For Quick Alerts
ALLOW NOTIFICATIONS  
For Daily Alerts

ಕನ್ನಡ ರಾಜ್ಯೋತ್ಸವ 2019: ಇತಿಹಾಸ, ಮಹತ್ವ ಮತ್ತು ಆಚರಣೆ

|

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಪ್ರತಿ ಕನ್ನಡಿಗನ, ಕರುನಾಡಿದ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ. ಮೈಸೂರು ಪ್ರಾಂತ್ಯ ಎಂಬ ಹೆಸರಿನ ಮೂಲಕ ಕರೆಯಲ್ಪಡುತ್ತಿದ್ದ ಹಾಗೂ ವಿಭಾಗಗಳಾಗಿ ಚದುರಿದ್ದ ನಾಡನ್ನು 1956ರ ನವೆಂಬರ್ 1ರಂದು "ಕರ್ನಾಟಕ'' ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1ರಂದು ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷ ನಾವು 64ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಹಿನ್ನೆಲೆ ನಮ್ಮ ನಾಡಿನ ಬಗ್ಗೆ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿಯೋಣ.

ಕರ್ನಾಟಕದ ಇತಿಹಾಸ

ಕರ್ನಾಟಕದ ಇತಿಹಾಸ

ಕರ್ನಾಟಕದ ಹುಟ್ಟಿಗೆ ಕಾರಣರಾದ ಕನ್ನಡದ ಕುಲಪುರೋಹಿತ ಎಂದೇ ಹೆಸರಾದ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೇ 1905ರಲ್ಲಿ ಪ್ರಾರಂಭಿಸಿದರು. ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ 1956ರ ನವೆಂಬರ್ 1ರಂದು ರಾಜ್ಯಗಳನ್ನು ವಿಂಗಡಿಸಿದರು. ಅದರಂತೆ ಮದ್ರಾಸ್, ಮುಂಬಯಿ ಮತ್ತು ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ನಂತರ ಮೈಸೂರು ರಾಜ್ಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು. ಅವುಗಳೆಂದರೆ ಉತ್ತರ ಕರ್ನಾಟಕ, ಹಳೆಯ ಮೈಸೂರು ಹಾಗೂ ಮಲೆನಾಡು.

ಕರ್ನಾಟಕ ಹೆಸರು ಬಂದದ್ದು ಹೇಗೆ

ಕರ್ನಾಟಕ ಹೆಸರು ಬಂದದ್ದು ಹೇಗೆ

ಕರ್ನಾಟಕ ಪದದ ಮೂಲ ಸಂಸ್ಕೃತ. ಸಂಸ್ಕೃತದ ಕನ್ನಡ ಎಂಬ ಪದದಿಂದ ಕರ್ನಾಟಕ ಹುಟ್ಟಿದೆ. ಕನ್ನಡಿಗರ ನಾಡು, ಕನ್ನಾಡು, ಕನ್ನಡ ನಾಡು ಎಂಬುದು ಇದರ ಅರ್ಥ.

ಆದರೆ ಕರ್ನಾಟಕ ಎಂಬ ಪದದ ಹುಟ್ಟು ಅಥವಾ ಅರ್ಥದ ಬಗ್ಗೆ ಇನ್ನೂ ಹಲವು ಅಭಿಪ್ರಾಯಗಳೂ ಇದೆ. ಕರು+ನಾಡು= ಕರುನಾಡು ಎಂಬ ಪದವು ಕರ್ನಾಟಕವಾಯಿತು ಎನ್ನಲಾಗುತ್ತದೆ. ಕರು ಎಂದರೆ ಕಪ್ಪು, ಇದರರ್ಥ ಕಪ್ಪು ಮಣ್ಣಿನ ನಾಡು ಎಂದೂ ಸಹ ಹೇಳಲಾಗುತ್ತದೆ. ಹಳೆಯ ಗ್ರಂಥಗಳು ಇದನ್ನು ಕರ್ನಾಟ ಎಂಬ ಪದದಿಂದ ಪಡೆಯಲಾಗಿದೆ ಎಂದು ಸೂಚಿಸುತ್ತವೆ, ಕೆಲವು ಮೂಲಗಳು ಕರ್ನಾಟಕವನ್ನು ಎತ್ತರದ ಭೂಮಿಗೆ ಅನುವಾದಿಸುತ್ತದೆ.

ಉತ್ತರ ಕರ್ನಾಟಕ ಜನತೆಯ ಮಾನ್ಯತೆಗಾಗಿ ಮೈಸೂರು ಎಂಬ ಹೆಸರಿನ ಬದಲು ಕರ್ನಾಟಕ ಎಂದು ಮರುನಾಮಕರಣ ಮಾಡಬೇಕು ಎಂದು 1972ರ ಜುಲೈನಲ್ಲಿ ಈ ಬಗ್ಗೆ ಚರ್ಚೆ ಭುಗಿಲೆದ್ದಿತು. ಸಾಕಷ್ಟು ದೀರ್ಘಾವಧಿಯ ಚರ್ಚೆಗಳ ನಂತರ ರಾಜ್ಯ ವಿಧಾನಸಭೆಯಲ್ಲೂ ಇದಕ್ಕೆ ಸರ್ವಾನುಮತದಿಂದ ಅನುಮತಿ ದೊರೆಯಿತು.

ಕನ್ನಡ ರಾಜ್ಯೋತ್ಸವದ ಮಹತ್ವ

ಕನ್ನಡ ರಾಜ್ಯೋತ್ಸವದ ಮಹತ್ವ

ಕನ್ನಡದ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

ಅಲ್ಲದೇ ನಾಡಿಗಾಗಿ, ಕನ್ನಡಕ್ಕಾಗಿ ದುಡಿದ ಮಹನೀಯರಿಗೆ ಈ ಮಾಸದಲ್ಲಿ ರಾಜ್ಯ ಸರ್ಕಾರ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಗೌರವಿಸುವ ಮೂಲಕ, ನಾಡಿನ ಸೇವೆಯನ್ನು ಮುಂದುವರೆಸಲು ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ. ಕನ್ನಡ ನಾಡಿನ ಮಹತ್ವವನ್ನು ಕನ್ನಡಿಗರು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕವಾಗುತ್ತದೆ.

ಕರ್ನಾಟಕದ ಏಕಕೀಕರಣಕ್ಕೆ ಹೋರಾಡಿದ ಮಹನೀಯರಿವರು

ಕರ್ನಾಟಕದ ಏಕಕೀಕರಣಕ್ಕೆ ಹೋರಾಡಿದ ಮಹನೀಯರಿವರು

ಕರ್ನಾಟಕ ನಾಡು ಏಕೀಕರಣವಾಗಲು ನಾಡಿನ ಹಲವು ಕವಿಗಳು, ಸಾಹಿತಿಗಳು, ನಟರು, ವಿಚಾರವಂತರು ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರ. ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾವ್, ಅನಕೃ, ಕೆ.ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್, ಬಿ. ಎಂ. ಶ್ರೀಕಂಠಯ್ಯ, ನಾಡಿಗೇರ್, ಹುಯಿಲಗೋಳ ನಾರಾಯಣರಾವ್, ಆಚಾರ್ಯ, ಜಿ. ಬಿ. ಜೋಷಿ, ಕೆ. ವಿ. ಅಯ್ಯರ್, ವಿ. ಬಿ. ನಾಯಕ್, ಕರ್ಣ, ಗಂಗಾಧರ ದೇಶಪಾಂಡೆ, ಡೆಪ್ಯುಟಿ ಚೆನ್ನಪಬಸಪ್ಪ, ಮಂಗಳವೇಡೆ ಶ್ರೀನಿವಾಸರಾಯರು, ಕೆಂಗಲ್ ಹನುಂತಯ್ಯ, ಎಚ್. ಎಸ್. ದೊರೆಸ್ವಾಮಿ, ಕೋ. ಚನ್ನಬಸಪ್ಪ, ಅಲ್ಲಂ ಸುಮಂಗಳಮ್ಮ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಪಾಟೀಲ್ ಪುಟ್ಟಪ್ಪ, ಹಾರನಹಳ್ಳಿ ರಾಮಸ್ವಾಮಿ ಸೇರಿದಂತೆ ನೂರಾರು ಮಹನೀಯರು, ಲಕ್ಷಾಂತರ ಪ್ರಜೆಗಳ ಹೋರಾಟದ ಫಲವಾಗಿ ನಾವಿಂದು ಏಕೀಕೃತ ನಾಡನ್ನು ಕಟ್ಟಿಕೊಂಡಿದ್ದೇವೆ.

ಕನ್ನಡ ರಾಜ್ಯೋತ್ಸವ ಆಚರಣೆ

ಕನ್ನಡ ರಾಜ್ಯೋತ್ಸವ ಆಚರಣೆ

ಕನ್ನಡ ನಾಡಿನ ಮರುಹುಟ್ಟಿನ ದಿನವಾದ ನವೆಂಬರ್ 1ರಂದು ನಾಡಿನ ಸಮಸ್ತ ಜನತೆ ಯಾವುದೇ ಜಾತಿ, ಧರ್ಮ, ಪಂಥಗಳ ಬೇಧವಿಲ್ಲದೆ ಒಗ್ಗಟ್ಟಿನಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಾರೆ. ಅರಿಶಿನ ಹಾಗೂ ಕುಂಕುಮದ ಸಂಕೇತ ಕರ್ನಾಟಕ ಹಳದಿ ಕೆಂಪು ಮಿಶ್ರಿತ ಧ್ವಜವನ್ನು ಸರ್ಕಾರಿ ಕಚೇರಿ, ಕಂಪನಿಗಳು, ಶಾಲಾ-ಕಾಲೇಜುಗಳಲ್ಲಿ ಹಾರಿಸುತ್ತಾ, ಕುವೆಂಪು ರಚಿತ ಜಯ ಭಾರತದ ಜನನಿಯ ತನುಜಾತೆ ನಾಡಗೀತೆ ಸೇರಿದಂತೆ ನಾಡಿನ ಹಿರಿಮೆಯನ್ನು ಬಿಂಬಿಸುವ ಗೀತೆಗಳ ಮೂಲಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

ಕರ್ನಾಟಕ ಸರ್ಕಾರ ನಾಡಿಗಾಗಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯ ಮೂಲಕ ಗೌರವಿಸುತ್ತದೆ. ಕೆಲವು ಕನ್ನಡ ಪರ ಸಂಘಟನೆಗಳು, ಸ್ವಯಂ ಸೇವಾ ಸಂಘಗಳು, ಎನ್ ಜಿ ಒಗಳು ಸಹ ಕನ್ನಡ ಮಾತೆ ಭುವನೇಶ್ವರಿಯ ಭಾವಚಿತ್ರವನ್ನಿಟ್ಟು ಮೆರವಣಿಗೆ, ಜಾಥಾ ನಡೆಸುತ್ತದೆ. ರಕ್ತದಾನ ಶಿಬಿರಗಳು, ಕನ್ನಡ ಪರ ಸ್ಪರ್ಧೆಗಳನ್ನು ಏರ್ಪಡಿಸತ್ತವೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳ ಮೂಲಕ ಕನ್ನಡಕ್ಕಾಗಿ ದುಡಿದವರಿಗೆ ಗೌರವಿಸುತ್ತದೆ. ಚರ್ಚಾಸ್ಪರ್ಧೆ, ಭಾಷಣಗಳ ಮೂಲಕ ಕನ್ನಡ ಭಾಷೆಯ ಇತಿಹಾಸ, ಮೌಲ್ಯ, ಪ್ರಾಮುಖ್ಯತೆ ಸಾರುವ ಕಾರ್ಯ ಎಂದಿನಿಂದಲೂ ನಡೆಯುತ್ತಲೇ ಇದೆ.

ಕರ್ನಾಟಕ ಸೇರಿದಂತೆ ದೇಶ-ವಿದೇಶಗಳಲ್ಲಿ ಇರುವ ಕನ್ನಡಿಗರು ಸಹ ಆಯಾ ಪ್ರದೇಶಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾ, ಅಲ್ಲಿಯೂ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ. ಒಟ್ಟಾರೆ ನವೆಂಬರ್ ಸಂಪೂರ್ಣ ತಿಂಗಳು ಕನ್ನಡಮಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯುತ್ತದೆ.

ನವೆಂಬರ್ ಮಾಸಕ್ಕೆ ಮೀಸಲಾಗದಿರಲಿ ಕನ್ನಡ ರಾಜ್ಯೋತ್ಸವ

ನವೆಂಬರ್ ಮಾಸಕ್ಕೆ ಮೀಸಲಾಗದಿರಲಿ ಕನ್ನಡ ರಾಜ್ಯೋತ್ಸವ

ಸುಮಾರು ಎರಡೂವರೆ ಸಹಸ್ರಮಾನದ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಸಹ ಪ್ರಮುಖವಾಗಿದೆ. ಆದರೆ ವಿಷಾದವೆಂದರೆ ಇಂದಿನ ಪೋಷಕರು ಹಾಗೂ ಮಕ್ಕಳಿಗೆ ನಾಡಿನ ಭಾಷೆ, ಸಂಸ್ಕೃತಿಯ ಬಗ್ಗೆ ಅಷ್ಟು ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಶಾಲೆಯಲ್ಲಿ ಬಿಡಿ ಮನೆಯಲ್ಲೂ ಕನ್ನಡ ಮಾತನಾಡದಂತೆ ಪೋಷಕರು ಮಕ್ಕಳಿಗೆ ತಾಕೀತು ಮಾಡುತ್ತಾರೆ ಎಂಬುದು ನಿಜಕ್ಕೂ ವಿಪರ್ಯಾಸ. ಭವಿಷ್ಯಕ್ಕಾಗಿ ಇಂಗ್ಲಿಷ್ ಬಳಕೆ ಅಥವಾ ಕಲಿಕೆ ಅನಿವಾರ್ಯವಾದರೂ ಕನ್ನಡವನ್ನು ಕಡೆಗಣಿಸುವುದು ಎಷ್ಟು ಸರಿ?. ನಾವು ಮನೆಗಳಲ್ಲೇ ಮಕ್ಕಳಿಗೆ ಈಗಿನಿಂದಲೇ ಕನ್ನಡ ಆಂಗ್ಲಮಯವಾಗಿ ಬೆಳಸಿದರೆ ಮುಂದೆ ಕನ್ನಡ ಭಾಷೆಯ ಅಸ್ತಿತ್ವ ಏನಾಗಬಹುದು? ಈ ಬಗ್ಗೆ ಎಲ್ಲಾ ಪೋಷಕರು ಖಂಡಿತವಾಗಿಯೂ ಚಿಂತಿಸಬೇಕಿದೆ.

ಇನ್ನು ಮುಂದಾದರೂ ಮಕ್ಕಳಿಗೆ ಕನ್ನಡ ಭಾಷೆ, ಇದರ ಹಿರಿಮೆ, ಮಹತ್ವವನ್ನು ತಿಳಿಸಲು ಮುಂದಾಗೋಣ. ಕನ್ನಡ ಎಂದಿಗೂ ನಮ್ಮನ್ನು ಹೆತ್ತ ತಾಯಿಯಾಗಿಯೇ ಉಳಿಯಲಿ, ಇತರೆ ಭಾಷೆಗಳನ್ನು ನಮ್ಮ ಸಂಬಂಧಿಕರಂತೆ ಭಾವಿಸೋಣವೇ?.

ಅಂತೆಯೇ, ಯಾವುದೇ ಕನ್ನಡ ಪರ ಸಂಘಟನೆಗಳು ಸಹ ನವೆಂಬರ್ ಮಾಸಕ್ಕೆ ಮಾತ್ರ ಕನ್ನಡ ರಾಜ್ಯೋತ್ಸವವನ್ನು ಮೀಸಲಾಗಿಸದೇ ಕನ್ನಡ ಪರ ಹೋರಾಟಗಳನ್ನು, ಜಾಗೃತಿ ಅಥವಾ ಅರಿವು ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಯೋಜಿಸುವುದು ಕನ್ನಡ ರಾಜ್ಯೋತ್ಸವಕ್ಕೆ ಅರ್ಥಪೂರ್ಣ ಎನಿಸುತ್ತದೆ.

II ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಏಳ್ಗೆ II

English summary

Kannada Rajyothsava 2019: History, Significance and Celebration

Here we are discussing about Kannada rajyothsava. on the eve of 64th Kannada rajyothsava will discuss more on Karnataka history, significance and how we celebration.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X