುತ್ತಾರೆ. ಸಾಧ್ಯವಾದಷ್ಟೂ ಈ ವಯಸ್ಸಿನಲ್ಲಿ ಇತರ ಮಕ್ಕಳೊಂದಿಗೆ ನಿಮ್ಮ ಮಗುವನ್ನೂ ಆಟವಾಡಲು, ಮಾತನಾಡಲು ಪ್ರೋತ್ಸಾಹಿಸಿ. ಕೆಲವೊಮ್ಮೆ ಈ ವಯಸ್ಸಿನಲ್ಲಿ ಮಕ್ಕಳು ಎಲ್ಲವನ್ನೂ ತಿಳಿದುಕೊಳ್ಳುವುದರಿಂದ ಮನಸ್ಸಿನಲ್ಲಿ ಕೆಲವೊಂದು ವಿಷಯ, ಸಂಗತಿಗಳ ಬಗ್ಗೆ ಭಯ ಮೂಡಬಹುದು. ಆ ಸಮಯದಲ್ಲಿ ಮಕ್ಕಳಿಗೆ ಸಾಂತ್ವಾನ ನೀಡುವ ಮೂಲಕ ಸುರಕ್ಷಿತ ಭಾವನೆಯನ್ನು ಬೆಳೆಸಿ. ಇಲ್ಲವಾದರೆ ಅದೇ ಭಯವು ಮುಂದೆ ಅವರಲ್ಲಿ ಎಲ್ಲಾ ವಿಷಯದಲ್ಲಿ ಹಿಂಜರಿಕೆಯನ್ನು ಬೆಳೆಸಬಹುದು. ಮಕ್ಕಳನ್ನು ಮುಕ್ತವಾಗಿ ಆಡಲು ಬಿಡಿ. ಈ ಅವಧಿಯಲ್ಲಿ ಮಕ್ಕಳ ಕುತೂಹಲಗಳೂ, ಪ್ರಶ್ನೆಗಳೂ ಹೆಚ್ಚಾಗುತ್ತವೆ. ಆ ಸಮಯದಲ್ಲಿ ನೀವೂ ಮಗುವಿನಂತೆಯೇ ಅವರ ಪ್ರಶ್ನೆಗಳಿಗೆ ಮುಗ್ಧವಾಗಿಯೇ ಉತ್ತರಿಸಿ.

6. ನಾಲ್ಕರಿಂದ ಐದು ವರ್ಷ

6. ನಾಲ್ಕರಿಂದ ಐದು ವರ್ಷ

ಮಕ್ಕಳ ಈ ವಯಸ್ಸು ಪೋಷಕರಿಗೆ ಕಠಿಣ ಸವಾಲಿನ ಹಂತ. ಈ ಸಮಯದಲ್ಲಿ ಮಕ್ಕಳಿಗೆ ಶಿಸ್ತಿನ ಬಗ್ಗೆ ಅರಿವನ್ನು ಮೂಡಿಸಬೇಕಾಗುತ್ತದೆ. ಶಿಸ್ತು ಅಂದ ಮಾತ್ರಕ್ಕೆ ಅವರನ್ನು ತಪ್ಪು ಮಾಡಿದಾಗಲೆಲ್ಲಾ ಶಿಕ್ಷಿಸಿ, ಕಠಿಣವಾಗಿರುವುದಲ್ಲ ಅಥವಾ ಹೀಗೆ ಮಾಡಲೇಬಾರದು, ಹೀಗೆಯೇ ಮಾಡಬೇಕು ಎನ್ನುವ ನಿಯಮಗಳನ್ನು ಹೇರುವುದಲ್ಲ. ಮಗುವಿಗೆ ಒಳ್ಳೆಯದು ಮತ್ತು ಕೆಟ್ಟದ್ದು ಯಾವುದು ಎನ್ನುವುದನ್ನು ಅರ್ಥಮಾಡಿಸಿ. ಯಾಕೆಂದರೆ ಇದಿನ್ನೂ ಸರಿ ತಪ್ಪು ಅರ್ಥಮಾಡಿಕೊಳ್ಳುವ ವಯಸ್ಸಲ್ಲ. ಮಕ್ಕಳು ಈ ವಯಸ್ಸಿನಲ್ಲಿ ಸ್ವತಂತ್ರವಾಗಿರಲು ಬಯಸುತ್ತಾರೆ. ಅದು ಆಟದ ವಿಚಾರದಲ್ಲೇ ಆಗಿರಲಿ, ಇತರ ವಿಚಾರದಲ್ಲೇ ಆಗಿರಲಿ. ಮಕ್ಕಳಿಗೆ ಅವರ ಇಷ್ಟಗಳನ್ನು ಆಯ್ಕೆ ಮಾಡುವ ಅವಕಾಶ ನೀಡಿ. ಅದನ್ನು ಬಿಟ್ಟು ಹಿಗೇನೆ ಮಾಡಬೇಕು, ಅಮ್ಮ ಅಪ್ಪ ಹೇಳಿದ ಹಾಗೇನೆ ನೀನು ಕೇಳಬೇಕು ಎನ್ನುತ್ತಾ ಮಕ್ಕಳನ್ನು ನಿಯಂತ್ರಿಸಲು ಹೋಗಬೇಡಿ.

ನಾಲ್ಕು ವರ್ಷದಲ್ಲಿ ಮಕ್ಕಳಲ್ಲಿ ಭಾವನೆಗಳು ಬದಲಾಗುತ್ತಿರುತ್ತದೆ.ಕೆಲವೊಮ್ಮೆ ಒಡಹುಟ್ಟಿದವರೊಂದಿಗೆ ಜಗಳವಾಡಬಹುದು, ಹೊಡೆದಾಡಬಹುದು. ಇಂತಹ ಸಂದರ್ಭಗಳಲ್ಲಿ ಮಕ್ಕಳ ತಪ್ಪುಗಳನ್ನು ಅರ್ಥಮಾಡಿಸಿ. ಐದು ವರ್ಷವಾಗುತ್ತಿದ್ದಯೇ ಮಗು ಉತ್ತಮ ನಡವಳಿಕೆಯನ್ನು ಹೊಂದಿರುತ್ತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನೊಂದು ವಿಚಾರವೆಂದರೆ ಮಕ್ಕಳು ಪೋಷಕರನ್ನು ಅನುಕರಿಸುತ್ತಾರೆ ಹಾಗಾಗಿ ಮಕ್ಕಳ ಮುಂದೆ ನೀವೂ ಪ್ರಬುದ್ಧತೆಯಿಂದ ವರ್ತಿಸುವುದು ಮುಖ್ಯ.

ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತವೂ ಪೋಷಕರಿಗೆ ದೊಡ್ಡ ಸವಾಲು. ಮಕ್ಕಳ ನಡವಳಿಕೆ, ಅವರ ಬೇಕು ಬೇಡಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಅವರ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಅಗತ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬೇರೆಯವರ ಮಕ್ಕಳೊಂದಿಗೆ ನಿಮ್ಮ ಮಗುವನ್ನು ಹೋಲಿಸಬೇಡಿ. ಪ್ರತಿಯೊಂದು ಮಕ್ಕಳ ಸ್ವಭಾವವೂ ಭಿನ್ನವಾಗಿರುತ್ತದೆ. ಇದಕ್ಕೆ ಕಾರಣಕರ್ತರೂ ನೀವೆ. ಮಕ್ಕಳನ್ನು ಬೆಳೆಸುವಾಗ ಇಂತಹ ಕೆಲವೊಂದು ಸೂಕ್ಷ್ಮವಿಚಾರಗಳನ್ನು ಅರ್ಥಮಾಡಿಕೊಂಡು ಮಕ್ಕಳನ್ನು ಬೆಳೆಸಿದರೆ ಮಕ್ಕಳು ದೊಡ್ಡವರಾದ ಮೇಲೂ ಅವರನ್ನು ನಿಭಾಯಿಸುವುದು ಕಷ್ಟವಾಗದು.

English summary

Critical Periods In A Kids Life That Every Parent Should Know in Kannada

These are the critical periods of kids life every parents should know....
Story first published: Thursday, July 21, 2022, 17:51 [IST]
X
Desktop Bottom Promotion