Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಮನೋಶಾಸ್ತ್ರಜ್ಞರ ಪ್ರಕಾರ: ಸುಳ್ಳು ಹೇಳುವಿಕೆಯನ್ನು ತಿಳಿಸುತ್ತದೆ 'ಬಾಡಿ ಲ್ಯಾಂಗ್ವೇಜ್'
ವ್ಯಕ್ತಿಯೋರ್ವ ಸುಳ್ಳು ಹೇಳುವಾಗ ಹಾಗೂ ಸತ್ಯ ನುಡಿಯುವಾಗ ಆತನ ಬಾಡಿ ಲ್ಯಾಂಗ್ವೇಜ್ (ದೇಹ ಭಾಷೆ ಅಥವಾ ದೈಹಿಕ ಚಲನವಲನಗಳು) ಭಿನ್ನವಾಗಿರುತ್ತದೆ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ. ಸುಳ್ಳು ಹೇಳುವಾಗ ವ್ಯಕ್ತಿಯ ಬಾಡಿ ಲ್ಯಾಂಗ್ವೇಜ್ ಹೇಗಿರುತ್ತದೆ ಎಂಬುದನ್ನು ಈ ಅಂಕಣದಲ್ಲಿ ವಿವರಿಸಿದ್ದೇವೆ. ಮುಂದಿನ ಬಾರಿ ಯಾರಾದರೂ ಸುಳ್ಳು ಹೇಳುತ್ತಿದ್ದಾರೆ ಅನಿಸಿದಲ್ಲಿ ಈ ಬಾಡಿ ಲ್ಯಾಂಗ್ವೇಜ್ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಲು ಯತ್ನಿಸಿ. ಆದರೆ ಹಾಗಂತ ಕಂಡ ಕಂಡವರನ್ನೆಲ್ಲ ಸುಳ್ಳುಗಾರರು ಅಥವಾ ಮೋಸಗಾರರು ಎಂದು ಸಂಶಯದ ದೃಷ್ಟಿಯಿಂದ ನೋಡಲು ಆರಂಭಿಸಬೇಡಿ. ನಿಮಗೆ ಭೇಟಿಯಾಗುವವರಲ್ಲಿ ಬಹುತೇಕರು ಒಳ್ಳೆಯವರೇ ಆಗಿರುತ್ತಾರೆ ಎಂಬುದು ಗಮನದಲ್ಲಿರಲಿ.
ಸುಳ್ಳುಗಾರರನ್ನು ಪತ್ತೆ ಹಚ್ಚುವ ಪತ್ತೇದಾರರು ನೀವಾಗಬಹುದು!
ಸುಳ್ಳು ಹೇಳುವಾಗ ಮನುಷ್ಯನ ದೈಹಿಕ ಚಲನವಲನಗಳಲ್ಲಿ ಯಾವ ರೀತಿಯ ಅಸಹಜ ಬದಲಾವಣೆಗಳು ಕಂಡುಬರುತ್ತವೆ ಎಂಬುದನ್ನು ತಿಳಿದಲ್ಲಿ ಸುಳ್ಳು ಹೇಳುವಿಕೆಯನ್ನು ಪತ್ತೆ ಮಾಡುವುದು ಸುಲಭ. ವ್ಯಕ್ತಿಯು ಸುಳ್ಳು ಹೇಳುತ್ತಿದ್ದರೆ ಆತನ ಬಾಡಿ ಲ್ಯಾಂಗ್ವೇಜ್ ಅದನ್ನು ಜಗತ್ತಿಗೆ ಸಾರುತ್ತದೆ. ಹಲವಾರು ಬಾರಿ ಎದುರಿಗೆ ಕೂತ ವ್ಯಕ್ತಿಯ ಮನಸ್ಸಿನಲ್ಲಿನ ಆಲೋಚನೆಗಳನ್ನು ನಿಖರವಾಗಿ ಅಂದಾಜಿಸುವುದು ಬಹಳ ಮುಖ್ಯವಾಗಿರುತ್ತದೆ. ವ್ಯವಹಾರದ ಡೀಲ್ಗಳನ್ನು ಕುದುರಿಸುವ ಸಂದರ್ಭದಲ್ಲಿ, ಸಂಬಂಧಗಳ ಮಾತುಕತೆಗಳಲ್ಲಿ ಎದುರಿನ ವ್ಯಕ್ತಿಯ ಮಾತಿನಲ್ಲಿರುವ ಸತ್ಯಾಂಶವೆಷ್ಟು ಎಂಬುದು ಅತಿ ಮುಖ್ಯವಾಗುತ್ತದೆ. ಏನೋ ಒಂದು ಸುಳ್ಳು ಹೇಳಿ ಮಾತಿನ ಅರಮನೆ ಕಟ್ಟುವವರ ಬಣ್ಣವನ್ನು ಅವರ ಬಾಡಿ ಲ್ಯಾಂಗ್ವೇಜ್ನಿಂದಲೇ ಸುಲಭವಾಗಿ ಅರಿತುಕೊಳ್ಳಬಹುದು. ಇದೊಂದು ರೀತಿಯ ಪತ್ತೇದಾರಿಕೆ ಎನಿಸಿದರೂ ಜೀವನದಲ್ಲಿ ಹಲವಾರು ಬಾರಿ ಸುಳ್ಳುಗಾರರನ್ನು ಕಂಡು ಹಿಡಿಯುವುದು ಅನಿವಾರ್ಯ.
ಒಳಗಿನ ಭಾವನೆಗಳನ್ನು ಅದುಮಿಡಲು ಸಾಧ್ಯವಿಲ್ಲ
ಸುಳ್ಳು ಹೇಳುವಾಗ ವ್ಯಕ್ತಿಯ ದೇಹವು ಅದಕ್ಕೆ ಪೂರಕವಾಗಿ ವರ್ತಿಸುವುದು ಕಷ್ಟ. ಹೀಗಾಗಿ ದೈಹಿಕ ಚಲನವಲನಗಳು ಭಿನ್ನವಾಗಿ ಕಾಣಿಸುತ್ತವೆ. ಮಾತಿನ ಭಾಷೆ ಹಾಗೂ ದೇಹದ ಭಾಷೆಗಳರಡೂ ಒಂದಕ್ಕೊಂದು ತಾಳೆಯಾಗದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇವೆರಡೂ ಬೇರೆಯದೇ ಕತೆಗಳನ್ನು ಹೇಳುತ್ತಿದ್ದರೆ ಮಾತ್ರ ಏನೋ ಸಮಸ್ಯೆ ಇದೆ ಎಂದರ್ಥ.
Most Read: ತನ್ನ ಕೈಬಿಟ್ಟ ಮಾಜಿ ಪ್ರಿಯತಮೆಗೆ ಆತ ಹೀಗೆ ಬುದ್ಧಿ ಕಲಿಸಿದ!
ಅಸಮಂಜಸತೆಗಳು
ಜನ ಸಾಮಾನ್ಯವಾಗಿ ಒಂದು ನಿರ್ದಿಷ್ಟ, ಸಹಜ ರೀತಿಯ ಬಾಡಿ ಲ್ಯಾಂಗ್ವೇಜ್ ಅನ್ನು ಹೊಂದಿರುತ್ತಾರೆ. ನೀವು ಪ್ರತಿದಿನ ಅಥವಾ ಆಗಾಗ ನೋಡುವ, ಮಾತನಾಡುವ ವ್ಯಕ್ತಿಯ ಸಹಜ ಬಾಡಿ ಲ್ಯಾಂಗ್ವೇಜ್ ನಿಮಗೆ ಗೊತ್ತಿರುತ್ತದೆ. ಒಂದು ವೇಳೆ ಯಾವುದೋ ಸಂದರ್ಭದಲ್ಲಿ ಆತ ಸುಳ್ಳು ಹೇಳುತ್ತಿದ್ದರೆ ಬಾಯಿ ಮಾತು ಹಾಗೂ ದೇಹದ ಮಾತುಗಳೆರಡೂ ಬೇರೆಯಾಗಿರುವುದನ್ನು ನೀವು ಅರ್ಥಮಾಡಿಕೊಳ್ಳಬಹುದು. ನಿಮಗೆ ತುಂಬಾ ಪರಿಚಿತರಾಗಿರುವ ವ್ಯಕ್ತಿಗಳಿಗೆ ಮಾತ್ರ ಈ ಸೂತ್ರ ಅನ್ವಯಿಸುತ್ತದೆ ಎಂಬುದು ಗಮನದಲ್ಲಿರಲಿ.
ತಪ್ಪುವ ಕೈ ಸನ್ನೆ
ಸುಳ್ಳು ಹೇಳುವ ವ್ಯಕ್ತಿಯ ಒಂದು ಪ್ರಮುಖ ದೈಹಿಕ ಚಲನೆಯ ಬದಲಾವಣೆಯನ್ನು ಗಮನಿಸೋಣ. ಮುಖ್ಯವಾದ ಹಾಗೂ ವಾಸ್ತವವಾದ ಸಂಗತಿಗಳನ್ನು ಹೇಳುವಾಗ ಸಾಮಾನ್ಯವಾಗಿ ವ್ಯಕ್ತಿಯೊಬ್ಬ ತನ್ನ ಬಲಶಾಲಿಯಾದ ಕೈಯಿಂದ ಸನ್ನೆ ಮಾಡುತ್ತ ಹೇಳುತ್ತಿರುತ್ತಾನೆ. ಅಂದರೆ ಆತ ಬಲಗೈನವನಾಗಿದ್ದರೆ ಬಲಗೈ ಹಾಗೂ ಎಡಗೈನವನಾಗಿದ್ದರೆ ಎಡಗೈ ಹೀಗೆ ಕೈಗಳ ಚಲನೆ ಇರುತ್ತದೆ. ಆದರೆ ಸುಳ್ಳು ಹೇಳುತ್ತಿದ್ದರೆ ಕೈಗಳ ಚಲನೆ ಇದಕ್ಕೆ ವ್ಯತಿರಿಕ್ತವಾಗಿರುವ ಎಲ್ಲ ಸಾಧ್ಯತೆಗಳಿವೆ. ತನ್ನ ಸಹಜ ಬಳಕೆಯ ಕೈ ಬದಲಾಗಿ ಬೇರೆ ಕೈಯನ್ನು ಬಳಸಲಾರಂಭಿಸಿದರೆ ಏನೋ ಸಮಸ್ಯೆ ಇದೆ ಎಂಬುದನ್ನು ತಿಳಿಯಬಹುದು.
ಕಣ್ಣುಗಳ ಭಾಷೆ ಅರಿತುಕೊಳ್ಳಿ
ಸತತವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡುವುದು ಅಷ್ಟೊಂದು ಪ್ರಚಲಿತವಾಗಿಲ್ಲ. ಆದರೂ ಸಂಭಾಷಣೆ ನಡೆಸುವಾಗ ಕೆಲವು ಬಾರಿ ಕೆಲ ಹೊತ್ತಾದರೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ. ಆದರೆ ನಿಮ್ಮೆದುರಿಗೆ ನಿಂತು ಮಾತನಾಡುತ್ತಿರುವ ವ್ಯಕ್ತಿಯು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಹಿಂಜರಿಯುತ್ತಿದ್ದಾನೆ ಎಂದರೆ ಅದು ಸುಳ್ಳು ಹೇಳುವಿಕೆ ಸಂಕೇತವಾಗಿರಬಹುದು. ಸುಳ್ಳು ಹೇಳುವಾಗ ಮನುಷ್ಯನಿಗೆ ಒಳಗೊಳಗೆ ಆತನಿಗೆ ಗೊತ್ತಾಗದೆಯೇ ಸಾಕಷ್ಟು ಹಿಂಸೆ ಆಗುತ್ತದೆಯಂತೆ. ಇದರಿಂದ ಆತನಿಗೆ ಒಂದು ರೀತಿಯ ಅಸೌಖ್ಯ ಬಾಧಿಸತೊಡಗುತ್ತದೆ. ಹೀಗಾಗಿಯೇ ಸುಳ್ಳು ಹೇಳುತ್ತಿರುವ ವ್ಯಕ್ತಿಯು ಎದುರಿನವರ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಕಷ್ಟಕರವಾಗುತ್ತದಂತೆ. ಒಟ್ಟಾರೆಯಾಗಿ ಆ ಕ್ಷಣಕ್ಕೆ ಏನೋ ಒಂದು ಹೇಳಿ ಪಾರಾಗುವುದನ್ನು ಈ ಲಕ್ಷಣಗಳು ಸೂಚಿಸುತ್ತವೆ.
Most Read: ದೇವರು ಕನಸಿನಲ್ಲಿ ಬಂದರೆ, ಇದರ ಅರ್ಥ ಏನು ಗೊತ್ತೇ?
ಪದೆ ಪದೆ ಕಣ್ಣು ಮಿಟುಕಿಸುವುದು
ಪದೆ ಪದೆ ಕಣ್ಣು ಮಿಟುಕಿಸುವುದು ಸುಳ್ಳು ಹೇಳುವ ಬಾಡಿ ಲ್ಯಾಂಗ್ವೇಜ್ ಲಕ್ಷಣವಾಗಿದೆ. ಮನುಷ್ಯರು ಪ್ರತಿ ನಿಮಿಷಕ್ಕೆ ಹಲವಾರು ಬಾರಿ ಕಣ್ಣು ಮಿಟುಕಿಸುತ್ತಾರೆ. ಪುರುಷರಿಗಿಂತ ಮಹಿಳೆಯರು ಕಣ್ಣು ಮಿಟುಕಿಸುವಿಕೆಯ ಪ್ರಮಾಣ ಹೆಚ್ಚಾಗಿರುತ್ತದೆ. ಆದರೆ ಯಾರಾದರೂ ಪದೇ ಪದೇ ಕಣ್ಣು ಮಿಟುಕಿಸುತ್ತಿದ್ದಾರೆ ಎಂದರೆ ಅವರ ಕಣ್ಣಲ್ಲಿ ಏನೋ ಕಸ ಬಿದ್ದಿರಲೂಬಹುದು. ಆದರೆ ಏನೂ ಸಮಸ್ಯೆ ಇಲ್ಲದಿದ್ದರೂ ಪದೆ ಪದೆ ಕಣ್ಣು ಮಿಟುಕಿಸುತ್ತಿದ್ದಾರೆ ಎಂದರೆ ಅದು ಸುಳ್ಳಿನ ಲಕ್ಷಣವಾಗಿರಬಹುದು.
ಕಣ್ಣು ಮುಚ್ಚುವಿಕೆಯನ್ನೂ ನೋಡಿ
ಪದೆ ಪದೆ ಕಣ್ಣು ಮಿಟುಕಿಸುವ ಬಗ್ಗೆ ತಿಳಿದುಕೊಂಡಿದ್ದೇವೆ. ಹಾಗೆಯೇ ಎದುರಿನ ವ್ಯಕ್ತಿಯು ಎಷ್ಟು ದೀರ್ಘ ಕಾಲ ಕಣ್ಣು ಮುಚ್ಚಿಕೊಳ್ಳುತ್ತಿದ್ದಾನೆ ಎಂಬುದು ಸಹ ಒಂದು ಬಾಡಿ ಲ್ಯಾಂಗ್ವೇಜ್ ಆಗಿದೆ. ನಿಮ್ಮೊಂದಿಗೆ ಮಾತನಾಡುತ್ತಿರುವ ಯಾರಾದರೂ ಸುದೀರ್ಘವಾಗಿ ಕಣ್ಣು ಮುಚ್ಚಿ ತೆರೆಯುವುದನ್ನು ಮಾಡುತ್ತಿದ್ದರೆ ಬಹುಶಃ ಅವರು ಸುಳ್ಳು ಹೇಳುತ್ತಿರಬಹುದು. ಸುದೀರ್ಘವಾಗಿ ಕಣ್ಣು ಮುಚ್ಚುವಿಕೆಯು ಸುಳ್ಳು ಹೇಳುವಿಕೆಯ ಗುರಾಣಿಯಾಗಿರುತ್ತದಂತೆ. ಇನ್ನು ದೃಷ್ಟಿ ಹಾಯಿಸುವಿಕೆಯೂ ಕೆಲ ವಿಷಯಗಳನ್ನು ತಿಳಿಸುತ್ತದೆ.
ಸಾಮಾನ್ಯವಾಗಿ ಮಾತನಾಡುವಾಗ
ಸಾಮಾನ್ಯವಾಗಿ ಮಾತನಾಡುವಾಗ ಜನ ತಮ್ಮ ಪ್ರಬಲ ಕೈ ಯಾವುದಿರುತ್ತದೆಯೋ ಅದೇ ದಿಕ್ಕಿನಲ್ಲಿ ಹೆಚ್ಚು ದೃಷ್ಟಿ ಹಾಯಿಸುತ್ತ ಮಾತನಾಡುತ್ತಾರೆ. ಆದರೆ ಬಲಗೈನವರು ಎಡಗಡೆ ದೃಷ್ಟಿ ಕೇಂದ್ರೀಕರಿಸಿ ಮಾತನಾಡುತ್ತಿದ್ದಲ್ಲಿ ಅವರು ಯಾವುದೋ ಭ್ರಮಾ ಲೋಕವನ್ನು ಮನಸಿನಲ್ಲಿ ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂದರ್ಥ. ಹಾಗೆಯೇ ಎಡಗೈನವರು ಬಲಗಡೆ ದೃಷ್ಟಿ ಹಾಯಿಸಿ ಮಾತನಾಡುತ್ತಿದ್ದರೆ ಅದು ಸಹ ಅಸಹಜವಾಗಿರುತ್ತದೆ. ಇರುವ ವಿಷಯಯನ್ನು ನೇರವಾಗಿ ಹೇಳುವಾಗ ಯಾವುದನ್ನೂ ಕಲ್ಪಿಸಿಕೊಳ್ಳಬೇಕಿರುವುದಿಲ್ಲ. ಆದರೆ ಇಲ್ಲದ ವಿಷಯವನ್ನು ಹೇಳಬೇಕಾದರೆ ಎತ್ತಲೋ ದೃಷ್ಟಿ ಹಾಯಿಸಿ ಮನಸಿನಲ್ಲಿ ವಿಷಯಗಳನ್ನು ಕಲ್ಪನೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಎತ್ತಲೋ ನೋಡುತ್ತ ಮಾತನಾಡುವುದು ಸುಳ್ಳಿನ ಬಾಡಿ ಲ್ಯಾಂಗ್ವೇಜ್ ಆಗಿರಬಹುದು.
ಹುಸಿ ನಗೆ ಕಂಡರೆ ಹುಷಾರು!
ಕಲವರು ಮಾತನಾಡುವಾಗ ಹುಸಿನಗೆ ಬೀರುವುದನ್ನು ನೀವು ನೋಡಿರಬಹುದು. ವ್ಯಕ್ತಿಯೂ ಮನದುಂಬಿ ನಿಜವಾಗಿಯೂ ಸ್ಮೈಲ್ ಮಾಡುತ್ತಿದ್ದರೆ ಅದು ಮುಖದ ತುಂಬೆಲ್ಲ ಅರಳಿರುತ್ತದೆ. ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ಆದರೆ ವ್ಯಕ್ತಿಯು ಬಲವಂತವಾಗಿ ಮುಖದ ಮೇಲೆ ನಗು ಮೂಡಿಸಲು ಯತ್ನಿಸಿದರೆ ಅದರ ಪ್ರಭಾವ ತುಟಿಗಳಿಗೆ ಮಾತ್ರ ಸೀಮಿತವಾಗಿದ್ದು, ಮುಖದಲ್ಲಿ ಖುಷಿಯ ಭಾವನೆ ಕಾಣುವುದೇ ಇಲ್ಲ. ಇದು ಸುಳ್ಳು ಹೇಳುತ್ತಿರುವ ಲಕ್ಷಣವಾಗಿರಬಹುದು.
ಮುಖ ಮುಟ್ಟಿಕೊಳ್ಳುವುದು ಏಕೆ?
ಸುಳ್ಳು ಹೇಳುವಾಗ ವ್ಯಕ್ತಿಗಳು ಆಗಾಗ ಮುಖದ ಮೇಲೆ ಕೈಯಾಡಿಸುತ್ತಾರಂತೆ. ತಾವು ಮಾಡುತ್ತಿರುವುದಕ್ಕೂ, ಹೇಳುತ್ತಿರುವುದಕ್ಕೂ ಇರುವ ವ್ಯತ್ಯಾಸದಿಂದ ಮನದಲ್ಲಿ ಉಂಟಾಗುವ ಅಹಿತಕರ ಭಾವನೆಯಿಂದ ಹೀಗೆ ಮುಖದ ಮೇಲೆ ಕೈ ಹೋಗುತ್ತದಂತೆ. ಮಾತನಾಡುವಾಗ ಯಾವತ್ತೂ ಮುಖ ಮುಟ್ಟಿಕೊಳ್ಳದಿರುವವರು ಯಾವತ್ತಾದರೂ ಒಮ್ಮೆ ಮುಖ ಮುಟ್ಟಿಕೊಂಡು ಮಾತನಾಡುತ್ತಿದ್ದರೆ ಅದು ಸುಳ್ಳಿನ ಲಕ್ಷಣವಾಗಿರುವ ಸಾಧ್ಯತೆ ಇದೆ.
ಚಡಪಡಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ
ನೆಮ್ಮದಿ ಕಳೆದುಕೊಂಡಲ್ಲಿ ಚಡಪಡಿಕೆಯ ಭಾವನೆ ಬರುವುದು ಸಾಮಾನ್ಯ. ಕಣ್ಣು ಮಿಟುಕಿಸುವ ರೀತಿಯಲ್ಲೇ ಇದೂ ಸಹ ಒಂದು ಅಸ್ತ್ರವಾಗಿರುತ್ತದೆ. ಮುಂದೆ ಬರಬಹುದಾದ ಯಾವುದೋ ಕೆಟ್ಟ ಘಳಿಗೆಗೆ ದೇಹ ಹಾಗೂ ಮನಸ್ಸನ್ನು ಸಜ್ಜುಗೊಳಿಸಲು ಚಡಪಡಿಕೆ ಉಂಟಾಗುತ್ತದೆ. ಹಾಗೆಯೇ ಯಾರಾದರೂ ನಿಮ್ಮೊಂದಿಗೆ ವಿಷಯ ಹಂಚಿಕೊಳ್ಳುವ ಸಂದರ್ಭದಲ್ಲಿ ಒಮ್ಮೆಲೆ ಚಡಪಡಿಕೆಗೆ ಒಳಗಾಗುತ್ತಿದ್ದಾರೆ ಎನಿಸಿದಲ್ಲಿ ಬಹುಶಃ ಅವರ ಮಾತಲ್ಲಿ ಸುಳ್ಳುಗಳಿರಬಹುದು.
ಸಂದರ್ಭಗಳಿಗೆ ಹೊಂದಾಣಿಕೆಯಾಗಬೇಕು
ನಮ್ಮ ಮಾತಿಗೂ ದೇಹದ ಮಾತಿಗೂ ಹೊಂದಾಣಿಕೆ ಇರಬೇಕಾಗುತ್ತದೆ. ಇದನ್ನೇ ಸರಿಯಾದ ಬಾಡಿ ಲ್ಯಾಂಗ್ವೇಜ್ ಎನ್ನಲಾಗುತ್ತದೆ. ನಿಮ್ಮ ಬಾಡಿ ಲ್ಯಾಂಗ್ವೇಜ್ ಅನ್ನು ಮುಚ್ಚಿಡುವುದು ಅಥವಾ ಬದಲಾಯಿಸುವುದು ಬಹಳ ಕಷ್ಟದ ಕೆಲಸ. ನೀವೇನು ಹೇಳುತ್ತಿರುವಿರೋ ಅದು ನಿಮ್ಮ ದೈಹಿಕ ಚಲನೆಯಲ್ಲಿಯೂ ಪ್ರತಿಫಲನವಾಗುತ್ತದೆ. ಹೀಗಾಗಿ ಸುಳ್ಳು ಹಾಗೂ ಸತ್ಯದ ಮಾತುಗಳನ್ನು ಪ್ರತ್ಯೇಕಿಸುವುದು ಸುಲಭವಾಗುತ್ತದೆ. ಅದರಲ್ಲೂ ತೀರಾ ಪರಿಚಯದವರೊಂದಿಗೆ ಸುಳ್ಳು ಹೇಳುತ್ತಿದ್ದರೆ ಬಾಡಿ ಲ್ಯಾಂಗ್ವೇಜ್ ನಿಮ್ಮ ನಿಯಂತ್ರಣ ಮೀರಿ ಬೇರೆಯದೇ ಕತೆ ಹೇಳಲಾರಂಭಿಸುತ್ತದೆ.
ಎಲ್ಲರೂ ಸುಳ್ಳುಗಾರರಲ್ಲ !
ಇಲ್ಲಿ ತಿಳಿಸಲಾದ ಸುಳ್ಳು ಹೇಳುವಿಕೆಯ ಬಾಡಿ ಲ್ಯಾಂಗ್ವೇಜ್ ಲಕ್ಷಣಗಳನ್ನು ಎಲ್ಲರಲ್ಲೂ ಹುಡುಕುತ್ತ ಸಂಶಯದ ಹುಳುವಾಗಬೇಡಿ. ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲರೂ ಸುಳ್ಳು ಹೇಳುತ್ತಿರುವುದಿಲ್ಲ. ಕೇವಲ ನಿರ್ದಿಷ್ಟ ಸಮಯ, ಸಂದರ್ಭಗಳಲ್ಲಿ ಮಾತ್ರ ಈ ಬಾಡಿ ಲ್ಯಾಂಗ್ವೇಜ್ ಸೂತ್ರಗಳನ್ನು ಪರಿಶೀಲನೆಗೊಳಪಡಿಸುವುದು ವಿವೇಚನೆಯ ಕ್ರಮವಾಗಿದೆ.